ಬುಧವಾರ, ಡಿಸೆಂಬರ್ 2, 2020
26 °C

ಮೊದಲು ಭದ್ರವಾಗಲಿ ದಿಡ್ಡಿ ಬಾಗಿಲು

ಪ್ರೊ. ಸಬಿಹಾ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಈಚೆಗೆ ನಡೆದ ಕೆಲವು ಬೆಳವಣಿಗೆಗಳು ಕುಲಪತಿ ಹುದ್ದೆಯ ನೇಮಕದ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಕುಲಪತಿಯವರಿಗೆ ದತ್ತವಾದ ಸಿಬ್ಬಂದಿ ನೇಮಕಾತಿ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳ ಅಧಿಕಾರವೇ ಆ ಹುದ್ದೆಗೆ ಅಷ್ಟೊಂದು ಪೈಪೋಟಿಗೆ ಕಾರಣವಾಗಿದೆಯೇ? ವಿಶ್ವವಿದ್ಯಾಲಯದ ಅಂಗಳದಿಂದ ಕಳಂಕದ ರಾಡಿಯಿಂದ ಮುಕ್ತವಾಗಿಡುವುದು ಹೇಗೆ?

ರಾಜ್ಯದ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳ ಕಾರ್ಯವೈಖರಿ ಬಗೆಗೆ ಟೀಕೆಗಳು ವ್ಯಕ್ತವಾಗಿವೆ. ಮುಖ್ಯವಾಗಿ ಸಿಬ್ಬಂದಿ ನೇಮಕಾತಿ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವತ್ರಿಕವಾಗಿ ಕೇಳಿ ಬರುತ್ತಿವೆ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಲಾಗದು. ಈ ನಿಟ್ಟಿನಲ್ಲಿ ಪ್ರತಿಯೊಂದು ವಿಶ್ವವಿದ್ಯಾಲಯದ ಕುಲಪತಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಾರದರ್ಶಕ ಆಡಳಿತವೇ ಅವರ ಮುಖ್ಯ ಗುರಿಯಾಗಬೇಕು.

ಕುಲಪತಿಗಳ ನೇಮಕಾತಿಯಲ್ಲಿಯೂ ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ರಾಜಕೀಯ ಹಸ್ತಕ್ಷೇಪಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಒಂದೊಮ್ಮೆ ಕುಲಪತಿಯಾಗುವವರು ದುಡ್ಡು ಕೊಟ್ಟು ಇಲ್ಲವೇ ರಾಜಕೀಯ ಒತ್ತಡದ ಮೂಲಕ ಆಯ್ಕೆಯಾದರೆ ಅಂಥವರಿಂದ ಸ್ವಚ್ಛ, ಭ್ರಷ್ಟಾಚಾರರಹಿತ ಆಡಳಿತ ನಿರೀಕ್ಷಿಸಲು ಸಾಧ್ಯವೇ? ಆದ್ದರಿಂದ ಕುಲಪತಿಗಳ ನೇಮಕ ಭ್ರಷ್ಟಾಚಾರ, ರಾಜಕೀಯ ಒತ್ತಡ ಮತ್ತು ಸ್ವಜನಪಕ್ಷಪಾತದಿಂದ ಮುಕ್ತವಾಗಿರಬೇಕು. ಪಾರದರ್ಶಕ ವ್ಯವಸ್ಥೆಯಲ್ಲಿ ನೇಮಕಗೊಂಡ ಕುಲಪತಿಗಳು ಮಾತ್ರ ಭ್ರಷ್ಟಾಚಾರರಹಿತ ಆಡಳಿತ ನೀಡಬಲ್ಲರು.

ವಿಶ್ವವಿದ್ಯಾಲಯಗಳ ಆಡಳಿತವನ್ನು ಪಾರದರ್ಶಕಗೊಳಿ ಸಲು, ಅಲ್ಲಿ ನಡೆಯುತ್ತಿದೆ ಎನ್ನಲಾಗುವ ಭ್ರಷ್ಟಾಚಾರದಿಂದ ವಿಶ್ವವಿದ್ಯಾಲಯವನ್ನು ಮುಕ್ತಗೊಳಿಸಲು, ಕುಲಪತಿಗಳ ಹುದ್ದೆಗೆ ಅನಾರೋಗ್ಯಕರ ಸ್ಪರ್ಧೆ ಏರ್ಪಡುವುದನ್ನು ತಪ್ಪಿಸಲು ಸಿಬ್ಬಂದಿ ನೇಮಕಾತಿ ಮತ್ತು ಕಟ್ಟಡ ನಿರ್ಮಾಣದ ಅಧಿಕಾರವನ್ನು ಕುಲಪತಿಗಳಿಂದ ಕಿತ್ತುಕೊಳ್ಳುವುದೇ ಪರಿಹಾರ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗುತ್ತಿದೆ. ಕೆಲವರ ಮೇಲಿನ ಆರೋಪ ಇಟ್ಟುಕೊಂಡು ಎಲ್ಲ ವಿಶ್ವವಿದ್ಯಾಲಯಗಳ ಅಧಿಕಾರ ಮೊಟಕು ಗೊಳಿಸುವ ಈ ಕ್ರಮ ವ್ಯಾವಹಾರಿಕವೇ? ವಿವೇಕದ ನಡೆಯೇ? ಸೂಕ್ತ ಕ್ರಮವೇ? ಅನುಷ್ಠಾನಯೋಗ್ಯ ತೀರ್ಮಾನವೇ?

ಒಂದೊಮ್ಮೆ, ಸರ್ಕಾರ ಸಿಬ್ಬಂದಿ ನೇಮಕಾತಿ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಬೇರೊಂದು ಇಲಾಖೆ ಮೂಲಕ ಕೈಗೊಳ್ಳುವುದಕ್ಕೆ ತೀರ್ಮಾನಿಸಿದರೆ ಅದು ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಧಕ್ಕೆಯುಂಟುಮಾಡುತ್ತದೆ. ಅಷ್ಟೇ ಅಲ್ಲ, ಮುಂದೆ ಆ ಹೊಣೆ ವಹಿಸಿಕೊಳ್ಳುವ ಸಂಸ್ಥೆಗಳು ಹಗರಣಗಳಿಂದ ಮುಕ್ತವಾಗಿ ಇರಬಲ್ಲವೇ? ಉದಾಹರಣೆಗೆ, ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಮಾಡಲು ಉದ್ದೇಶಿಸಲಾಗಿದೆ. ಕೆಇಎ ಮತ್ತು ಕೆಪಿಎಸ್ಸಿಗಳು ಇದನ್ನು ನಿರ್ವಹಿಸಬಲ್ಲವೇ? ಈ ಸಂಸ್ಥೆಗಳ ವಿರುದ್ಧ ಅದೆಷ್ಟು ಆರೋಪಗಳು ಕೇಳಿಬಂದಿಲ್ಲ? ಈ ಸಂಸ್ಥೆಗಳು ಹಗರಣಗಳಿಂದ ಮುಕ್ತವೇ? ಇಲ್ಲ ಎಂದಾದರೆ ವಿಶ್ವವಿದ್ಯಾಲಯದ ಅಧಿಕಾರ ಕಿತ್ತುಕೊಂಡು ಅವುಗಳಿಗೆ ಕೊಡುವುದು ಎಷ್ಟರಮಟ್ಟಿಗೆ ಸರಿ? 

ಒಂದು ವರ್ಷದಷ್ಟು ಹಿಂದೆಯೇ ಎಲ್ಲ ವಿಶ್ವವಿದ್ಯಾಲಯಗಳು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ಬೋಧಕ ಹುದ್ದೆಗಳಿಗೆ ಕೆಇಎ ಮೂಲಕ ನೇಮಕಾತಿ ಮಾಡಲು ಮಾಹಿತಿ ಕಳಿಸಿವೆ. ಇನ್ನುವರೆಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವ ಬೆಳವಣಿಗೆಯೂ ಆಗಿಲ್ಲ. ಕೆಇಎ ಕೇವಲ ಅರ್ಜಿ ಕರೆದು, ಅರ್ಜಿ ಪರಿಶೀಲಿಸಿ, ಮೆರಿಟ್ ಲಿಸ್ಟ್ ಸಿದ್ಧಪಡಿಸುತ್ತದೆ. ಪ್ರಶ್ನೆಪತ್ರಿಕೆ ತಯಾರಿಸುವುದು, ಅದರ ಮೌಲ್ಯಮಾಪನ ಮಾಡುವುದೆಲ್ಲ ಆಯಾ ವಿಶ್ವವಿದ್ಯಾಲಯದವರೇ ಎಂದು ಕುಲಪತಿಗಳನ್ನು ಸಮಾಧಾನಿಸಲಾಗುತ್ತಿದೆ. ಪ್ರಶ್ನೆಪತ್ರಿಕೆ ತಯಾರಿಸಿ, ಪರೀಕ್ಷೆ ನಡೆಸಿ, ಮೌಲ್ಯಮಾಪನವನ್ನು ವಿಶ್ವವಿದ್ಯಾಲಯದವರೇ ಮಾಡುವುದಾದರೆ, ಅರ್ಜಿ ಕರೆಯುವ, ಅರ್ಹ ಅರ್ಜಿಗಳನ್ನು ಪರಿಶೀಲಿಸುವ, ಸಮಗ್ರ ಪಟ್ಟಿ ಮತ್ತು ಮೆರಿಟ್ ಪಟ್ಟಿ ತಯಾರಿಸುವ ಕಾರ್ಯ ವಿಶ್ವವಿದ್ಯಾಲಯಕ್ಕೆ ಅಸಾಧ್ಯದ ಕೆಲಸವೇ? ಲಕ್ಷಾಂತರ ವಿದ್ಯಾರ್ಥಿಗಳ ಪರೀಕ್ಷಾ ಕಾರ್ಯವನ್ನು ನಿರಂತರ ಕ್ರಮಬದ್ಧವಾಗಿ ನಡೆಸುವ ವಿಶ್ವವಿದ್ಯಾಲಯಕ್ಕೆ ಇದು ಅಸಾಧ್ಯ ಎನ್ನುವುದೇ ಹಾಸ್ಯಾಸ್ಪದ! ಒಂದೊಮ್ಮೆ ಕೆಇಎ ಮೂಲಕ ನೇಮಕಾತಿ ಕೈಗೊಳ್ಳುವದಾದರೆ ಯುಜಿಸಿ ನಿಯಮಾವಳಿಗಳ ಉಲ್ಲಂಘನೆಯಾಗುವುದಿಲ್ಲವೇ ಎಂಬುದನ್ನೂ ಪರಿಶೀಲಿಸಬೇಕಾಗಿದೆ.

ಒಂದುವೇಳೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಮಸ್ಯೆ ಇದ್ದರೆ, ಆ ವ್ಯವಸ್ಥೆಯನ್ನು ಸರಿಪಡಿಸುವ, ಬಿಗಿಗೊಳಿಸುವ, ಕುಂದುಕೊರತೆಗಳನ್ನು ತಡೆಯುವ ಕೆಲಸಗಳನ್ನು ಮಾಡಬೇಕೇ ಹೊರತು, ಇಡೀ ಪ್ರಕ್ರಿಯೆಯನ್ನು ಕಿತ್ತುಕೊಂಡು ‘ಪರ್ಯಾಯ ಕೇಂದ್ರ’ವನ್ನು ರೂಪಿಸುವುದು ಜಾಣತನವಲ್ಲ. ವಿಶ್ರಾಂತ ಕುಲಪತಿಗಳಾದ ಪ್ರೊ.ಬಿ.ವಿ.ಕುಟಿನೋ ಸಮಿತಿಯು 2017-18ರ ಅವಧಿಯಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ನ್ಯಾಯಪರವಾಗಿ ನಡೆಸಲು ಮಾನದಂಡಗಳನ್ನು ಸಿದ್ಧಪಡಿಸಿತು. ಅದರಲ್ಲಿ ಯಾವುದಕ್ಕೆ, ಎಷ್ಟು ಅಂಕ ಎಂಬುದನ್ನು ಸೂಚಿಸಲಾಗಿತ್ತು. ಲಿಖಿತ ಪರೀಕ್ಷೆ ನಡೆಸುವುದರಿಂದ ತೊಡಗಿ, ಪ್ರತಿ ಹಂತದಲ್ಲೂ ವೆಬ್‍ಸೈಟ್‍ನಲ್ಲಿ ಮಾಹಿತಿಯನ್ನು ಕಾಲಕಾಲಕ್ಕೆ ಪ್ರಕಟಿಸುವುದು, ಮೆರಿಟ್ ಲಿಸ್ಟ್, ಸಂದರ್ಶನಕ್ಕೆ ಆಯ್ಕೆಯಾದವರ ಪಟ್ಟಿ ಸಿದ್ಧಪಡಿಸುವುದು ಇತ್ಯಾದಿ ತಯಾರಿಕೆ ಹೇಗಿರಬೇಕೆಂದೂ ನಿರ್ದೇಶಿಸಲಾಗಿತ್ತು. ಹಲವು ವಿಶ್ವವಿದ್ಯಾಲಯಗಳು ಆ ಮಾರ್ಗಸೂಚಿ ಪ್ರಕಾರ ನೇಮಕಾತಿ ಕಾರ್ಯವನ್ನು ನಿರ್ವಹಿಸಿದವು. ಇಂಥ ಮಾರ್ಗಸೂಚಿಯ ಪ್ರಕಾರವೇ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡ ಫಲವಾಗಿ 33 ಬೋಧಕ ಸಿಬ್ಬಂದಿ ವಿಶ್ವವಿದ್ಯಾಲಯಕ್ಕೆ ಹೊಸದಾಗಿ ಸೇರಿಕೊಂಡರು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಯಾರ ಹಸ್ತಕ್ಷೇಪಕ್ಕೂ ಅವಕಾಶವಿರಲಿಲ್ಲ; ಯಾವುದೇ ಒತ್ತಡಗಳಿಗೂ ಅವಕಾಶವಿರಲಿಲ್ಲ. ಅತ್ಯಂತ ಪಾರದರ್ಶಕವಾಗಿ ಯಾವ ಗೊಂದಲಗಳಿಗೂ ಎಡೆ ಮಾಡದೇ ಸುಲಭವಾಗಿ ನಿಗದಿತ ಸಮಯದೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಯಿತು. ವ್ಯವಸ್ಥೆಯನ್ನು ಸರಿಪಡಿಸುವ ಅತ್ಯುತ್ತಮ ಮಾರ್ಗಗಳಿಗೆ ಪ್ರೊ. ಕುಟಿನೋ ಸಮಿತಿಯ ವರದಿ ಇದೆ. ಇನ್ನೂ ಸುಧಾರಣೆ ಅಗತ್ಯ ಎನ್ನುವುದಾದರೆ ಈಗ ಅಸ್ತಿತ್ವದಲ್ಲಿರುವ ಸಿಬ್ಬಂದಿ ನೇಮಕಾತಿ ನಿಯಮಗಳನ್ನು ಬಿಗಿಗೊಳಿಸಬಹುದು.


ಸಬಿಹಾ

ಇನ್ನು ಕಟ್ಟಡ ಕಾಮಗಾರಿಯ ವಿಚಾರಕ್ಕೆ ಬಂದರೆ, ಕುಲಪತಿಯಾಗಿ ನೇಮಕಗೊಂಡ ಪ್ರತಿಯೊಬ್ಬರಿಗೂ ವಿಶ್ವವಿದ್ಯಾಲಯವನ್ನು ಬೆಳೆಸುವ, ತಮ್ಮ ಅವಧಿಯಲ್ಲಿ ಸ್ಮರಣಾರ್ಹ ಕೆಲಸ ಮಾಡುವ ಕನಸು ಸಹಜವಾಗಿರುತ್ತದೆ. ತಮ್ಮ ವಿಶ್ವವಿದ್ಯಾಲಯಕ್ಕೆ ಯಾವ ಕಟ್ಟಡ ಬೇಕು? ಎಂಥ ವಿನ್ಯಾಸದಲ್ಲಿ ಅದು ಇರಬೇಕು? ಎಷ್ಟು ಕ್ಷಿಪ್ರವಾಗಿ ಕಾರ್ಯ ಮುಗಿಯಬೇಕು? ಮತ್ತು ಅದರ ಬಜೆಟ್ ಎಷ್ಟರಲ್ಲಿ ಇರಬೇಕು ಎಂಬುದನ್ನು ಕುಲಪತಿ ಒಬ್ಬರೇ ತೀರ್ಮಾನಿಸಿರುವುದಿಲ್ಲ. ಅವರ ಕನಸುಗಳು ಕಟ್ಟಡ ಸಮಿತಿ ಸಭೆಗಳಲ್ಲಿ ಮತ್ತು ಆರ್ಥಿಕ ಸಮಿತಿಗಳಲ್ಲಿ ಅಂಗೀಕಾರ ಪಡೆದು, ಅಂತಿಮವಾಗಿ ಸಿಂಡಿಕೇಟ್ ಸಭೆಗಳಲ್ಲಿ ದೃಢೀಕರಣಗೊಂಡು ಜಾರಿಗೆ ಬರುತ್ತವೆ. ಟೆಂಡರ್ ಪ್ರಕ್ರಿಯೆ ಕೆಟಿಪಿಪಿ ಕಾಯ್ದೆ (ಸಾರ್ವಜನಿಕ ಸಂಗ್ರಹದಲ್ಲಿ ಪಾರದರ್ಶಕತೆ ಕಾಯ್ದೆ) ಪ್ರಕಾರವೇ ನಡೆಯುತ್ತದೆ. ಒಂದುವೇಳೆ ಇಷ್ಟಿದ್ದೂ ಅಕ್ರಮಗಳಿಗೆ ಎಡೆ ಆಗಿದೆ ಎಂದಾದರೆ, ಆ ಪ್ರಕ್ರಿಯೆಗಳನ್ನು ಬಿಗಿಗೊಳಿಸುವುದು ಜಾಣತನದ ನಡೆ. ಅದನ್ನು ಬಿಟ್ಟು ಕುಲಪತಿಗಳ ಅಧಿಕಾರವನ್ನೇ ರದ್ದುಪಡಿಸಿ, ಈಗಾಗಲೇ ಹಗರಣಗಳಿಂದ ಸುಪರಿಚಿತವಾದ, ರಾಜಕೀಯ ಹಸ್ತಕ್ಷೇಪಕ್ಕೆ ಸಾಕಷ್ಟು ಅವಕಾಶಗಳಿರುವ ಸರ್ಕಾರಿ ಇಲಾಖೆಗೆ ನೀಡುವುದು ನ್ಯಾಯೋಚಿತವೇ ಎಂಬುದು ಗಂಭೀರ ಪ್ರಶ್ನೆ.

ಹಣ ವಿಶ್ವವಿದ್ಯಾಲಯದ್ದು; ಮೇಲುಸ್ತುವಾರಿ ಮಾತ್ರ ಸರ್ಕಾರಿ ಅಧಿಕಾರಿಗಳದ್ದು ಎಂದರೆ ಸರಿಯಾದೀತೇ? ನನ್ನದೇ ಒಂದು ಅನುಭವ ಇಲ್ಲಿ ಹೇಳಬಯಸುವೆ. ಪಿಡಬ್ಲ್ಯುಡಿಯಲ್ಲಿ ಕ್ಷಿಪ್ರವಾಗಿ ಮತ್ತು ಪರಿಣಾಮಕಾರಿಯಾಗಿ ಹಾಗೂ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂಬ ಶಿಫಾರಸು ಕಾರ್ಯನಿರ್ವಾಹಕ ಎಂಜಿನಿಯರರಿಂದ ಬಂದಿತ್ತು. ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮಂಡ್ಯದಲ್ಲಿ ಇದ್ದುದರಿಂದ, ಅಷ್ಟು ದೂರದಿಂದ ನಮಗೆ ಕಟ್ಟಡದ ಮೇಲುಸ್ತುವಾರಿ ಕಷ್ಟವಾದೀತೆಂದು ಪಿಡಬ್ಲ್ಯುಡಿಗೆ ಕಾಮಗಾರಿಯನ್ನು ವಹಿಸಿಕೊಡಲಾಯಿತು. ಹದಿನೆಂಟು ತಿಂಗಳಲ್ಲಿ ಪೂರ್ಣವಾಗಬೇಕಿದ್ದ ಆ ಕಾಮಗಾರಿಯು ಮೂರು ವರ್ಷಗಳಾದರೂ ಪೂರ್ಣಗೊಂಡಿಲ್ಲ! ಹೀಗಾಗಿ ವಿಶ್ವವಿದ್ಯಾಲಯದ ಆಡಳಿತ ಅಸಹಾಯಕ ಸ್ಥಿತಿಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ವಿಶ್ವವಿದ್ಯಾಲಯದ ಬಳಿಯಿರುವ ಕಟ್ಟಡ ಕಾಮಗಾರಿ ಕೈಗೊಳ್ಳುವ ಅಧಿಕಾರ ಹಿಂಪಡೆದು ಸರ್ಕಾರಿ ಇಲಾಖೆಗೆ ವಹಿಸುವ ಮೂಲಕ ಎಲ್ಲಾ ವಿಶ್ವವಿದ್ಯಾಲಯಗಳನ್ನು ಇಂತಹ ಅಸಹಾಯಕ ಪರಿಸ್ಥಿತಿಗೆ ತಳ್ಳಬೇಕೇ? ಈ ಬಗ್ಗೆ ಆಲೋಚಿಸುವುದು ಒಳಿತು.

ವಿಶ್ವವಿದ್ಯಾಲಯಕ್ಕೆ ಬೇಕಾದ ಕಟ್ಟಡದ ಸ್ವರೂಪ, ಗುಣಮಟ್ಟ ನಿರ್ಣಯಿಸಬೇಕಾದ್ದು ಆಯಾ ವಿಶ್ವವಿದ್ಯಾಲಯದ ಮುಖ್ಯಸ್ಥರ ಆದ್ಯ ಕರ್ತವ್ಯ. ಅದೇ ರೀತಿಯಲ್ಲಿ ತನ್ನ ವಿಶ್ವವಿದ್ಯಾಲಯಕ್ಕೆ ಎಂಥ ಬೋಧಕ ಸಿಬ್ಬಂದಿ ಬೇಕು ಎಂಬುದನ್ನು ನಿರ್ಣಯಿಸುವುದು ಕುಲಪತಿಗಳಿಗೆ ದತ್ತವಾದ ಅಧಿಕಾರ, ಅದು ಅವರಿಗೇ ಇರಬೇಕಾದದ್ದು. ಪಾರದರ್ಶಕತೆ ತರುತ್ತೇವೆ ಎಂದು ಪರ್ಯಾಯ ಕೇಂದ್ರವನ್ನು ತರುವುದು ಸರ್ವಥಾ ಸಮರ್ಥನೀಯ ಕಾರ್ಯವಲ್ಲ. ಈ ಎರಡೂ ಅಧಿಕಾರಗಳನ್ನು ಕಿತ್ತುಕೊಳ್ಳುವುದರಿಂದ ವಿಶ್ವವಿದ್ಯಾಲಯಗಳು ಹಗರಣ ಮುಕ್ತವಾಗುತ್ತವೆ; ಪಾರದರ್ಶಕತೆ ಅಲ್ಲಿ ಬರುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ? ಹೀಗೆ ಹೇಳುವುದರಿಂದ ನಾನು ಕುಲಪತಿಗಳ ಅಥವಾ ವಿಶ್ವವಿದ್ಯಾಲಯಗಳ ಪರವಾಗಿ ವಾದ ಮಾಡುತ್ತಿದ್ದೇನೆ ಎನಿಸಬಹುದು. ನನ್ನ ಉದ್ದೇಶ ಅದಲ್ಲ. ಕೆಲವು ಕುಲಪತಿಗಳ ಮೇಲೆ ಆರೋಪ ಬಂದಿರುವುದೂ ನಿಜ. ಆದರೆ ಅವು ಕೇವಲ ಆರೋಪಗಳು. ವ್ಯವಸ್ಥೆಯನ್ನು ಸರಿಪಡಿಸಬೇಕೆಂದಿದ್ದರೆ, ಇಂಥ ಆರೋಪಗಳು ಬಂದಾಗ ತಕ್ಷಣ ತನಿಖಾ ಸಮಿತಿ ರಚಿಸಿ, ಸತ್ಯಾಸತ್ಯತೆಯ ತೀರ್ಮಾನ ಆಗಬೇಕು. ಆರೋಪಗಳಲ್ಲಿ ಹುರುಳಿರುವುದು ಕಂಡುಬಂದರೆ ಅಂಥವರ ಮೇಲೆ ಸೂಕ್ತ ಮತ್ತು ಕಠಿಣ ಕ್ರಮಗಳನ್ನು ಕಾಲಮಿತಿಯಲ್ಲಿ ಸರ್ಕಾರ ಕೈಗೊಳ್ಳಬೇಕು. ಆರೋಪಗಳಿವೆ ಎನ್ನುವ ಕಾರಣಕ್ಕೆ ಇರುವ ವ್ಯವಸ್ಥೆಯನ್ನು ನಾಶಮಾಡುವುದು ಸರಿಯಾದದ್ದಲ್ಲ.

 ‘ಕುಲಪತಿಗಳಿರುವುದು ಶೈಕ್ಷಣಿಕ ಚಟುವಟಿಕೆಗಳ ಉಸ್ತುವಾರಿ ನೋಡಿಕೊಂಡು ಸುಧಾರಣೆ ಮಾಡಲು. ಅದನ್ನವರು ಮಾಡಲಿ. ನೇಮಕಾತಿ ಮತ್ತು ಕಾಮಗಾರಿ ಕೆಲಸಗಳ ಗೋಳು, ಗೋಜಲುಗಳು ಅವರಿಗ್ಯಾಕೆ’ ಎಂದು ಕುಲಪತಿಗಳ ಪರವಾಗಿ ಸಹಾನುಭೂತಿ ತೋರುವ ರೀತಿಯಲ್ಲಿ ಕೆಲವರು ಹೇಳುವುದನ್ನು ಕೇಳಿದ್ದೇನೆ. ಒಬ್ಬ ಪ್ರಾಧ್ಯಾಪಕರಾಗಿ ಹಲವಾರು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿಭಾಯಿಸಿ ಕುಲಪತಿ ಹುದ್ದೆಗೇರಿದವರು ಸಮರ್ಥ ಆಡಳಿತಗಾರರಾಗಿ, ದೂರದೃಷ್ಟಿಯಿಂದ ವಿಶ್ವವಿದ್ಯಾಲಯವನ್ನು ಕಟ್ಟಿ ಯಶಸ್ಸು ಕಂಡವರು ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ. ಇಂಥವರ ಆಡಳಿತ ಮಾದರಿಗಳು ನಮಗೆ ಆದರ್ಶವಾಗಬೇಕು. ಇಂಥ ಆಡಳಿತ ವ್ಯವಸ್ಥೆಯನ್ನು ರೂಪಿಸುವತ್ತ ಗಮನಹರಿಸಬೇಕು. ಅದಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ. ಹೀಗೆ ಎರಡೂ ನೆಲೆಗಳ ಪರಸ್ಪರಾವಲೋಕನ, ವಿಶ್ವಾಸ, ಸಹೃದಯತೆ ಮತ್ತು ಕರ್ತೃತ್ವಶಕ್ತಿಗಳು ಸೇರಿಕೊಂಡು ಆರೋಗ್ಯಪೂರ್ಣ ವಿಶ್ವವಿದ್ಯಾಲಯಗಳನ್ನು ಕಟ್ಟಲು ಸಾಧ್ಯವಿದೆ.

ಲೇಖಕಿ: ವಿಶ್ರಾಂತ ಕುಲಪತಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು