ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ರಾತ್ರಿ ಪಾಳಿ: ಕಾಂಗ್ರೆಸ್ ಅಪಸ್ವರ ಏಕೆ?

Last Updated 11 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಾರ್ಮಿಕ ಕಾನೂನು­ಗಳ ಪರಿಷ್ಕರಣಕ್ಕೆ  ಸಿದ್ಧವಾಗುತ್ತಿದೆ. ಇದರಲ್ಲಿ  1948­­ರಷ್ಟು ಹಳೆಯದಾದ ಫ್ಯಾಕ್ಟರಿಗಳ ಕಾಯಿದೆಯೂ ಸೇರಿದೆ. 2014ರ ಫ್ಯಾಕ್ಟರಿಗಳ  (ತಿದ್ದುಪಡಿ) ಮಸೂದೆಯನ್ನು ಲೋಕಸಭೆ­ಯಲ್ಲಿ ಕಳೆದ ವಾರ ಮಂಡಿಸಲಾಗಿದೆ.  ಈ ಕಾಯಿದೆಯ ಹಲವು ಅಂಶಗಳ ಬಗ್ಗೆ ಕಾರ್ಮಿಕ ಸಂಘಗಳು  ವಿರೋಧದ ದನಿಗಳನ್ನು ಎತ್ತಿವೆ.  ಅದೇನೇ ಇರಲಿ ಈ ತಿದ್ದುಪಡಿಯ ಮತ್ತೊಂದು ಮುಖ್ಯ ಅಂಶದ ಬಗ್ಗೆ ಕಾಂಗ್ರೆಸ್ ಪಕ್ಷದ  ಕೆಲವರು ವಿರೋಧಿಸುತ್ತಿದ್ದಾರೆ ಎಂಬುದು ವಿಪರ್ಯಾಸ.

ಫ್ಯಾಕ್ಟರಿಗಳ ಕಾಯಿದೆಯ 66ನೇ ಸೆಕ್ಷನ್ ವಿಚಾರ ಇದು.  ಕಾರ್ಖಾನೆಗಳಲ್ಲಿ ರಾತ್ರಿ ಪಾಳಿ­ಗಳಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸುವು­ದಕ್ಕೆ ಈ ಸೆಕ್ಷನ್ ಪ್ರಕಾರ   ನಿಷೇಧವಿದೆ. ಈಗ ಉದ್ದೇ­ಶಿಸಲಾಗಿರುವ ತಿದ್ದುಪಡಿಯಿಂದ   ಮಹಿಳೆ­ಯರಿಗೆ ರಾತ್ರಿ ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಸಿಗುತ್ತದೆ. ಇದಕ್ಕಾಗಿ ಔದ್ಯೋಗಿಕ ಸುರಕ್ಷತೆ, ಮನೆಯಿಂದ ಹೋಗಿ ಬರಲು ಭದ್ರತೆ ಇರುವ ಸಾರಿಗೆ ವ್ಯವಸ್ಥೆ ಹಾಗೂ ಲೈಂಗಿಕ ಕಿರುಕುಳ ಮುಕ್ತ ವಾತಾ­ವರಣವನ್ನು ಉದ್ಯೋಗದಾತರು ಕಲ್ಪಿಸಬೇಕು ಎಂಬಂತಹ ನಿಬಂಧನೆಗಳು ಉದ್ದೇಶಿತ ತಿದ್ದುಪಡಿಯಲ್ಲಿವೆ. ಅಲ್ಲದೆ ಸುರಕ್ಷಿತ ವಾತಾ­ವರಣದಲ್ಲಿ ಭಾರಿ ಯಂತ್ರೋಪಕರಣ­ಗಳೊಂದಿಗೆ  ಕೆಲಸ ಮಾಡು­ವುದು ಹಾಗೂ ಅವುಗಳ ರಿಪೇರಿ ಕೆಲಸಗಳಿಗೂ ಮಹಿಳೆಯರಿಗೆ ಅವಕಾಶ ನೀಡುವ ವಿಚಾರ ಈ ತಿದ್ದುಪಡಿ ಮಸೂದೆಯಲ್ಲಿ ಸೇರಿದೆ.

ಆದರೆ ರಾತ್ರಿ ವೇಳೆ ಕಾರ್ಖಾನೆಗಳಲ್ಲಿ ಮಹಿಳೆ­ಯರು ಕೆಲಸ ಮಾಡುವಷ್ಟು ಮಟ್ಟಿಗಿನ ಸುರಕ್ಷಿತ ವಾತಾವರಣ ಈಗಲೂ ಭಾರತದಲ್ಲಿ ಇಲ್ಲ ಎಂಬುದು ಕಾಂಗ್ರೆಸ್ ವಕ್ತಾರೆ ಶೋಭಾ ಓಝಾ ಅವರ ನಿಲುವು. ಮಹಿಳೆ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು, ಲೈಂಗಿಕ ಕಿರುಕುಳ ಪ್ರಕರಣಗಳಿಂದಾಗಿ ಕಾರ್ಖಾನೆಗಳಲ್ಲಿ ಮಹಿಳೆ­ಯರಿಗೆ ರಾತ್ರಿ ಪಾಳಿ ನೀಡುವುದು ಸೂಕ್ತವಲ್ಲ ಎಂದು ಅವರು ಈ ತಿದ್ದುಪಡಿಗೆ ವಿರೋಧ ಸೂಚಿಸಿದ್ದಾರೆ.

ಇರಬಹುದು. ಭಾರತದಲ್ಲಿ  ಮಹಿಳೆಯರ ಸುರಕ್ಷತೆಯ ವಿಚಾರ ಈಗ ಅಲ್ಲಗಳೆಯಲಾಗ­ದಂತಹ ಸಮಸ್ಯೆಯಾಗಿ ಸಾರ್ವಜನಿಕ ವಾಗ್ವಾದ­­ಗಳ ಮುಖ್ಯ ವಿಚಾರವಾಗಿದೆ.  ಹಾಗೆಂದು  ರಾತ್ರಿ ವೇಳೆಯ ಕಾರ್ಮಿಕ ವಲ­ಯದಿಂದ ಮಹಿಳೆಯ­ರನ್ನು ಹೊರಗಿಡುವುದು ಎಷ್ಟರಮಟ್ಟಿಗೆ ಸರಿ?

ಲೈಂಗಿಕ  ಕಿರುಕುಳಗಳಿಂದ ಮಹಿಳೆಯರನ್ನು ರಕ್ಷಿಸಲು ಅವರನ್ನು ಮನೆಯಲ್ಲೇ  ಇರಿಸ­ಬೇಕು ಎಂಬಂತಹ ಪಿತೃಪ್ರಾಧಾನ್ಯ  ಧೋರ­ಣೆಯ ಪ್ರದರ್ಶನವಾಗುವುದಿಲ್ಲವೆ ಇದು?

ಹಗಲಾಗಿರಲಿ, ರಾತ್ರಿಯಾಗಿರಲಿ  ಮಹಿಳೆ­ಯರು ಸೇರಿದಂತೆ ನಾಗರಿಕರಿಗೆ ಸುರಕ್ಷತೆಯ ವಾತಾ­ವರಣ ಕಲ್ಪಿಸುವುದು ಸರ್ಕಾರದ ಕರ್ತವ್ಯ­ವಲ್ಲವೆ? ಹಾಗೆಯೇ ತನ್ನ ಉದ್ಯೋಗಿ­ಗಳಿಗೆ  ಭದ್ರತೆ ಕಲ್ಪಿಸುವ ಹೊಣೆ ಉದ್ಯೋಗ­ದಾತ­ರದ್ದೂ ಆಗಿರುತ್ತದೆ.

ಹೀಗಿದ್ದೂ, ಚರ್ಚೆಯ ದಿಕ್ಕು ತಪ್ಪಿಸುವ ಇಂತಹ ಮಾತುಗಳನ್ನಾಡಿರುವುದು  ರಾಜಕೀಯ ಕ್ಷೇತ್ರಕ್ಕೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಂಥ  ಪ್ರಭಾವಿ ನಾಯಕಿಯರನ್ನು ನೀಡಿದ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ ಎಂಬುದು ವಿಶೇಷ.

ಆದರೆ ಈ ವಿಚಾರದ ಬಗ್ಗೆ ಕಾಂಗ್ರೆಸ್ ಇನ್ನೂ ಅಧಿಕೃತ ನಿಲುವು ಕೈಗೊಂಡಿಲ್ಲ ಎಂದು ಮತ್ತೊಬ್ಬರು ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಸಮಜಾಯಿಷಿ ನೀಡಿದ್ದಾರೆ. ಉದ್ಯೋಗ ವಲಯದಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ಹೆಚ್ಚು ಮಾಡುವುದಲ್ಲದೆ ಭದ್ರತಾ ಏರ್ಪಾಡು­ಗಳನ್ನು ಸುಧಾರಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ವ್ಯಾವಹಾರಿಕವಾದ ಸೂಕ್ತ ನಿಲುವು ಕೈಗೊಳ್ಳ­ಲಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ನ ಈ ನಿಲುವು ದ್ವಂದ್ವಾತ್ಮಕ­ವಾಗಿದೆ. ಏಕೆಂದರೆ ಇಂತಹದೊಂದು ತಿದ್ದು­ಪಡಿ­ಗಾಗಿ ಸ್ವತಃ ಕಾಂಗ್ರೆಸ್ ಅಧಿಕಾರದಲ್ಲಿ­ದ್ದಾಗ ಪ್ರಯತ್ನಗಳನ್ನು ಮಾಡಿತ್ತು. ಇತಿಹಾಸ­ದತ್ತ ಹಿನ್ನೋಟ ಹಾಯಿಸಬೇಕಷ್ಟೆ.

1948ರ ಫ್ಯಾಕ್ಟರಿಗಳ ಕಾಯಿದೆಯ 66ನೇ ಸೆಕ್ಷನ್‌ಗೆ  ತಿದ್ದುಪಡಿ ತಂದು ಕಾರ್ಖಾನೆಗಳಲ್ಲಿ  ರಾತ್ರಿ ಪಾಳಿ ನಿರ್ವಹಿಸಲು ಮಹಿಳೆಗೆ ಅವಕಾಶ ಕಲ್ಪಿಸುವುದಕ್ಕಾಗಿ  ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2005ರಲ್ಲೇ ಸಂಸತ್‌ನಲ್ಲಿ ಮಸೂದೆ ಮಂಡಿಸಿತ್ತು.   ಆ ನಂತರ, 2006­ರಲ್ಲಿ  ‘ಮಹಿಳೆಗೆ  ರಾತ್ರಿ ಪಾಳಿ: ಬೆಳವಣಿಗೆ ಹಾಗೂ ಅವಕಾಶಗಳು’ ಎಂಬ ವಿಷಯ ಕುರಿತು  ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಯನ­­ವೊಂದನ್ನು ಪ್ರಾಯೋಜಿಸಿತ್ತು. ಈ ಅಧ್ಯಯನ ಕಾರ್ಯದಲ್ಲಿ ಪಾಲ್ಗೊಂಡ  ‘ಅಸೋಚಾಮ್’ ಸಮೀಕ್ಷಾ ವರದಿಯನ್ನೂ ಬಿಡುಗಡೆ ಮಾಡಿದೆ.

ಮಹಿಳೆಯರ ಮೇಲೆ ರಾತ್ರಿ ಪಾಳಿ ಬೀರ­ಬಹುದಾದ ಪರಿಣಾಮಗಳು ಹಾಗೂ ವಿವಿಧ ವಲಯಗಳಲ್ಲಿ  ಬೆಳವಣಿಗೆಗೆ ಅವರಿಗಿರುವ ಅವಕಾಶಗಳನ್ನು  ಈ ಸಮೀಕ್ಷೆ ಅಧ್ಯಯನ­ಕ್ಕೊಳ­­ಪಡಿ­ಸಿತ್ತು.   ರಾತ್ರಿ ಪಾಳಿಗಳಲ್ಲಿ ಮಹಿಳೆ­ಯರ ದುಡಿಮೆ  ಯಶಸ್ವಿಯಾಗಲು ಹಾಗೂ ಸಾಮಾ­ಜಿಕ­ವಾಗಿಯೂ ಅನುಮೋದನೆ ಗಳಿಸಿ­ಕೊಳ್ಳಲು ಅವರಿಗೆ ಸೂಕ್ತ ಭದ್ರತೆ, ಹಣಕಾಸು ಪರಿಹಾರ ಹಾಗೂ ಮತ್ತೊಂದಿಷ್ಟು ಹೆಚ್ಚುವರಿ ಸೌಲಭ್ಯ­ಗಳಿರುವ ಅನುಕೂಲಕರ ವಾತಾವರಣ ಅವಶ್ಯ ಎಂಬ ಅಭಿಪ್ರಾಯವನ್ನು ‘ಅಸೋ­ಚಾಮ್’ ವ್ಯಕ್ತ­ಪಡಿಸಿತ್ತು.

ಭಾರತದಲ್ಲಿ ಕಾರ್ಮಿಕ ಕಾನೂನುಗಳು ಭಾರತ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಇದರಿಂದಾಗಿ ಭಾರತದ ಸಂಸತ್ ಹಾಗೂ ರಾಜ್ಯಗಳ ಶಾಸನಸಭೆಗಳಿಗೂ ಕಾನೂನು ಮಾಡುವ ಅವಕಾಶ ಇದೆ.  ಹೀಗಾ­ಗಿಯೇ ಕಾರ್ಮಿಕ ಕಾನೂನುಗಳಿಗೆ ಸಂಬಂಧಿ­ಸಿದಂತೆ 1948ರ ಫ್ಯಾಕ್ಟರಿಗಳ ಕಾಯಿದೆ­ಯಲ್ಲದೆ ವಿವಿಧ ರಾಜ್ಯಗಳಲ್ಲಿ  ಅಂಗಡಿ ಮತ್ತು ವಾಣಿಜ್ಯ ಮುಂಗಟ್ಟುಗಳ ಕಾಯಿದೆಗಳು ಇವೆ.

1948ರ ಫ್ಯಾಕ್ಟರಿಗಳ ಕಾಯಿದೆ ಸೆಕ್ಷನ್ 66ರ ಅನ್ವಯ, ಬೆಳಿಗ್ಗೆ 6ರಿಂದ ಸಂಜೆ 7ರವರೆಗಿನ  ಅವಧಿ ಹೊರತುಪಡಿಸಿ   ರಾತ್ರಿ ವೇಳೆ  ಯಾವುದೇ ಕಾರ್ಖಾನೆಯಲ್ಲಿ ಮಹಿಳೆಯರು ಕೆಲಸ ಮಾಡುವುದು ಅಗತ್ಯವಿಲ್ಲ ಅಥವಾ ಅವಕಾಶವಿಲ್ಲ. ಆದರೆ, ಈ ನಿರ್ಬಂಧ­ಗಳಿಂದ ವಿನಾಯಿತಿ ಒದಗಿಸಲು ರಾಜ್ಯ ಸರ್ಕಾರ ನಿಯಮ­ಗಳನ್ನು ಮಾಡ­ಬಹುದು.  ರಾತ್ರಿ ಪಾಳಿಯನ್ನು ಮಹಿಳೆಯರಿಗೆ ನಿಷೇಧಿ­ಸುವ 1948ರ ಫ್ಯಾಕ್ಟರಿಗಳ ಕಾಯಿದೆ ಹಾಗೂ ರಾಜ್ಯ ಅಂಗಡಿಗಳು ಹಾಗೂ ವಾಣಿಜ್ಯ ಮುಂಗಟ್ಟು ಕಾಯಿದೆಗಳಿಂದ  ಆಸ್ಪತ್ರೆ ಹಾಗೂ ಕೃಷಿ ವಲಯ­ದಲ್ಲಿ ಕಾರ್ಯ ನಿರ್ವಹಿಸುತ್ತಿ­ರುವ ಮಹಿಳೆ­ಯರಿಗೆ  ವಿನಾಯಿತಿ ಇದೆ. ಹಾಗೆಯೇ ಐಟಿ, ಬಿಟಿ ವಲಯ ಇತ್ಯಾದಿ ಸೇವಾ ವಲಯಗಳು ಹಾಗೂ ಮಾಧ್ಯಮಗಳಿಗೆ ವಿನಾಯಿತಿ ಇದೆ.

ಮಹಿಳೆಯರಿಗೆ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವ ಅವಕಾಶ ನೀಡಬೇಕು  ಎಂದು ಅನೇಕ ನ್ಯಾಯಾಲಯಗಳು ಈ ಹಿಂದಿ­ನಿಂ­ದಲೂ ಅನೇಕ ತೀರ್ಪುಗಳನ್ನು ನೀಡಿವೆ.  ಸಾಂತಾಕ್ರೂಜ್ ಎಲೆ­ಕ್ಟ್ರಾನಿಕ್ ಎಕ್ಸ್ ಪೋರ್ಟ್ ಪ್ರೊಸೆಸಿಂಗ್ ಜೋನ್‌ನಲ್ಲಿ  (ಎಸ್ಇಇಪಿಝಡ್) ರಾತ್ರಿ ಪಾಳಿಯಲ್ಲಿ ಮಹಿಳೆಯರ ನಿಯೋಜನೆಗೆ ಅವಕಾಶ ಕಲ್ಪಿಸು­ವಂತಹ ಮಧ್ಯಂತರ ಆದೇಶವನ್ನು  1999ರ ಜೂನ್ 10ರಂದು ಮುಂಬೈ  ಹೈಕೋರ್ಟ್ ನೀಡಿತ್ತು.

1948ರ ಫ್ಯಾಕ್ಟರಿಗಳ ಕಾಯಿದೆಯ ಸೆಕ್ಷನ್ 66 (1) (ಬಿ) ಅಸಾಂವಿಧಾನಿಕ ಎಂದು  ಆಂಧ್ರಪ್ರದೇಶದ ಹೈಕೋರ್ಟ್ ತೀರ್ಪು ನೀಡಿದೆ. ಇದು ಸಾಂವಿಧಾನಿಕವಾಗಿ ಮಹಿಳೆ­ಯ­ರಿಗೆ ನೀಡಲಾದ  ಸಮಾನತೆಯ ಮೂಲ­ಭೂತ  ಹಕ್ಕಿನ ಉಲ್ಲಂಘನೆ ಎಂದು ಮದ್ರಾಸ್ ಹೈಕೋರ್ಟ್  ಸಹ ಹೇಳಿದೆ. ಲಿಂಗದ ಆಧಾರದ ಮೇಲೆ ಮಹಿಳೆಯರ ವಿರುದ್ಧ ನಡೆಸುವ ತಾರತಮ್ಯ­ವಿದು; ಇಂತಹ ಪ್ರವೃತ್ತಿ, ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ ಅಥವಾ ಉದ್ಯಮ  ಕೈಗೊಳ್ಳಲು ಇರುವ ಮೂಲಭೂತ ಹಕ್ಕುಗಳಿಗೆ ಭಂಗ ತರುತ್ತದೆ ಎಂದು  ಮದ್ರಾಸ್ ಹೈಕೋರ್ಟ್ ಹೇಳಿದೆ. ಮಹಿಳಾ ನೌಕರರಿಗೆ ರಾತ್ರಿ ಪಾಳಿ ನಿಷೇಧ ತೆರವುಗೊಳಿಸುವುದರ ವಿರುದ್ಧ  ಸಮಾಜದಲ್ಲಿ ಇರುವ  ಅನೇಕ ವಾದ­ಗಳನ್ನೂ   ಮದ್ರಾಸ್ ಹೈಕೋರ್ಟ್ ಈ ತೀರ್ಪು ನೀಡುವ ಸಂದರ್ಭ­ದಲ್ಲಿ ಗಮನದಲ್ಲಿರಿಸಿ ಕೊಂಡಿತ್ತು. ಹೀಗಾ­ಗಿಯೇ ಮಹಿಳೆಯ ಸುರಕ್ಷತೆ, ಭದ್ರತೆ­ಗಳಲ್ಲದೆ  ಘನತೆ, ಗೌರವ ಕಾಪಾಡಿ­ಕೊಳ್ಳಲು  ಅಗತ್ಯ­ವಾದ  ಅನೇಕ  ನಿಬಂಧನೆ­ಗಳನ್ನೂ  ತೀರ್ಪಿನಲ್ಲಿ ಅದು ವಿಧಿಸಿತ್ತು.

ನ್ಯಾಯಾಲಯಗಳ ಇಂತಹ ತೀರ್ಪುಗಳು ಹಾಗೂ ವಿವಿಧ ಸಂಘಟನೆಗಳ ಸಲಹೆಗಳನ್ನು ಆಧರಿಸಿ ಯುಪಿಎ ಸರ್ಕಾರ ಫ್ಯಾಕ್ಟರಿಗಳ ಕಾಯಿದೆ ತಿದ್ದುಪಡಿಗೆ ಮುಂದಾದದ್ದು ಬದಲಾದ ಕಾಲಕ್ಕೆ ಸಹಜ ನಡೆಯೇ ಆಗಿತ್ತು. ಆದರೆ ಮಸೂದೆಗೆ ಸಾಕಷ್ಟು ಬೆಂಬಲ ಗಳಿಸಿ­ಕೊಳ್ಳಲು ಕಾಂಗ್ರೆಸ್ ವಿಫಲವಾದ್ದರಿಂದ ಅದು ಹಾಗೆಯೇ  ರದ್ದಾಗಿಹೋಗಿತ್ತು.

ಈಗ ಎನ್‌ಡಿಎ ಸರ್ಕಾರ ಮತ್ತೆ ಮುಂದಿಟ್ಟಿ­ರುವ ತಿದ್ದುಪಡಿಯನ್ನು ವಿರೋಧಿಸುವ  ಪ್ರಯತ್ನ­­ಗಳಲ್ಲಿ ‘ರಾಜಕೀಯ’ವೇ ಎದ್ದು ಕಾಣಿಸುತ್ತಿದೆ.

ಸುರಕ್ಷಿತವಾದ, ನ್ಯಾಯಯುತವಾದ  ದುಡಿ­­ಯುವ ಸ್ಥಳಗಳನ್ನು ಮಹಿಳೆಯರಿಗೆ ಸೃಷ್ಟಿಸಲು ನೆರವಾಗುವಂತಹ    ರಕ್ಷಣಾತ್ಮಕ  ಕ್ರಮಗಳಿಗೆ ತಿದ್ದು­ಪಡಿಯಲ್ಲಿ ಒತ್ತಾಯಿಸು­ವುದನ್ನು ಬಿಟ್ಟು  ರಾತ್ರಿ ಪಾಳಿಯೇ ಅಸುರಕ್ಷತೆ­ಯದ್ದು ಎಂದು ಆತಂಕ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್  ತನ್ನನ್ನು ತಾನು ಕೆಟ್ಟದಾಗಿ ಬಿಂಬಿಸಿಕೊಳ್ಳುತ್ತಿದೆ.  ಮಹಿಳೆ­ಯರಿಗೂ ಅನ್ಯಾಯ ಮಾಡುತ್ತಿದೆ.  

‘ಅಸೋಚಾಮ್’  ನಡೆಸಿದ್ದ ಸಮೀಕ್ಷೆಯ ಪ್ರಕಾರ, ಶೇಕಡ 83ರಷ್ಟು ಮಹಿಳೆಯರು ರಾತ್ರಿ ಪಾಳಿ ಉದ್ಯೋಗದ ಬಗ್ಗೆ ತೃಪ್ತಿ ವ್ಯಕ್ತ­ಪಡಿಸಿ­ದ್ದಾರೆ.  ಹಾಗೆಯೇ ಸೇವಾ ವಲಯ­ದಲ್ಲಿರುವ­ವ­ರಿಗಿಂತ  ತಯಾರಿಕಾ ರಂಗದಲ್ಲಿ ರಾತ್ರಿ ಪಾಳಿ ಮಾಡುವ  ಮಹಿಳೆಯರು ಹೆಚ್ಚಿನ ಅಭದ್ರತೆ ಅನುಭವಿಸುತ್ತಿದ್ದರೆಂಬುದು ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿತ್ತು.  ಸೇವಾ ವಲ­ಯ­ದಲ್ಲಿರುವವರಿಗೆ ಹೋಲಿಸಿದರೆ ಅವರಿಗೆ ಸರಿಯಾದ ಸಾರಿಗೆ ವ್ಯವಸ್ಥೆಯೂ ಇಲ್ಲ ಎಂಬುದನ್ನು ಈ ವರದಿ ತೋರಿಸಿತ್ತು.

ತೊಗಲಿನ ಉದ್ಯಮದಲ್ಲಿ ಶೇ 45  ಹಾಗೂ ಜವಳಿ ಉದ್ಯಮದಲ್ಲಿ  ಶೇ 34ರಷ್ಟು ನೌಕರರು ಕೆಲಸದಲ್ಲಿ ಅಭದ್ರತೆ  ಭಾವವನ್ನು ಅನು­ಭವಿಸು­ವುದಾಗಿ ಹೇಳಿಕೊಂಡಿದ್ದರು. ಆದರೆ  ಬಿಪಿಓ ನೌಕ­ರ­ರಲ್ಲಿ ಈ ಭಾವನೆ ಶೇ 8 ಹಾಗೂ ಆಸ್ಪತ್ರೆ ನರ್ಸ್‌ಗಳಲ್ಲಿ ಇದು ಶೇ 14ರಷ್ಟಿದೆ ಎಂಬುದೂ ಸಮೀಕ್ಷೆಯಲ್ಲಿ ವ್ಯಕ್ತವಾಗಿತ್ತು.

ಆದರೆ ಅಸೋಚಾಮ್‌ನ ಈ ಸಮೀಕ್ಷೆ­ಯಲ್ಲಿ ಪಾಲ್ಗೊಂಡಿದ್ದ ಶೇ 95ರಷ್ಟು ಉದ್ಯೋ­ಗ­-­ದಾತರು ತಾವು ಸುರಕ್ಷಿತ ಉದ್ಯೋಗ ತಾಣಗ­ಳನ್ನು ಕಲ್ಪಿಸಿರುವುದಾಗಿಯೇ ಹೇಳಿ­ಕೊಂಡಿದ್ದರು.

ಒಟ್ಟಾರೆ, ರಾತ್ರಿ ಪಾಳಿಯಲ್ಲಿ ಅಸುರಕ್ಷತೆಯ ಭಾವನೆಯೇನೂ ಕಂಡು ಬರುವುದಿಲ್ಲ ಎಂಬುದು ಬಹುತೇಕ ಮಹಿಳೆಯರ ಅಭಿ­ಪ್ರಾಯ­ವಾಗಿತ್ತು.  ಆದರೆ ಹಗಲಿನಲ್ಲಿ ಮನೆ­ಗೆಲಸದ ಒತ್ತಡ­ದಿಂದಾಗಿ ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳು ಮಾತ್ರ ತಮ್ಮನ್ನು ಕಾಡುತ್ತಿರುವು­ದಾಗಿ ಈ ಮಹಿಳೆಯರು ಹೇಳಿಕೊಂಡಿದ್ದರು.

ಫ್ಯಾಕ್ಟರಿ ಕಾಯಿದೆ ತಿದ್ದುಪಡಿ ಪ್ರಕ್ರಿಯೆ ಕೇಂದ್ರದಲ್ಲಿ ಜಾರಿಯಲ್ಲಿದ್ದಾಗಲೇ  2007ರಲ್ಲಿ ರಾಜ್ಯದಲ್ಲಿದ್ದ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರದ ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ ಅವರು ಮಹಿಳೆಗೆ ರಾತ್ರಿ ಪಾಳಿ ನಿಷೇಧಿಸಿ 1961ರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮುಂಗಟ್ಟುಗಳ ಕಾಯಿದೆ ತಿದ್ದುಪಡಿಗೆ ಯತ್ನಿಸಿ ವಿವಾದವಾದ ನಂತರ ಹಿಂದೆ ಸರಿದಿದ್ದರು.

ಮಹಿಳೆಗೆ ರಾತ್ರಿ ಪಾಳಿ ವಿಚಾರ ಹೀಗೆ ರಾಜಕೀಯ­ಗೊಳ್ಳುವ ಪರಿಯೇ ವಿಚಿತ್ರ.  ರಾತ್ರಿ ವೇಳೆ ಮಹಿಳೆಯರಿಗೆ ಅಸುರಕ್ಷಿತ ಎಂಬ ಭೀತಿ ಅಸ್ತಿತ್ವದಲ್ಲಿದೆ. ಆದರೆ ವಾಸ್ತವವಾಗಿ,  ದಿನದ ಬಹುಭಾಗ   ಎಲ್ಲಾ ಸಂದರ್ಭಗಳಲ್ಲಿ  ಅವರು  ಕೆಟ್ಟ ಕುತೂಹಲದ ಕಣ್ಣುಗಳು ಹಾಗೂ  ಲೈಂಗಿಕ ಕಿರುಕುಳಗಳಿಗೆ ತುತ್ತಾಗು­ತ್ತಲೇ ಇರುತ್ತಾರೆ ಎಂಬುದನ್ನು  ಬಹುತೇಕ ಸಮೀಕ್ಷೆಗಳು ಸಾದರಪಡಿಸಿವೆ.

ವಾಸ್ತವವಾಗಿ ಮಹಿಳೆಯರ ವಿರುದ್ಧದ ಅಪ­ರಾಧಗಳನ್ನು ಕಾನೂನು ಸುವ್ಯವಸ್ಥೆ ಸಮಸ್ಯೆ­­­ಯಾಗಿ ಸರ್ಕಾರ ಪರಿಗಣಿಸಬೇಕು ಎಂಬುದು ಇಲ್ಲಿ ಮುಖ್ಯ.  ಆದರೆ ಸುರಕ್ಷತೆ ನೆಪದಲ್ಲಿ ಮಹಿಳೆಯ ಚಲನಶೀಲತೆಯನ್ನೇ ನಿರ್ಬಂಧಿಸುವ ಪಿತೃ­ಪ್ರಧಾನ ಧೋರಣೆಗಳು ಈಗಿನ  ಬದ­ಲಾ­ಗು­ತ್ತಿರುವ ಕಾಲದಲ್ಲಿ ಅಪ್ರ­ಸ್ತುತ.  ಏಕೆಂದರೆ ಆಧು­ನಿಕ ಆರ್ಥಿಕತೆ­ಯಲ್ಲಿ ಮಹಿಳೆಯ ಪಾಲ್ಗೊಳ್ಳು­ವಿಕೆ ಈಗ ಹಿಂದೆಂದಿ­ಗಿಂತಲೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಬದಲಾದ ಕಾಲಮಾನ ಮಹಿಳೆಗೆ ತಂದೊಡ್ಡು­ತ್ತಿರುವ ಹೊಸ ಹೊಸ ಸವಾಲುಗಳು, ಆಕೆಯ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರಗಳಿಗೆ ಕಾರಣವಾದ ಪಿತೃಪ್ರಧಾನ ಮೌಲ್ಯಗಳ ವಿರುದ್ಧ ಸೆಣಸುವಂತಹ ಯೋಜ­ನೆ­ಗಳು, ಕಾರ್ಯತಂತ್ರಗಳನ್ನು ನಮ್ಮ ರಾಜಕೀಯ ನೇತಾ­ರರು ರೂಪಿಸಬೇಕು. ಅದು ಬಿಟ್ಟು  ಸವಕಲಾದ ಅದೇ ಹಳೆಯ ಮೌಲ್ಯ­ಗಳನ್ನು ರಾಜಕೀಯ ವಾಗ್ವಾದಗಳಲ್ಲಿ ಪ್ರತಿ­ಪಾದಿಸು­ವಂತಹದ್ದು ಕೆಟ್ಟ ಬೆಳವಣಿಗೆ.

ಲಿಂಗ ಸಂವೇ­ದನಾಶೀಲತೆಯ ತರಬೇತಿ ನೀಡುವ ವಿಚಾರ ನಮ್ಮ ನೇತಾರರಿಗೇ ಮೊದಲು ಆಗ­ಬೇಕಾಗಿದೆ. ಇಲ್ಲದಿದ್ದಲ್ಲಿ ‘ಕನ್ನಡಿ­ಗರೇನು ಬಳೆ ತೊಟ್ಟು ಕುಳಿತಿಲ್ಲ’ ಎಂದು ಇತ್ತೀಚೆ­ಗಷ್ಟೇ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ‘ಗರ್ಜಿಸಿ’ ಬಿತ್ತರಿಸಿ­ದಂತಹ ಸಂದೇಶಗಳು ಪುನರಾವರ್ತನೆ­ಯಾಗು­ತ್ತಿರುತ್ತವೆ. ಹೆಣ್ತನ­ವನ್ನು ದುರ್ಬಲ­ತೆಗೆ ಸಮೀಕರಿಸುವ ಇಂತಹ ನುಡಿಗಟ್ಟು­ಗ­ಳಾಚೆಗೆ  ನಮ್ಮ ನೇತಾರರು ಆಲೋಚನೆ ಮಾಡಲಿ.
  ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT