ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಎಚ್.ನಾಯಕರ ದಣಿವರಿಯದ ಮೌಲ್ಯ ಮಾರ್ಗ

Last Updated 16 ಜೂನ್ 2018, 9:21 IST
ಅಕ್ಷರ ಗಾತ್ರ

ಒಬ್ಬ ಲೇಖಕ ಪ್ರಾಮಾಣಿಕನೋ ಅಲ್ಲವೋ  ಎಂಬುದು ನಮ್ಮೊಳಗೆ ಇಳಿಯುವ ಪರಿ ನಿಜಕ್ಕೂ ನಿಗೂಢವಾದುದು. ಪ್ರಾಮಾಣಿಕ ಬರ­ವಣಿಗೆ ಓದುಗರೊಳಗಿನ ಪ್ರಾಮಾಣಿಕ ತಂತು­ವೊಂದನ್ನು ತಲುಪುತ್ತಿರುತ್ತದೆ. ನನ್ನ ಹದಿಹರಯ­ದಲ್ಲಿ ಆಲ್ಬರ್ಟ್ ಕಾಮು, ಲಂಕೇಶ್, ಸೊಫೋ­ಕ್ಲಿಸ್ ಥರದವರ ಕೃತಿಗಳನ್ನು ಅಷ್ಟಿಷ್ಟು ಓದಿದ್ದ­ರಿಂದಲೋ ಏನೋ, ಯಾವುದು ಪ್ರಾಮಾಣಿಕ ಬರವಣಿಗೆ, ಯಾವುದು ಅಪ್ರಾಮಾಣಿಕ ಎಂಬುದು ಅಪ್ರಜ್ಞಾಪೂರ್ವಕವಾಗಿ ನನಗೆ ಹೊಳೆ­ಯುತ್ತಾ ಹೋಯಿತು. ಆ ಘಟ್ಟದಲ್ಲಿ ಲೈಬ್ರರಿ­ಯಲ್ಲಿ ಸಿಕ್ಕ ಜಿ.ಎಚ್. ನಾಯಕರ ‘ಸಮ­ಕಾಲೀನ’ ಎಂಬ ವಿಮರ್ಶೆಯ ಪುಸ್ತಕವನ್ನು ಓದಿ­ದಾಗ ಅದು ಎಷ್ಟು ಅರ್ಥವಾಯಿತೋ ಏನೋ! ಆದರೂ ಅಲ್ಲಿನ ವಿಶ್ಲೇಷಣೆಯ ಗಾಂಭೀರ್ಯ ನನ್ನನ್ನು ತಟ್ಟಿತ್ತು. ಒಂದು ಪಠ್ಯವನ್ನು ಹತ್ತಿರದಿಂದ ಓದುವ ಧ್ಯಾನಸ್ಥ ರೀತಿಯನ್ನು ಹಾಗೂ ಅದು ಸಾಧಿಸುವ ಬೌದ್ಧಿಕ ಎತ್ತರವನ್ನು ನಾಯಕರ ಬರವಣಿಗೆ­ಯಲ್ಲಿ ಮುಂದೆ ಗಮನಿಸುತ್ತಾ ಬಂದೆ. ಸಾಹಿತ್ಯ­ವನ್ನು ಪ್ರೀತಿಯಿಂದ ಗ್ರಹಿಸುವರಿಗೆ, ಆಳವಾಗಿ ಬೋಧಿಸುವವರಿಗೆ ನಾಯಕರ ರೀತಿಯ ಪಠ್ಯದ ನಿಕಟ ಓದು ಅತ್ಯಗತ್ಯವೆಂದು ನನಗೆ ಸದಾ ಅನ್ನಿ­ಸುತ್ತದೆ. ಒಮ್ಮೆ ಹೀಗೆ ಪ್ರಾಮಾಣಿಕವಾಗಿ ಪಠ್ಯ­ವನ್ನು ಹತ್ತಿರದಿಂದ ಓದುವುದನ್ನು ಕಲಿತ ಮೇಲಷ್ಟೇ ಉಳಿದ ಅನೇಕ ಓದುಗಳು ನಮ್ಮೊಳಗೆ ಬೆಳೆಯತೊಡಗುತ್ತವೆ.

ಜಿ.ಎಚ್. ನಾಯಕರ ವಿಮರ್ಶೆಯ ಶಕ್ತಿಯನ್ನು ಆರಂಭದಲ್ಲೇ ಗುರುತಿಸಿದ ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಗೋಪಾಲಕೃಷ್ಣ ಅಡಿಗರು ನಾಯಕರ ಓದಿನ ರೀತಿಯನ್ನು ‘ನಿಧಾನವಾಗಿ ಆದರೆ ಆಮೂಲಾಗ್ರವಾಗಿ ಒಳಹೊರಗುಗಳನ್ನು ಒಳ­ಗೊಂಡು ಒಂದು ಕೃತಿಯನ್ನು ಸಂಪೂರ್ಣ­ವಾಗಿ ಸ್ವಾಧೀನ ಪಡಿಸಿಕೊಳ್ಳುವ ರೀತಿ’ ಎಂದು ಗುರುತಿಸಿದ್ದರು; ‘ನಾಯಕರ ಶೈಲಿ ಸಾಹಿತ್ಯ ವಿಮರ್ಶೆಯಲ್ಲಿ ಪ್ರಾಮಾಣಿಕತೆ ಎಂದರೇನು ಎಂಬು­ದಕ್ಕೆ ಜ್ವಲಂತ ಉದಾಹರಣೆಯಾಗಿದೆ’ ಎಂದೂ ಹೇಳಿದ್ದರು. ಈ ಬಗೆಯ ಪ್ರಾಮಾಣಿಕತೆ­ಯಿಂದ ಕನ್ನಡದ ಪ್ರಾಚೀನ ಕೃತಿಗಳನ್ನು ಕುರಿತು ನಾಯಕರು ಬರೆದ ಬರಹಗಳಿಂದ ನನ್ನಂತೆಯೇ ಸಾವಿರಾರು ಜನಕ್ಕೆ ಈ ಕೃತಿಗಳು ಸ್ಪಷ್ಟವಾಗಿವೆ. ನಾಯಕರು ಕನ್ನಡದಲ್ಲಿ ರೂಪುಗೊಂಡ ಹಾಗೂ ತಾವೂ ರೂಪಿಸಿದ ನವ್ಯ ವಿಮರ್ಶೆಯ ಹಲವು ನಿಷ್ಠುರ ಮಾರ್ಗಗಳನ್ನು ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಕೃತಿಗಳ ಓದು, ಮರು ಓದುಗಳಲ್ಲಿ ದಕ್ಷವಾಗಿ ಬಳಸಿದ್ದಾರೆ.

ಮತ್ತೆ ಮತ್ತೆ ಪಂಪನನ್ನು ವಿವರಿಸಿರುವ ನಾಯ­ಕರು ಒಮ್ಮೆ ರಿಫ್ರೆಷರ್ ಕೋರ್ಸಿನಲ್ಲಿ ‘ಬೆಳಗು­ವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ’ ಎಂಬ ಪಂಪನ ಪ್ರಖ್ಯಾತ ಘೋಷಣೆಯನ್ನು ಪ್ರಸ್ತಾಪಿಸಿ­ದರು. ತಕ್ಷಣ ಅಲ್ಲಿದ್ದ ಮೇಷ್ಟ್ರುಗಳು ‘ಇಲ್ಲಿ ಎಂದರೆ ವಿಕ್ರಮಾರ್ಜುನ ವಿಜಯ; ಅಲ್ಲಿ ಎಂದರೆ ಆದಿಪುರಾಣ’ ಎಂದು ಹಳೆಯ ಪ್ಲೇಟನ್ನೇ ಹಾಕಿ­ದರು! ಆಗ ನಾಯಕರು ‘ಅಲ್ಲಿ’ ಎಂದರೆ ಆದಿ­ಪುರಾಣ ಎಂದು ಖಾತ್ರಿಯಾಗಿ ಹೇಗೆ ಹೇಳು­ತ್ತೀರಿ? ‘ಅಲ್ಲಿ’ ಎನ್ನುವುದು ಅಕಸ್ಮಾತ್ ಸಿಕ್ಕಿರದ ಪಂಪನ ಇನ್ನಾವುದೋ ಕೃತಿಯನ್ನೂ ಸೂಚಿಸುತ್ತಿ­ರ­ಬಹುದಲ್ಲವೆ?” ಎಂದು ನಕ್ಕರು. ನಾಯಕರ ಈ ಓಪನ್ ರೀಡಿಂಗಿನಿಂದ ವಿಸ್ಮಯಗೊಂಡ ನನ್ನೆ­ದುರು ಅದೊಂದು ಒರಿಜಿನಲ್ ಒಳನೋಟವಾಗಿ ಇವತ್ತಿಗೂ ಸುಳಿಯುತ್ತಿರುತ್ತದೆ.

ಅದಕ್ಕಿಂತ ಕೆಲವು ವರ್ಷಗಳ ಕೆಳಗೆ ನಾಯಕರು ತೇಜಸ್ವಿಯವರ ‘ಕರ್ವಾಲೊ’ ಕಾದಂಬರಿಗೆ ಮುನ್ನುಡಿ ಬರೆಯುತ್ತಾ, ತೇಜಸ್ವಿಯವರ ಒಟ್ಟು ಸಾಹಿತ್ಯವನ್ನು ಚಿರ ವಾಸ್ತವ ಹಾಗೂ ಚರ ವಾಸ್ತವ­ಗಳ ಹಿನ್ನೆಲೆಯಲ್ಲಿ ನೋಡಿದ ಹೊಸ ರೀತಿ ಕೂಡ ನನ್ನನ್ನು ಸೆಳೆದಿತ್ತು. ಅವರು ಈ ಎರಡು ಪರಿ­ಕಲ್ಪನೆಗಳ ಮೂಲಕ ಲೇಖಕನೊಬ್ಬನ ಎಲ್ಲ ಕೃತಿ­ಗಳನ್ನೂ ಓದಲು ಬಳಸಿದ ಅಧ್ಯಯನ ವಿಧಾನ­ವನ್ನು ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿರು­ವವ­ರೆಲ್ಲ ಆಳವಾಗಿ ಅಭ್ಯಾಸ ಮಾಡಬೇಕೆನ್ನಿಸ­ತೊಡಗಿತು. ‘ಕರ್ವಾಲೊ’ ಕಾದಂಬರಿಯ ಲೇಖ­ಕರ ಮಾತಿನಲ್ಲಿ ತೇಜಸ್ವಿಯವರು ‘ದ್ವೇಷಾ­ಸೂಯೆ­ಗಳಿಲ್ಲದೆ ಭಿನ್ನಾಭಿಪ್ರಾಯ­ಗಳೊಂದಿಗೆ ಸಹ­ಬಾಳುವೆ ನಡೆಸುವ ಮಾನವೀಯವಾದ ಒಂದು ದೊಡ್ಡ ಗುಣವಿರುವ ವಿಮರ್ಶಕ ಕನ್ನಡ ಸಾಹಿತ್ಯ­ಕ್ಷೇತ್ರದಲ್ಲಿ ನಾನು ತಿಳಿದಂತೆ ಜಿ.ಎಚ್. ನಾಯಕ­ರೊಬ್ಬರೇ’ ಎಂದು ಬರೆದಿದ್ದರು. ನಾನು ಗೌರವಿ­ಸುವ ತೇಜಸ್ವಿಯವರು ಜಿ.ಎಚ್. ನಾಯಕರ ಬಗ್ಗೆ ಬರೆದ ಮಾತು ಕೂಡ ನನ್ನ ಮನಸ್ಸಿನಲ್ಲಿ ನಾಯ­ಕರ ಬಗ್ಗೆ ವಿಶಿಷ್ಟ ಇಮೇಜೊಂದನ್ನು ಸೃಷ್ಟಿಸಿತು.

ಇದಾದ ಮೇಲೆ ಅನೇಕ ಸಲ ನಾಯಕರ ಬರ­ವಣಿಗೆಯನ್ನು, ಮಾತುಗಳನ್ನು ಗಮನಿಸುತ್ತಾ ಬಂದಿ­ದ್ದೇನೆ. ಸಿರಿವರ ಪ್ರಕಾಶನ ಮೂರು ವರ್ಷ­ಗಳ ಕೆಳಗೆ ಪ್ರಕಟಿಸಿದ ನಾಯಕರ ಎಲ್ಲ ಕೃತಿಗಳ ‘ಮೌಲ್ಯಮಾರ್ಗ’ದ ಸಂಪುಟಗಳನ್ನು ನೋಡ­ನೋಡುತ್ತಾ, ನಾಯಕರ ವಿಮರ್ಶೆಯನ್ನು ಸರಿ­ಯಾಗಿ ಓದದೆ ನಮ್ಮ ಬೋಧನಾವಲಯ ಗಂಭೀರ ಓದಿನ ಮಾರ್ಗಗಳನ್ನು ಕಳೆದುಕೊಂಡಿದೆ ಅನ್ನಿಸಿತು. ಅಬ್ಬರದ, ಅಸೂಕ್ಷ್ಮವಾದ ಸಾಮಾಜಿಕ ಓದಿನ ಹಳ್ಳಕ್ಕೆ ಬಿದ್ದು ಕನ್ನಡ ವಿಮರ್ಶೆ ತಾನು ಕಳೆದುಕೊಂಡಿರುವ ಸೂಕ್ಷ್ಮತೆಯನ್ನು ನಾಯಕ­ರಂಥ­ವರ ನಿರಂತರ ಪಠ್ಯವಿಸ್ತರಣೆಯ ಓದಿ­ನಿಂದಲೂ ಪಡೆಯುತ್ತಿರಬೇಕಾಗುತ್ತದೆ.

ಈಚೆಗೆ ನಾಯಕರ ಸಾಹಿತ್ಯ ವಿಮರ್ಶೆಯ ಜೊತೆಗೇ ಅವರು ನಡೆದು ಬಂದ ಹಾದಿಯ ವಿವರ­ಗಳನ್ನು ಅವರ ಆತ್ಮಚರಿತ್ರಾತ್ಮಕ ಬರಹ­ಗಳಲ್ಲಿ ಗಮನಿಸುತ್ತಿದ್ದೆ. ಉತ್ತರಕನ್ನಡದ ಸೂರ್ವೆ ಎಂಬ ಪುಟ್ಟ ಊರಿನಿಂದ ಬಂದ ಗೋವಿಂದ-­ರಾಯ ಹಮ್ಮಣ್ಣ ನಾಯಕ (ಹುಟ್ಟು: 18 ಸೆಪ್ಟೆಂಬರ್ 1935) ಕನ್ನಡ ಉಪನ್ಯಾಸಕರಾಗಿ, ಲೇಖಕರಾಗಿ ತಮ್ಮ ಆಳದಲ್ಲಿ ಒಪ್ಪಿಗೆಯಾದ ನವ್ಯ ವಿಮರ್ಶಾ ಮಾನದಂಡಗಳನ್ನು ನಿಷ್ಠುರವಾಗಿ ಬಳಸಿ ಖಚಿತ ಸಾಹಿತ್ಯಕ ನೋಟಗಳನ್ನು ಪಡೆದರು. ಮೈಸೂರಿನ ಕೆಲವು ಸಾಹಿತ್ಯಪರಾವಲಂಬಿಗಳ ಅಸಾಹಿತ್ಯಕ ಪ್ರತಿಕ್ರಿಯೆಗಳು ಹಾಗೂ ಪೀಡನಗಳ ನಡುವೆಯೂ ತಮ್ಮ ಮಾರ್ಗದಲ್ಲಿ ಮುಂದುವರೆ­ದರು; ಸಾಹಿತ್ಯದ ಚಿಂತನೆ, ಬೋಧನೆಗಳಲ್ಲಿ ಆಳವಾಗಿ ಮುಳುಗಿ ಸುತ್ತಲಿನ ಸಣ್ಣತನವನ್ನು ಮೀರಲೆತ್ನಿಸಿದರು. ಬದುಕು– -ಬರಹ­ಗಳೆರಡ­ರಲ್ಲೂ ಮೌಲ್ಯಮಾರ್ಗವನ್ನು ಹಿಡಿದ ಈ ಪಯಣ­ವನ್ನು ಅರಿಯುವುದು ಕೂಡ ಸಾಹಿತಿ­ಗಳಿಗೆ ಹಲ ಬಗೆಯ ಶಕ್ತಿಗಳನ್ನು ನೀಡಬಲ್ಲದು.

ನಾಯಕರು ವಿಶ್ವವಿದ್ಯಾಲಯದಲ್ಲಿ ತಾವು ಪಟ್ಟ ಪಾಡುಗಳ ಬಗ್ಗೆ ಬರೆಯುವಾಗ ತೇಜಸ್ವಿ­ಯವರ ಪ್ರತಿಕ್ರಿಯೆಯೊಂದನ್ನು ನೆನೆಸಿಕೊಳ್ಳು­ತ್ತಾರೆ. ನಾಯಕರು ಕುವೆಂಪು ಅವರ ಸಾಹಿತ್ಯ­ವನ್ನು ವಿಮರ್ಶಾತ್ಮಕವಾಗಿ ನೋಡುತ್ತಿದ್ದಾರೆಂದು ಕುವೆಂಪು ಅಂಧಾಭಿಮಾನಿಗಳು ಕಿಡಿ ಕಾರುತ್ತಿದ್ದ ಕಾಲ ಅದು. ಇದೆಲ್ಲದರಿಂದ ಅಸಹ್ಯಗೊಂಡ ತೇಜಸ್ವಿ, ನಾಯಕರಿಗೆ ಮೇಷ್ಟರ ಕೆಲಸ ಬಿಟ್ಟು ತನ್ನಂತೆಯೇ ತೋಟ ಮಾಡಲು ಹುರಿದುಂಬಿಸು­ತ್ತಾರೆ. ನಾಯಕರು ಹಿಂದೆ ಮುಂದೆ ನೋಡಿದಾಗ ತೇಜಸ್ವಿ ರೇಗುತ್ತಾರೆ: ‘ಇದರಿಂದ ಸಾಹಿತ್ಯದ ಓದು, ಬರವಣಿಗೆಗೆ ಏನೂ ತೊಂದರೆ ಆಗುವು­ದಿಲ್ಲರೀ. ನಾನೀಗ ದಿನಕ್ಕೆ ನಾಲ್ಕು ಗಂಟೆ ಓದು ಬರಹ ಮಾಡುತ್ತೇನೆ. ಇನ್ನೂ ಹೆಚ್ಚು ಹೊತ್ತು ಬಿಡುವು ಮಾಡಿಕೊಳ್ತಾ ಹೋಗಬಹುದು ಕಣ್ರೀ. ನನ್ನ ಆಯ್ಕೆಯ ಓದು, ನನ್ನ ಆಯ್ಕೆಯ ಬರವ­ಣಿಗೆ. ಹಾಳುಮೂಳು ಎಲ್ಲ ಓದಬೇಕಾಗಿಲ್ಲ. ಮೇಷ್ಟ­ರಾಗಿರೋದರಿಂದ ನೀವು ನನಗಿಂತ ಹೆಚ್ಚು ಓದುತ್ತೀರಿ, ಬರೆಯುತ್ತೀರಿ ಎಂಬುದೆಲ್ಲಾ ಭ್ರಮೆ ಕಣ್ರೀ. ಯಾವಯಾವುದೋ ಹಾಳುಮೂಳು ರದ್ದಿ ಟೆಕ್ಸ್ಟ್ ಬುಕ್ಕುಗಳನ್ನು ಹತ್ತೂವರೆಯಿಂದ ಐದು ಗಂಟೆಯವರೆಗೂ ಪಾಠ ಮಾಡುವುದು, ಅದಕ್ಕೆ ಸಿದ್ಧತೆ ಮಾಡಿಕೊಳ್ಳುವುದು. ಇದರಲ್ಲೇ ನಿಮ್ಮ ಟೈಂ ಕಳೆದು ಹೋಗುತ್ತೆ. ಅದು ಅಕಡೆ­ಮಿಕ್ ವರ್ಕ್ ಏನ್ರೀ?’

ಅವತ್ತು ನಾಯಕರು ಕೆಲಸ ಬಿಡಲಿಲ್ಲ. ಕಾಫಿ ಬೆಳೆಯಲಿಲ್ಲ. ತಾವು ಬೋಧಿಸುತ್ತಿದ್ದ ಉತ್ತಮ ಕೃತಿಗಳನ್ನು ಹಾಗೂ ವಿದ್ಯಾರ್ಥಿ– ವಿದ್ಯಾರ್ಥಿನಿ­ಯರನ್ನು ಬೆಳೆಸುತ್ತಾ ಹೋದರು. ನಾಯಕರಂತೆ ಐವತ್ತು ವರ್ಷಗಳ ಕಾಲ ಹಲ್ಲು ಕಚ್ಚಿ ಸಾಹಿತ್ಯ ವಿಮರ್ಶೆಯ ಮೌಲ್ಯಮಾರ್ಗದಲ್ಲಿರುವುದು ಸುಲ­ಭ­ವಲ್ಲ. ಈ ಮಾರ್ಗದಲ್ಲಿರಲು ಸಾಹಿತ್ಯ ವಿಮರ್ಶೆಯ ಮಾನದಂಡಗಳ ಆಳವಾದ ಗ್ರಹಿಕೆಯ ಜೊತೆಜೊತೆಗೇ ತಾನು ಬಳಸುತ್ತಿರುವ ವಿಮರ್ಶಾ ಮಾರ್ಗಗಳ ಬಗ್ಗೆ ಸ್ಪಷ್ಟತೆಗಳಿರಬೇಕು; ಅವುಗಳ ಬಗ್ಗೆ ಆಳದ ನಂಬಿಕೆಯಿರಬೇಕು; ಸಾಹಿತ್ಯವಿಮರ್ಶೆ ಎನ್ನುವುದು ಬಾಯುಪಚಾರದ ಮಾತುಗಳನ್ನು ಮೀರಿ ವಸ್ತುನಿಷ್ಠವಾದ ಸತ್ಯ­ಶೋಧನೆಯಾಗಬೇಕು. ಇವೆಲ್ಲ ನಾಯಕರ ವಿಮರ್ಶೆಯ ಮೂಲಕವೂ ನಮಗೆ ಮನವರಿಕೆ­ಯಾಗುತ್ತಾ ಹೋಗುತ್ತವೆ.

ಇವೆಲ್ಲದರ ನಡುವೆ, ನಾಯಕರು ತಮ್ಮ ಸಾಹಿತ್ಯ ವಿಮರ್ಶೆಯಲ್ಲಿ ಕಲಿತ ಅನೇಕ ಪಾಠ­ಗಳನ್ನು ಸಮಾಜದ ಗ್ರಹಿಕೆಗೆ ವರ್ಗಾಯಿಸುತ್ತಾ ಬಂದಿರುವುದನ್ನು ಅನೇಕರು ಗಮನಿಸಿರಲಿ­ಕ್ಕಿಲ್ಲ. ಇಪ್ಪತ್ತೊಂದನೆಯ ಶತಮಾನದ ಶುರುವಿನಲ್ಲಿ ಮೈಸೂರಿನ ಮಿತ್ರರು ದಲಿತ ಬಣಗಳನ್ನು ಒಂದು­ಗೂಡಿಸಲು ಮುಕ್ತ ಚರ್ಚೆಯೊಂದನ್ನು ಏರ್ಪಡಿಸಿ­ದ್ದರು; ದಿನವಿಡೀ ನಡೆದ ಚರ್ಚೆಯನ್ನು ತುಂಬ ವಸ್ತುನಿಷ್ಠವಾಗಿ ನಾಯಕರು ನಿರ್ವಹಿಸಿದ್ದರು. ಆ ಘಟ್ಟದಲ್ಲಿ ಅವರು ದಲಿತ ಚಳವಳಿಯ ಬಗ್ಗೆ ಬರೆದ ‘ದಲಿತ ಹೋರಾಟ: ಗಂಭೀರ ಸವಾಲು­ಗಳು’ ಎಂಬ ಪುಸ್ತಕ ದಲಿತ ಹೋರಾಟ ಆಳವಾದ ಅಕಾಡೆಮಿಕ್ ಗ್ರಹಿಕೆಗಳಿಂದಲೂ ಕಲಿಯಬೇಕಾದ ಅಗತ್ಯವನ್ನು ಸೂಚಿಸುತ್ತದೆ. ಅಂಬೇಡ್ಕರ್ ಕುರಿತ ಅವರ ಲೇಖನ; ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವ ಔಚಿತ್ಯದ ಬಗ್ಗೆ ಅವರು ಎತ್ತಿದ ಪ್ರಶ್ನೆಗಳು; ಮಠಗಳು, ಕೋಮು­ವಾದ ಹಾಗೂ ಜಾತಿ ಸಂಘಟನೆಗಳ ಬಗ್ಗೆ ತಳೆದ ನಿಲುವುಗಳು ಕೂಡ ಅವರ ಖಚಿತ ವೈಚಾರಿಕ ಚೌಕಟ್ಟನ್ನು ಬಿಂಬಿಸುತ್ತವೆ.

ಆದರೂ ಜಿ.ಎಚ್. ನಾಯಕರ ‘ಸಮಕಾಲೀನ’ ‘ಅನಿವಾರ್ಯ’ ‘ನಿರಪೇಕ್ಷ’, ‘ನಿಜದನಿ’, ‘ಸಕಾಲಿಕ’ ಪುಸ್ತಕಗಳ (ಅಂದರೆ ಅವರ ವಿಮರ್ಶೆಯ ಪೂರ್ವಾ­ರ್ಧದ) ವಿಮರ್ಶಾತೀವ್ರತೆ, ರಾಚನಿಕ ದಕ್ಷತೆ ಹಾಗೂ ವ್ಯಾಪ್ತಿ ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಉತ್ತರಾರ್ಧ’ದಲ್ಲಿ ಇಲ್ಲವೆಂಬುದನ್ನು ಸ್ವತಃ ನಾಯಕರೇ ಒಪ್ಪಿ­ಕೊಂಡಾರು! ಈಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಆ ಅವಧಿಯಲ್ಲಿ ಸ್ಪರ್ಧೆಯಲ್ಲಿದ್ದ ಕೃತಿಗಳ ಮೌಲ್ಯಕ್ಕಿಂತ ಕೃತಿಕಾರರ ಒಟ್ಟು ಕೊಡುಗೆಯ ಹಿನ್ನೆಲೆಯಲ್ಲಿ ಕೊಡುವ ಪರಿಪಾಠ ಬೆಳೆದಿರುವಂತೆ ಕಾಣುತ್ತದೆ.

ಅದೇನೇ ಇರಲಿ, ಬರೆಯುವ ಪ್ರತಿಯೊಬ್ಬರೂ ತಮ್ಮ ಮಾರ್ಗಗಳನ್ನು, ಹತಾರಗಳನ್ನು ಸದಾ ಪರೀಕ್ಷೆಗೆ ಒಳಪಡಿಸಿ ಹೊಸ ಮಾರ್ಗಗಳತ್ತ ನೋಡದಿದ್ದರೆ ಎದುರಾಗುವ ಸ್ಥಗಿತತೆ ನಾಯಕರ ‘ಉತ್ತರಾರ್ಧ’ದಲ್ಲೂ ಇದೆ. ಇಲ್ಲಿರುವ ಬೇಂದ್ರೆ­ಯವರ ‘ಕನಸಿನೊಳಗೊಂದು ಕಣಸು’ ಪದ್ಯದ ಜಾಗತೀಕರಣ ಘಟ್ಟದ ಓದು ಆ ಸ್ಥಗಿತತೆಯನ್ನು ಮೀರುವಂತಿದೆ. ನಾಯಕರು ಗಿರಿಪಿಕಳೆಯವರಂಥ ಹೋರಾಟಗಾರರ ಬಗ್ಗೆ ಬರೆದಾಗ ಕಾಲದ ಚರಿತ್ರೆ ಮೂಡುವ ರೀತಿ, ತೇಜಸ್ವಿ ಬಗೆಗಿನ ಆತ್ಮೀಯ ಬರಹ, ನಾಡವರ ಬಗ್ಗೆ ಬರೆದ ಸಂಶೋಧನಾ ಬರಹ. ಇವೆಲ್ಲ ಅವರ ಬರವಣಿಗೆ ಕುಂದಿಲ್ಲ­ವೆಂಬುದನ್ನೂ ಹೇಳುತ್ತವೆ. ಆದರೆ ಸಾಧಾರಣ ಕೃತಿಗಳ ಬಗ್ಗೆ ಬರೆಯಹೋದರೆ ನಮ್ಮ ಬರವ­ಣಿ­ಗೆಯೂ ಸಾಧಾರಣವಾಗುತ್ತದೇನೋ! ಈ ಅನು­ಮಾನ ಇಲ್ಲಿ ಕಾರಂತರ ‘ಒಂಟಿದನಿ’ ಹಾಗೂ ‘ಮೊಗ ಪಡೆದ ಮನ’ ಕಾದಂಬರಿಗಳ ಬಗೆಗೆ ನಾಯ­ಕರ ವಿವರಣಾತ್ಮಕ ವಿಮರ್ಶೆಯನ್ನು ಓದು­ವಾಗ ಮೂಡುತ್ತದೆ. ಅಲ್ಲಿ ಕೂಡ ಸರಿಯಾದ ಪ್ರಶ್ನೆಗಳನ್ನು ನಾಯಕರು ಎತ್ತಿದ್ದಾರೆಂಬುದನ್ನು ಮರೆಯುವಂತಿಲ್ಲ.

ತಮ್ಮ ಈಚಿನ ವರ್ಷಗಳ ಬರಹಗಳಲ್ಲಿ ನಾಯಕರು ಕೃತಿಪರೀಕ್ಷೆಯ ನೈತಿಕ ಸೂಕ್ಷ್ಮಗಳನ್ನು ವ್ಯಕ್ತಿಗಳ ಬಗ್ಗೆ ಬರೆಯುವಾಗ ಬಳಸಿರುವ ಭಾಷೆಯಲ್ಲೂ ಬಹುತೇಕ ಪಾಲಿಸಲೆತ್ನಿಸಿದ್ದಾರೆ. ಹಾಗೆಯೇ, ಸಾಹಿತ್ಯ ಕೃತಿಗಳ ಶ್ರೇಷ್ಠತೆಯ ಬಗೆಗಿನ ಅವರ ಖಚಿತ ನಿಲುವುಗಳು ಹಾಗೂ ಸಾಹಿತ್ಯಕ ಶ್ರೇಷ್ಠತೆಯನ್ನೇ ಆಯ್ಕೆಯ ಅಂತಿಮ ಮಾನದಂಡ­ವಾಗಿ ಬಳಸುವ ರೀತಿ ಹಲವು ದಶಕಗಳ ಕೆಳಗೆ ‘ನ್ಯಾಷನಲ್ ಬುಕ್ ಟ್ರಸ್ಟ್’ಗಾಗಿ ಸಂಪಾದಿಸಿದ ‘ಕನ್ನಡ ಸಣ್ಣ ಕತೆಗಳು’ ಸಂಕಲನದಲ್ಲೂ ಕಾಣು­ತ್ತವೆ. ಒಂದು ಸಾಹಿತ್ಯಸಂಸ್ಕೃತಿಯನ್ನು ಪೊರೆ­ಯುವ ಕೆಲಸ ಆಳವಾದ ಅಧ್ಯಯನ, ಸೂಕ್ಷ್ಮ ಚರ್ಚೆ, ಸಮಾಜದ ಆರೋಗ್ಯ, ಜವಾಬ್ದಾರಿ­ಯುತ ಬೋಧನೆ, ಅರ್ಥಪೂರ್ಣ ವಿಮರ್ಶೆ, ಶ್ರೇಷ್ಠತೆಯ ಮಾನದಂಡಗಳು, ಪಠ್ಯಪುಸ್ತಕಗಳ ಬಗೆಗೆ ಚಿಂತನೆ ಎಲ್ಲವನ್ನೂ ಒಳಗೊಂಡಿರುತ್ತದೆ. ಈ ಹೊಣೆಯನ್ನು ಹಲವು ದಶಕಗಳ ಕಾಲ ನಿರ್ವಹಿಸುತ್ತಾ ಬಂದಿರುವ ಜಿ.ಎಚ್. ನಾಯಕ­ರಿಗೆ ಸಾಹಿತ್ಯಸಂಸ್ಕೃತಿ ಕೃತಜ್ಞವಾಗಿರಬೇಕು.

ಕೊನೆ ಟಿಪ್ಪಣಿ: ನಾಯಕರಿಗೆ ಅನಂತಮೂರ್ತಿ ಕೊಟ್ಟ ಕೊನೆಯ ಪ್ರಶಸ್ತಿ
ಅನಂತಮೂರ್ತಿಯವರು ತೀರಿಕೊಳ್ಳುವ ಕೆಲವು ದಿನಗಳ ಕೆಳಗೆ ಫೋನ್ ಮಾಡಿ ‘ಏನು ಓದುತ್ತಿದ್ದೀಯ’ ಎಂದರು. ನಾನಾಗ ಜಿ.ಎಚ್. ನಾಯಕರ ‘ಮೌಲ್ಯಮಾರ್ಗ’ ಸಂಪುಟಗಳನ್ನು ಓದುತ್ತಿದ್ದುದರಿಂದ ನಾಯಕರ ವಿಮರ್ಶೆಯ ಬಗ್ಗೆ ಮೆಚ್ಚುಗೆಯ ಮಾತಾಡತೊಡಗಿದೆ. ತಕ್ಷಣ ಅನಂತ­ಮೂರ್ತಿಯವರು ‘ಜಿ.ಎಚ್. ನಾಯಕ­ರಂತೆ ಆತ್ಮಸಾಕ್ಷಿಗೆ ಬದ್ಧವಾಗಿ ಬರೆಯುವವರು ತೀರ ಕಡಿಮೆ. ನಾವೆಲ್ಲ ಅವರ ಬರಹಗಳನ್ನು ಸರಿಯಾಗಿ ಅಸೆಸ್ ಮಾಡೇ ಇಲ್ಲ. ನನಗೆ ಆ ಪುಸ್ತಕಗಳು ಈಗಲೇ ಬೇಕು’ ಎಂದು ಮಗುವಿ­ನಂತೆ ರಚ್ಚೆ ಹಿಡಿದರು. ನಾನು ಅವನ್ನು ತರಿಸಿ ಕೊಡುವಷ್ಟರಲ್ಲಿ ಅವರು ಆಸ್ಪತ್ರೆಯಲ್ಲಿದ್ದರು. ಈ ನಡುವೆ ಪುಸ್ತಕಗಳು ಬರುವುದು ಲೇಟಾಯಿ­ತೆಂದು ಅನಂತಮೂರ್ತಿಯವರು ನಾಯಕರಿಗೂ ಫೋನ್ ಮಾಡಿದರು. ಕೊನೆಗೂ ಆ ಸಂಪುಟಗಳು ಅನಂತಮೂರ್ತಿಯವರಿಗೆ ಸಿಕ್ಕಲಿಲ್ಲ. ನಾಯಕರಿಗೆ ಅಕಾಡೆಮಿ ಪ್ರಶಸ್ತಿ ಬಂದ ಸುದ್ದಿ ಕೇಳಿದ್ದರೆ ಅನಂತಮೂರ್ತಿ ಸುಂದರ ಪ್ರತಿಕ್ರಿಯೆಯೊಂದನ್ನು ನೀಡುತ್ತಿದ್ದರೆಂಬುದು ಗ್ಯಾರಂಟಿ. ಆದರೆ ಅನಂತ­ಮೂರ್ತಿಯವರು ನಾಯಕರ ಬಗ್ಗೆ ಹೇಳಿದ ಆ ಕೊನೆಯ ಮಾತು ಇವತ್ತು ಅಕಾಡೆಮಿ ಪ್ರಶಸ್ತಿ­ಗಿಂತ ದೊಡ್ಡದಾಗಿ ಕಾಣುತ್ತಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT