ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಹಾವನೂರು ಆಯೋಗಕ್ಕೆ 50 ವರ್ಷ

ಸಮಕಾಲೀನ ಸವಾಲುಗಳಿಗೆ ಎದುರಾಗುವ ಬಗೆ ಹೇಗೆ ಎಂಬುದರ ಕುರಿತು ಚಿಂತಿಸಲು ಸಕಾಲ
Last Updated 7 ಆಗಸ್ಟ್ 2022, 17:52 IST
ಅಕ್ಷರ ಗಾತ್ರ

ಅದು, ದೇವರಾಜ ಅರಸು ಅವರ ಆಡಳಿತ ಕಾಲ. ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅರಸು ಅವರು ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಿ ಹೊಸ ಮಾದರಿಯ ರೂವಾರಿಯಾಗಿದ್ದರು. ಹುಟ್ಟಿನಿಂದ ರಾಜಮನೆತನಕ್ಕೆ ಸೇರಿದ ಅರಸು, ಹಿಂದುಳಿದ ಹಾಗೂ ಸರ್ವ ಶೋಷಿತ ವರ್ಗಗಳ ದಿಟ್ಟದನಿಯಾಗಿ ರೂಪಾಂತರ ಹೊಂದಿದ್ದು ಅಪೂರ್ವ ನಿದರ್ಶನವಾಗಿದೆ. ಹಾಗೆ ನೋಡಿದರೆ, ರಾಜರ್ಷಿಯೆಂದೇ ಖ್ಯಾತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಲ್ಲೇ ಸಾಮಾಜಿಕ ಪ್ರಾತಿನಿಧ್ಯದ ಮೂಲ ಪ್ರೇರಣೆಯನ್ನು ಕಾಣಬಹುದು. ರಾಜಪ್ರಭುತ್ವದ ಚೌಕಟ್ಟಿನಲ್ಲೇ ಪ್ರಜಾಪ್ರಭುತ್ವದ ಆಶಯಗಳಿಗೆ ಪ್ರೇರಕರಾದ ಕೀರ್ತಿ ನಾಲ್ವಡಿಯವರಿಗೆ ಸಲ್ಲಬೇಕು.

ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಮೂಲಕ ಹೊಸ ರಾಜಕೀಯ ಧ್ರುವೀಕರಣಕ್ಕೆ ಕಾರಣರಾದದ್ದಲ್ಲದೆ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ಸಂಕಲ್ಪ ಮಾಡಿದ್ದರ ಫಲವಾಗಿ ರಚನೆಯಾದದ್ದು ‘ಹಾವನೂರು ಆಯೋಗ’. ಸಂವಿಧಾನವು 16(4)ನೇ ವಿಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನಿಗದಿಪಡಿಸುವ ಅವಕಾಶವನ್ನು ಪ್ರಭುತ್ವಕ್ಕೆ ಕೊಟ್ಟಿದ್ದು, ಈ ಅವಕಾಶದಡಿಯಲ್ಲಿ ಎಲ್.ಜಿ. ಹಾವನೂರು ಅವರ ನೇತೃತ್ವದಲ್ಲಿ 1972ರ ಆಗಸ್ಟ್ 8ರಂದು ಆಯೋಗವನ್ನು ರಚಿಸಿ ಆದೇಶ ಹೊರಡಿಸಲಾಯಿತು. ಅಂದರೆ 2022ರ ಆಗಸ್ಟ್ 8ಕ್ಕೆ ಹಾವನೂರು ಆಯೋಗ ರಚನೆಯಾಗಿ ಐವತ್ತು ವರ್ಷಗಳಾಗಿವೆ. ಎಲ್.ಜಿ. ಹಾವನೂರು ಅವರು ಅಧ್ಯಕ್ಷರಾಗಿದ್ದ ಈ ಆಯೋಗದಲ್ಲಿ ಧರ್ಮಸಿಂಗ್, ವೈ.ರಾಮಚಂದ್ರ, ಕೆ.ಆರ್.ಎಸ್. ನಾಯ್ಡು, ಕೆ.ಎಂ. ನಾಗಣ್ಣ, ಎ.ಎಂ. ಚೆಟ್ಟಿ, ಪಿ.ಟಿ. ಹಬೀಬ್ ಅವರು ಸದಸ್ಯರಾಗಿದ್ದರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿ 1927ರ ಮಾರ್ಚ್ 25ರಂದು ಜನಿಸಿದ ಎಲ್.ಜಿ. ಹಾವನೂರು (ಲಕ್ಷ್ಮಣ ಗುಂಡಪ್ಪ ಹಾವನೂರು) ಅವರು ಬಡತನದಲ್ಲಿ ಬೆಳೆದು ಬಂದ ಅಪರೂಪದ ಸಮಾಜಮುಖಿ ಸಾಧಕರು. ವಕೀಲಿ ವೃತ್ತಿಯ ದಿನಗಳಲ್ಲಿ ಸದಾ ಶೋಷಿತ ವರ್ಗಗಳ ಏಳಿಗೆಗಾಗಿ ಶ್ರಮಿಸಿದವರು. ಇವರ ಕಾಳಜಿಯನ್ನು ಗುರುತಿಸಿದ ಅರಸು, ಹಿಂದುಳಿದ ವರ್ಗಗಳ ಅಧ್ಯಯನ ಆಯೋಗದ ಅಧ್ಯಕ್ಷರಾಗಿ ಮಾಡಿದರು. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರು ತಮ್ಮ ದೇಶದ ಸಂವಿಧಾನ ರಚನಾ ಸಲಹಾ ಸಮಿತಿಗೆ ಎಲ್.ಜಿ. ಹಾವನೂರು ಅವರನ್ನು ಆಹ್ವಾನಿಸಿದ್ದರು.

ಹಾವನೂರು ಅವರ ಸಂವಿಧಾನ ಪ್ರಜ್ಞೆಗೆ ಇದೊಂದು ಸಾಕ್ಷಿಯಾಗಿದೆ. ಅಂತೆಯೇ ಇವರ ನೇತೃತ್ವದಲ್ಲಿ ನೀಡಿದ ಹಿಂದುಳಿದ ವರ್ಗಗಳ ಅಧ್ಯಯನಾತ್ಮಕ ವರದಿಯು ಸುಪ್ರೀಂ ಕೋರ್ಟಿನಿಂದ ‘ಹಿಂದುಳಿದ ವರ್ಗಗಳ ಒಂದು ವೈಜ್ಞಾನಿಕ ಅಧ್ಯಯನ’ ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಸ್ವತಃ ಅರಸು ಅವರು ಹಾವನೂರು ಆಯೋಗದ ವರದಿಯನ್ನು ‘ಹಿಂದುಳಿದ ವರ್ಗಗಳ ಬೈಬಲ್’ ಎಂದು ಕರೆದಿದ್ದರು. ಅಂತಿಮ ವರದಿ ಸಿದ್ಧಪಡಿಸುವುದಕ್ಕೆ ಮುಂಚೆ ಹಾವನೂರು ಆಯೋಗವು ರಾಜ್ಯದ 378 ಹಳ್ಳಿಗಳಿಗೆ ಭೇಟಿ ನೀಡಿತ್ತು. ಮೂರೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಿತ್ತು. ಇದು ಹಾವನೂರು ಆಯೋಗದ ಆಗಾಧ ಪರಿಶ್ರಮ ಮತ್ತು ಬದ್ಧತೆಗೆ ಸಾಕ್ಷಿ.

ಹೀಗೆ ಆಳವಾದ ಅಧ್ಯಯನ ಮಾಡಿ ಸೂಕ್ತ ಶಿಫಾರಸುಗಳೊಂದಿಗೆ ಸಿದ್ಧಪಡಿಸಿದ ವರದಿಯನ್ನು 1975ರ ನವೆಂಬರ್ 19ರಂದು ಸರ್ಕಾರಕ್ಕೆ ಸಲ್ಲಿಸಲಾಯಿತು. ವಿವಿಧ ಉಪಜಾತಿಗಳನ್ನೊಳಗೊಂಡ ‘ಹಿಂದುಳಿದ ಸಮುದಾಯ’ದವರಿಗೆ (ಬಿಸಿಎಂ) ಶೇಕಡ 16, ಹಿಂದುಳಿದ ಜಾತಿಗಳಿಗೆ ಶೇ 10, ಹಿಂದುಳಿದ ಬುಡಕಟ್ಟುಗಳಿಗೆ ಶೇ 6ರಷ್ಟು ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣಕ್ಕೆ ಅನ್ವಯ ಆಗುವಂತೆ ನೀಡಲು ಮಾಡಿದ ಶಿಫಾರಸುಗಳಲ್ಲಿ ಅರಸು ನೇತೃತ್ವದ ಸರ್ಕಾರವು ಮುಸ್ಲಿಂ ಸಮುದಾಯವನ್ನೂ ಸೇರಿಸಿ ಹಿಂದುಳಿದ ಸಮುದಾಯಗಳ ಮೀಸಲಾತಿಯನ್ನು ಶೇ 20ಕ್ಕೆ ಏರಿಸಿತು.

ಅರಸು ಅವರು, ಹಾವನೂರು ವರದಿಯಲ್ಲಿ ಇಲ್ಲದೆ ಇದ್ದ ‘ಹಿಂದುಳಿದ ವಿಶೇಷ ಗುಂಪು’ ಎಂಬುದನ್ನು ಹೊಸದಾಗಿ ಸೇರಿಸಿದರು. ಎಲ್ಲ ಜಾತಿಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 5ರಷ್ಟು ವಿಶೇಷ ಮೀಸಲಾತಿ ಕಲ್ಪಿಸಿದರು (ಈ ಪ್ರಮಾಣವು ಮುಂದೆ ಶೇ 15ರಷ್ಟು ಆಯಿತೆಂಬ ಮಾಹಿತಿ ಇದೆ). ಹೀಗೆ ಕೆಲವು ಮಾರ್ಪಾಡುಗಳೊಂದಿಗೆ ಸಮತೋಲನ ಸಾಧಿಸಿದ ಅರಸು, 1977ರ ಫೆಬ್ರುವರಿ 22 ರಂದು ಹಾವನೂರು ವರದಿಯನ್ನು ಜಾರಿಗೆ ತಂದರು.

ಹಾವನೂರು ಆಯೋಗಕ್ಕೆ ಮುಂಚಿನಿಂದಲೂ ನಮ್ಮ ರಾಜ್ಯದಲ್ಲಿ ಮೀಸಲಾತಿ ಪರವಾದ ವಿಚಾರಧಾರೆ ಬೆಳೆದು ಬಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೀಸಲಾತಿಗೊಂದು ಆಡಳಿತಾತ್ಮಕ ಅಧಿಕೃತತೆ ದೊರಕಿತು. ಮೈಸೂರು ಪ್ರಾಂತ್ಯದಲ್ಲಿ ಬ್ರಾಹ್ಮಣೇತರ ಹಿಂದುಳಿದ ಜಾತಿಗಳ ಸಂಘಟಿತ ನಿಯೋಗವು 1918ರಲ್ಲಿ ಮಹಾರಾಜರನ್ನು ಭೇಟಿ ಮಾಡಿ ಅಹವಾಲನ್ನು ಸಲ್ಲಿಸಿತು. ಯುವರಾಜ ನರಸಿಂಹರಾಜ ಒಡೆಯರ್ ಅವರ ಒತ್ತಾಸೆಯೂ ಇತ್ತು. ನಾಲ್ವಡಿಯವರಿಗೆ ಕಾಳಜಿಯಿತ್ತು. ಆನಂತರ ಲೆಸ್ಲಿ ಮಿಲ್ಲರ್ ಸಮಿತಿ ರಚನೆಯಾಗಿ 1919ರಲ್ಲಿ ವರದಿ ನೀಡಿತು. 1921 ರಲ್ಲಿ ಕೆಲವು ಶಿಫಾರಸುಗಳನ್ನು ಜಾರಿಗೆ ತರಲಾಯಿತು (ಮಹಾರಾಷ್ಟ್ರದ ಶಾಹು ಮಹಾರಾಜ್ ಅವರು 1902ರಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ್ದನ್ನು ಇಲ್ಲಿ ನೆನೆಯಬೇಕು).

ಸ್ವಾತಂತ್ರ್ಯಾನಂತರ 1960ರಲ್ಲಿ ನಾಗನಗೌಡರ ನೇತೃತ್ವದಲ್ಲಿ ರಚಿತವಾದ ಸಮಿತಿಯು 399 ಜಾತಿಗಳನ್ನು ಮೀಸಲಾತಿಗೆ ಅರ್ಹ ಎಂದು ಗುರುತಿಸಿ, ಉದ್ಯೋಗದಲ್ಲಿ ಶೇ 45, ಶಿಕ್ಷಣದಲ್ಲಿ ಶೇ 50ರಷ್ಟು ಮೀಸಲಾತಿಯನ್ನು ನಿಗದಿಪಡಿಸಿತ್ತು. 1962ರಲ್ಲಿ ಕೆಲವು ಮಾರ್ಪಾಟುಗಳೊಂದಿಗೆ ಜಾರಿಗೆ ಬಂದ ಈ ವರದಿಯನ್ನು ಸುಪ್ರೀಂ ಕೋರ್ಟು ಅನೂರ್ಜಿತಗೊಳಿಸಿತ್ತು. ಆನಂತರ ಬಂದ ಸರ್ಕಾರಿ ಆದೇಶಗಳು 2400 ರೂಪಾಯಿಗಳ ವಾರ್ಷಿಕ ಆದಾಯ ಮಿತಿಯೊಂದಿಗೆ ಎಲ್ಲ ಹಿಂದುಳಿದ ವರ್ಗಗಳಿಗೆ ಶೇ 30ರಷ್ಟು ಮೀಸಲಾತಿ ನಿಗದಿಪಡಿಸಿದವು. ಮುಂದಿನದು (1972) ಹಾವನೂರು ಆಯೋಗ.

ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ

ಮೀಸಲಾತಿಯ ವಿಷಯವು ಆರಂಭದಿಂದಲೂ ಪರ– ವಿರೋಧದ ಚರ್ಚೆಗೆ ಒಳಗಾಗಿದೆ. ಜಾತಿ ಆಧಾರಿತ ಮೀಸಲಾತಿಯ ಬಗ್ಗೆ ‘ಮುಂದುವರಿದವರು’ ಆಕ್ಷೇಪಿಸುತ್ತ ಬಂದಿದ್ದಾರೆ; ‘ಅರ್ಹತೆ’ಯ ಪ್ರಶ್ನೆ ಎತ್ತಿದ್ದಾರೆ. ಜಾತಿಯ ಕಾರಣಕ್ಕಾಗಿಯೇ ಶಿಕ್ಷಣ ಮತ್ತು ಉದ್ಯೋಗ ಸಿಗದೆ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ನೀಡಿ ಮುಂದಕ್ಕೆ ತರುವುದು ನ್ಯಾಯದ ಮಾರ್ಗ. ಇಲ್ಲಿ ‘ಅರ್ಹತೆ’ ಎನ್ನುವುದು ಒಂದು ಸಾಪೇಕ್ಷ ಪರಿಕಲ್ಪನೆ. ಸಾವಿರಾರು ವರ್ಷಗಳಿಂದ ಸೌಲಭ್ಯ ಪಡೆದವರು ಮತ್ತು ಪಡೆಯದೆ ಇರುವವರಿಗೆ ಒಂದೇ ರೀತಿಯ ಮಾನದಂಡವನ್ನು ಅನ್ವಯಿಸಲಾಗದು. ಹಾಗೆಂದು ಹಿಂದುಳಿದ ವರ್ಗ ಹಾಗೂ ದಲಿತರಲ್ಲಿ ಅರ್ಹರಲ್ಲದವರಿಗೆ ಮೀಸಲಾತಿ ಸಿಗುತ್ತಿದೆ ಎಂದೇನೂ ಅಲ್ಲ. ಆಯಾ ವರ್ಗದಲ್ಲಿರುವ ಅರ್ಹರಿಗೆ ಮೀಸಲಾತಿ ನೀಡಿ ಮುಂದೆ ತರುವ ಉದ್ದೇಶವು ಮೀಸಲಾತಿಯ ಪರಿಕಲ್ಪನೆಯಲ್ಲಿದೆ. ಇದು ಎಷ್ಟರಮಟ್ಟಿಗೆ ಸಂಪೂರ್ಣ ಸಾಕಾರಗೊಂಡಿದೆಯೆಂಬ ಪ್ರಶ್ನೆಯೂ ಇದೆ. ಅನೇಕ ಪ್ರತಿಭಾವಂತರು ಬೆಳೆದು ಬಂದ ಚರಿತ್ರೆಯೂ ನಮ್ಮ ಕಣ್ಣೆದುರು ಇದೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ ಡಾ. ಅಂಬೇಡ್ಕರ್ ಅವರಿಗೆ ನಮನಗಳು ಸಲ್ಲಬೇಕು. ಅಷ್ಟೇ ಅಲ್ಲ ಡಾ. ಅಂಬೇಡ್ಕರ್, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಅರಸು ಮುಂತಾದವರ ಆಶಯಗಳನ್ನು ಆತ್ಮಸಾಕ್ಷಿಯಾಗಿಸಿಕೊಂಡು ಬದುಕಬೇಕು; ಇಂದು ಜಾತಿವಾದ ಮತ್ತು ಕೋಮುವಾದ ಮುನ್ನೆಲೆಗೆ ಬರುತ್ತಿರುವಾಗ ಹಿಂದುಳಿದ ಮತ್ತು ದಲಿತ ವರ್ಗಗಳು ಪ್ರತಿರೋಧ ಒಡ್ಡಬೇಕು. ಖಾಸಗೀಕರಣವೇ ಮುಖ್ಯವಾಗುತ್ತಿರುವ ಈ ಕಾಲದಲ್ಲಿ ಖಾಸಗೀಕರಣದ ಸ್ವಾರ್ಥಕೇಂದ್ರಿತ ಅಪಾಯಗಳ ಬಗ್ಗೆ ಅಂದೇ ಎಚ್ಚರಿಸಿದ ಅಂಬೇಡ್ಕರ್ ಅವರ ದನಿ ಎದೆಯೊಳಗೆ ಪ್ರತಿಧ್ವನಿಸಬೇಕು. ಅಂಬೇಡ್ಕರ್ ಪ್ರತಿಪಾದಿಸಿದ ಸ್ವಾತಂತ್ರ್ಯ, ಸಮಾನತೆ, ಸೋದರತೆಗಳೊಂದಾದ ‘ಸಾಮಾಜಿಕ ಪ್ರಜಾಪ್ರಭುತ್ವ’ಕ್ಕೆ ಬದ್ಧವಾಗಿ ಸಮಕಾಲೀನ ಸವಾಲುಗಳಿಗೆ ಎದುರಾಗಬೇಕು. ಇದು ಸಂವಿಧಾನದ ಸಾರ್ಥಕ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT