ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ನೀರಿನ ಲೋಟದಲ್ಲಿ ತಂತ್ರಜ್ಞಾನದ ಅಲೆ!

ಶುದ್ಧ ಕುಡಿಯುವ ನೀರು: ತಾಂತ್ರಿಕ ಪರಿಹಾರದ ಜೊತೆ ಬೇಕು ಸಾಮಾಜಿಕ ಜವಾಬ್ದಾರಿ
Published 8 ಜನವರಿ 2024, 19:28 IST
Last Updated 8 ಜನವರಿ 2024, 19:28 IST
ಅಕ್ಷರ ಗಾತ್ರ

ಬೇಸಿಗೆ ಕಾಲಿಡುವ ಮುನ್ನವೇ ತಾಪಮಾನ ಬಿರುಸಾಗಿ ಏರುತ್ತಿದೆ. ಬರದ ಛಾಯೆ ದಟ್ಟವಾಗುತ್ತ, ನೀರಿನ ಕೊರತೆ ಎಲ್ಲೆಡೆ ಕಾಡುತ್ತಿದೆ. ಒಬ್ಬ ವ್ಯಕ್ತಿಗೆ ಪ್ರತಿದಿನ ಕನಿಷ್ಠ ಐವತ್ತೈದು ಲೀಟರ್ ನೀರು ಒದಗಿಸಬೇಕೆಂಬ
ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಅನುಷ್ಠಾನಕ್ಕೆ ತರುತ್ತಿರುವ ‘ಜಲಜೀವನ ಮಿಷನ್’ ಯೋಜನೆಯ ಅಗತ್ಯ ಅರಿವಾಗುವ ಗಳಿಗೆಯಿದು.

ನೀರು ಒದಗಿಸಿದ ನಂತರವೂ ಎದುರಾಗುವ ಸವಾಲೆಂದರೆ, ಅದರ ಶುದ್ಧತೆ ಖಚಿತಪಡಿಸಿ
ಕೊಳ್ಳುವುದು. ಬಹುಪಾಲು ಹಳ್ಳಿ, ಪಟ್ಟಣ ಹಾಗೂ ನಗರಗಳ ಕುಟುಂಬಗಳಿಗೆ ನಿರೀಕ್ಷೆಯ ಮಟ್ಟದ ಶುದ್ಧ ನೀರು ಈಗಲೂ ದೊರಕುತ್ತಿಲ್ಲ. ಇದಕ್ಕೆ ಪ್ರಮುಖವಾಗಿ ಎರಡು ಕಾರಣಗಳು. ಮೊದಲಿನದು, ನೀರು ಒದಗಿಸುವ ಬಾವಿ, ಕೆರೆ, ಹೊಳೆ, ನದಿ ಹಾಗೂ ಕೊಳವೆಬಾವಿಯಂಥ ಜಲಮೂಲಗಳ ಮಾಲಿನ್ಯ. ಅಲ್ಲೆಲ್ಲ ಸಾವಯವ ತ್ಯಾಜ್ಯ ಗಳು ಹಾಗೂ ಲವಣಾಂಶಗಳು ಮಿತಿಮೀರಿ ಶೇಖರವಾಗುತ್ತಿವೆ. ಅವು, ರೋಗಕಾರಕ ವೈರಸ್, ಬ್ಯಾಕ್ಟೀರಿಯಾ ಹಾಗೂ ಕೀಟಗಳ ಅಡಗುತಾಣಗಳಾಗುತ್ತಿವೆ. ಹಲವೆಡೆ ಹೆಪ್ಟಾಕ್ಲೋರ್, ಎಂಡೊಸಲ್ಫಾನ್, ಅಲ್ಡ್ರಿನ್, ಡಿಡಿಟಿ, ಎಂಡ್ರಿನ್ ತರಹದ, ದೀರ್ಘಕಾಲ ನೀರಿನಲ್ಲೇ ಉಳಿಯಬಲ್ಲ ಅಪಾಯಕಾರಿ ಕೀಟನಾಶಕಗಳ ಅಂಶ ಕಂಡುಬಂದದ್ದೂ ಇದೆ. ಹೀಗಾಗಿ, ಜಲಮೂಲಗಳ ಶುದ್ಧತೆ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಜಲಾನಯನ ಅಭಿವೃದ್ಧಿ ತತ್ವದಡಿ ಸ್ಥಳೀಯ ನಿವಾಸಿಗಳು ಹಾಗೂ ಸರ್ಕಾರ ಜೊತೆಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಇನ್ನೊಂದು ಕಾರಣ, ಪೂರೈಕೆ ವ್ಯವಸ್ಥೆಯ ದೋಷಗಳು. ಜಲಮೂಲದಿಂದ ಮೇಲಕ್ಕೆತ್ತಿ, ಕೊಳವೆ ಮಾರ್ಗಗಳಲ್ಲಿ ಸಾಗಿಸಿ, ಜಲಾಗಾರಗಳಲ್ಲಿ ಸಂಗ್ರಹಿಸಿ, ಮನೆಮನೆಗೆ ವಿತರಿಸುವ ಹಂತಗಳಲ್ಲೆಲ್ಲ ಅಧ್ವಾನಗಳ ಸರಮಾಲೆಯೇ ಇದೆ. ಮಾರ್ಗದಲ್ಲಿ ಸೋರಿಕೆ, ಚರಂಡಿ ನೀರಿನ ಮಿಶ್ರಣ, ಪ್ರಾಥಮಿಕ ಶುದ್ಧೀಕರಣ ಘಟಕವೇ ಕೆಟ್ಟುನಿಂತಿರುವುದು, ಅಗತ್ಯವಿದ್ದಷ್ಟು ಕ್ಲೋರಿನ್, ಅಯೋ ಡಿನ್, ಪೊಟಾಶಿಯಂ ಪರಮಾಂಗನೇಟ್ ತರಹದ ಶುದ್ಧಿಕಾರಕಗಳ ಕೊರತೆ...! ಆಡಳಿತದ ಭ್ರಷ್ಟಾಚಾರವೇ ಇದಕ್ಕೆ ಕಾರಣ ತಾನೇ? ಈ ವಿಷಮಸ್ಥಿತಿಯಿಂದ ಹೊರಬರಬೇಕಿದೆ.

ಇನ್ನು, ಲಭ್ಯವಾಗುವ ನೀರಿನ ಗುಣಮಟ್ಟವಾದರೂ ಎಂಥದ್ದು? ಜನವಸತಿಗಳ ಮಾಲಿನ್ಯ, ಕೈಗಾರಿಕಾ ತ್ಯಾಜ್ಯ, ಕೃಷಿಭೂಮಿಯ ಕ್ರಿಮಿನಾಶಕ ಹಾಗೂ ಕಳೆನಾಶಕ ಇವೆಲ್ಲ ಸೇರಿ ಜಲಮೂಲಗಳೆಲ್ಲ ಮಲಿನವಾಗುತ್ತಿವೆ. ಬಣ್ಣ, ವಾಸನೆ, ರುಚಿಯಲ್ಲಿ ಪ್ರಕಟವಾಗದೆಯೂ ನೀರು ಅಪಾಯಕಾರಿಯಾಗಬಲ್ಲದು. ಹೀಗಾಗಿ, ಕುಡಿಯುವ ನೀರು ಬಳಸುವ ಮೊದಲು ಹೆಚ್ಚಿನ ಶುದ್ಧೀಕರಣ ಕೈಗೊಳ್ಳುವುದು ಅನಿವಾರ್ಯ. ಶುದ್ಧಬಟ್ಟೆಯಲ್ಲಿ ನೀರನ್ನು ಸೋಸಿ, ಕುದಿಸಿ ಕುಡಿಯುವುದು ಎಲ್ಲರೂ ಬಲ್ಲ ಪಾರಂಪರಿಕ ವಿಧಾನ. ಸೋಸುವಿಕೆಯು ಕಸ, ಕಡ್ಡಿ, ಕೊಳೆಯಂಥ ಸಾವಯವ ವಸ್ತು ಹಾಗೂ ಲವಣಾಂಶ ಗಳನ್ನು ಬೇರ್ಪಡಿಸಿದರೆ, ನೀರನ್ನು ಕುದಿಸಿದಾಗ ರೋಗಕಾರಕ ಸೂಕ್ಷ್ಮಾಣುಜೀವಿಗಳು ಸಾಯಬಲ್ಲವು. ಈ ಸರಳಕ್ರಮಗಳನ್ನು ಮನೆ, ಬಿಸಿಯೂಟ ನೀಡುವ ಶಾಲೆ-ಕಾಲೇಜು, ಸಾಮೂಹಿಕ ಊಟ ನೀಡುವ ಸ್ಥಳಗಳಲ್ಲಿ ಅಗತ್ಯವಾಗಿ ಪಾಲಿಸಬೇಕಿದೆ.

ಆದರೆ, ಈ ಸರಳ ವಿಧಾನಗಳೂ ಸಾಧ್ಯವಾಗದ ವೇಗದ ಜೀವನಕ್ರಮ ಇಂದಿನದಾಗುತ್ತಿದೆ. ಹೀಗಾಗಿಯೇ, ಹಲವಾರು ಬಗೆಯ ಚಿಕ್ಕ ಶುದ್ಧೀಕರಣ ಘಟಕಗಳು ಮಾರುಕಟ್ಟೆಯಲ್ಲಿ ಇಂದು ಕಾಲಿಟ್ಟಿವೆ. ಕಾರ್ಯವಿಧಾನದ ತತ್ವಗಳ ಆಧಾರದಲ್ಲಿ, ಅವನ್ನು ಸ್ಥೂಲವಾಗಿ ನಾಲ್ಕು ಬಗೆಯಲ್ಲಿ ವಿಂಗಡಿಸಬಹುದು.

ಮೊದಲಿನದು, ಸೋಸುವಿಕೆ ತತ್ವದ ‘ನೀರಿನ ಫಿಲ್ಟರು’ಗಳು. ಇವುಗಳಲ್ಲಿ ಸೋಸುಕಡ್ಡಿಗಳು (ಕ್ಯಾಂಡಲ್) ಇರುತ್ತವೆ. ಮರದಪುಡಿ, ಮರಳು, ಸಿರಾಮಿಕ್, ಶುದ್ಧಸಿಲಿಕಾದಂತಹವುಗಳಿಂದ ಮಾಡಿರುವ ಈ ಸೋಸು ಕಡ್ಡಿಗಳ ಮೂಲಕ ನೀರು ಜಾರಿಹೋಗುವಾಗ, ಮಾಲಿನ್ಯಕಾರಕ ಅಂಶಗಳೆಲ್ಲ ಅವಕ್ಕೆ ಅಂಟಿಕೊಂಡು ಶುದ್ಧನೀರು ಪ್ರತ್ಯೇಕವಾಗುತ್ತದೆ. ಕೆರೆ-ಬಾವಿಗಳ ನೀರು ಅಥವಾ ನಗರ-ಪಟ್ಟಣಗಳು ಒದಗಿಸುವ ಕೊಳವೆ ನೀರನ್ನು ಇವುಗಳಲ್ಲಿ ಶುದ್ಧೀಕರಿಸಬಹುದು. ಹಾಗೆ ಸೋಸಿದ ನೀರನ್ನು ಕುದಿಸಿದರೆ, ಸೂಕ್ಷ್ಮಾಣುಜೀವಿ
ಗಳೂ ಸಾಯುತ್ತವೆ. ಇತ್ತೀಚೆಗೆ ಅಭಿವೃದ್ಧಿಗೊಳಿಸಿರುವ, ಪುನಶ್ಚೇತನಗೊಳಿಸಿದ ಶುದ್ಧ ಇಂಗಾಲದ ನುಣುಪಾದ ಪುಡಿಯ ಸೋಸುಕಡ್ಡಿಗಳಂತೂ ಮತ್ತಷ್ಟು ಪರಿಣಾಮ ಕಾರಿಯಾಗಿವೆ. ನೀರಿನಲ್ಲಿರುವ ಅನವಶ್ಯಕ ಅನಿಲ ಹಾಗೂ ದುರ್ವಾಸನೆಯನ್ನೂ ಅವು ದೂರಮಾಡಬಲ್ಲವು. ಕಡಿಮೆ ವೆಚ್ಚದ ಹಾಗೂ ವಿದ್ಯುತ್ ಅವಶ್ಯಕತೆ ಇರದ ಈ ಘಟಕಗಳ ಬಳಕೆ ಇಂದು ವ್ಯಾಪಕವಾಗಿದ್ದರೂ, ಬಹುಪಾಲು ವನವಾಸಿಗಳಿಗೆ ಹಾಗೂ ಕಡುಬಡ ಕುಟುಂಬಗಳಿಗೆ ಅವಿನ್ನೂ ತಲುಪಬೇಕಿದೆ.

ಎರಡನೇ ಬಗೆಯದು, ಅಲ್ಪಪ್ರಮಾಣದ ವಿದ್ಯುತ್ ಬಳಸುವ ‘ಅಯಾನ್ ವಿನಿಮಯ’ ವಿಧಾನ. ವಿದ್ಯುತ್ ಸಂಪರ್ಕವಿರುವ ಇಂಗಾಲದ ಸಂಯುಕ್ತಗಳ ತೆಳುಪದರದ ಮೇಲೆ ನೀರು ಹಾಯುವಾಗ, ಅದು ನೀರಿನಲ್ಲಿರುವ ಮ್ಯಾಗ್ನೀಶಿಯಂ, ಕ್ಯಾಲ್ಸಿಯಂನಂತಹ ಅಂಶಗಳನ್ನು ಹೀರಿಕೊಂಡು, ಜಲಜನಕವನ್ನು ಬಿಟ್ಟುಕೊಡುತ್ತದೆ. ಲವಣಾಂಶ ಹಾಗೂ ಇಂಗಾಲದ ಸಂಯುಕ್ತಗಳೆಲ್ಲ ಬೇರ್ಪಟ್ಟು, ಗಡಸುನೀರು ಮೆದುವಾಗು ತ್ತದೆ. ಕೊಳವೆಬಾವಿ ನೀರು ಶುದ್ಧಿ ಮಾಡಲು ಇದು ಪರಿಣಾಮಕಾರಿ. ಸೋಸುವಿಕೆ ಮತ್ತು ಅಯಾನ್ ವಿನಿ ಮಯ- ಈ ಎರಡೂ ತತ್ವ ಆಧರಿಸಿದ ‘ಹೈಬ್ರಿಡ್’ ಘಟಕ ಗಳೂ ಈಗ ಲಭ್ಯವಿದ್ದು, ಅವಕ್ಕೆ ಹೆಚ್ಚಿನ ಕ್ಷಮತೆಯಿದೆ.

ಮೂರನೇ ಬಗೆಯದೆಂದರೆ, ‘ಅತಿನೇರಳೆ ಕಿರಣ’ ಬಳಸುವ ‘ಫಿಲ್ಟರ್’ಗಳು. ಸೂಕ್ಷ್ಮಾಣುಜೀವಿಗಳೂ ಇದರಲ್ಲಿ ಸಾಯಬಲ್ಲವು. ಬೇಸಿಗೆಯಲ್ಲಿ ಹರಿಯುವ ನೀರಿಲ್ಲದೆ ಜಲಮೂಲಗಳು ಪಾಚಿಕಟ್ಟಿ, ಹಸಿರುಬಣ್ಣಕ್ಕೆ ತಿರುಗಿ ದುರ್ವಾಸನೆ ಬೀರುತ್ತಿರುತ್ತವೆ ತಾನೆ? ಅಂಥ ನೀರನ್ನು ಸೋಸಿ-ಕುದಿಸಿದರೂ, ಸೂಕ್ಷ್ಮಾಣುಜೀವಿಗಳು ಉಳಿದುಬಿಡಬಲ್ಲವು. ಭೇದಿ, ಟೈಫಾಯಿಡ್, ಕಾಲರಾ ಬರಲು ಹಾಗೂ ಜಂತುಹುಳುವಿನಂತಹವು ಹರಡಲು ಇದೇ ಕಾರಣ. ನೀರಿನಲ್ಲಿರುವ ಅಂತಹ ವೈರಸ್, ಬ್ಯಾಕ್ಟೀರಿಯಾ, ಶಿಲೀಂಧ್ರ, ಏಕಕೋಶ ಸಸ್ಯ, ಹುಳದಂತಹವುಗಳನ್ನು ನಾಶಪಡಿಸಲು ಇದು ಪರಿಣಾಮಕಾರಿ ತಂತ್ರ.

ಅಂತಿಮವಾಗಿ, ಈ ಸೋಸುವಿಕೆಗೆಂದೇ ಅಭಿವೃದ್ಧಿಪಡಿಸುವ ವಿಶಿಷ್ಟ ‘ಪೊರೆ’ಗಳನ್ನು ಬಳಸುವ ‘ರಿವರ್ಸ್ ಆಸ್ಮಾಸಿಸ್’ (ಆರ್.ಒ.) ತಂತ್ರ. ಜೀವಿಗಳ ಜೀವಕೋಶಗಳಲ್ಲಿ ಅವಶ್ಯಕ ಅಂಶಗಳನ್ನು ಮಾತ್ರ ಒಳಸೇರಿಸಿ, ಅನಗತ್ಯ ವಾದದ್ದನ್ನು ಹೊರಗಿಡುವ ‘ಜೀವಪೊರೆ’ಗಳಿರುತ್ತವೆ. ಆ ತತ್ವ ಆಧರಿಸಿ, ಈ ‘ಕೃತಕ ಪೊರೆ’ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕಡಲಿನ ಉಪ್ಪುನೀರೂ ಸೇರಿದಂತೆ ಯಾವುದೇ ನೀರನ್ನು ಈ ತಂತ್ರದಲ್ಲಿ ಕುಡಿಯಲು ಯೋಗ್ಯವಾಗಿಸಬಹುದು. ಸಲ್ಫೇಟ್, ಫಾಸ್ಫೇಟ್, ನೈಟ್ರೇಟ್, ಫ್ಲೋರೈಡ್, ಕ್ರಿಮಿನಾಶಕ, ಕಳೆನಾಶಕ ಹಾಗೂ ಭಾರಲೋಹಗಳಾದ ಸೀಸ, ಪಾದರಸ, ಆರ್ಸೆನಿಕ್ ಸೇರಿದಂತೆ ಅಪಾಯಕಾರಿ ರಾಸಾಯನಿಕವನ್ನೂ ಬೇರ್ಪಡಿಸಬಹುದು. ಉಳಿದೆಲ್ಲ ತಂತ್ರಜ್ಞಾನಗಳಿಗಿಂತ ಇದು ಹೆಚ್ಚು ಪರಿಣಾಮಕಾರಿ.

ಆದರೆ, ಈ ತಂತ್ರಜ್ಞಾನದಲ್ಲಿ ಒಂದು ನ್ಯೂನತೆಯಿದೆ. ದೇಹಕ್ಕೆ ಅಗತ್ಯವಿರುವ ಲವಣಗಳ ಕನಿಷ್ಠ ಪ್ರಮಾಣವೂ ಇಲ್ಲದಂತೆ ಈ ಯಂತ್ರಗಳು ನೀರನ್ನು ಸೋಸಿಬಿಡುತ್ತವೆ! ಅಂಥ ನೀರನ್ನೇ ದೀರ್ಘಕಾಲ ಕುಡಿದರೆ ಕ್ಯಾಲ್ಸಿಯಂ, ಮ್ಯಾಗ್ನೀಶಿಯಂ, ಝಿಂಕ್‌ನಂತಹವುಗಳ ಕೊರತೆಯಾಗಿ, ರಕ್ತದೊತ್ತಡ, ಹೃದಯಕಾಯಿಲೆ, ಮೂತ್ರಕೋಶದಂತಹ ಸಮಸ್ಯೆಗಳು ಹೆಚ್ಚಾಗಬಹುದು. ಈ ಅಪಾಯವರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಗೃಹಬಳಕೆಗೆ ಈ ಶುದ್ಧೀಕರಣ ಯಂತ್ರಗಳನ್ನು 2020ರಲ್ಲೊಮ್ಮೆ ನಿಷೇಧಿಸಿತ್ತು ಸಹ! ಒಂದು ಲೀಟರ್‌ ನೀರಿನಲ್ಲಿ 300- 500 ಮಿ.ಗ್ರಾಂ. ಲವಣಾಂಶ ಕಾಯ್ದುಕೊಳ್ಳುವ ತಂತ್ರಜ್ಞಾನ ಇರಬೇಕು ಎಂಬ ಸುಪ್ರೀಂ ಕೋರ್ಟ್‌ನ ಷರತ್ತಿನೊಂದಿಗೆ, ‘ಪರಿಷ್ಕೃತ ಆರ್.ಒ.’ ಈಗ ಪುನಃ ಮಾರುಕಟ್ಟೆ ಪ್ರವೇಶಿಸಿದೆ.

ಕುಡಿಯುವ ನೀರೂ ವಾಣಿಜ್ಯೋದ್ಯಮವಾಗಿರುವಾಗ, ನವೀನ ತಂತ್ರಜ್ಞಾನಗಳು ಬರುತ್ತಲೇ ಇರುತ್ತವೆ. ಇಂಥ ಸಂದರ್ಭದಲ್ಲಿ, ಜನಸಾಮಾನ್ಯರಿಗೆ ಶುದ್ಧನೀರು ಹಾಗೂ ಸೂಕ್ತ ಶುದ್ಧೀಕರಣ ತಂತ್ರಜ್ಞಾನ ಕೈಗೆಟಕುವಂತೆ ಮಾಡುವಲ್ಲಿ ಸರ್ಕಾರದ ಹೊಣೆಯಿದೆ. ಕರ್ನಾಟಕ ಸರ್ಕಾರದ 2022ರ ಜಲನೀತಿಯಲ್ಲೂ ಈ ಆಶಯವಿದೆ.

ಬೇಸಿಗೆ-ಬರದಲ್ಲಷ್ಟೇ ‘ಜಲ-ಜಾಗೃತಿ’ಯಾದರೆ ಸಾಲದು! ನೀರಿನ ಲೋಟ ತುಂಬಿಸುವ ನೈಸರ್ಗಿಕ ಜಲ
ಚಕ್ರವನ್ನು ಕಾಪಾಡುವ ಹೊಣೆಯನ್ನು ಸರ್ಕಾರ ಹಾಗೂ ಸಮಾಜ ಸದಾ ನಿರ್ವಹಿಸಬೇಕು.

ಕೇಶವ ಕೊರ್ಸೆ

ಕೇಶವ ಕೊರ್ಸೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT