ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಚಿಂಚೋಳಿ: ಭೂಕಂಪನದ ಮೂಲ?

ಸರಳ ಕ್ರಮಗಳ ಮೂಲಕ ಭೂಕಂಪಪೀಡಿತ ಜನರ ಆತಂಕ ದೂರ ಮಾಡಬಹುದು
Last Updated 19 ಅಕ್ಟೋಬರ್ 2021, 18:43 IST
ಅಕ್ಷರ ಗಾತ್ರ

ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಸುತ್ತಮುತ್ತಲಿನ ಸುಮಾರು 25 ಹಳ್ಳಿಗಳಲ್ಲಿ ಕೆಲವು ದಿನಗಳಿಂದಭೂಮಿ ಕಂಪಿಸಿ ಜನ ಭಯಭೀತರಾಗಿದ್ದಾರೆ. ಈ ಭಾಗದಲ್ಲಿ ಭೂಮಿ ಕಂಪಿಸುವುದು ಹಲವಾರು ವರ್ಷಗಳಿಂದ ನಡೆದೇ ಇದೆ. 1993ರಿಂದ ಇತ್ತೀಚಿನ ವರ್ಷಗಳಲ್ಲಿ, ಅಂದರೆ 2008, 2015, 2016ರಲ್ಲಿ ಭೂಕಂಪವಾಗಿದೆ, ಮತ್ತೆ ಮುಂದೆಯೂ ಆಗಲಿದೆ!

ಈ ಹಿನ್ನೆಲೆಯಲ್ಲಿ ಮೂರು ಸರಳ ಕ್ರಮಗಳು ಚಿಂಚೋಳಿಯ ಭೂಕಂಪಪೀಡಿತ ಜನರ ಆತಂಕ ಮತ್ತು ಭಯವನ್ನು ದೂರ ಮಾಡಬಲ್ಲವು: 1. ಇಲ್ಲಿ ದೊಡ್ಡ ಪ್ರಮಾಣದ ಭೂಕಂಪದ ಸಂಭವ ಕಡಿಮೆ ಎಂಬ ಅರಿವು ಮೂಡಿಸುವುದು (ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯ ನಕ್ಷೆಯನ್ವಯ ಈ ಪ್ರದೇಶ IIನೇ ವಲಯದಲ್ಲಿದ್ದು ಕಡಿಮೆ ತೀವ್ರತೆಯ ಭೂಕಂಪ ಪ್ರದೇಶವೆಂದು ಗುರುತಿಸಲ್ಪಟ್ಟಿದೆ).

2. ಪ್ರತೀ ಹಳ್ಳಿಯಲ್ಲಿ ಜನಸಂಪರ್ಕ ಸಭೆ ನಡೆಸಿ ಭೂಕಂಪದ ಬಗ್ಗೆ ಸಾಮಾನ್ಯ ಮಾಹಿತಿ ಮತ್ತು ಕಂಪನಗಳಾದಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಕರಪತ್ರ ಹೊರಡಿಸುವುದು ಹಾಗೂ ಪ್ರಾತ್ಯಕ್ಷಿಕೆ ನೀಡುವುದು.

3. ಪ್ರತೀ ಕುಟುಂಬಕ್ಕೆ ಒಂದರಂತೆ ರಾತ್ರಿ ಮಲಗಲು ತಗಡು ಹೊದಿಕೆಯ ಶೆಡ್ ನಿರ್ಮಿಸಿಕೊಡುವುದು (ಹಗಲು ಭೂಕಂಪ ಸಂಭವಿಸಿದರೆ ಹೇಗಾದರೂ ರಕ್ಷಣೆ ಮಾಡಿಕೊಳ್ಳಬಹುದು). ಜೊತೆಗೆ ಈಗಿರುವ ಮನೆಗಳನ್ನು ಕಂಪನ ತಡೆಯಬಲ್ಲಂತೆ ಸದೃಢಗೊಳಿಸುವುದು ಮತ್ತು ಮುಂದೆ ಕಟ್ಟುವ ಮನೆಗಳಲ್ಲಿ ಭೂಕಂಪ ತಡೆಯುವ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಬಗ್ಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳುವುದು.

ಇದುವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಭಾಗದಲ್ಲಿ ಯಾವುದೇ ದೊಡ್ಡ ಸ್ತರಭಂಗ
ಗಳಾಗಲೀ ಅಥವಾ ಭೂಚಿಪ್ಪುಗಳ (ಕ್ರಸ್ಟಲ್‌ ಪ್ಲೇಟ್ಸ್‌) ಸರಿದಾಡಿಕೆಯಾಗಲೀ ಕಂಡುಬಂದಿಲ್ಲ ಮತ್ತು ಇವು ಇಲ್ಲದೇ ಇರುವುದರಿಂದ ದೊಡ್ಡ ಭೂಕಂಪಗಳು ಉಂಟಾಗುವ ಸಾಧ್ಯತೆ ಕಡಿಮೆ. ಈಗ ಸಂಭವಿಸುತ್ತಿರುವ ಸಣ್ಣ ಕಂಪನಗಳಿಗೆ ಕಾರಣ ಹುಡುಕುತ್ತಾ ಹೋದರೆ, ಆಳದಲ್ಲಿ ಜರುಗುತ್ತಿರಬಹುದಾದ ರಾಸಾಯನಿಕ ಕ್ರಿಯೆಗಳ ಸುಳಿವು ಗೋಚರವಾಗುತ್ತದೆ. ಅದನ್ನು ಅರ್ಥೈಸಿಕೊಳ್ಳಬೇಕಾದರೆ ನಾವು ಸುಣ್ಣ ತಯಾರಿಸುವ ವಿಧಾನವನ್ನು ಜ್ಞಾಪಿಸಿಕೊಳ್ಳಬೇಕು. ಸುಣ್ಣವನ್ನು ತಯಾರಿಸಲು ಸುಣ್ಣದಕಲ್ಲನ್ನು ಪುಡಿ ಮಾಡಿ ಕೂಪಿನಲ್ಲಿ (kiln) ಸುಮಾರು 1000 ಡಿಗ್ರಿ ಸೆಲ್ಸಿಯಸ್ ಶಾಖದಲ್ಲಿ ಸುಟ್ಟಾಗ ಕ್ಯಾಲ್ಸಿಯಂ ಕಾರ್ಬೊನೇಟ್ ಅಂಶ ಹೊಂದಿರುವ ಸುಣ್ಣದಕಲ್ಲು ತ್ವರಿತ ಸುಣ್ಣವಾಗಿ (ಕ್ವಿಕ್‌ ಲೈಮ್‌) ಪರಿವರ್ತಿತವಾಗುತ್ತದೆ. ಅಂದರೆ ಕ್ಯಾಲ್ಸಿಯಂ ಕಾರ್ಬೊನೇಟ್ ಇಂದ ಕ್ಯಾಲ್ಸಿಯಂ ಆಕ್ಸೈಡ್ ಆಗಿ ಬದಲಾವಣೆ ಹೊಂದುತ್ತದೆ. ಈ ಕ್ರಿಯೆಯಲ್ಲಿ ಇಂಗಾಲದ ಡೈಆಕ್ಸೈಡ್ ಕೂಡ ಬಿಡುಗಡೆಯಾಗುತ್ತದೆ. ಈ ರೀತಿ ತಯಾರಾದ ತ್ವರಿತ ಸುಣ್ಣ ತಣ್ಣಗಾದಮೇಲೆ ನೀರು ಸೇರಿಸಿದರೆ ಅದು ಕೊತಕೊತ ಕುದಿದು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಆಗಿ ಬದಲಾಗುತ್ತದೆ.

ಚಿಂಚೋಳಿ ಪ್ರಾಂತ್ಯದ ಮೇಲ್ಭಾಗದಲ್ಲಿ ಬೆಸಾಲ್ಟ್ ಮತ್ತು ಅದರ ಕೆಳಗೆ ಸುಣ್ಣದ ಕಲ್ಲುಗಳು ಇವೆ. ಆದರೆ ಇವೆರಡೂ ವಿಭಿನ್ನ ಕಾಲಘಟ್ಟದಲ್ಲಿ ರಚನೆಯಾದವು. ಸುಣ್ಣದ ಕಲ್ಲುಗಳು ಸುಮಾರು 80 ಕೋಟಿ ವರ್ಷಗಳ ಹಿಂದೆ ಉಂಟಾಗಿದ್ದು, ಬೆಸಾಲ್ಟ್ ಶಿಲೆಯು ಕೇವಲ 6 ಕೋಟಿ ವರ್ಷಗಳ ಹಿಂದೆ ಉಗಮವಾಯಿತು. ಡೆಕ್ಕನ್ ಜ್ವಾಲಾಮುಖಿ ಎಂಬ ಮಹಾನ್ ಪ್ರಳಯಕಾರಿ ಜ್ವಾಲಾಮುಖಿಗಳು ಭಾರತದ ಐದು ಲಕ್ಷ ಚದರ ಕಿಲೊಮೀಟರ್‌ನಷ್ಟು ಭೂಪ್ರದೇಶದಲ್ಲಿ ಹರಡಿ ಅಗಾಧ ಭೂವೈಜ್ಞಾನಿಕ ಮಾರ್ಪಾಡುಗಳಿಗೆ ಕಾರಣವಾದವು. 20 ಮೀಟರ್‌ನಿಂದ 5,000 ಮೀಟರ್‌ನಷ್ಟು ದಪ್ಪ ಪದರದ ಬೆಸಾಲ್ಟ್ ಶಿಲೆಗಳು ಸೃಷ್ಟಿಯಾಗಲು ಕಾರಣವಾದ ಈ ಜ್ವಾಲಾಮುಖಿಗಳು ಉತ್ತರ ಕರ್ನಾಟಕದ ಹಲವು ಪ್ರಾಂತ್ಯಗಳನ್ನು ಆವರಿಸಿದವು (ಮನುಷ್ಯನ ಸಂತತಿ ಭೂಮಿಯ ಮೇಲೆ ಆಗ ಇರಲಿಲ್ಲ, ಅದು ಬೇರೆ ಮಾತು!).

ಬೆಸಾಲ್ಟ್ ಶಿಲೆಯ ಉಗಮಕ್ಕೆ ಮುಂಚೆ, ಸುಣ್ಣದ ಕಲ್ಲುಗಳು ಶಿಥಿಲೀಕರಣಕ್ಕೆ ಒಳಪಟ್ಟು ಭೌತಿಕ ಮತ್ತು ರಾಸಾಯನಿಕ ಮಾರ್ಪಾಡುಗಳಾದವು. ಸುಣ್ಣದಕಲ್ಲು ಉಳಿದ ಕಲ್ಲುಗಳಿಗಿಂತ ಹೆಚ್ಚು ಬೇಗ ರಾಸಾಯನಿಕ ಕ್ರಿಯೆಗಳಿಗೆ ಒಳಪಡುವುದರಿಂದ ಅವುಗಳ ಮೇಲ್ಪದರದಲ್ಲಿ ಕ್ಯಾಲ್ಸಿಯಂಯುಕ್ತ ಮಣ್ಣಿನ ಪದರದ ನಿರ್ಮಾಣ, ಟೊಳ್ಳುಗಳು ಉಂಟಾಗುವಿಕೆ, ಅವು ದೊಡ್ಡ ಗುಹೆಗಳಾಗಿ ಮಾರ್ಪಾಡಾಗುವುದು ಮುಂತಾದ ಕ್ರಿಯೆಗಳು ನಿರಂತರವಾಗಿ ಜರುಗಿವೆ. ಕ್ಯಾಲ್ಸಿಯಂಯುಕ್ತ ಮಣ್ಣಿನ ಪದರದಲ್ಲಿ ಕ್ಯಾಲ್ಕ್ರೀಟ್ ಎಂಬ ಕ್ಯಾಲ್ಸಿಯಂ ಕಾರ್ಬೊನೇಟ್- ಸಮೃದ್ಧ ಪದರ ನಿರ್ಮಾಣವಾಗುತ್ತಾ ಹೋಗುತ್ತದೆ. ದೀರ್ಘ ಕಾಲದಲ್ಲಿ ಅನೇಕ ಮೀಟರ್ ದಪ್ಪದ ಇಂತಹ ಪದರಗಳು ಉಂಟಾಗಬಲ್ಲವು. ಇಂತಹ ಶಿಥಿಲೀಕರಣಗೊಂಡ ಮತ್ತು ಮಾರ್ಪಾಡಾದ ಸುಣ್ಣದಕಲ್ಲಿನ ಪದರದ ಮೇಲೆ 1000– 1200 ಡಿ.ಸೆಂ. ಉಷ್ಣಾಂಶದ ಲಾವಾರಸ ಹರಿದಾಗ, ಸುಣ್ಣದಕಲ್ಲು ಬೆಂದು ತ್ವರಿತ ಸುಣ್ಣ (ಕ್ಯಾಲ್ಸಿಯಂ ಆಕ್ಸೈಡ್) ಆಗಿ ಪರಿವರ್ತಿತವಾಗುತ್ತದೆ ಮತ್ತು ಅಗಾಧ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಕೂಡ ಬಿಡುಗಡೆಯಾಗುತ್ತದೆ. ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ ಸೇರಿಹೋದರೂ ಸ್ವಲ್ಪ ಪ್ರಮಾಣದ ಅನಿಲ ಅಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಕಾಲಾಂತರದಲ್ಲಿ ತ್ವರಿತ ಸುಣ್ಣ ಮತ್ತು ಇಂಗಾಲದ ಡೈ ಆಕ್ಸೈಡ್ ಲಾವಾರಸದಲ್ಲಿ ಹುದುಗಿಹೋಗಿ ಶಾಶ್ವತವಾಗಿ ಬಂದಿಯಾಗುತ್ತವೆ ಮತ್ತು ಲಾವಾರಸ ಗಟ್ಟಿಯಾಗಿ ಬೆಸಾಲ್ಟ್ ಶಿಲೆಯಾಗುತ್ತದೆ. ಆದರೂ ಬೆಸಾಲ್ಟ್ ಶಿಲೆಯ ಸುಪ್ತ ಶಾಖ ಬಹಳ ಕಾಲ ಸುಣ್ಣದಕಲ್ಲು ಪದರಗಳನ್ನು ನಿರಂತರವಾಗಿ ಶಾಖಕ್ಕೆ ಒಳಪಡಿಸಿ ಕ್ಯಾಲ್ಸಿಯಂ ಆಕ್ಸೈಡ್ ಆಗಿ ಮಾರ್ಪಾಡಾಗಲು ಕಾರಣವಾಗುತ್ತದೆ.

ಅಂದು ಭೂಗರ್ಭದಲ್ಲಿ ಹುದುಗಿಹೋದ ತ್ವರಿತ ಸುಣ್ಣ ಮತ್ತು ಇಂಗಾಲದ ಅನಿಲಗಳು ಇಂದು ಚಲನಶೀಲವಾಗಿರುವುದೇ ಚಿಂಚೋಳಿಯ ಕಂಪನಗಳಿಗೆ ಪ್ರಮುಖ ಕಾರಣ. ಅವು ಚಲನಶೀಲವಾಗಲು ಕಾರಣ ಮಳೆಗಾಲದಲ್ಲಿ ಭೂಮಿಯೊಳಗೆ ಇಂಗುವ ಅಪಾರ ಪ್ರಮಾಣದ ನೀರು. ನೀರು ತ್ವರಿತ ಸುಣ್ಣದ ಸಂಪರ್ಕಕ್ಕೆ ಬಂದಾಗ ಅವು ಕುದಿದು (ಸುಣ್ಣಕ್ಕೆ ನೀರು ಹಾಕಿದಾಗ ಅದು ಕುದಿಯುವಂತೆಯೇ) ಭಾರಿ ಪ್ರಮಾಣದ ನೀರಿನ ಆವಿಯೂ ಉಂಟಾಗಿ, ಆ ಆವಿ ಅಲ್ಲಿ ಮೊದಲೇ ಇರಬಹುದಾದ ಇಂಗಾಲದ ಡೈ ಆಕ್ಸೈಡ್ ಜೊತೆ ಸೇರಿ ಅವು ವಿಸ್ತೃತಗೊಂಡು ಒತ್ತಡ ಹೆಚ್ಚಿದಂತೆಲ್ಲ ಅವು ಸ್ಫೋಟಿಸಿದಾಗ ಹೊರಬರುವ ಶಬ್ದವೇ ನಾವು ಕಂಪನ ಪ್ರದೇಶದಲ್ಲಿ ಕೇಳುವ ಶಬ್ದ. ಈ ಕ್ರಿಯೆ ಅಷ್ಟಕ್ಕೇ ನಿಲ್ಲುವುದಿಲ್ಲ. ಘನ ರೂಪದ ತ್ವರಿತ ಸುಣ್ಣ ಮೆದುವಾದ ಕೇಕ್ ತರಹದ ಸುಣ್ಣದ ರೂಪ ತಳೆದಾಗ ಅದರ ಘನ ವಿಸ್ತಾರದಲ್ಲಿ (ವಾಲ್ಯೂಮ್‌) ಏರುಪೇರಾಗುತ್ತದೆ. ಅಂದರೆ ಒಂದು ರೀತಿಯ ಭಾಗಶಃ ನಿರ್ವಾತ ಸೃಷ್ಟಿಯಾಗುತ್ತದೆ. ಈ ನಿರ್ವಾತವನ್ನು ಹೊಂದಾಣಿಕೆ ಮಾಡಿಕೊಳ್ಳಲು ಭೂಸ್ತರಗಳು ಸರಿದಾಡುವುದು ಮತ್ತು ಕುಸಿಯುವುದು ಸಂಭವಿಸುತ್ತದೆ. ಅಂತಹ ಸಂದರ್ಭದಲ್ಲಿ ಆಘಾತ ಅಲೆಗಳು ಉಂಟಾಗಿ ಅವು ವರ್ತುಲಾಕಾರವಾಗಿ ಪಸರಿಸಿ ಭೂಮಿಯ ಮೇಲ್ಮೈನ ಮಣ್ಣನ್ನು ತೀವ್ರ ಅಲುಗಾಟಕ್ಕೆ ಗುರಿ ಮಾಡಿದಾಗ ನಮಗೆ ಭೂಕಂಪನದ ಅನುಭವವಾಗುತ್ತದೆ. ಚಿಂಚೋಳಿಯ ಸುತ್ತಮುತ್ತ ಜರುಗುತ್ತಿರುವುದು ಬಹುತೇಕ ಇದೇ ಪ್ರಕ್ರಿಯೆ.

ಇವು ಆಗಿಂದಾಗ್ಗೆ ವರ್ಷಗಳ ಅಂತರದಲ್ಲಿ ಸಂಭವಿಸುವುದು ಒಂದು ರೀತಿಯಲ್ಲಿ ಒಳ್ಳೆಯದೇ! ಏಕೆಂದರೆ ಭೂಮಿಯೊಳಗೆ ಯಾವುದೇ ಒತ್ತಡ ಹೆಚ್ಚುತ್ತಾ ಹೋದರೆ ಒಂದು ಹಂತದಲ್ಲಿ ಅದು ಒಮ್ಮೆಲೇ ಸ್ಫೋಟಿಸಿ ದೊಡ್ಡ ಭೂಕಂಪಕ್ಕೆ ಕಾರಣವಾಗಬಹುದು. ಬದಲಿಗೆ ಆ ಒತ್ತಡ ಸಣ್ಣ ಸಣ್ಣ ಕಂಪನಗಳ ಮೂಲಕ ವ್ಯಕ್ತವಾದರೆ ಅಂತಹ ಭೂಪ್ರದೇಶ ಹೆಚ್ಚು ಸುರಕ್ಷಿತ.

ಈ ಎಲ್ಲವುಗಳ ಹಿನ್ನೆಲೆಯಲ್ಲಿ ಚಿಂಚೋಳಿ ಪ್ರದೇಶದ ವಿವರವಾದ ವೈಜ್ಞಾನಿಕ ಅಧ್ಯಯನ ಅತ್ಯಂತ ತುರ್ತಾಗಿ ಆಗಬೇಕಾಗಿದೆ. ಭೂಭೌತ ಸರ್ವೇಕ್ಷಣೆ, ಭೂರಚನಾಭಂಗಿಯ ಅಧ್ಯಯನ ಮತ್ತು ಭೂಕಂಪನ ನಕ್ಷೆ ತಯಾರಿಕೆ ತುರ್ತಾಗಿ ಆಗಬೇಕಾಗಿರುವ ಕೆಲಸಗಳು. ಭೂಕಂಪದಂತಹ ನೈಸರ್ಗಿಕ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲದ್ದರಿಂದ, ಅವುಗಳಿಂದ ಉಂಟಾಗುವ ಪರಿಣಾಮಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರುವುದೇ ಸೂಕ್ತ ಮಾರ್ಗ.

ಲೇಖಕ: ನಿವೃತ್ತ ಭೂವಿಜ್ಞಾನ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT