ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದ ನೆತ್ತಿಯ ಬಾವಿಯಲ್ಲಿ ನಿತ್ಯ ಜೀವಜಲ

Last Updated 3 ಏಪ್ರಿಲ್ 2017, 8:53 IST
ಅಕ್ಷರ ಗಾತ್ರ

ಗಜೇಂದ್ರಗಡ: ಬೆಟ್ಟದ ನೆತ್ತಿ ಮೇಲಿರುವ ಭೈರಾಪುರ ತಾಂಡಾದಲ್ಲಿನ ಜನರಿಗೆ ಇಂದಿಗೂ ನೀರಿನ ಬರವಿಲ್ಲ. ಕೆಳಗಿರುವ ಊರುಗಳಲ್ಲಿ ಕೆರೆಗಳು ಬತ್ತಿ ಬರಡಾಗಿದ್ದರೂ ತಾಂಡಾದ ದುರ್ಗಮ್ಮನ ಗುಡಿಯ ಬದಿಯಲ್ಲಿರುವ ಸಣ್ಣ ಕಲ್ಲಿನ ಬಾವಿಯಲ್ಲಿ ವರ್ಷಪೂರ್ತಿ ಜೀವ ಜಲ ಇರುತ್ತದೆ.

‘ಇದು ಅಮೃತ ಸದೃಶ್ಯವಾದ ನೀರು. ಇಂದಿಗೂ ಇಲ್ಲಿನ ಜನರು ಕೈಚಾಚಿ ನೀರನ್ನು ಕೊಡಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಇದು ಎಂದಿಗೂ ಬತ್ತಿಲ್ಲ’ ಎನ್ನುತ್ತಾರೆ ತಾಂಡಾದ ಭೋಜಪ್ಪ ಪಮ್ಮಾರ.

ನಗರದ ಕಾಲಕಾಲೇಶ್ವರ ದೇವಸ್ಥಾನದ ನೆತ್ತಿಯ ಮೇಲಿರುವ ಈ ಗ್ರಾಮವನ್ನು ಭೈರಾಪುರ ಎಂದು ಕರೆಯುತ್ತಾರೆ. ರಾಜೂರ ಪಂಚಾಯ್ತಿ ವ್ಯಾಪ್ತಿಯ ಈ ಗ್ರಾಮದ ಜನರಿಗೆ ಇದೀಗ ಬಸ್ ಸೌಲಭ್ಯವೂ ಲಭ್ಯವಿದೆ.

‘ಇಲ್ಲಿರುವ ಕಲ್ಲಿನ ಬಾವಿಗೆ ಹೊರಗಿನ ನೀರು ನುಸುಳದಂತೆ ಸುತ್ತಲೂ ಈಗ ಕಾಂಕ್ರೀಟ್ ಹಾಕಿದ್ದಾರೆ. ಮಳೆಗಾಲದಲ್ಲಿ ಈ ಸಣ್ಣ ಬಾವಿ ತುಂಬಿ ಹರಿಯುತ್ತದೆ. ಅದರ ಬದಿಯ ಕಲ್ಲಿನಲ್ಲಿ ಈಗಲೂ ನೀರು ಜಿನುಗುತ್ತಿದೆ. ಕಲ್ಲಿನ ಬಾವಿ ಬತ್ತಿದ್ದನ್ನು ನೋಡಿಯೇ ಇಲ್ಲ. ವಿಚಿತ್ರವೆಂದರೆ, ಈ ಬಾವಿಯ ಪಕ್ಕದಲ್ಲಿ ಕೊರೆಯಿಸಿದ ಕೊಳವೆ ಬಾವಿಯಲ್ಲಿ ಹನಿ ನೀರು ಕೂಡ ಬಂದಿಲ್ಲ. ಬಾವಿಯಲ್ಲಿ ವರ್ಷಪೂರ್ತಿ ನೀರು ಸಿಗುತ್ತಿದೆ. ಇದಕ್ಕೆ ದುರ್ಗಾದೇವಿ ಮಹಿಮೆ ಕಾರಣ ಇರಬಹುದು’ ಎನ್ನುತ್ತಾರೆ ತಾಂಡಾದ ಮಂದಿ.

ಗ್ರಾಮದ ಕೆಳ ಭಾಗಕ್ಕೆ ಹರಿಯುವ ನೀರಿಗೆ ತಡೆಗೋಡೆ ನಿರ್ಮಿಸಿ ಸಂಗ್ರಹಿಸಲಾಗಿದೆ. ಈ ಭಾಗದ ಕಾಲಕಾಲೇಶ್ವರ, ಜಿಗೇರಿ, ಲಕ್ಕಲಕಟ್ಟಿ ಸೇರಿದಂತೆ ಸುತ್ತಮುತ್ತಲ ಊರುಗಳ ಜಾನುವಾರು ಇಲ್ಲಿ ದಾಹ ಇಂಗಿಸಿಕೊಳ್ಳುತ್ತವೆ ಮತ್ತು ಜನರು ನೀರು ಬಳಸಿಕೊಳ್ಳುತ್ತಾರೆ. ‘ಈ ತಡೆಗೋಡೆಯನ್ನು ಇನ್ನಷ್ಟು ಎತ್ತರಿಸಿದರೆ ನಮಗೆ ಎಂದಿಗೂ ನೀರಿನ ಬರ ಬರುವುದಿಲ್ಲ. ಆ ಕೆಲಸ ಆಗಬೇಕು’ ಎನ್ನುತ್ತಾರೆ ಗ್ರಾಮಸ್ಥರು.

‘ಮಳೆಗಾಲದಲ್ಲಿ ಹರಿದ ನೀರು ತಡೆಗೋಡೆಯಿಂದ ಸಂಗ್ರಹವಾಗಿ ಈಗಿನ ನಾಗೇಂದ್ರಗಡ ಗೋಶಾಲೆಯುಳ್ಳ ಕೆರೆಗೆ ಹರಿದುಹೋಗುತ್ತದೆ. ಗ್ರಾಮಗಳಿಗೆ ನೀರನ್ನು ಪೈಪಲೈನ್ ಮೂಲಕ ಒದಗಿಸಲಾಗುತ್ತಿದೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಚಂದ್ರಪ್ಪ ರಾಠೋಡ, ರಮೇಶ ರಾಠೋಡ ಮತ್ತಿತರರು. ದುರ್ಗಮ್ಮನ ಗುಡಿಯ ಬಳಿಯ ಬಾವಿಯನ್ನು ಒಮ್ಮೆ ಸ್ವಚ್ಛಗೊಳಿಸಲು ಟ್ಯಾಂಕರ್ ಮೂಲಕ ನೀರು ಹಾಕಲಾಯಿತು. ಆದರೆ, ಸುರಿದ ನೀರು ಇಂಗಿ ಮೊದಲಿನ ನೀರೇ ಉಳಿದು, ಒಂದೆರಡು ದಿನದ ನಂತರ ಮೊದಲಿನಂತೆ ತಿಳಿಯಾಗಿ, ಕುಡಿಯಲು ಯೋಗ್ಯವಾಯಿತು ಎಂದು ಅವರು ವಿವರಿಸಿದರು.

**

ಮಳೆಗಾಲದಲ್ಲಿ ಹರಿದ ನೀರು ತಡೆಗೋಡೆಯಿಂದ ಇಲ್ಲಿ ಸಂಗ್ರಹವಾಗುತ್ತದೆ. ಈ ತಡೆಗೋಡೆಯನ್ನು ಇನ್ನಷ್ಟು ಎತ್ತರಿಸಿದರೆ ಹೆಚ್ಚು ನೀರು ಸಿಗುತ್ತದೆ. ನಮಗೆ ಎಂದಿಗೂ ನೀರಿನ ಬರ ಬರುವುದಿಲ್ಲ.
-ಚಂದ್ರಪ್ಪ ರಾಠೋಡ, ಗ್ರಾಮದ ಹಿರಿಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT