ಸಾವಿನ ಕಾರಣ ಇನ್ನೂ ನಿಗೂಢ

7
ಎರಡು ಹುಲಿಗಳು, ಆನೆ ಸಂಶಯಾಸ್ಪದ ಸಾವಿಗೆ ಒಂದು ವರ್ಷ

ಸಾವಿನ ಕಾರಣ ಇನ್ನೂ ನಿಗೂಢ

Published:
Updated:
Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಹಂಗಳ ಗ್ರಾಮದ ಸೋಮನಾಥಪುರ ಗಸ್ತಿನ ವ್ಯಾಪ್ತಿಯ ಹಿರಿಕೆರೆ ಬಳಿ ಎರಡು ಹುಲಿಗಳು, ಒಂದು ಆನೆ ಶಂಕಾಸ್ಪದವಾಗಿ ಸತ್ತುವರ್ಷವಾದರೂ, ಕಾರಣ ಇನ್ನೂ ನಿಗೂಢವಾಗಿದೆ.

2018ರ ಜನವರಿ 25ರಂದು ಎರಡು ಹುಲಿಗಳು ಮತ್ತು ಆನೆಯ ಕಳೇಬರಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಷಪ್ರಾಶನದಿಂದಾಗಿ ಮೃತಪಟ್ಟಿರಬಹುದು ಎಂದು ಆಗ ಕೆಲ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದರು.

ಪ್ರಾಣಿಗಳ ದೇಹದ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರು ಮತ್ತು ಮೈಸೂರು ಹಾಗೂ ತಮಿಳುನಾಡಿನ ಕೊಯಮತ್ತೂರು ಸೇರಿ ನಾಲ್ಕು ಪ್ರಾಣಿ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಲಾಗಿತ್ತು.

‘ಹುಲಿಗಳ ಜಠರದಲ್ಲಿ ವಿಷ ಪತ್ತೆಯಾಗಿದೆ’ ಎಂದು ಕೊಯಮತ್ತೂರಿನ ವಿಧಿ ವಿಜ್ಞಾನ ಪ್ರಯೋಗಾಲಯವು ನೀಡಿದ್ದ ವರದಿ ಹೇಳಿತ್ತು. 

‘ಯಾವುದೇ ಪ್ರಾಣಿ ವಿಷ ಪ್ರಾಶನದಿಂದ ಮೃತಪಟ್ಟರೆ ಪ್ರಾಣಿ ಮೂತ್ರಪಿಂಡ ಮತ್ತು ಹೃದಯದಲ್ಲಿ ವಿಷದ ಅಂಶ ಕಂಡುಬರಲಿದೆ’ ಎನ್ನುವುದು ತಜ್ಞರ ಅಭಿಪ್ರಾಯ. ಆದರೆ, ಹೊಟ್ಟೆಯಲ್ಲಿ ಮಾತ್ರ ವಿಷದ ಅಂಶ ಇತ್ತು ಎಂದು ವರದಿಯು ಹೇಳಿದೆ. ಇದನ್ನು ತಜ್ಞರು ಒಪ್ಪುತ್ತಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ವಿಷಪ್ರಾಶನದ ಅಂಶಗಳು ಪತ್ತೆಯಾಗಿಲ್ಲ ಎಂದು ಉಳಿದ ಮೂರು ಪ್ರಯೋಗಾಲಯಗಳು ವರದಿ ನೀಡಿದ್ದವು.  ಮೂರೂ ಪ್ರಾಣಿಗಳ ಸಾವಿನ ವಿಷಯದಲ್ಲಿ ಗೊಂದಲ ಮುಂದುವರಿದಿರುವುದರಿಂದ ಅಂತಿಮ ವರದಿಯನ್ನು ನೀಡುವಂತೆ ಅರಣ್ಯ ಇಲಾಖೆಯು ಬೆಂಗಳೂರಿನ ಪಶು ವೈದ್ಯಕೀಯ ಪ್ರಯೋಗಾಲಯಕ್ಕೆ ಪತ್ರ ಬರೆದಿದೆ.

ಆರಂಭದಲ್ಲಿ ಹುಲಿಗಳು ಮೃತಪಟ್ಟ ಜಾಗದ ಸಮೀಪವಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿತ್ತು. ಒಂದು ವೇಳೆ ವಿಷ ಪ್ರಾಶನವಾಗಿದ್ದರೆ, ಅದು ಹೇಗೆ ಆಗಿದೆ, ತಪ್ಪಿತಸ್ಥರು ಯಾರು ಎಂಬ ಪ್ರಶ್ನೆಗಳು ಮೂಡಲಿವೆ.

‘ಅನುಮೋದನೆ ಬಳಿಕ ಸಮಿತಿ ತೀರ್ಮಾನ’

‘ಪಶು ವೈದ್ಯಾಧಿಕಾರಿಗಳು, ಸಿಎಫ್, ಎಸಿಎಫ್ ಮತ್ತು ರೇಂಜರ್‌ಗಳನ್ನೂ ಒಳಗೊಂಡಂತೆ ಒಂದು ಸಮಿತಿ ಮಾಡಿಕೊಳ್ಳಲಾಗಿದೆ. ಈಗ ಬಂದಿರುವ ವರದಿಯನ್ನು ವಿಶ್ಲೇಷಣೆ ಮಾಡಿ ಮತ್ತೊಂದು ವರದಿ ಸಿದ್ದಪಡಿಸಲಾಗಿದೆ.

ಅದನ್ನು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರ ಅನುಮೋದನೆಗೆ ಕಳುಹಿಸಲಾಗಿದೆ. ಅನುಮೋದನೆ ಬಂದ ಬಳಿಕ ಯಾವ ರೀತಿ ಮೃತಪಟ್ಟವೆ ಎಂದು ಸಮಿತಿಯಲ್ಲಿ ತಿರ್ಮಾನ ಮಾಡಲಾಗುತ್ತದೆ’ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಅಂಬಾಡಿ ಮಾಧವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !