ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಕರ್ನಾಟಕ@50: 25 ವರ್ಷಗಳ ಮುನ್ನೋಟ– ನುಡಿ ಬೆಳೆಸಲು ಬೇಕು ಸೃಜನಶೀಲ ಕ್ರಮ
ಕರ್ನಾಟಕ@50: 25 ವರ್ಷಗಳ ಮುನ್ನೋಟ– ನುಡಿ ಬೆಳೆಸಲು ಬೇಕು ಸೃಜನಶೀಲ ಕ್ರಮ
ಜಿ.ಎನ್. ದೇವಿ ಅವರ ಲೇಖನ ಹಾಗೂ ತಜ್ಞರ ಅಭಿಮತ
ಜಿ.ಎನ್‌. ದೇವಿ
Published 17 ನವೆಂಬರ್ 2023, 23:31 IST
Last Updated 17 ನವೆಂಬರ್ 2023, 23:31 IST
ಅಕ್ಷರ ಗಾತ್ರ

ಇಂಗ್ಲಿಷ್‌ ಅಥವಾ ಹಿಂದಿ ವಿರೋಧ ಎನ್ನುವ ಕೇವಲ ಘೋಷಣೆಗಳು ಕನ್ನಡ ಭಾಷಾ ಬೆಳವಣಿಗೆಗೆ ಪೂರಕವಾಗದು. ಕನ್ನಡ ಭಾಷೆಯ ಬೆಳವಣಿಗೆಗೆ ಎಂಥ ಸೃಜನಶೀಲ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅಂಥದ್ದೇ ಕ್ರಮಗಳನ್ನು ತುಳು, ದಖನಿ, ಕೊಂಕಣಿ ಹಾಗೂ ಕರ್ನಾಟಕದ ಇನ್ನಿತರ ಭಾಷೆಗಳಿಗೂ ತೆಗೆದುಕೊಳ್ಳಬೇಕು. ಭಾಷೆಯ ಉಳಿವಿಗೆ ಬಹುಭಾಷಾ ಶಿಕ್ಷಣದ ವಿಧಾನವನ್ನು ಅನುಸರಿಸುವ ಕುರಿತು ಚಿಂತನೆ ನಡೆಸುವ ಕಾಲ ಸನ್ನಿಹಿತವಾಗಿದೆ.

------

ಈ ಜಗತ್ತಿನಲ್ಲಿ, ಜನರು ಮಾತನಾಡುವ ಎಲ್ಲಾ ಭಾಷೆಗಳನ್ನು ಲೆಕ್ಕ ಹಾಕಿದರೆ ಸುಮಾರು 7,000 ಭಾಷೆಗಳಾಗಬಹುದು. ಒಂದು ಭಾಷೆಯನ್ನು ಎಷ್ಟು ಜನರು ಮಾತನಾಡುತ್ತಾರೆ ಎನ್ನುವುದನ್ನು ಲೆಕ್ಕಹಾಕಿ ಅದಕ್ಕೊಂದು ಶ್ರೇಯಾಂಕ ನೀಡಿ ಪಟ್ಟಿ ಮಾಡುವುದಾದರೆ, ಮೊದಲ 30 ಭಾಷೆಗಳ ಪಟ್ಟಿಗಳಲ್ಲಿ 11 ಭಾಷೆಗಳು ಭಾರತದ್ದೇ ಆಗಿರುತ್ತವೆ. ಹಿಂದಿ, ಬಾಂಗ್ಲಾ, ಮರಾಠಿ, ತೆಲುಗು, ಪಂಜಾಬಿ, ತಮಿಳು, ಉರ್ದು, ಗುಜರಾತಿ, ಮಲೆಯಾಳ, ಕನ್ನಡ ಹಾಗೂ ಒಡಿಯಾ– ಇವೇ ಆ 11 ಭಾಷೆಗಳು. ಒಂದೊಮ್ಮೆ ಈ 30 ಭಾಷೆಗಳ ಪಟ್ಟಿಯಲ್ಲಿ, ಯಾವ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂಬ ಪಟ್ಟಿ ತಯಾರಿಸಲು ಹೊರಟರೆ ಅಂಥವರಿಗೆ ಸುಮಾರು 10 ಭಾಷೆಗಳು ಸಿಗಬಹುದು. ಆ 10 ಭಾಷೆಗಳಲ್ಲಿ ಭಾರತದ ಮೂರು ಭಾಷೆಗಳೂ ಇರುತ್ತವೆ– ತಮಿಳು, ಮರಾಠಿ ಮತ್ತು ಕನ್ನಡ. 

ಕನ್ನಡದ ಕುರಿತು ಹೆಮ್ಮೆ ಪಡುವುದಕ್ಕೆ ಇದಕ್ಕಿಂತ ಬೇರೆ ಯಾವ ಕಾರಣ ಬೇಕು ಹೇಳಿ. ಭಾಷೆಯ ಅತ್ಯಂತ ದೀರ್ಘವಾದ ಇತಿಹಾಸ ಮತ್ತು ಹೆಚ್ಚು ಜನರು ಮಾತನಾಡುವ ಭಾಷೆ– ಈ ಎರಡೂ ವಿಭಾಗಗಳಲ್ಲೂ ಕನ್ನಡ ಸ್ಥಾನಗಳಿಸಿದೆ. ಅಪೂರ್ವ ಸಾಹಿತ್ಯ ಪರಂಪರೆ, ತತ್ವಶಾಸ್ತ್ರ, ಜೊತೆಗೆ ಪದಕೋಶ ಹಾಗೂ ವಿಶ್ವಕೋಶಗಳಂಥ ಪಾಂಡಿತ್ಯಪೂರ್ಣ ಕೆಲಸಗಳೂ ಈ ಭಾಷೆಗೆ ಸಂಬಂಧಿಸಿ ನಡೆದಿವೆ. ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲೂ ಗಮನಾರ್ಹ ಕೆಲಸಗಳಾಗಿವೆ.  ಕರ್ನಾಟಕದಲ್ಲಿ ಏಷ್ಯಾದಲ್ಲಿಯೇ ಅತ್ಯುತ್ತಮವಾದ ಸಂಗೀತ ಪರಂಪರೆ ಇದೆ. ಆದರೂ, ಕನ್ನಡ ಭಾಷೆಯ ಮುಂದಿನ ಪಥವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಎಲ್ಲವೂ ಸರಿ ಇದ್ದಂತೆ ತೋರುತ್ತಿಲ್ಲ.

ಭಾರತದ ಸಂವಿಧಾನವು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದೆ ಮತ್ತು ಭಾಷೆಗಳ ಆಧಾರದಲ್ಲಿ 1950ರಲ್ಲಿ ರಾಜ್ಯಗಳ ವಿಂಗಡಣೆಯಾಗಿದೆ. ನಿಜಾಮರ ಸಾಮ್ರಾಜ್ಯದಲ್ಲಿ ಹಾಗೂ ಬಾಂಬೆ ಪ್ರಾಂತ್ಯದಲ್ಲಿ ಹಂಚಿಹೋಗಿದ್ದ ಪ್ರದೇಶಗಳನ್ನು ಒಟ್ಟುಗೂಡಿಸಿ ಕರ್ನಾಟಕ ರೂಪುಪಡೆಯಿತು.

ಕನ್ನಡವು ಕರ್ನಾಟಕದ ಅಧಿಕೃತ ಭಾಷೆಯ ಪಟ್ಟ ಪಡೆದುಕೊಂಡಿತು. ದಖನಿ, ತುಳು ಹಾಗೂ ಕೊಂಕಣಿ ಭಾಷೆಗಳೊಂದಿಗೆ ತಮಿಳು ಹಾಗೂ ಮರಾಠಿ ಸೇರಿದಂತೆ ಕೆಲವು ಭಾಷೆಗಳು ನಾಡಿನ ಇತರ ಭಾಷೆಗಳಾದವು.

ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಕನ್ನಡದ ಹೊರತಾಗಿಯೂ ಬೇರೆ ಬೇರೆ ಭಾಷೆ ಮಾತನಾಡುವ ಜನರಿದ್ದಾರೆ. ಕರ್ನಾಟಕದಲ್ಲಿ ಕನ್ನಡದ ಹೊರತಾಗಿ ಮಾತನಾಡುವ ಇತರೆ ಕೆಲವು ಭಾಷೆಗಳು– ಕೊಂಕಣಿ, ಹಿಂದಿ, ಮರಾಠಿ, ತೆಲುಗು, ತಮಿಳು, ಉರ್ದು ಅಥವಾ ದಖನಿ ಭಾಷೆಗಳು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿವೆ. ಇನ್ನುಳಿದ– ತುಳು, ಬ್ಯಾರಿ, ಕೊಡವ, ಸಂಕೇತಿ, ಬಂಜಾರ, ಕೊರಗ, ಇರುಳ, ಸಿದ್ಧಿ, ಬಡಗ, ಸೋಲಿಗ, ಹಕ್ಕಿಪಿಕ್ಕಿ, ಎರವ, ಗೌಳಿ ಹಾಗೂ ಕುರುಬ ಭಾಷೆಗಳು 8ನೇ ಪರಿಚ್ಛೇದದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಹಾಗಿದ್ದರೂ ಇಂಗ್ಲಿಷ್‌ ಭಾಷೆಯು ಕರ್ನಾಟಕ ದಲ್ಲಿ ಹಲವು ಸ್ತರಗಳಲ್ಲಿ ತನ್ನ ಬಾಹು ಚಾಚಿದೆ. ಕಾನೂನು ಕ್ಷೇತ್ರದಲ್ಲಿ, ಆಡಳಿತದಲ್ಲಿ, ಉನ್ನತ ಶಿಕ್ಷಣದಲ್ಲಿ ಮತ್ತು ಕೈಗಾರಿಕೆಯಲ್ಲಿ ಇಂಗ್ಲಿಷ್‌ ತನ್ನ ಪಾರಮ್ಯವನ್ನು ಮೆರೆಯುತ್ತಿದೆ. ಇಷ್ಟೆಲ್ಲ ಭಾಷೆಗಳಿಗೆ ಕರ್ನಾಟಕವು ತನ್ನೊಡಲಲ್ಲಿ ಜಾಗ ಕೊಟ್ಟಿದೆ. ಅಲ್ಲಿಗೆ, ಭಾರತವನ್ನು ಬಹುಭಾಷಾ ರಾಷ್ಟ್ರವನ್ನಾಗಿ ಮಾಡಬೇಕು, ಜೊತೆಜೊತೆಗೆ ರಾಜ್ಯಗಳಿಗೆ ಅವುಗಳದ್ದೇ ಆದ ರಾಜ್ಯ ಭಾಷೆಯೊಂದಿರಬೇಕು ಎನ್ನುವ ಪರಿಕಲ್ಪನೆಯು ಕರ್ನಾಟಕದಲ್ಲಿ ಸಾಕಾರಗೊಂಡಂತಾಗಿದೆ.

ಕನ್ನಡವು ಸದ್ಯದ ಮಟ್ಟಿಗಂತೂ ರಾಜ್ಯದಲ್ಲಿ ಅತಿಹೆಚ್ಚು ಜನರು ಮಾತನಾಡುವ ಭಾಷೆ. ಆದರೆ, ಕನ್ನಡದ ಬೆಳವಣಿಗೆಯ ವೇಗ ಮಾತ್ರ ಕುಂಠಿತವಾಗ ತೊಡಗಿದೆ. 1961ರ ಗಣತಿಯಲ್ಲಿ ಕನ್ನಡವು ತಮ್ಮ ಮಾತೃಭಾಷೆ ಎಂದು ಭಾರತದಾದ್ಯಂತ ಶೇ 3.96ರಷ್ಟು ಜನರು ಹೇಳಿದ್ದರು. ಆದರೆ, ಈ ಪ್ರಮಾಣವು ದಶಕದಿಂದ ದಶಕಕ್ಕೆ ಕಡಿಮೆ ಆಗುತ್ತಲೇ ಬರುತ್ತಿದೆ. ಈಗ 50 ವರ್ಷಗಳಲ್ಲಿ ಕನ್ನಡವನ್ನು ಮಾತೃಭಾಷೆ ಎಂದು ಭಾರತದಾದ್ಯಂತ ಹೇಳಿಕೊಂಡಿರುವ ಜನರ ಪ್ರಮಾಣವು ಶೇ 3.96ರಷ್ಟಿಂದ ಶೇ 3.61ರಷ್ಟಕ್ಕೆ ಇಳಿಕೆಯಾಗಿದೆ. ಇದು 2011ರ ಗಣತಿಯ ಮಾಹಿತಿ. 121 ಕೋಟಿ (2011 ಗಣತಿ ಪ್ರಕಾರ) ಜನಸಂಖ್ಯೆಯಲ್ಲಿ ಶೇ 00.35ರಷ್ಟು ಪ್ರಮಾಣ ಕಡಿಮೆಯಾಗಿದೆ ಎಂದರೆ ಅದು ಹಲವು ಲಕ್ಷವಾಗುತ್ತದೆ.

ಹಿಂದೆಲ್ಲಾ ಗಣತಿ ಸಂದರ್ಭದಲ್ಲಿ, ಕೆಲವು ಜನರಷ್ಟೇ ಮಾತನಾಡುವ ಭಾಷೆ ಮಾತನಾಡುವವರನ್ನು ಕನ್ನಡ ಮಾತನಾಡುವ ಜನರು ಎಂದೇ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. 2011ರ ಗಣತಿಯ ಪ್ರಕಾರ, ಕನ್ನಡ ಮಾತನಾಡುವ ಜನರ ಸಂಖ್ಯೆಯು 4.37 ಕೋಟಿ, ಬಡಗ ಮಾತನಾಡುವ ಜನಸಂಖ್ಯೆಯು 1.33 ಲಕ್ಷ, ಕುರುಬ ಭಾಷೆ ಮಾತನಾಡುವವರ ಸಂಖ್ಯೆಯು 24,189 ಹಾಗೂ ಪ್ರಾಕೃತ ಮಾತನಾಡುವವರ ಸಂಖ್ಯೆಯು 12,257 ಇತ್ತು. ‘ಹೆಸರೇ ಇಲ್ಲದ ಭಾಷೆ’ ಮಾತನಾಡುವ ಸುಮಾರು 30,244 ಜನರೂ ಕರ್ನಾಟಕದಲ್ಲಿ ಇದ್ದರು.

ಭಾರತದಾದ್ಯಂತ ಕನ್ನಡ ಮಾತನಾಡುವ ಜನರ ಸಂಖ್ಯೆ ಮಾತ್ರವೇ ಇಳಿಕೆಯಾಗುತ್ತಿಲ್ಲ. ಈ ಪ್ರವೃತ್ತಿಯು ಇಡೀ ದ್ರಾವಿಡ ಭಾಷೆಗಳ ಕುಟುಂಬಕ್ಕೂ ಅಂಟಿದೆ. ಭಾರತದಲ್ಲಿ ಇಂಡೊ–ಆರ್ಯನ್‌ ಭಾಷೆಗಳನ್ನು ಮಾತನಾಡುವ ಜನರಿಗೆ ಹೋಲಿಸಿದರೆ (ಶೇ 78.05) ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳನ್ನು ಮಾತನಾಡುವ ಜನರ ಸಂಖ್ಯೆಯು (ಶೇ 19.64) ತೀರಾ ಕಡಿಮೆ ಪ್ರಮಾಣದ್ದು. ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಕನಿಷ್ಠ ಒಂದು ಭಾಷೆಯನ್ನಾದರೂ ತಮ್ಮ ಮಾತೃಭಾಷೆ ಎಂದು 23.78 ಕೋಟಿ ಜನರು 2011ರ ಗಣತಿಯಲ್ಲಿ ಹೇಳಿದ್ದರು.

ಕರ್ನಾಟಕದಲ್ಲಿ ನೆಲೆ ಕಂಡುಕೊಂಡಿರುವ ಇತರ ಭಾಷೆಗಳಿಗೂ ಆತಂಕ ತಪ್ಪಿದ್ದಲ್ಲ. ಮೊದಲೇ ಹೇಳಿದ ಹಾಗೆ, ಕರ್ನಾಟಕದಲ್ಲಿ ನೆಲೆಸಿರುವವರೆಲ್ಲರೂ ಕನ್ನಡವನ್ನೇ ಮಾತನಾಡುವುದಿಲ್ಲ. ಕರ್ನಾಟಕದಲ್ಲಿ ಭಾಷಾ ವೈವಿಧ್ಯದ ಕುರಿತ ಒಂದು ನೋಟ ಪಡೆದುಕೊಳ್ಳಬೇಕು ಎಂದಾದರೆ, 2001ರ ಗಣತಿಯ ಅಂಕಿ–ಅಂಶಗಳು ಒಳ್ಳೆಯ ಮಾಹಿತಿಗಳನ್ನು ಒದಗಿಸುತ್ತದೆ. ಆ ಗಣತಿಯ ಪ್ರಕಾರ, ಪ್ರತಿ 10,000 ನಿವಾಸಿಗಳಲ್ಲಿ 6,626 ಜನರು ಕನ್ನಡ ಮಾತನಾಡುವವರಿದ್ದರು. 1,054 ಜನರು ಉರ್ದು, 703 ಜನರು ತೆಲುಗು, 357 ಜನರು ತಮಿಳು, 360 ಜನರು ಮರಾಠಿ ಹಾಗೂ 250 ಜನರು ಹಿಂದಿ ಮಾತನಾಡುತ್ತಿದ್ದರು. 

ಇದೇ ಸಂಯೋಜನೆಯು 2011ರ ಗಣತಿಯ ಹೊತ್ತಿಗೆ ಬಹಳ ಬದಲಾಗಿ ಹೋಯಿತು. 2021ರಲ್ಲಿ ನಡೆಯಬೇಕಿದ್ದ ಗಣತಿಯು ಇದುವರೆಗೂ ನಡೆದಿಲ್ಲ. ಆದ್ದರಿಂದ, ಈ 10 ವರ್ಷಗಳಲ್ಲಿ ಮತ್ತೆಷ್ಟು ಬದಲಾವಣೆಗಳಾಗಿವೆ ಎಂದು ನಮಗೆ ತಿಳಿದಿಲ್ಲ. ಭಾರತ ಹಾಗೂ ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಜನರ ಸಂಖ್ಯೆಯಲ್ಲಿ ಈಗ ಏನಾಗಿದೆ ಎಂಬುದು ಗೊತ್ತಾಗಿಲ್ಲ. ಒಂದು ವಿಷಯವಂತೂ ಸ್ಪಷ್ಟವಾಗಿ ತೋರುತ್ತಿದೆ. ಹಿಂದಿ ಭಾಷೆಯ ಬೆಳವಣಿಗೆಯನ್ನು ನೋಡಿದರೆ, ಕನ್ನಡವಂತೂ ಆ ಪ್ರಮಾಣದಲ್ಲಿ ಬೆಳವಣಿಗೆ ಹೊಂದುತ್ತಿಲ್ಲ. ಕನ್ನಡವನ್ನು ಮಾತನಾಡುವ ಆ ಮೂಲಕ ಭಾಷೆಯನ್ನು ಬೆಳೆಸುವ ಕುರಿತು ಆಸಕ್ತಿ ಇರುವುದಕ್ಕಿಂತಲೂ ಇಂಗ್ಲಿಷ್‌ ಭಾಷೆಯನ್ನು ತಮ್ಮದಾಗಿಸಿಕೊಳ್ಳುವ ಆಸಕ್ತಿಯೇ ಯುವ ಪೀಳಿಗೆಯಲ್ಲಿ ಹೆಚ್ಚಾಗಿ ತೋರುತ್ತಿದೆ. 

ಕನ್ನಡ ಮಾತನಾಡುವ ಜನರು ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತಿರುವುದು ಕನ್ನಡ ಭಾಷೆಯ ಬೆಳವಣಿಗೆಯು ಕುಂಠಿತಗೊಂಡಿರುವುದಕ್ಕೆ ಒಂದು ಕಾರಣ. ಆದರೆ, ಈ ಪ್ರಕ್ರಿಯೆಯು ಹಿಂದಿ, ಬಾಂಗ್ಲಾ, ತೆಲುಗು ಹಾಗೂ ಮರಾಠಿ ಮಾತನಾಡುವ ರಾಜ್ಯಗಳಲ್ಲೂ ನಡೆಯುತ್ತಿದೆ. ಕನ್ನಡ ಭಾಷೆಯ ಸ್ಥಿತಿಗತಿಯನ್ನು ಭಾರತದ ಇತರ ಭಾಷೆಗಳ ಸ್ಥಿತಿಗತಿಗೆ ಹೋಲಿಸಿ ನೋಡಿದರೆ, ಕನ್ನಡ ಭಾಷೆಯ ಬೆಳೆವಣಿಗೆಗೆ ಕರ್ನಾಟಕವು ಹೆಚ್ಚು ಸೃಜನಶೀಲವಾದ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾದ ಜರೂರು ಇರುವುದು ತಿಳಿಯುತ್ತದೆ.

ಇಂಗ್ಲಿಷ್‌ ಅಥವಾ ಹಿಂದಿ ವಿರೋಧ ಎನ್ನುವ ಕೇವಲ ಘೋಷಣೆಗಳು ಕನ್ನಡ ಭಾಷಾ ಬೆಳವಣಿಗೆಗೆ ಪೂರಕವಾಗದು. ಕನ್ನಡ ಭಾಷೆಯ ಬೆಳವಣಿಗೆಗೆ ಎಂಥ ಸೃಜನಶೀಲ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅಂಥದ್ದೆ ಕ್ರಮಗಳನ್ನು ತುಳು, ದಖನಿ, ಕೊಂಕಣಿ ಹಾಗೂ ಕರ್ನಾಟಕದ ಇನ್ನಿತರ ಭಾಷೆಗಳ ಬೆಳವಣಿಗೆಗೂ ತೆಗೆದುಕೊಳ್ಳಬೇಕು. ಭಾಷೆಯ ಉಳಿವಿಗೆ ಬಹುಭಾಷಾ ಶಿಕ್ಷಣದ ವಿಧಾನವನ್ನು ಅನುಸರಿಸುವ ಕುರಿತು ಚಿಂತನೆ ನಡೆಸುವ ಕಾಲ ಸನ್ನಿಹಿತವಾಗಿದೆ. ಒಡಿಶಾ, ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯಗಳು ಇಂಥದ್ದೊಂದು ವಿಧಾನವನ್ನು ಅಳವಡಿಸಿಕೊಂಡಿವೆ. ನಾವೂ ಇದನ್ನು ಅಳವಡಿಸಿಕೊಳ್ಳಬಹುದು.

ಲೇಖಕ ಜಿ.ಎನ್ ದೇವಿ: ಅಧ್ಯಕ್ಷ, ದಿ ಪೀಪಲ್ಸ್‌ ಲಿಂಗ್ವಿಸ್ಟಿಕ್‌ ಸರ್ವೇ

ಜಿ.ಎನ್ ದೇವಿ

ಜಿ.ಎನ್ ದೇವಿ

––––––––––––

ಲೋಕಜ್ಞಾನಕ್ಕೆ ಕನ್ನಡ ಕಣಜವಾಗಲಿ

ಸದ್ಯ ಕರ್ನಾಟಕದ ಶೈಕ್ಷಣಿಕ ಪರಿಸರದಲ್ಲಿ ಕನ್ನಡ ವರ್ಸಸ್ ಇಂಗ್ಲಿಷ್ ಎಂಬ ಸನ್ನಿವೇಶ ಸೃಷ್ಟಿಯಾಗಿದೆ. ಕನ್ನಡ ಶಾಲೆಗಳಿಗೆ ಸೇರಬೇಕಾದ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರುತ್ತಿವೆ. ಅಲ್ಲದೆ ರಾಜ್ಯದ ಕನ್ನಡ ಶಾಲೆಗಳಲ್ಲಿ ಕನ್ನಡವನ್ನು ಬೋಧಿಸುತ್ತಿರುವ ವಿಧಾನದಲ್ಲಿಯೇ ಮೂಲಭೂತ ದೋಷ ಇದ್ದಂತಿದೆ. ಇಂದು ಕಲಿಯುತ್ತಿರುವ ಮಕ್ಕಳ ಕನ್ನಡದ ಭಾಷಿಕ ಕೌಶಲಗಳು ತುಂಬಾ ದುರ್ಬಲವಾಗಿವೆ. ಇದು ಶೈಕ್ಷಣಿಕ ಪರಿಸರದಲ್ಲಿ ಗಟ್ಟಿಗೊಳ್ಳಬೇಕಾದ ಕನ್ನಡದ ಬೇರುಗಳು ಟೊಳ್ಳಾಗಿರುವುದನ್ನು ಸೂಚಿಸುತ್ತಿದೆ. ಹಾಗಾಗಿ ಮೊದಲು ಮಕ್ಕಳ ಕನ್ನಡ ಕಲಿಕೆಯ ಗುಣಮಟ್ಟ ಹೆಚ್ಚಿಸಬೇಕು.

ನಂತರ ತರಗತಿಗಳಲ್ಲಿ ದ್ವಿಭಾಷಾ ಬೋಧನೆಯ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಇಂಗ್ಲಿಷ್ ಮತ್ತು ಕನ್ನಡಗಳ ನಡುವೆ ಇರುವ ತರತಮ ನೆಲೆಯನ್ನು ಬದಲಿಸಬೇಕು. ಅದಕ್ಕೆ ತಕ್ಕನಾದ ನುಡಿನೀತಿ ಮತ್ತು ಶಿಕ್ಷಣ ನೀತಿಗಳನ್ನು ರೂಪಿಸಬೇಕಿದೆ. ಕನ್ನಡವನ್ನು ಸಾಹಿತ್ಯ ಜ್ಞಾನದ ಭಾಷೆಯಾಗಿ ಮಾತ್ರ ನೋಡದೆ ಅದನ್ನು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಭಾಷೆಯಾಗಿ ಬೆಳೆಸಲು ಬೇಕಾದ ಯೋಜನೆಗಳನ್ನು ಸರ್ಕಾರ ಮತ್ತು ಜನರು ಹಮ್ಮಿಕೊಳ್ಳಬೇಕು.

ಈ ಹಿಂದೆ ನಮ್ಮ ನೆಲದ ಕುಶಲಕರ್ಮಿಗಳು ಕನ್ನಡವನ್ನು ಎಲ್ಲ ವಲಯಗಳಲ್ಲಿಯೂ ಬಳಸುತ್ತಿದ್ದರು. ಅದೇ ರೀತಿಯಲ್ಲಿ, ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಬದುಕಿನ ಎಲ್ಲ ವಿಷಯಗಳ ಅಭಿವ್ಯಕ್ತಿಗೂ ಕನ್ನಡ ಬಳಸಲು ಬೇಕಾದ ಪರಿಸರ ರೂಪಿಸಬೇಕು. ಶೈಕ್ಷಣಿಕ ಪರಿಸರದಲ್ಲಿ ಕನ್ನಡದ ಬೇರುಗಳನ್ನು ಗಟ್ಟಿಗೊಳಿಸದೆ, ಅದನ್ನು ಬದುಕಿನ ಭಾಗವಾಗಿಸದೆ, ಲೋಕಜ್ಞಾನದ ಕಣಜವಾಗಿಸದೆ ಮುಂದಿನ ದಶಕಗಳಲ್ಲಿ ಕನ್ನಡವನ್ನು ಸಮಗ್ರ ಮತ್ತು ಸದೃಢವಾಗಿ ಬೆಳೆಸಲು ಸಾಧ್ಯವಿಲ್ಲ.

–ರಂಗನಾಥ ಕಂಟನಕುಂಟೆ, ಸಹಾಯಕ ಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಬ್ಬಳ್ಳಿ

ರಂಗನಾಥ ಕಂಟನಕುಂಟೆ, ಸಹಾಯಕ ಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಬ್ಬಳ್ಳಿ

ರಂಗನಾಥ ಕಂಟನಕುಂಟೆ, ಸಹಾಯಕ ಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಬ್ಬಳ್ಳಿ

––––––––

ಕಾಲ–ದೇಶಗಳ ಅಗತ್ಯಕ್ಕೆ ಸಜ್ಜುಗೊಳ್ಳಲಿ

ನುಡಿಯ ಉಳಿವು ಎಂದರೆ ನಾವು ನಿರಂತರವಾಗಿ ಆಚರಿಸಿಕೊಂಡು ಬಂದಿರುವ ಶೋಷಣೆ, ದೌರ್ಜನ್ಯ, ಅಪಮಾನದ ನೆಲೆಗಳನ್ನೇ ಮುಂದುವರಿಸಿಕೊಂಡು ಹೋಗುವುದಲ್ಲ. ಕಾಲ-ದೇಶದ ಅಗತ್ಯಗಳಿಗೆ ನಮ್ಮ ನುಡಿಗಳನ್ನು ಸಜ್ಜುಗೊಳಿಸಿ, ಆಯಾ ನುಡಿಗಳನ್ನು ಬದುಕಿನ ರಹದಾರಿಗಳನ್ನಾಗಿ ರೂಪಿಸುವುದು ಮತ್ತು ಎಲ್ಲರನ್ನೂ ಒಳಗೊಳ್ಳುವ ಹಾಗೂ ಎಲ್ಲರ ಏಳ್ಗೆಗಾಗಿ, ಆಯಾ ನುಡಿಗಳಲ್ಲಿ ಅವಕಾಶಗಳಿರಬೇಕಾದ ಜರೂರಿದೆ. ಈ ವಿನ್ಯಾಸಗಳನ್ನು ಕೈಬಿಟ್ಟು ಕೇವಲ ನುಡಿಯನ್ನು ಉಳಿಸಬೇಕು ಎನ್ನುವುದಾದರೆ, ಎಲ್ಲ ಸಮೂಹಗಳ ಸರ್ವತೋಮುಖ ಬೆಳವಣಿಗೆಯ ಹಿತಾಸಕ್ತಿಗಿಂತ, ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಪಾಡುವ ಹುನ್ನಾರ ಮಾತ್ರವಿರುತ್ತದೆ.

ಆದ್ದರಿಂದ ಹೊಸಗಾಲದ ಆಧುನೀಕರಣ ಮತ್ತು ಪ್ರಮಾಣೀಕರಣ ಎನ್ನುವುದು ಎಲ್ಲರ ನುಡಿಯನ್ನು ರೂಪಿಸುವ ಹಾಗೂ ಆ ಮೂಲಕ ತಮ್ಮ ತಮ್ಮ ಬದುಕುಗಳನ್ನು ಕಟ್ಟಿಕೊಳ್ಳುವ ವಿನ್ಯಾಸಗಳು ಕಂಡರಿಯುವ ಮಾದರಿಗಳಾಗಿವೆ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಉದ್ಯೋಗದ ಪ್ರಶ್ನೆಗಳಿಗೆ ಪರಿಹಾರಗಳನ್ನು ನಾವು ಕಾಣುತ್ತೇವೆ. ಅಷ್ಟೆಯಲ್ಲದೇ, ನಮ್ಮ ರಾಜಕೀಯ ಪ್ರಾತಿನಿಧ್ಯ ಹಾಗೂ ಸಾಮಾಜಿಕ ಸಹಬಾಳ್ವೆಯ ತತ್ವಗಳು ಸಹಜ ರೂಢಿಗಳಾಗಿ ಚಾಲ್ತಿಗೆ ಬರುತ್ತವೆ. ಈ ಚರ್ಚೆಗಳು ನಮಗೆ ಕೇವಲ ಆದರ್ಶದ ನೆಲೆಗಳಾಗಿ ಗೋಚರಿಸಿದರೆ, ನಾವು ಯಾವತ್ತೂ ಏಳ್ಗೆಯನ್ನು ಪಡೆಯದ ಶಾಪಕ್ಕೆ ಒಳಗಾಗಿದ್ದೇವೆ ಎಂದೋ ಇಲ್ಲವೇ ಅಂತಹದೊಂದು ಶಪಥವನ್ನು ನಾವೇ ಮಾಡಿದ್ದೇವೆ ಎಂದರ್ಥ. ಇದಕ್ಕೆ ಬೇರೆ ಸಬೂಬನ್ನು ಹೇಳಲು ಸಾಧ್ಯವಿಲ್ಲ.

–ಮೇಟಿ ಮಲ್ಲಿಕಾರ್ಜುನ, ಸಹಾಯಕ ಪ್ರಾಧ್ಯಾಪಕ, ಸಹ್ಯಾದ್ರಿ ವಿಶ್ವವಿದ್ಯಾಲಯ ಕಾಲೇಜು, ಶಿವಮೊಗ್ಗ

ಮೇಟಿ ಮಲ್ಲಿಕಾರ್ಜುನ, ಸಹಾಯಕ ಪ್ರಾಧ್ಯಾಪಕ, ಸಹ್ಯಾದ್ರಿ ವಿಶ್ವವಿದ್ಯಾಲಯ ಕಾಲೇಜು, ಶಿವಮೊಗ್ಗ

ಮೇಟಿ ಮಲ್ಲಿಕಾರ್ಜುನ, ಸಹಾಯಕ ಪ್ರಾಧ್ಯಾಪಕ, ಸಹ್ಯಾದ್ರಿ ವಿಶ್ವವಿದ್ಯಾಲಯ ಕಾಲೇಜು, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT