ಹಳಿಯಾಳಕ್ಕೆ ಕಚೇರಿ ಸ್ಥಳಾಂತರ; ಆಕ್ರೋಶ

7

ಹಳಿಯಾಳಕ್ಕೆ ಕಚೇರಿ ಸ್ಥಳಾಂತರ; ಆಕ್ರೋಶ

Published:
Updated:

ವಿಜಯಪುರ:  ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್, ಮಹಾನಗರ ಪಾಲಿಕೆ ಆಡಳಿತದ ಗಮನಕ್ಕೆ ತರದೆ, ವಿಜಯಪುರ ವಿಭಾಗ ವ್ಯಾಪ್ತಿಯ ಉಪ ವಿಭಾಗ–1 ಕಚೇರಿಯನ್ನು ಹಳಿಯಾಳ ಪಟ್ಟಣಕ್ಕೆ ಸ್ಥಳಾಂತರಿಸಲು ಶಿಫಾರಸು ಮಾಡಿರುವುದಕ್ಕೆ, ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ರವೀಂದ್ರ ಲೋಣಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರ ನಗರದ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಅಮೃತ್‌ ಯೋಜನೆಯಡಿ 24X7 ಕುಡಿಯುವ ನೀರು ಪೂರೈಕೆಯ ಯೋಜನೆ ಕಾಮಗಾರಿ ಚಾಲನೆಯಲ್ಲಿದೆ. ಇದು ಪೂರ್ಣಗೊಳ್ಳಲು ಕನಿಷ್ಠ ಇನ್ನೂ ಒಂದು ವರ್ಷದ ಅವಧಿ ಬೇಕಿದೆ.

ಈ ಕಾಮಗಾರಿಯ ಗುತ್ತಿಗೆ ಪಡೆದಿರುವ ಜೈನ್‌ ಇರಿಗೇಷನ್ ಕಂಪನಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಳಪೆ ಕಾಮಗಾರಿ ನಡೆಸುತ್ತಿದೆ. ಪೈಪ್‌ಲೈನ್‌ ಅಳವಡಿಕೆಗಾಗಿ ಅಗೆದಿರುವ ಗುಂಡಿಯನ್ನು ಇನ್ನೂ ಹಲವೆಡೆ ಮುಚ್ಚಿಲ್ಲ. ರಸ್ತೆಯಲ್ಲಿನ ತಗ್ಗು ಮುಚ್ಚಿ ಡಾಂಬರು ಹಾಕಿಲ್ಲ.

ಇಂಥ ಸನ್ನಿವೇಶದಲ್ಲಿ ಜಲಮಂಡಳಿಯ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪಾಲಿಕೆ ಗಮನಕ್ಕೆ ತರದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಈಗಾಗಲೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ವಿಜಯಪುರಿಗರು ಮುಂಬರುವ ಬೇಸಿಗೆಯಲ್ಲಿ ಮತ್ತಷ್ಟು ನೀರಿನ ತ್ರಾಸು ಎದುರಿಸಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಅಧಿಕಾರಿಗಳ ಕೊರತೆಯಿಂದ ಜಲಮಂಡಳಿ ವ್ಯಾಪ್ತಿಯಲ್ಲಿನ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿವೆ. ಈಗಿನ ಶಿಫಾರಸಿನಂತೆ ಕಚೇರಿ ಸ್ಥಳಾಂತರಗೊಂಡರೇ, ವಿಜಯಪುರದ ನಾಗರಿಕರು ವಿನಾಃ ಕಾರಣ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಸಂಬಂಧಿಸಿದವರು ಯಾವುದೇ ಕಾರಣಕ್ಕೂ ಕಚೇರಿ ಸ್ಥಳಾಂತರ ಮಾಡಬಾರದು ಎಂದು ಲೋಣಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !