ಶನಿವಾರ, ಜೂನ್ 6, 2020
27 °C

ನೊಬೆಲ್ ವಿಜೇತರ ನೋಬಲ್ ಉಪನ್ಯಾಸ

ಸರೋಜಾ ಪ್ರಕಾಶ Updated:

ಅಕ್ಷರ ಗಾತ್ರ : | |

Prajavani

‘ನಾ ಡಿದ್ದು ಶನಿವಾರ ನೊಬೆಲ್‌ ಲೆಕ್ಚರ್ ಇದೆಯಂತೆ…’ ಎಂದು ಸುದ್ದಿ ತಂದ ಅಜಿತ. ಅಡುಗೆ ಕೆಲಸ ಮುಗಿಸುತ್ತಿದ್ದ ನನ್ನ ಕಿವಿ ನೆಟ್ಟಗಾಯಿತು. ರಾತ್ರಿ ಐಪ್ಯಾಡ್ ಹಿಡಿದು ಕುಳಿತೆ.

ಸ್ಟಾಕ್‌ಹೋಮ್‌ ಯುನಿವರ್ಸಿಟಿಯ ಔಲಾ ಮ್ಯಾಗ್ನಂ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯುವ ಸಮಾರಂಭ. ಲೆಕ್ಚರ್ ಇಂಗ್ಲಿಷಿನಲ್ಲಿ. ಉಚಿತ ಪ್ರವೇಶ. ಆದರೆ, ಹಾಲ್ ತುಂಬಿದ ಕೂಡಲೇ ಬಾಗಿಲು ಹಾಕಲಾಗುವುದು ಎಂಬ ವಿವರ ದೊರೆಯಿತು.

ಪ್ರತಿವರ್ಷ ಅಕ್ಟೋಬರ್‌ನಲ್ಲಿ ನೊಬೆಲ್ ಪ್ರಶಸ್ತಿ ಘೋಷಣೆಯಾದ ನಂತರ ಡಿಸೆಂಬರ್ ತಿಂಗಳಲ್ಲಿ ಸ್ವೀಡನ್ ದೇಶದ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ಅದಕ್ಕೂ ಒಂದು ವಾರ ಮೊದಲು ನೊಬೆಲ್ ವೀಕ್ ಎಂದು ಆಚರಿಸಲಾಗುತ್ತದೆ. ಅದರಲ್ಲೊಂದು ನೊಬೆಲ್ ಉಪನ್ಯಾಸ ಕಾರ್ಯಕ್ರಮ. ಅಂದರೆ ವಿಜೇತರು ತಮ್ಮ ಸಾಧನೆ ಕುರಿತು ಮಾತನಾಡಲು ನೀಡಲಾಗುವ ವೇದಿಕೆ. ಮಾತನಾಡಲೇಬೇಕು, ಇದು ನೊಬೆಲ್ ನಿಯಮ ಕೂಡ. ಅಂದು ಭೌತ, ರಸಾಯನ, ವೈದ್ಯಕೀಯ ಶಾಸ್ತ್ರಗಳ ಹಾಗೂ ಇಕನಾಮಿಕ್ಸ್‌ನ ಪ್ರಶಸ್ತಿ ವಿಜೇತರು ನೊಬೆಲ್ ಪಡೆಯುವುದರಲ್ಲಿ ತಮ್ಮ ಸಂಶೋಧನೆಯ ಪಾತ್ರವನ್ನು ನಿಗದಿತ ಸಮಯದಲ್ಲಿ ವರ್ಣಿಸಬೇಕು.

ನಾವು ಸ್ಟಾಕ್‌ಹೋಮ್‌ನಲ್ಲಿ ನೆಲೆಸಿದ್ದ ಮಗಳ ಮನೆಗೆ ಹೋಗಿ ಎರಡು ತಿಂಗಳಾಗಿತ್ತು. ಒಮ್ಮೆ ನೊಬೆಲ್ ಮ್ಯೂಸಿಯಂ ನೋಡಿದ್ದೆವು. ಸಮೀಪಿಸಿದ್ದ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಾವೂ ಹೋಗಲು ಸಾಧ್ಯವಿರಬೇಕಿತ್ತು ಎಂದು ಆಗ ಆಸೆಪಟ್ಟಿದ್ದೆ. ಆದರೆ, ಆಹ್ವಾನಿತರ ಪಟ್ಟಿ ತುಂಬ ಮೊದಲೇ ನಿರ್ಧಾರ ಆಗಿರುತ್ತದೆ. ಅದು ಖಂಡಿತ ಸುಲಭವಿಲ್ಲ ಎಂಬ ವಿಷಯ ತಿಳಿದು ಸುಮ್ಮನಾಗಿದ್ದೆ.

ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲೆಂದು ಅದೆಷ್ಟೋ ನೊಬೆಲ್ ವಿಜೇತರ ಬಗ್ಗೆ ಹೇಳಿದ್ದೆ. ಆಲೂ ಕೀಳುತ್ತಿದ್ದ ರುದರ್ ಫೋರ್ಡ್ ಸ್ಕಾಲರ್‌ಶಿಪ್ ಸಿಕ್ಕ ಸುದ್ದಿ ತಿಳಿದಿದ್ದೇ ‘ಇದು ನಾ ಕೀಳುವ ಕಟ್ಟಕಡೆಯ ಆಲೂಗಡ್ಡೆ’ ಎಂದು ಕೈಲಿದ್ದಿದ್ದನ್ನು ಬಿಸಾಡಿ ಕೇಂಬ್ರಿಡ್ಜಿಗೆ ಹೋಗಿ ಅಧ್ಯಯನ ನಡೆಸಿ ಮುಂದೆ 12 ವರ್ಷಗಳಲ್ಲಿ ನೊಬೆಲ್ ಪಡೆದಿದ್ದು, ನೊಬೆಲ್ ಪ್ರಶಸ್ತಿ ಬಗ್ಗೆ ತುಂಬು ವಿಶ್ವಾಸ ಹೊಂದಿದ್ದ ಸಿ.ವಿ. ರಾಮನ್ ಅದು ಘೋಷಣೆಯಾಗುವ ಮೊದಲೇ ಹಡಗಿನಲ್ಲಿ ಸೀಟು ಬುಕ್ ಮಾಡಿದ್ದು ಹೀಗೆ ರೋಚಕ ವಿಷಯಗಳನ್ನೂ ಮಕ್ಕಳಿಗೆ ಪಾಠದ ಜೊತೆ ಜೊತೆಗೇ ವಿವರಿಸಿದ್ದೆ. ಈಗ ನೊಬೆಲ್ ಲೆಕ್ಚರ್ ಉಚಿತವಾಗಿ ಕೇಳಲು ಸಿಗುತ್ತಿರುವ ಅವಕಾಶ ಬಿಡುವ ಸಾಧ್ಯತೆಯೇ ಇರಲಿಲ್ಲ. ಪ್ರತಿ ವೀಕೆಂಡಿಗೆ ಹೊರಗಡೆ ಸುತ್ತಾಡಲು ಹೋಗುವಾಗ ಪ್ಲಾನ್ ಹಾಕುತ್ತಿದ್ದ ಪ್ರಕಾಶ ಈ ಬಾರಿ ಗೂಗಲ್ ಮ್ಯಾಪಿನಲ್ಲಿ ಮೆಟ್ರೊ ಟೈಮಿಂಗ್ಸ್, ಪ್ರಯಾಣ ದೂರ, ಬೇಕಾಗಬಹುದಾದ ಸಮಯ ಇತ್ಯಾದಿ ಪತ್ತೆ ಹಚ್ಚುತ್ತಿದ್ದ. ನನ್ನ ಹುರುಪು ನೋಡಿ ದಂಗಾಗಿದ್ದರು. ನೊಬೆಲ್ ಪ್ರಶಸ್ತಿ ಪಡೆಯುವ ಸಾಧಕರನ್ನು ಕಣ್ಣಾರೆ ನೋಡುವ, ಅವರ ಮಾತು ಕೇಳುವ ಸುಸಂದರ್ಭ ಇದು ಎಂದು ನನ್ನ ಉತ್ಸುಕತೆಯನ್ನು ಅವರಿಗೂ ವರ್ಗಾಯಿಸಿದ್ದೆ.

‘ಫ್ರೀ ಎಂಟ್ರಿ ಇದೆಯೆಂದಾದರೆ ನೀವು ಏಳು ಗಂಟೆಗೇ ಮನೆ ಬಿಡಬೇಕು. ಏಕೆಂದ್ರೆ ಸ್ವೀಡಿಗಳು(ಸ್ವೀಡನ್ನರು) ಫ್ರೀ ಇರೋ ಯಾವುದನ್ನೂ ಬಿಡೋದಿಲ್ಲ…’ ಎಂದು ಎಚ್ಚರಿಸಿದ್ದ ಮಗ. ಉಚಿತ ದೊರಕುವುದನ್ನು ಗಿಟ್ಟಿಸಿಕೊಳ್ಳುವುದರಲ್ಲಿ ನಾವೇನು ಕಡಿಮೆಯೇ!

ಮನೆಯಿಂದ ಹೊರಗಡೆ ನಾಲ್ಕು ಡಿಗ್ರಿ ಸೆಂಟಿಗ್ರೇಡ್ ಹವಾಮಾನ. ಅಡಿಯಿಂದ ಮುಡಿಯವರೆಗೂ, ಅಂದರೆ ದಪ್ಪ ಕಾಲುಚೀಲ, ಶೂ, ಎರಡು ಲೇಯರ್ ಪ್ಯಾಂಟು, ಮೂರು ಲೇಯರ್ ಮೇಲಂಗಿ, ಕೋಟು, ಮಫ್ಲರ್, ಟೋಪಿ, ದಪ್ಪ ಕೈಗವುಸು ಒಟ್ಟಾರೆ ಗಾಳಿ ಮೈ ತಾಗದ ಹಾಗೆ ಪ್ಯಾಕ್ ಮಾಡಿಕೊಂಡು ಹೊರಡುವಷ್ಟರಲ್ಲಿ ಗಂಟೆ ಏಳೂವರೆ ದಾಟಿತ್ತು. ಅಷ್ಟು ಮೈಮುಚ್ಚಿಕೊಂಡರೂ ಗಾಳಿಗೊಡ್ಡಿದ ಬಾಯಿ, ಮೂಗುಗಳ ಮೂಲಕ ದೇಹವಿಡೀ ಅಡರಿಕೊಳ್ಳುವ ಕುಳಿರ್ಗಾಳಿ. ಹೆಜ್ಜೆ ಚುರುಕುಗೊಳಿಸಿದೆವು. ಏಕೆಂದರೆ ನಿಧಾನ ನಡಿಗೆಗಿಂತ ಸರಸರ ನಡೆದರೆ ಮೈಯ್ಯಲ್ಲಿ ಬಿಸುಪು ಹುಟ್ಟಿ ಚಳಿ ಒಂದಿಷ್ಟು ಕಡಿಮೆಯಾಗುತ್ತದೆ. ಮನೆಯಿಂದ ಅರ್ಧ ಕಿ.ಮೀ. ದೂರದಲ್ಲಿ ಟುನೆಲ್ ಬಾನಾ ಅಥವಾ ಮೆಟ್ರೊ ಸ್ಟೇಷನ್. ಬಲುಬೇಗನೆ ಸ್ಟೇಷನ್ ಹೊಕ್ಕು ಟಿಕೆಟ್ ಝಳಪಿಸಿ ಮೆಟ್ರೊ ಹತ್ತಿ ಕೂತೆವು.

ಯೂನಿವರ್ಸಿಟಿ ಸ್ಟೇಷನ್‌ನಿಂದ ಹೊರಬಿದ್ದರೆ ಸೀದಾ ಕ್ಯಾಂಪಸ್ ಶುರು. ಟ್ರೇನ್‌ನಿಂದ ಇಳಿದ ನೂರಾರು ಜನರು ಗುಂಪು ಗುಂಪಾಗಿ ಸಾಗಿದ್ದನ್ನು ನೋಡಿ ನಾವೂ ಅವರ ಹಿಂದೆಯೇ ಹೊರಟೆವು. ಇಡೀ ಮೈ ಆವರಿಸಿದ ಕೋಟು. ಟೋಪಿಗಳಿಂದಾಗಿ ನೆರೆದವರ ಲಿಂಗ, ವಯಸ್ಸು ಯಾವುದನ್ನೂ ಪತ್ತೆ ಹಚ್ಚುವುದು ಕಷ್ಟ. ಆದರೆ, ಹಾವಭಾವಗಳಿಂದ ಹೆಚ್ಚಿನವರು ವಿದ್ಯಾರ್ಥಿಗಳೆಂದು ತಿಳಿಯಿತು. ಐವತ್ತು ಮೀಟರ್ ನಡೆದಿರಬೇಕಷ್ಟೆ, ಜನಜಂಗುಳಿ ಇದ್ದಕ್ಕಿದ್ದಂತೆ ಸರದಿಯ ರೂಪ ತಾಳಿ ಹಾವಿನಂತೆ ಹರಿದಾಡತೊಡಗಿತು. ಔಲಾ ಮ್ಯಾಗ್ನ ಹಾಲ್ ಸಮೀಪಿಸಿತೆಂದು ಅರಿವಾಯಿತು.

‘ಔಲಾ ಮ್ಯಾಗ್ನ’ ಸ್ಟಾಕ್‌ಹೋಮ್‌ನ ಅತಿದೊಡ್ಡ ಕಾನ್ಫರೆನ್ಸ್ ಹಾಲ್. 1,200 ಜನರು ಕುಳಿತುಕೊಳ್ಳಬಹುದಾದ, ನೆಲದೊಳಗೆ ಮೂರಂತಸ್ತಿನಷ್ಟು ಹುಗಿದು ಮೇಲೆದ್ದಂತಿರುವ, ಹಿನ್ನೆಲೆಯ ಕಲ್ಲಿನ ಆವರಣವನ್ನು ಹಾಗೆಯೇ ಉಳಿಸಿಕೊಂಡಿರುವ ಏಳು ಮಹಡಿಯಷ್ಟು ಎತ್ತರದ ಕಟ್ಟಡ. ಧ್ವನಿ ವಿಜ್ಞಾನವನ್ನು ಅತ್ಯುತ್ತಮವಾಗಿ ಬಳಸಿಕೊಂಡು 1,200 ಜನರೂ ಧ್ವನಿವರ್ಧಕವಿಲ್ಲದೆ ವೇದಿಕೆಯ ಭಾಷಣ ಆಲಿಸಲು ಸಾಧ್ಯವಾಗುವಂತೆ ನಿರ್ಮಿಸಲಾದ ಅದ್ಭುತವಾದ ಮಹಲ್. ನೊಬೆಲ್ ಕಮಿಟಿ ಪ್ರತಿ ವರ್ಷ ಇದೇ ಸ್ಥಳದಲ್ಲಿ ನೊಬೆಲ್ ಲೆಕ್ಚರನ್ನು ಏರ್ಪಡಿಸುತ್ತದೆ.

ವೆಬ್‌ಸೈಟ್‌ನಲ್ಲಿ ಹೇಳಿದಂತೆ ಎಂಟೂ ಮುಕ್ಕಾಲಿಗೆ ಹಾಲ್‍ನ ದ್ವಾರ ತೆರೆಯಿತು. ಒಳಗೆ ಅರ್ಧ ವರ್ತುಲಾಕಾರದಲ್ಲಿ ಓರಣವಾಗಿ ಜೋಡಿಸಿಟ್ಟ ಆಸನಗಳು. ಪ್ರತಿ ಆಸನಕ್ಕೂ ಎದುರು ಟೇಬಲ್, ಬೇಕಾದರೆ ಮಾತ್ರ ಎಳೆದುಕೊಳ್ಳಬಹುದಾದ, ಲೈಟ್ ಹಾಕಿಕೊಳ್ಳಬಹುದಾದ ವ್ಯವಸ್ಥೆ. ನಟ್ಟನಡುವೆ ತಳಭಾಗದಲ್ಲಿದ್ದ ವೇದಿಕೆಗೆ ಹೂಗುಚ್ಛಗಳ ಅಲಂಕಾರ. ದೊಡ್ಡದೊಂದು ಪರದೆ ಹಾಲ್‍ನ ವಿವಿಧ ಭಾಗಗಳು. ತುರ್ತುವೇಳೆಯಲ್ಲಿ ಹೊರಗೆ ಹೋಗಲು ಇರುವ ವ್ಯವಸ್ಥೆ. ಈ ಸಲ ನೊಬೆಲ್ ಪ್ರಶಸ್ತಿ ಪಡೆದ ಮೂವರು ಭೌತಶಾಸ್ತ್ರ ಹಾಗೂ ಮೂವರು ರಸಾಯನ ಶಾಸ್ತ್ರಜ್ಞರ ಚಿತ್ರಗಳೊಂದಿಗೆ ವಿವರಗಳನ್ನು ಬಿತ್ತರಿಸುತ್ತಿತ್ತು. ಒಳಗಿನ ಬೆಚ್ಚಗಿನ ವಾತಾವರಣದಲ್ಲಿ ಹೊರದಿರಿಸು ತೆಗೆದು ತಮ್ಮ ತಮ್ಮಲ್ಲಿ ಮಾತನಾಡುತ್ತ ಕುಳಿತುಕೊಂಡವರನ್ನು ಗಮನಿಸಿದಾಗಲೇ ಹೆಚ್ಚಿನವರು ದೇಶ ವಿದೇಶಗಳ ವಿದ್ಯಾರ್ಥಿಗಳು ಎಂಬುದು ಅರಿವಾಯಿತು.

ಒಂಬತ್ತಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ಐದು ನಿಮಿಷಗಳ ಔಪಚಾರಿಕ ಪೀಠಿಕೆಯ ನಂತರ ನೊಬೆಲ್ ಭೌತಶಾಸ್ತ್ರ ಸಮಿತಿಯ ಅಧ್ಯಕ್ಷೆ ಒಲ್ಗಾ ಬಾಟ್ನರ್, ಒಬ್ಬೊಬ್ಬ ನೊಬೆಲ್ ವಿಜೇತರನ್ನೂ ಪರಿಚಯಿಸಿ ವೇದಿಕೆಗೆ ಕರೆಯುತ್ತಾ ಹೋದರು. 2018ರ ಭೌತಶಾಸ್ತ್ರ ನೊಬೆಲ್ ಪಡೆದವರು ಮೂವರು ವಿಜ್ಞಾನಿಗಳು. ಬೆಳಕನ್ನೇ ಸಲಕರಣೆಯಾಗಿಸುವ, ಆಯುಧವಾಗಿ ಬಳಸುವ ಸಾಧ್ಯತೆಯನ್ನು ಲೇಸರ್ ಬೆಳಕನ್ನು ಬಳಸಿ ಆವಿಷ್ಕರಿಸಿದ ವಿಜ್ಞಾನಿಗಳಲ್ಲಿ ಆರ್ಥರ್ ಆಶ್ಕಿನ್ ಅರ್ಧ ಪ್ರಶಸ್ತಿಯನ್ನೂ, ಉಳಿದರ್ಧದಲ್ಲಿ ಅರ್ಧರ್ಧ ಭಾಗವನ್ನು ಡೊನ್ನಾ ಹಾಗೂ ಜೋರಾ ಮುರು ಈ ಇಬ್ಬರೂ ಪಡೆದಿದ್ದಾರೆ. 70-80ರ ದಶಕದಲ್ಲಿ ನಡೆಸಿದ ಸಂಶೋಧನೆಗಳಿಂದಾಗಿ ಇಂದು ಹತ್ತಾರು ಕ್ಷೇತ್ರಗಳಲ್ಲಿ ಲೇಸರ್ ಬೆಳಕು ಮಾನವ ಸ್ನೇಹಿ ತಂತ್ರಜ್ಞಾನವಾಗಿ ಹೊರಹೊಮ್ಮಿದೆ.


ಡೊನ್ನಾ ಮತ್ತು ಅರ್ಥರ್‌

ಆರ್ಥರ್ ಆಶ್ಕಿನ್ 97ರ ವಯೋವೃದ್ಧ. ನೊಬೆಲ್ ಪಡೆದವರಲ್ಲಿ ಅತ್ಯಂತ ಹಿರಿಯ ವ್ಯಕ್ತಿ. ಅಮೆರಿಕದ ಬೆಲ್ ಲ್ಯಾಬೋರೇಟರಿಯಲ್ಲಿ ದೀರ್ಘಕಾಲ ಸಂಶೋಧನೆ ನಡೆಸಿದವರು. ಅವರಂದು ಹಾಜರಿರಲಿಲ್ಲ. ನಿಕಟ ಸಹವರ್ತಿ ಡಾಕ್ಟರ್ ರೀನಿ ಜೀನ್ ಎನ್ನುವವರು ಆರ್ಥರ್ ಆಶ್ಕಿನ್ ಪರವಾಗಿ ನೊಬೆಲ್ ಭಾಷಣ ಮಾಡಿದರು. ಲೇಸರ್ ಬೆಳಕೆಂದರೆ ಒಂದೇ ಬಣ್ಣದ, ನೇರವಾಗಿ, ದೂರದೂರದವರೆಗೆ ಹರಡದೇ ಸಾಗುವ ಬೆಳಕು. 1960ರಲ್ಲಿ ಲೇಸರ್ ತಂತ್ರಜ್ಞಾನ ಬೆಳಕಿಗೆ ಬಂದಿತು. ಆರ್ಥರ್ ಆಶ್ಕಿನ್ ಲೇಸರ್ ಬೆಳಕನ್ನು ಇನ್ನೂ ಮತ್ತೂ ಅಧ್ಯಯನ ಮಾಡಿದರು. ಬೆಳಕು ಶಕ್ತಿಯ ಒಂದು ರೂಪ. ಆದ್ದರಿಂದ ಅದು ವಸ್ತುಗಳ ಮೇಲೆ ಬಿದ್ದಾಗ ಒತ್ತಡ ಉಂಟು ಮಾಡಿಯೇ ಮಾಡುತ್ತದೆ. ಅತ್ಯಲ್ಪ ಪ್ರಮಾಣದಲ್ಲಿ. ಎರಡು ಲೇಸರ್ ಕಿರಣಗಳನ್ನು ಉಂಟು ಮಾಡುವ ಒತ್ತಡ ಬಳಸಿಕೊಂಡು ಮಧ್ಯೆ ಹಗುರ ತೂಕದ ಗೋಳ ಹಿಡಿದು ನಿಲ್ಲಿಸಲು ಸಾಧ್ಯವೆಂದು (ಆಪ್ಟಿಕಲ್ ಟ್ರಾಪ್) ಕಂಡುಹಿಡಿದ ಆಶ್ಕಿನ್ ಆ ಗೋಲವನ್ನು ಗುರುತ್ವದ ವಿರುದ್ಧ ಮೇಲೆತ್ತಿ (ಆಪ್ಟಿಕಲ್ ಲೆವಿಟೇಟ್) ಹಿಡಿಯುವ ತಂತ್ರವನ್ನೂ ಪತ್ತೆ ಹಚ್ಚಿದರು.

ಆಶ್ಕಿನ್ ಅವರೇ ಹುಟ್ಟುಹಾಕಿದ ಶಬ್ದ ‘ಆಪ್ಟಿಕಲ್ ಟ್ವೀಝರ್ಸ್’ ಅಥವಾ ಬೆಳಕಿನ ಚಿಮ್ಮಟ. 1987ರಲ್ಲಿ 1.06 ಮೈಕ್ರಾನ್ ಅಲೆಯುದ್ದದ ಲೇಸರ್ ಚಿಮ್ಮಟ ಬಳಸಿ 50-300 ಮೈಕ್ರಾನ್ ಅಗಲದ ಪ್ಯಾರಾಮೀಶಿಯಂ, ಉದ್ದ ಕಡ್ಡಿಯಂತಿರುವ ಟೊಬ್ಯಾಕೊ ವೈರಸ್, ಬ್ಯಾಕ್ಟೀರಿಯಾ ಮುಂತಾದ ಜೀವಂತ ಸೂಕ್ಷ್ಮಾಣುಗಳನ್ನು ಅವುಗಳಿಗೆ ಏನೂ ಧಕ್ಕೆ ಉಂಟಾಗದಂತೆ ಸೂಕ್ಷ್ಮದರ್ಶಕದ ಮಸೂರದಡಿ ಗೋಲದೊಳಕ್ಕೆ ಇರಿಸಿ ಅಭ್ಯಸಿಸಿದರು ಆಶ್ಕಿನ್. ಇದರಿಂದಾಗಿ ಜೈವಿಕ ಲೋಕದ ವ್ಯವಸ್ಥೆಯ ಅಧ್ಯಯನಕ್ಕೆ ಹೊಸ ಬಾಗಿಲು ತೆರೆದಂತಾಯಿತು. ಇಂದು ಅದೆಷ್ಟೋ ಕಂಪನಿಗಳು ಬೆಳಕಿನ ಚಿಮ್ಮಟವನ್ನು ಮಾರುತ್ತಿವೆ.

ಆತ ನಡೆಸಿದ ಪ್ರಯೋಗಗಳು, ವಿವಿಧ ಹಂತಗಳು, ಅದಕ್ಕಾಗಿ ಆತ ಬರೆದಿಟ್ಟುಕೊಂಡ ಲ್ಯಾಬ್ ನೋಟ್ಸ್ ತುಣುಕುಗಳು ಎಲ್ಲವನ್ನೂ ಚಿತ್ರಗಳ ಮೂಲಕ ವಿವರಿಸಿದರು ರೀನಿ.

ಆನಂತರ ವೇದಿಕೆಗೆ ಆಗಮಿಸಿದ್ದು ಲೇಸರ್ ಬೆಳಕಿನ ಗಾಢ ಅಥವಾ ದಟ್ಟ ಮಿಡಿತವನ್ನು ಪಡೆಯುವ ತಂತ್ರವನ್ನು ಕಂಡುಹಿಡಿದ ಅಮೆರಿಕದ ಮಿಶಿಗನ್ ಯುನಿವರ್ಸಿಟಿಯ ಡೊನ್ನಾ ಸ್ಟ್ರಿಕ್‍ಲ್ಯಾಂಡ್ ಮತ್ತು ಆಕೆಯ ಗೈಡ್ ಗೆರಾರ್ಡ್ ಮುರು. ಕೈಲಿದ್ದ ಲೇಸರ್ ರಿಮೋಟ್ ಕಂಟ್ರೋಲನ್ನೂ ಉದಾಹರಣೆಯಾಗಿ ತೋರಿಸುತ್ತ ಅತ್ಯುತ್ತಮ ಸ್ಲೈಡುಗಳೊಂದಿಗೆ ಲೇಸರ್ ಪಲ್ಸ್ ಬಗ್ಗೆ ಸರಳ ವಿವರಣೆ ನೀಡಿದ ಡೊನ್ನ ಸ್ಟ್ರಿಕ್‍ಲ್ಯಾಂಡ್ ಎತ್ತರದ ನಿಲುವಿನ ಆತ್ಮವಿಶ್ವಾಸದ ಮುಖಭಾವದ ಮಹಿಳೆ. ಪಾದರಸದಂತೆ ಚುರುಕಾಗಿ ಅತ್ತಿತ್ತ ಓಡಾಡುತ್ತ, ನಡುನಡುವೆ ಹಾಸ್ಯಚಟಾಕಿಗಳನ್ನೂ ಹಾರಿಸುತ್ತ ಕೇಳುಗರ ಸಂಪೂರ್ಣ ಗಮನ ಸೆಳೆದ ಆಕೆ ತಾನು ಸಮರ್ಥ ಉಪನ್ಯಾಸಕಿ ಕೂಡ ಎಂಬುದನ್ನು ಸಾಬೀತುಪಡಿಸಿದ ಹಾಗಿತ್ತು.

ತೀಕ್ಷ್ಣ ಲೇಸರ್ ಪಲ್ಸ್ ಪಡೆಯಲು ಸಾಧ್ಯವೆಂದು 1985ರಲ್ಲಿ ತಮ್ಮ ಡಾಕ್ಟರೇಟ್ ಪ್ರಬಂಧದಲ್ಲಿ ಥಿಯರಿಯೊಂದಿಗೆ ಮಂಡಿಸಿದ್ದೇ ಡೊನ್ನಾ ಮತ್ತವರ ಗೈಡ್‌ಗೆ ನೊಬೆಲ್ ಪ್ರಶಸ್ತಿ ಪಡೆಯಲು ಕಾರಣವಾಗಿದ್ದು. ಆಗಿನ್ನೂ ಡೊನ್ನಾಗೆ 26ರ ವಯಸ್ಸು. ಗೆರಾರ್ಡ್ ಬಳಿ ಪಿಎಚ್‍.ಡಿಗೆಂದು ಬಂದಾಗ ಅವರ ಪ್ರಯೋಗಾಲಯದಲ್ಲಿದ್ದ ಬಣ್ಣ ಬಣ್ಣದ ಲೇಸರ್ ಕಿರಣಗಳು ಕ್ರಿಸ್‌ಮಸ್ ಮರವನ್ನು ನೆನಪಿಸಿ ತನ್ನನ್ನು ಸೆಳೆದವು ಎಂದು ಡೊನ್ನಾ ನೆನಪಿಸಿಕೊಂಡರು. ಲೇಸರ್ ಪಲ್ಸ್ ನಿರ್ಮಿಸುವಾಗ ಒಂದೂವರೆ ಕಿ.ಮೀ. ಉದ್ದದ ಆಪ್ಟಿಕ್ ಕೇಬಲ್ ಮೂಲಕ ಲೇಸರ್ ಕಳುಹಿಸಿ ಆ ತುದಿಯಿಂದ ಈ ತುದಿಗೆ ಓಡಾಡಿ ತಾವು ಮಾಡಿದ ಸಾಹಸಗಳನ್ನೂ ಡೊನ್ನಾ ನಮ್ಮೆದುರಿಗಿಟ್ಟರು. ಅಂದಹಾಗೆ ಮೇರಿ ಕ್ಯೂರಿ ಮತ್ತು ಮಾರಿಯ ಗೊಪರ್ಟ್ ಮೇಯರ್ ನಂತರ ಫಿಸಿಕ್ಸ್ ನೊಬೆಲ್ ಪ್ರಶಸ್ತಿ ಪಡೆದ ಡೊನ್ನಾ ಆ ಸಾಲಿನಲ್ಲಿ ಮೂರನೆಯ ಮಹಿಳೆ.

ಪ್ರತಿ ಭಾಷಣಕಾರರದ್ದೂ ಭಾಷೆ ಇಂಗ್ಲಿಷೇ ಆದರೂ ಅವರ ಉಚ್ಚಾರ, ಮಾತಾಡುವ ಶೈಲಿ ವಿಭಿನ್ನ. ಆದರೆ, ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಗಳಿಸಿದ ಜ್ಞಾನ ಅವರ ಮಾತುಗಳಲ್ಲಿ ವ್ಯಕ್ತವಾಗಿತ್ತು. ತಮ್ಮ ಹಿಂದಿನ ವಿಜ್ಞಾನಿಗಳ ಕೊಡುಗೆ ಸ್ಮರಿಸಿದ್ದು ಅವರ ವಿನಯವನ್ನು ಎತ್ತಿ ತೋರಿಸಿತ್ತು. ಪ್ರತಿಯೊಬ್ಬರೂ ತಮ್ಮ ವಿಷಯದ ಕುರಿತು ಹತ್ತಿಸಿಕೊಂಡ ಗುಂಗು ಅವರ ಸಾಧನೆಗೆ ಕಾರಣವಾಗಿತ್ತು. ಕೊನೆಯಲ್ಲಿ ಗಡಚಿಕ್ಕುವ ಚಪ್ಪಾಳೆ, ವೇದಿಕೆಯಲ್ಲಿ ನಿಂತ ವಿಜೇತರ ಫೋಟೊ ತೆಗೆಯಲು ಜನರಿಗೆ ಅವಕಾಶ. ನಗುಮುಖದ ಆ ಸಾಧಕರನ್ನು ಕಣ್ಣು, ಮನದ ತುಂಬ ತುಂಬಿಕೊಂಡು, ಸಾಧಕರನ್ನು ಸಾರ್ವಜನಿಕರ ಬಳಿ ಕರೆತಂದ ನೊಬೆಲ್ ಸಮಿತಿಗೆ ಮನದಲ್ಲೇ ವಂದಿಸುತ್ತ ನಾವು ಮನೆಯತ್ತ ಹೆಜ್ಜೆ ಹಾಕಿದೆವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು