ವಾಷಿಂಗ್ಟನ್ (ಪಿಟಿಐ): ನಾಸಾದ ಮಂಗಳ ನೌಕೆ ಕ್ಯೂರಿಯಾಸಿಟಿ ರೋವರ್, ಮಂಗಳನ ಐದು ಕಿಲೋಮೀಟರ್ ಎತ್ತರದ ಪರ್ವತ ‘ಮೌಂಟ್ ಶಾರ್ಪ್’ನ ತಳಪದರವನ್ನು ಕೊರೆದಿದ್ದು, ಮಣ್ಣಿನ ಮಾದರಿಯನ್ನು ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.
ಕ್ಯೂರಿಯಾಸಿಟಿಯಲ್ಲಿರುವ ಯಂತ್ರಗಳು ಕಳೆದ ವಾರ ಪರ್ವತದ ತಳದಲ್ಲಿ 2.6 ಇಂಚು ಆಳಕ್ಕೆ ಕೊರೆದು ಮಣ್ಣು ಸಂಗ್ರಹಿಸಿದೆ. 5 ಕಿ.ಮೀ ಎತ್ತರವಿರುವ ಮೌಂಟ್ ಶಾರ್ಪ್ನ ವಿವಿಧ ಪದರಗಳ ಮಾದರಿಗಳ ಅಧ್ಯಯನದಿಂದ, ಮಂಗಳನ ವಾತಾವರಣದಲ್ಲಿನ ಬದಲಾವಣೆ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಇದು ಕ್ಯೂರಿಯಾಸಿಟಿಯ ಮುಖ್ಯ ಕಾರ್ಯ. ಕ್ಯೂರಿಯಾಸಿಟಿ ಈಗಷ್ಟೇ ಈ ಕೆಲಸ ಆರಂಭಿಸಿದ್ದು, ಪರ್ವತದ ಅತ್ಯಂತ ಮೇಲ್ಪದರದವರೆಗಿನ ಎಲ್ಲಾ ಪದರುಗಳ ಮಾದರಿ ಸಂಗ್ರಹಿಸಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.