ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಲಾರ್ಡ್! ನೀವೇ ಹೀಗಂದುಬಿಟ್ಟರೆ ಹೇಗೆ?

Last Updated 16 ಜೂನ್ 2018, 9:15 IST
ಅಕ್ಷರ ಗಾತ್ರ

‘ಈ ದೇಶವನ್ನು ನಾಶ ಮಾಡಿರುವ ಅಥವಾ ಈ ದೇಶವು ಸರಿಯಾದ ದಿಕ್ಕಿನಲ್ಲಿ ಪ್ರಗತಿ ಸಾಧಿಸಲು ಅಡ್ಡಿಯಾಗಿರುವ ಎರಡು ಸಂಗತಿಗಳು ಯಾವುವು ಎಂದು ಯಾರಾದರೂ ನನ್ನನ್ನು ಕೇಳಿದರೆ, ಅವು ಹೀಗಿರುತ್ತವೆ: (1) ಮೀಸಲಾತಿ ಮತ್ತು (2) ಭ್ರಷ್ಟಾಚಾರ. ಸ್ವಾತಂತ್ರ್ಯ ಬಂದು 65 ವರ್ಷಗಳಾದ ನಂತರವೂ ಮೀಸಲಾತಿ ಕೇಳುವುದು ಈ ದೇಶದ ಯಾವುದೇ ಪ್ರಜೆಗೆ ನಾಚಿಕೆಗೇಡಿನ ವಿಚಾರ. ನಮ್ಮ ಸಂವಿಧಾನವನ್ನು ರೂಪಿಸಿದಾಗ, ಮೀಸಲಾತಿ ಕೇವಲ ಹತ್ತು ವರ್ಷಗಳ ಕಾಲ ಮಾತ್ರ ಇರುವುದೆಂದು ಭಾವಿಸಲಾಗಿತ್ತು, ಆದರೆ ದುರದೃಷ್ಟದಿಂದ ಅದು ಸ್ವಾತಂತ್ರ್ಯ ಬಂದ 65 ವರ್ಷಗಳ ನಂತರವೂ ಮುಂದುವರೆದಿದೆ... ದೇಶದ ಜನರು ಮೀಸಲಾತಿಗಾಗಿ ಹಿಂಸಾಚಾರಕ್ಕಿಳಿದು ರಕ್ತ ಸುರಿಸುವುದರ ಬದಲು, ಎಚ್ಚೆತ್ತುಕೊಂಡು ಎಲ್ಲಾ ಹಂತಗಳಲ್ಲಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು.

ಮೀಸಲಾತಿ ಎನ್ನುವುದು ಜನರ ನಡುವೆ ವಿರಸದ ಬೀಜಗಳನ್ನು ಬಿತ್ತುತ್ತಿರುವ ರಾಕ್ಷಸಜಂತುವಿನ ಪಾತ್ರ ನಿರ್ವಹಿಸಿದೆಯಷ್ಟೆ...’ ಎಂದು ಮುಂತಾಗಿ ಮೀಸಲಾತಿ ವಿರುದ್ಧ ಟೀಕಾಪ್ರಹಾರ ಇತ್ತೀಚೆಗೆ ನಡೆಯಿತು.  ಮೀಸಲಾತಿಯನ್ನು ಭ್ರಷ್ಟಾಚಾರದೊಂದಿಗೆ ಸಮೀಕರಿಸಿರುವುದು ಬಿಟ್ಟರೆ, ಈ ಮಾತುಗಳಲ್ಲಿ ಹೊಸದೇನೂ ಇಲ್ಲ. ಏಕೆಂದರೆ ಈ ದೇಶದ ಅಂತರಂಗ ಬಹಿರಂಗಗಳಲ್ಲಿ ಮೀಸಲಾತಿ ವಿರೋಧಿ ಚಳವಳಿ ನಿರಂತರವಾಗಿ ಹರಿಯುತ್ತಿದೆ. ಇತ್ತೀಚೆಗೆ ಆ ಚಳವಳಿಗೆ ಹೊಸ ‘ಬಲ’ವೂ ಬಂದಿದೆ. ಮೀಸಲಾತಿ ವ್ಯವಸ್ಥೆಯನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕು ಎಂಬ ಆಗ್ರಹಗಳು ಮತ್ತೆ ಕೇಳಿಬರುತ್ತಿವೆ. ನಮ್ಮ ಹೊಸ ತಲೆಮಾರಿನ ಹಲವರಿಗೆ ‘ಹುಸಿ ಧಾರ್ಮಿಕತೆ’ಯ ಜೊತೆಗೆ ‘ಮೀಸಲಾತಿ ವಿರೋಧ’ವೂ ಮೆಚ್ಚಿನ ವಿಷಯ ಆಗುತ್ತಿದೆ.

ಆದ್ದರಿಂದ ಮೇಲಿನ ಮಾತುಗಳನ್ನು ಮೀಸಲಾತಿ ವಿರೋಧಿ ಚಳವಳಿಯ ಯಾವುದೋ ವೇದಿಕೆಯಲ್ಲಿ ಸ್ವಯಂಘೋಷಿತ ಅಥವಾ ಪಕ್ಷಪೋಷಿತ ಮುಖಂಡನೊಬ್ಬ ಕುಟ್ಟಿದ ಭಾಷಣ ಎಂದು ಯಾರಾದರೂ ಭಾವಿಸಿಬಿಡಬಹುದು. ಆದರೆ ಈ ಮಾತುಗಳು ಕೇಳಿಬಂದದ್ದು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ರಕ್ಷಿಸಬೇಕಾದ ನ್ಯಾಯದೇಗುಲವೊಂದರಲ್ಲಿ, ನ್ಯಾಯಮೂರ್ತಿಗಳು ನೀಡಿದ ಆದೇಶದಲ್ಲಿ ಎನ್ನುವುದು ಗಮನಾರ್ಹ. ಗುಜರಾತ್‌ನ ಹಾರ್ದಿಕ್ ಪಟೇಲ್ ಗೊತ್ತಲ್ಲ- ನಿರಂತರ ನಡೆಯುವ ಮೀಸಲಾತಿ ಚರ್ಚೆಯ ಬೆಂಕಿಗೆ ಒಮ್ಮೆಲೇ ಪೆಟ್ರೋಲ್ ಸುರಿದ ಪಟೇಲರ ಹುಡುಗ? ಗುಜರಾತ್ ಹೈಕೋರ್ಟ್‌ನಲ್ಲಿ ಹಾರ್ದಿಕ್ ವಿರುದ್ಧ ಹಾಕಿದ್ದ ಪ್ರಕರಣವೊಂದಕ್ಕೆ ನೀಡಿದ ತೀರ್ಪಿನಲ್ಲಿ ಮೀಸಲಾತಿ ವ್ಯವಸ್ಥೆ ವಿರುದ್ಧ ಹೀಗೆ ಕೆಂಡಕಾರಲಾಗಿತ್ತು.

ತೀರ್ಪು ನೀಡಿದ ನ್ಯಾಯಮೂರ್ತಿ ಜೆ.ಬಿ. ಪರ್ಡಿವಾಲ ಅವರು, ಭ್ರಷ್ಟಾಚಾರದ ಹಾಗೆ ಮೀಸಲಾತಿಯೂ ನಮ್ಮ ದೇಶವನ್ನು ನಾಶಮಾಡುತ್ತಿದೆ, ಸ್ವಾತಂತ್ರ್ಯ ಬಂದ 65 (?) ವರ್ಷಗಳ ನಂತರವೂ ಮುಂದುವರೆದು ನಾಚಿಕೆ ತರುತ್ತಿದೆ ಎಂದು ತೀವ್ರ ಅಸಹನೆ ವ್ಯಕ್ತಪಡಿಸಿದ್ದರು. ನ್ಯಾಯಮೂರ್ತಿಗಳ ಆದೇಶದಲ್ಲಿದ್ದ ಮೀಸಲಾತಿಯ ವಿರೋಧ ವಿವಾದದ ಸ್ವರೂಪ ತಳೆಯಿತು. ಈ ಅಂಶಗಳು ಏನು ಪ್ರತಿಕ್ರಿಯೆ, ಪರಿಣಾಮ ಮಾಡಬೇಕೋ ಅವುಗಳನ್ನು ಮಾಡಿತು. ಮೀಸಲಾತಿ ಎನ್ನುವುದು ಸಂವಿಧಾನವೇ ಮುಂದಿಟ್ಟಿರುವ ಸಮಾನತೆಯ ವಿಧಾನ. ಮೀಸಲಾತಿಯ ವಿರುದ್ಧ ಮಾತನಾಡುವುದು ಸಂವಿಧಾನವನ್ನು ವಿರೋಧಿಸಿದಂತೆ.

ಆಮೇಲೆ ಮೀಸಲಾತಿಯನ್ನು ಮೊದಲ ಹತ್ತು ವರ್ಷಗಳ ಕಾಲ ಮಾತ್ರ ಕೊಡಲಾಗಿತ್ತು ಎನ್ನುವುದು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಮಾತ್ರ ಅನ್ವಯಿಸಿತ್ತು. ಖಂಡಿತಾ ಅದು ಅವರ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳನ್ನು ಕುರಿತದ್ದು ಅಲ್ಲವೇ ಅಲ್ಲ. ಎಲ್ಲಕ್ಕೂ ಮಿಗಿಲಾಗಿ ಹೈಕೋರ್ಟ್‌ನಲ್ಲಿ ನ್ಯಾಯ ನೀಡುವ, ನ್ಯಾಯ ಕಾಪಾಡುವ ನ್ಯಾಯಮೂರ್ತಿಗಳೇ ತಮ್ಮ ಅಧಿಕೃತ ಆದೇಶದಲ್ಲಿ ಮೀಸಲಾತಿ ಕುರಿತು ಅಸಮ್ಮತಿ ವ್ಯಕ್ತಪಡಿಸಿರುವುದು ಸರಿಯಲ್ಲ- ಹೀಗೆ ಅವರ ಅಭಿಪ್ರಾಯಕ್ಕೆ ವಿವಿಧ ನೆಲೆಗಳಲ್ಲಿ ವ್ಯಾಪಕವಾದ ವಿರೋಧ ಸಹಜವಾಗಿ ವ್ಯಕ್ತವಾಯಿತು. ನ್ಯಾಯಮೂರ್ತಿಗಳ ವಿರುದ್ಧವೇ ಕ್ರಮ ಕೈಗೊಳ್ಳುವ ಕೆಲಸ ಚುರುಕು ಪಡೆಯಿತು. ಮುಂದಿನದೆಲ್ಲ ನಾಟಕೀಯ ಬೆಳವಣಿಗೆಯೋ ರಾಜಕೀಯ ಬೆಳವಣಿಗೆಯೋ ಹೇಳುವುದು ಕಷ್ಟ. 

ನ್ಯಾಯಪೀಠದಲ್ಲಿ ಕುಳಿತು ಸಾಮಾಜಿಕ ನ್ಯಾಯದ ಮುಖ್ಯ ಉಪಕರಣವೆಂದು ಪರಿಗಣಿತವಾದ ಮೀಸಲಾತಿಯನ್ನು ವಿರೋಧಿಸಿದ ನ್ಯಾಯಮೂರ್ತಿಗಳ ವಿರುದ್ಧ ವಾಗ್ದಂಡನೆ ಪ್ರಸ್ತಾಪವನ್ನು ಐವತ್ತೆಂಟು ಮಂದಿ ಸದಸ್ಯರು ರಾಜ್ಯಸಭೆಯಲ್ಲಿ ಹಮೀದ್ ಅನ್ಸಾರಿ ಅವರ ಮುಂದೆ ಮಂಡಿಸಿದರು. ರಾಜ್ಯಸಭೆಯಲ್ಲಿ ನ್ಯಾಯಮೂರ್ತಿಗಳ ವಿರುದ್ಧ ವಾಗ್ದಂಡನೆಯ ಪ್ರಸ್ತಾಪ ಅಥವಾ ಸೂಚನೆ ಮಂಡಿಸಲು ಐವತ್ತು ಮಂದಿ ಸದಸ್ಯರ ಮತ್ತು ಲೋಕಸಭೆಯಲ್ಲಿ ಆಗುವುದಾದರೆ ನೂರು ಮಂದಿ ಸದಸ್ಯರ ಸಹಮತ ಅಗತ್ಯ. ವಾಗ್ದಂಡನೆ ಪ್ರಸ್ತಾಪಕ್ಕೆ ತಯಾರಿ ನಡೆಯುತ್ತಿದೆ ಎಂಬ ಸುದ್ದಿ ಹರಡಿದೊಡನೆ ಇತ್ತ ಗುಜರಾತ್ ಸರ್ಕಾರ ಮತ್ತು ಹೈಕೋರ್ಟ್‌ನಲ್ಲಿ ಅದನ್ನು ತಡೆಯುವ ಪ್ರಕ್ರಿಯೆ ಶುರುವಾಯಿತು. ಅಧಿಕೃತ ರೀತಿಯಲ್ಲೇ ಎಲ್ಲ ಶರವೇಗದಲ್ಲಿ ನಡೆದು ನ್ಯಾಯಮೂರ್ತಿ ಜೆ.ಬಿ. ಪರ್ಡಿವಾಲ ಅವರು ತಮ್ಮ ತೀರ್ಪು ಆದೇಶದಲ್ಲಿದ್ದ, ಮೀಸಲಾತಿ ವಿರೋಧಿಸುವ ಅಂಶಗಳಿದ್ದ 62ನೇ ಪ್ಯಾರವನ್ನು ಕಿತ್ತು ಹಾಕಿದರು.

ಪ್ರಕರಣ ನಿರ್ಧರಿಸುವಲ್ಲಿ ಈ ಪ್ಯಾರದ ವಾಕ್ಯಗಳು ಸಂಬಂಧವಿಲ್ಲ ಅಥವಾ ಅಗತ್ಯವಿಲ್ಲ ಎಂಬ ಕಾರಣ ನೀಡಲಾಯಿತು. ವಾಗ್ದಂಡನೆ ತಪ್ಪಿಸಿಕೊಳ್ಳಲು ನ್ಯಾಯಮೂರ್ತಿಗಳು ಕೈಗೊಂಡ ಈ ಕ್ರಮಕ್ಕೆ ‘ಮೈಲಾರ್ಡ್! ಎಂಥ ಯೂ ಟರ್ನ್!’ ಎಂಬ ಟೀಕೆಯೂ ‘ಇದು ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯದ ಮೇಲೆ ಆದ ಹಲ್ಲೆ’ ಎಂಬ ಬೆಂಬಲವೂ ವ್ಯಕ್ತವಾಯಿತು. ಒಟ್ಟಿನಲ್ಲಿ ದೇಶದ ಮೀಸಲಾತಿ ಸಂಕಥನಕ್ಕೆ ಮತ್ತೊಂದು ಅಧ್ಯಾಯ ಸೇರ್ಪಡೆಯಾದಂತಾಯಿತು. ಜಗತ್ತಿನ ಅನೇಕ ದೇಶಗಳಲ್ಲಿ ವರ್ಣಭೇದ ನೀತಿಯನ್ನು ಅಳಿಸಲು ಅಥವಾ ಇಳಿಸಲು, ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಸ್ಥಾಪಿಸಲು ನಡೆದಿರುವ ರಕ್ತಸಿಕ್ತ ಹೋರಾಟಗಳ ಹಿನ್ನೆಲೆಯಲ್ಲಿ, ನಮ್ಮ ಮೀಸಲಾತಿ ವ್ಯವಸ್ಥೆಯನ್ನು ‘ರಕ್ತರಹಿತ ಕ್ರಾಂತಿ’ ಎಂದು ಕರೆದವರುಂಟು. ಮೀಸಲಾತಿಗೆ ಸುದೀರ್ಘ ಇತಿಹಾಸವಿದೆ.

ಮೀಸಲಾತಿ ಎಂಬುದನ್ನು ಬ್ರಿಟಿಷ್ ಆಡಳಿತದ ಹಂಟರ್‌ನಂಥ ಅಧಿಕಾರಿಗಳು ಕೆಲವು ಕಾರಣಗಳಿಗೆ ಬೇಟೆಯ ಮಿಗವಾಗಿ ಬಳಸಿದ್ದುಂಟು. ಮೀಸಲಾತಿ ಕುರಿತು ಗಾಂಧೀಜಿ ಮತ್ತು ಅಂಬೇಡ್ಕರ್ ನಡುವಿನ ಭಿನ್ನಾಭಿಪ್ರಾಯವೂ ಚಾರಿತ್ರಿಕ. ಮೀಸಲಾತಿ ಬೇಕೆಂದು ಜ್ಯೋತಿಬಾ ಫುಲೆ ಒತ್ತಾಯಿಸಿದ್ದರು. ಕೊಲ್ಹಾಪುರ ಸಂಸ್ಥಾನದ ಶಾಹೂ ಮಹಾರಾಜ ಬ್ರಾಹ್ಮಣೇತರರು ಮತ್ತು ಹಿಂದುಳಿದ ಜಾತಿಗಳಿಗೆ ಆಡಳಿತದ ಸೇವೆಯಲ್ಲಿ ಶೇ 50ರಷ್ಟು ಮೀಸಲಾತಿಯನ್ನು ಜಾರಿಗೆ ತಂದದ್ದು 1902ರಲ್ಲೇ! ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೂ ಮೀಸಲಾತಿ ಕ್ರಮಗಳನ್ನು ಕೈಗೊಂಡಿದ್ದರು. ಮೀಸಲಾತಿ ನಮ್ಮ ದೇಶಕ್ಕೆ ಹೊಸದೇನೂ ಅಲ್ಲ; ಏಕೆಂದರೆ ಹುಟ್ಟಿನ ಆಧಾರದ ಮೇಲೆ ಅಸಮಾನತೆ ಇರುವ ಕಡೆ ಮೀಸಲಾತಿಯ ಅಗತ್ಯ ಹುಟ್ಟೇ ಹುಟ್ಟುತ್ತದೆ!     

ಇನ್ನೂ ಹಿಂದಕ್ಕೆ ಹೊರಳಿ ನೋಡುವುದಾದರೆ, ಬಹುತ್ವ, ಬಹುವಚನ, ಬಹುಚಿಂತನಗಳಿರುವ ಹಿಂದೂ ಧರ್ಮದ ಹೆಗ್ಗಳಿಕೆ ಏನೇ ಇರಲಿ, ‘ಈ ಕೆಲವರಿಗೆ ಸಮಾನ ಅವಕಾಶ ಕೊಡುವುದಿಲ್ಲ, ಅವರನ್ನು ಮುಟ್ಟಿಸಿಕೊಳ್ಳಲೂಬಾರದು’ ಎಂಬ ಅಸ್ಪೃಶ್ಯತೆ ಆಚರಣೆ ಹಿಂದೂ ಧರ್ಮದ ಬಹುದೊಡ್ಡ ಕಳಂಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆ ನೋಡಿದರೆ ನಮ್ಮ ಸಾಮಾಜಿಕ ಇತಿಹಾಸದಲ್ಲಿ ಯಾವ ಕಾಲದಲ್ಲಿ ಒಂದಿಲ್ಲೊಂದು ಬಗೆಯ ‘ಮೀಸಲಾತಿ’ ಇರಲಿಲ್ಲ? ದೇವರ ಸೃಷ್ಟಿ, ವರ್ಣವ್ಯವಸ್ಥೆ, ಹುಟ್ಟು, ಗುಣಕರ್ಮ ವಿಭಾಗ ಎಂಬಂಥ ಹಲವು ಕಾರಣಗಳು ಅದನ್ನು ಸಮರ್ಥಿಸುತ್ತಿರಲಿಲ್ಲ? ‘ವೇದಗಳನ್ನು ಇಂಥವರು ಮಾತ್ರ ಕಲಿಯಬೇಕು, ಮಿಕ್ಕವರು ಅದನ್ನು ಕೇಳಿಸಿಕೊಂಡರೂ ಅವರ ಕಿವಿಗೆ ಕಾದ ಸೀಸ ಸುರಿಯಬೇಕು’ ಅನ್ನುವುದು ಕಟ್ಟುನಿಟ್ಟಾದ ಮೀಸಲಾತಿ ಅಲ್ಲವೇನು?

‘ಮಲ ಬಳಿಯುವುದು, ಮಲ ಹೊರುವುದು ಇಂಥವರೇ ಮಾಡಬೇಕು’ ಅನ್ನುವುದು ಅವರಿಗೆ ದಯಪಾಲಿಸಿದ್ದ ಮೀಸಲಾತಿ ಅಲ್ಲವೇನು? ಇವರು ಹೊಲಗೇರಿಯಲ್ಲಿ, ಅವರು ಅಗ್ರಹಾರದಲ್ಲಿ ಅನ್ನುವ ಬೇರ್ಪಡೆ ಸಾಂಸ್ಥಿಕ ಮೀಸಲಾತಿಯಲ್ಲದೆ ಮತ್ತೇನು? ನಮ್ಮ ಪರಂಪರೆ ಮತ್ತು ಇತಿಹಾಸದಲ್ಲಿರುವ ಇಂಥ ನೂರಾರು ವಿಚಾರಗಳನ್ನು ಎಂದಿಗೂ ಮರೆಯಬಾರದು. ಮೀಸಲಾತಿ ಎನ್ನುವುದು ಸ್ವಾತಂತ್ರ್ಯಾನಂತರ ದೇಶಕ್ಕೆರಗಿದ ಶಾಪ ಎಂಬಂತೆ ಕೊರಗುವುದು, ಅದರಿಂದ ದೇಶದ ಪ್ರಗತಿ ಕುಂಠಿತವಾಯಿತು ಎಂದು ನ್ಯಾಯಮೂರ್ತಿಗಳಂತೆ ಮರುಗುವುದು- ಚಾರಿತ್ರಿಕ ಪ್ರಜ್ಞೆ, ಸಾಮಾಜಿಕ ವಾಸ್ತವದ ಅರಿವಿನ ಕೊರತೆಯನ್ನಷ್ಟೇ ಎತ್ತಿ ಹೇಳುತ್ತದೆ.

ಸ್ವಾತಂತ್ರ್ಯ ಬಂದ ನಂತರ, ಸರ್ವ ಜನರ ಸಮಾನತೆ ಮತ್ತು ಅಭಿವೃದ್ಧಿ, ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂಬ ಆದರ್ಶ- ಆಶಯಗಳ ನೆಲೆಯಲ್ಲಿ ಮೀಸಲಾತಿ ನಮ್ಮ ಸಂವಿಧಾನವೇ ಬೆಂಬಲಿಸುವ ಕ್ರಮವಾಯಿತು. ಮೀಸಲಾತಿಗೆ ಮೂಲವಾದ ಹಳೇ ತಾರತಮ್ಯವನ್ನೆಂದೂ ಪ್ರಶ್ನಿಸದೆ, ಸ್ವಾತಂತ್ರ್ಯಾನಂತರದ ಮೀಸಲಾತಿಯನ್ನು ಮಾತ್ರ ಪ್ರಶ್ನಿಸಿ ಎಷ್ಟೊಂದು ಪ್ರಕರಣಗಳು ನ್ಯಾಯಾಲಯಗಳ ಮೆಟ್ಟಿಲೇರುತ್ತಿವೆ! ಜಾತಿ ಆಧಾರಿತ ಮೀಸಲಾತಿಯನ್ನು ಮಾತ್ರ ಉಗ್ರವಾಗಿ ವಿರೋಧಿಸುವ ಜನರು, ಅದೇ ಜಾತಿ ಆಧಾರಿತ ಮದುವೆಗಳನ್ನು-ಅದರಲ್ಲಿ ತೀರಾ ಸೀಮಿತ ಆಯ್ಕೆ ಇದ್ದರೂ- ಎಲ್ಲಾದರೂ ವಿರೋಧಿಸಿದ್ದು ಕಾಣುತ್ತದೆಯೇ?

ಹೇಳುತ್ತಾ ಹೋದರೆ, ವ್ಯಾಪಂ ಹಗರಣ ಹೇಳುವ ಹಾಗೆ ಅದರಲ್ಲಿ ಶೇ 50ರಷ್ಟು ಆರ್‌ಎಸ್‌ಎಸ್ ಕಾರ್ಯಕರ್ತರಿಗೇ ಮೀಸಲಾತಿ ಗೋಚರಿಸುತ್ತಿಲ್ಲವೇ? ಬೇರೆಯದು ಬಿಡಿ, ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಕೂಡ ಜಾತಿ ಆಧಾರಿತ ಆಯ್ಕೆ ಕಾಣುತ್ತಿಲ್ಲವೇ? ಒಂದು ಸರ್ಕಾರಿ ಕಚೇರಿಯಲ್ಲಿ ಕಾಣುವ ಹತ್ತಾರು ಜಾತಿ ಆಧಾರಿತ ಸಂಘಗಳ ಬಗ್ಗೆ ಆಕ್ಷೇಪ ಕೇಳುತ್ತದೆಯೇ? ಒಟ್ಟಿನಲ್ಲಿ ಬಹಳ ಮುಖ್ಯವಾದ ವಿಚಾರವೆಂದರೆ ಪ್ರತಿರೋಧ ಮತ್ತು ಆಕ್ರೋಶ ಇರುವುದು ಜಾತಿ ವ್ಯವಸ್ಥೆ ವಿರುದ್ಧ ಅಲ್ಲ, ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯ ವಿರುದ್ಧ ಮಾತ್ರ!

ಹಾಗೆಯೇ ಜಾತಿ ಆಧಾರಿತ ಮೀಸಲಾತಿಯಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ,  ಉದ್ಯೋಗದಲ್ಲಿ ಪ್ರತಿಭಾವಂತರಿಗೆ ಅವಕಾಶ ತಪ್ಪುತ್ತದೆ, ಬಡ್ತಿ ಸಿಗದಂತಾಗುತ್ತದೆ ಇತ್ಯಾದಿ ನೂರೆಂಟು ಟೀಕೆಟಿಪ್ಪಣಿಗಳು ಸರ್ಕಾರದ ವಿರುದ್ಧ ಇರುತ್ತವೆ. ಆದರೆ ದೇಶದುದ್ದಗಲಕ್ಕೆ ಕಾಣುವ ಖಾಸಗಿ ವಲಯದ ನರ್ಸರಿ ಶಾಲೆಗಳಿಂದ ಹಿಡಿದು ವೃತ್ತಿಪರ ಕೋರ್ಸ್‌ಗಳ ಕಾಲೇಜು-ವಿಶ್ವವಿದ್ಯಾಲಯಗಳು, ಪ್ರತಿಭೆಗೆ ಮೂರುಕಾಸಿನ ಬೆಲೆ ಕೊಡದೆ ಲಕ್ಷಕೋಟಿಗಳ ಥೈಲಿ ಹಿಡಿದವರನ್ನು ಮಾತ್ರ ಗೇಟಿನೊಳಗೆ ಸೇರಿಸುವುದಕ್ಕೆ ಉಗ್ರ ವಿರೋಧ ಎಲ್ಲಿದೆಯೋ? ಲಕ್ಷಾಂತರ ರೂಪಾಯಿ ಲಂಚ ಕೊಟ್ಟು ಉದ್ಯೋಗ ಗಿಟ್ಟಿಸುವ ಜನ, ಮೆರಿಟ್ ಉಳ್ಳ ಅಭ್ಯರ್ಥಿಗಳನ್ನು ಅಣಕಿಸಿ, ಅವಮಾನಿಸುವುದಿಲ್ಲವೋ? ಮೀಸಲಾತಿ ವಿರೋಧಿ ಚಳವಳಿಕಾರರು ಚಿಂತನೆ ನಡೆಸುವ ಅಗತ್ಯವಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2014ರ ಜೂನ್ ತಿಂಗಳಿನಲ್ಲಿ ಸಂಸತ್ತಿನಲ್ಲಿ ಮಾಡಿದ ಮೊದಲ ಭಾಷಣದಲ್ಲಿ, ತಾವು ಕಂಡ ಮೂರನೇ ತಲೆಮಾರಿನ ಸೈಕಲ್ ರಿಪೇರಿ ಹುಡುಗನ ಬಗ್ಗೆ ಪ್ರಸ್ತಾಪಿಸಿ, ಅವನ ಬದುಕು ಬದಲಾಗಬೇಡವೇ ಎಂದು ಪ್ರಶ್ನಿಸಿದ್ದರು. ‘ಸೈಕಲ್ ರಿಪೇರಿ ಅಂಗಡಿಯ ಮೂರನೇ ತಲೆಮಾರಿನ ಹುಡುಗ’ ನಿಜಕ್ಕೂ ಒಂದು ಸಾಮಾಜಿಕ ರೂಪಕ. ಆ ಹುಡುಗನೇಕೆ ತಾತ, ತಂದೆಯಂತೆ ಅದೇ ರಿಪೇರಿ ಕೆಲಸದಲ್ಲೇ ಉಳಿಯಬೇಕಾಯಿತು? ದಶಕಗಳ ಕಾಲ ಮೀಸಲಾತಿ ಇದ್ದೂ ಆ ಹುಡುಗನೇಕೆ ಶಿಕ್ಷಣ, ತರಬೇತಿ, ಉದ್ಯೋಗ ಪಡೆಯಲಿಲ್ಲ? ಆದ್ದರಿಂದ ಮೀಸಲಾತಿ ಎನ್ನುವ ಒಂದು ‘ಇತ್ಯಾತ್ಮಕ ತಾರತಮ್ಯ ಕಾರ್ಯಕ್ರಮ’ ಇನ್ನೂ ಅಗತ್ಯ ಎಂಬ ಪ್ರತಿಪಾದನೆ ಚಿಂತನಾರ್ಹವಲ್ಲವೇ?

ಮೀಸಲಾತಿ ಎನ್ನುವುದು ನಾಲ್ಕನೇ ತಲೆಮಾರಿಗೆ ಬಳಕೆ ಆಗುತ್ತಿದೆ, ಅದರ ವ್ಯಾಪಕ ದುರುಪಯೋಗ ಆಗುತ್ತಿದೆ, ಪ್ರತಿಭಾ ಪಲಾಯನಕ್ಕೆ ದಾರಿ ಮಾಡುತ್ತಿದೆ, ಸಮಾಜವನ್ನು ಒಡೆಯುತ್ತಿದೆ, ದೇಶವನ್ನು ಛಿದ್ರಗೊಳಿಸುತ್ತಿದೆ, ರಾಜಕಾರಣದ ದುಷ್ಟ ಶಸ್ತ್ರವಾಗುತ್ತಿದೆ, ಕೆನೆಪದರ ಹೊರಗಿಡಲು ವಿಳಂಬವಾಗುತ್ತಿದೆ, ಜಾತಿ ಆಧಾರ ಬಿಟ್ಟು ಬಡತನ ಆಧಾರ ಮಾಡಲು ರಾಜಕಾರಣಿಗಳಿಗೆ ಇಷ್ಟ ಇಲ್ಲ ಇತ್ಯಾದಿ ಇತ್ಯಾದಿ ಟೀಕೆಗಳೆಲ್ಲಾ ನಿಜವೇ ಇರಬಹುದು. ಆದರೆ, ಸೈಕಲ್ ರಿಪೇರಿ ಅಂಗಡಿಯ ಹುಡುಗ, ಹಳ್ಳಿಶಾಲೆಯ ಕೊನೆಯ ಬೆಂಚಿನ ಹುಡುಗಿ ಇಬ್ಬರಿಗೂ ಏಣಿ ಇಲ್ಲದೆ ಮೇಲೇರುವುದು ಅಸಾಧ್ಯ ಎನ್ನುವುದೂ ನಿಜ. ಮೀಸಲಾತಿಯೇ ಅಸಮಾನತೆಯ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ; ಆದರೆ ಅದು ಸಮಾನತೆಯ ದಾರಿಯಲ್ಲಿ ಇಡುವ ಒಂದು ಹೆಜ್ಜೆ. ಜಾತಿಯನ್ನು ಬಿಟ್ಟಲ್ಲದೆ ಜಾತಿ ವ್ಯವಸ್ಥೆ ನಾಶಪಡಿಸಲು ಸಾಧ್ಯವಿಲ್ಲ, ಅಂದಮೇಲೆ ಮೀಸಲಾತಿಯಿಂದ ಅದು ಸಾಧ್ಯವೇ? ಮೀಸಲಾತಿ ಬೇಡವಾದರೆ, ಜಾತಿಯನ್ನು ಬಿಸಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT