ವಾಷಿಂಗ್ಟನ್ (ಎಪಿ): ಪ್ರತಿಭಟನಾ ನಿರತ ನಾಗರಿಕರ ಮೇಲೆ ಸಿರಿಯಾ ಸರ್ಕಾರ ರಾಸಾಯನಿಕ ಅಸ್ತ್ರ ಪ್ರಯೋಗಿಸಿರುವುದು ನಿಜ ಎಂಬ ವಿಶ್ವಸಂಸ್ಥೆಯ ವರದಿಯನ್ನು ಅಧ್ಯಕ್ಷ ಬಷರ್ ಅಲ್ ಅಸಾದ್ ‘ಅವಾಸ್ತವಿಕ’ ಎಂದು ತಳ್ಳಿ ಹಾಕಿದ್ದಾರೆ.
ಇದು ಭಯೋತ್ಪಾದಕ ಕೃತ್ಯ ಎಂಬುವುದಕ್ಕೆ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ. ಭಯೋತ್ಪಾದಕರ ಗುಂಪು ಆಗಸ್ಟ್ 21ರಂದು ಬೇರೆ ಪ್ರದೇಶದಿಂದ ಕ್ಷಿಪಣಿ ಪ್ರಯೋಗಿಸಿ, ನಾಗರಿಕರ ಮೇಲೆ ಸರಿನ್ ವಿಷಾನಿಲ ಬಳಸಿದ ಕೃತ್ಯವನ್ನು ರಷ್ಯಾದ ಉಪಗ್ರಹ ಸೆರೆ ಹಿಡಿದಿದೆ ಎಂದು ಅಸಾದ್ ಹೇಳಿದರು.
ಇಲ್ಲಿಯ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಡಮಾಸ್ಕಸ್ನಲ್ಲಿ ಬಷರ್ ನೀಡಿದ ಸಂದರ್ಶನವನ್ನು ಬುಧವಾರ ಪ್ರಸಾರ ಮಾಡಲಾಯಿತು. ‘ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಸೇರಿಕೊಂಡು ಇದನ್ನು ನನ್ನ ತಲೆಗೆ ಕಟ್ಟಿದರು. ಇದಕ್ಕೂ ನನಗೂ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ಸಿರಿಯಾ ಸಂಗ್ರಹಗಾರದಲ್ಲಿರುವ ರಾಸಾಯನಿಕ ಅಸ್ತ್ರಗಳನ್ನು ನಾಶ ಮಾಡುವ ಕುರಿತಂತೆ ಅಮೆರಿಕ ಮತ್ತು ರಷ್ಯಾದ ನಡುವೆ ನಡೆದ ಒಪ್ಪಂದವನ್ನು ಅಕ್ಷರಶಃ ಪಾಲಿಸಲು ನಾನು ಬದ್ಧ. ಅಸ್ತ್ರಗಳ ನಾಶಕ್ಕೆ ಒಂದು ವರ್ಷ ಕಾಲಾವಕಾಶ ಬೇಕಾಗುವುದು ಜೊತೆಗೆ 6700 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ’ ಎಂದು ಬಷರ್ ತಿಳಿಸಿದರು.
ರಾಸಾಯನಿಕ ಅಸ್ತ್ರಗಳ ನಾಶದ ಸಂದಭರ್ದಲ್ಲಿ ಎದುರಾಗುವ ತಾಂತ್ರಿಕ ಅಡಚಣೆಗಳ ಬಗ್ಗೆ ಈಗಾಗಲೇ ತಜ್ಞರ ಜೊತೆ ಚರ್ಚಿಸಲಾಗಿದೆ. ಇದು ತೀರಾ ಸೂಕ್ಷ್ಮ ಮತ್ತು ಅಪಾಯಕಾರಿ ಕೆಲಸ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಸಿರಿಯಾ ಬಳಿ ಇರುವ ಅಸ್ತ್ರಗಳ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಸಿದ್ಧ. ತಜ್ಞರನ್ನು ಶಸ್ತಾಸ್ತ್ರ ಸಂಗ್ರಹಗಾರಗಳಿಗೆ ಕಳುಹಿಸಿ ಪರೀಕ್ಷಿಸಲು ಮುಕ್ತ ಅವಕಾಶ ನೀಡಲಾಗುವುದು ಎಂದು ಬಷರ್ ಹೇಳಿದರು.