ಒಕ್ಕಲಿಗರ ಸಂಘ: ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ ಅರ್ಜಿ ವಜಾ

7

ಒಕ್ಕಲಿಗರ ಸಂಘ: ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ ಅರ್ಜಿ ವಜಾ

Published:
Updated:

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

‘ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಆಡಳಿತಾಧಿಕಾರಿ ನೇತೃತ್ವದಲ್ಲೇ ಚುನಾವಣೆ ನಡೆಸಬಹುದು’ ಎಂದು ಆದೇಶಿಸಲಾಗಿದೆ.

ಕಲಬುರ್ಗಿ ಪೀಠದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಈ ಆದೇಶ ಪ್ರಕಟಿಸಿದೆ.

‘ಸಂಘದಲ್ಲಿ 2012ರಿಂದಲೂ ಸರ್ವ ಸದಸ್ಯರ ಸಭೆ ಕರೆದಿರಲಿಲ್ಲ. ಸೊಸೈಟಿ ನೋಂದಣಿ ಕಾಯ್ದೆಯ ನಿಯಮ ಉಲ್ಲಂಘನೆ. ಅಂತೆಯೇ ವಾರ್ಷಿಕ ಲೆಕ್ಕ ಪತ್ರಗಳನ್ನು ಸಲ್ಲಿಸಿಲ್ಲ’ ಎಂಬ ದೂರುಗಳನ್ನು ಪರಿಗಣಿಸಿ ಸರ್ಕಾರ 2018ರ ಆಗಸ್ಟ್‌ 20ರಂದು ನಿವೃತ್ತ ಐಎಎಸ್‌ ಅಧಿಕಾರಿ ಎಚ್‌.ಎಸ್‌.ಅಶೋಕಾನಂದ ಅವರನ್ನು ಆಡಳಿತಾಧಿಕಾರಿ ಆಗಿ ನೇಮಕ ಮಾಡಿತ್ತು.

ಇದನ್ನು ಪ್ರಶ್ನಿಸಿ ಹಾಲಿ ನಿರ್ದೇಶಕ ಶಿವಲಿಂಗಯ್ಯ ಮತ್ತು ತಾತ್ಕಾಲಿಕ ಕಾರ್ಯದರ್ಶಿ ಎಚ್‌.ಎಂ.ನಾರಾಯಣ ಮೂರ್ತಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. 

ಅಗೌರವವೇ ಮರಣ:  ‘ಒಕ್ಕಲಿಗರ ಸಂಘ ಅಥವಾ ಇನ್ನಾವುದೇ ಸಂಘಗಳು ತನ್ನ ಸದಸ್ಯರ ಆಯ್ಕೆ ಮಾಡುವಾಗ ಪ್ರಾಮಾಣಿಕತೆ ಹಾಗೂ ಏಕತೆಯನ್ನು ಪ್ರದರ್ಶಿಸಬೇಕು’ ಎಂದು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

‘ಮಹಾನ್‌ ವ್ಯಕ್ತಿಗಳು ಸಂಘದ ಏಳಿಗೆಗೆ ಶ್ರಮಿಸಿದ್ದಾರೆ. ಇತಿಹಾಸವುಳ್ಳ ಈ ಸಂಘಕ್ಕೆ ಉತ್ತಮರನ್ನು ಆಯ್ಕೆ ಮಾಡಲ ಇದು ಸುಸಮಯ. ಗೌರವಕ್ಕಿಂತ ಮತ್ತೊಂದು ಸಂಪತ್ತಿಲ್ಲ. ಅಗೌರವವೇ ಮರಣ’ ಎಂಬುದನ್ನು ನೆನಪಿನಲ್ಲಿಡಬೇಕು. ಸಂಘಗಳಿಗೆ ಆಯ್ಕೆಯಾಗುವ ವ್ಯಕ್ತಿಗಳು ‘ದೈವ ಪ್ರೀತಿ, ಪಾಪ ಭೀತಿ, ಸಂಘ ನೀತಿ’ ಎಂಬ ಮೂರು ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅನುಸರಿಸಬೇಕು’ ಎಂದೂ ಹೇಳಿದೆ.

‘ಇತ್ತೀಚಿನ ದಿನಗಳಲ್ಲಿ ಅರ್ಜಿದಾರ ಸಂಘವಷ್ಟೇ ಅಲ್ಲದೆ ಇತರೆ ಸಂಘ ಸಂಸ್ಥೆಗಳಲ್ಲೂ ಸಹ, ಸದಸ್ಯರಾಗಲು ಬಯಸುವ ವ್ಯಕ್ತಿಗಳು ಕೇವಲ ಅಧಿಕಾರ, ಹಣ, ಸಂಪತ್ತು, ಹೆಸರು ಹಾಗೂ ಖ್ಯಾತಿಯನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಬೆಳವಣಿಗೆಗಳಿಂದ ಸಂಘಗಳ ನಿರ್ದಿಷ್ಟ ಗುರಿ ಮತ್ತು ಉದ್ದೇಶ ಸಾಧನೆ ಕಷ್ಟ ಸಾಧ್ಯ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !