ಬುಧವಾರ, ಏಪ್ರಿಲ್ 21, 2021
23 °C
ಕಳೆದ ಚುನಾವಣೆಯಲ್ಲಿ ಬಿದ್ದಿದ್ದವು 12,697 ನೋಟಾ ಮತಗಳು. ಮತಗಳಿಕೆಯಲ್ಲಿ 5ನೇ ಸ್ಥಾನ

ಅದೃಷ್ಟ ಕೈ ಕೊಟ್ಟರೆ ದುಬಾರಿಯಾದೀತು ‘ನೋಟಾ’

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿನ ಕಣವಾಗಿ ಗುರುತಿಸಿಕೊಂಡಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಅದೃಷ್ಟ ಕೈಕೊಟ್ಟರೆ ‘ನೋಟಾ’ (ಮೇಲಿನ ಯಾರೂ ಅಲ್ಲ) ಮತಗಳು ದುಬಾರಿಯಾಗಬಹುದು.

2014ರ ಚುನಾವಣೆ ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ‘ನೋಟಾ’ ಮತಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಈ ಮತಗಳು ಫಲಿತಾಂಶದ ಮೇಲೆ ಬೀರುವ ಪರಿಣಾಮವನ್ನು ಅಂದಾಜಿಸಬಹುದು. 

2014ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 12,697 ಮತಗಳು ‘ನೋಟಾ’ಗೆ ಬಿದ್ದಿದ್ದವು. ಕಳೆದ ಸಲ ಒಟ್ಟು 14 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದರು. ಮತ ಗಳಿಕೆಯಲ್ಲಿ ‘ನೋಟಾ’ ಐದನೇ ಸ್ಥಾನ ಪಡೆದಿತ್ತು. ಕಾಂಗ್ರೆಸ್‌ನ ಆರ್‌.ಧ್ರುವನಾರಾಯಣ (5,67,782), ಬಿಜೆಪಿಯ ಎ.ಆರ್‌.ಕೃಷ್ಣಮೂರ್ತಿ (4,26,600), ಜೆಡಿಎಸ್‌ನ ಕೋಟೆ ಎಂ. ಶಿವಣ್ಣ (58,760), ಬಿಎಸ್‌ಪಿಯ ಶಿವಮಲ್ಲು (34,846) ಅವರ ನಂತರ ಅತಿ ಹೆಚ್ಚು ಮತಗಳು ಬಿದ್ದಿದ್ದು ‘ನೋಟಾ’ಗೆ. ಎಸ್‌ಪಿ, ಎಡಪಕ್ಷಗಳ, ಪಕ್ಷೇತರ ಅಭ್ಯರ್ಥಿಗಳಿಗೂ ಇಷ್ಟು ಮತಗಳನ್ನು ಗಳಿಸಲು ಸಾಧ್ಯವಾಗಿರಲಿಲ್ಲ. 

ಕಳೆದ ಚುನಾವಣೆಯಲ್ಲಿ ಧ್ರುವನಾರಾಯಣ ಮತ್ತು ಎ.ಆರ್‌.ಕೃಷ್ಣಮೂರ್ತಿ ಅವರ ನಡುವೆ 1.41 ಲಕ್ಷ ಮತಗಳ ಅಂತರದ ಗೆಲುವು ದಾಖಲಾಗಿದ್ದರಿಂದ ‘ನೋಟಾ’ ಹೆಚ್ಚಿನ ಪರಿಣಾಮ ಬೀರಿಲ್ಲ. ಒಂದು ವೇಳೆ, 2014ರಲ್ಲಿ 2009ರ ಚುನಾವಣೆಯ ರೀತಿಯ ಫಲಿತಾಂಶ ಬಂದಿದ್ದರೆ, ‘ನೋಟಾ’ ದುಬಾರಿಯಾಗುತ್ತಿತ್ತು. 2009ರಲ್ಲಿ ಧ್ರುವನಾರಾಯಣ ಮತ್ತು ಎ.ಆರ್‌.ಕೃಷ್ಣಮೂರ್ತಿ ಅವರ ನಡುವಿನ ಗೆಲುವಿನ ಅಂತರ ಕೇವಲ 4,002 ಮತಗಳು. ಆ ಸಂದರ್ಭದಲ್ಲಿ ‘ನೋಟಾ’ ಇರಲಿಲ್ಲ. 

ಬೀರೀತೆ ಪರಿಣಾಮ?

ಈ ಬಾರಿಯ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ ಎಂದೇ ಹೇಳಲಾಗುತ್ತಿದೆ. ಬಿಜೆಪಿಯಿಂದ ಶ್ರೀನಿವಾಸ ಪ್ರಸಾದ್‌ ಅವರು ಕಣಕ್ಕಿಳಿದಿರುವುದರಿಂದ ಚುನಾವಣಾ ಕಣ ರಂಗೇರಿದೆ. ಹ್ಯಾಟ್ರಿಕ್‌ ಗೆಲುವು ದಾಖಲಿಸುವ ವಿಶ್ವಾಸದಲ್ಲಿರುವ ಆರ್.ಧ್ರುವನಾರಾಯಣ ಅವರ ಗೆಲುವಿನ ಓಘಕ್ಕೆ ಅನುಭವಿ ರಾಜಕಾರಣಿ ಶ್ರೀನಿವಾಸ ಪ್ರಸಾದ್‌ ಅವರು ತಡೆಯೊಡ್ಡಲಿದ್ದಾರೆ ಎಂಬ ದೃಢವಿಶ್ವಾಸದಲ್ಲಿ ಬಿಜೆಪಿ ಇದೆ.

ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನಡೆದು, ಇಬ್ಬರಲ್ಲಿ ಒಬ್ಬರು ಕಡಿಮೆ ಅಂತರದಲ್ಲಿ ಸೋತು, ನೋಟಾಮತಗಳು ಗೆಲುವಿನ ಅಂತರಕ್ಕಿಂತ ಹೆಚ್ಚಿದ್ದರೆ, ಸೋತ ಅಭ್ಯರ್ಥಿ ‘ನೋಟಾ’ದ ಬಗ್ಗೆ ಶಪಿಸುವುದು ಖಾತ್ರಿ ಎಂಬುದು ರಾಜಕೀಯ ಪ‍ಂಡಿತರ ಮಾತು.  

ಎರಡೂ ಪಕ್ಷಗಳು ‘ನೋಟಾ’ದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನೋಟಾದಿಂದ ಏನೂ ತೊಂದರೆಯಾಗುವುದಿಲ್ಲ ಎಂಬುದು ಮುಖಂಡರ ಮಾತು.

ಈ ಸಲ ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವುದಾಗಿ ಆರ್‌.ಧ್ರುವನಾರಾಯಣ ಅವರು ಪ್ರಚಾರ ಸಭೆಗಳಲ್ಲಿ ಹೇಳುತ್ತಲೇ ಬರುತ್ತಿದ್ದಾರೆ. ತಮ್ಮ ಅಭ್ಯರ್ಥಿ ಕೂಡ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಬಿಜೆ‍ಪಿ ನಾಯಕರು ಹೇಳುತ್ತಿದ್ದಾರೆ. ‘ನೋಟಾ’ದ ಪರಿಣಾಮ ತಿಳಿಯಲು ಚುನಾವಣೆ ಫಲಿತಾಂಶ ಬರುವ ದಿನದವರೆಗೆ ಕಾಯಲೇಬೇಕು.

ವಿಧಾನಸಭಾ ಚುನಾವಣೆ: 12,891 ‘ನೋಟಾ’ ಮತಗಳು

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ (ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ, ಎಚ್‌.ಡಿ.ಕೋಟೆ, ವರುಣಾ, ನಂಜನಗೂಡು ಮತ್ತು ತಿ.ನರಸೀಪುರ) 12,891 ‘ನೋಟಾ’ ಮತಗಳು ಚಲಾವಣೆಯಾಗಿವೆ. 

ಗಮನಿಸಬೇಕಾದ ಅಂಶ ಎಂದರೆ, ಪ್ರತಿ ಚುನಾವಣೆಯಲ್ಲೂ ‘ನೋಟಾ’ ಮತಗಳ ಸಂಖ್ಯೆ ಹೆಚ್ಚುತ್ತಿದೆ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಕಳೆದ ವರ್ಷದ ವಿಧಾಸಭಾ ಚುನಾವಣೆಯಲ್ಲಿ ಈ ಮತಗಳ ಸಂಖ್ಯೆ 194ರಷ್ಟು ಹೆಚ್ಚಾಗಿದೆ.

ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದರಾದರೂ ‘ಮೇಲಿನ ಯಾವ ಅಭ್ಯರ್ಥಿಯೂ ನನ್ನ ಆಯ್ಕೆ ಅಲ್ಲ’ ಎಂದು ಹೇಳುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಹಾಗಾಗಿ, ಈ ಚುನಾವಣೆಯಲ್ಲಿ ನೋಟಾ ಮತದಾರರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು