ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ತೆರಿಗೆ ಹಂಚಿಕೆ ಮತ್ತು ಒಕ್ಕೂಟ ವ್ಯವಸ್ಥೆ

ರಾಜ್ಯಗಳಿಗೆ ತೆರಿಗೆ ವರಮಾನದ ಹಂಚಿಕೆಯಲ್ಲಿ ಚಾರಿತ್ರಿಕವಾಗಿ ಆಗಿರುವ ಅನ್ಯಾಯ ಸರಿದೂಗಿಸಬೇಕಿದೆ
Published 17 ಏಪ್ರಿಲ್ 2024, 20:24 IST
Last Updated 17 ಏಪ್ರಿಲ್ 2024, 20:24 IST
ಅಕ್ಷರ ಗಾತ್ರ

ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ನಾಯಕ ಎನ್‌.ಟಿ.ರಾಮರಾವ್‌ ಬಹಳ ಹಿಂದೆಯೇ ‘ಭಾರತವನ್ನು ಆಳುತ್ತಿರುವುದೇ ರಾಜ್ಯಗಳು. ಕೇಂದ್ರ ಬರೀ ಒಂದು ಪರಿಕಲ್ಪನೆ’ ಎಂದಿದ್ದರು. ಹಲವು ವಿಷಯಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಘರ್ಷಣೆಗಳು ನಡೆಯುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ, ಕೇಂದ್ರದಲ್ಲಿ ಸಂಗ್ರಹವಾದ ತೆರಿಗೆಯ ಹಣವನ್ನು ರಾಜ್ಯಗಳಿಗೆ ಹಂಚುವ ವಿಷಯದಲ್ಲಿ ವಿವಾದ ತೀವ್ರವಾಗಿದೆ.

ಕೇಂದ್ರಕ್ಕೆ ತೆರಿಗೆಯನ್ನು ಸಂಗ್ರಹಿಸುವುದಕ್ಕೆ ಹೆಚ್ಚು ಅವಕಾಶ ಇರುತ್ತದೆ. ಆದರೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಜವಾಬ್ದಾರಿ ರಾಜ್ಯಗಳಿಗೆ ಹೆಚ್ಚಿಗೆ ಇರುತ್ತದೆ. ಈ ಕಾರಣದಿಂದಾಗಿ ಕೇಂದ್ರದಿಂದ ರಾಜ್ಯಗಳಿಗೆ ಹಾಗೂ ರಾಜ್ಯಗಳ ನಡುವೆ ಸಂಪನ್ಮೂಲ ನ್ಯಾಯಯುತವಾಗಿ ಹಂಚಿಕೆಯಾಗಬೇಕೆನ್ನುವ ಉದ್ದೇಶದಿಂದ ಹಣಕಾಸು ಆಯೋಗವನ್ನು ನೇಮಿಸಲು ಸಂವಿಧಾನದಲ್ಲೇ ಅವಕಾಶವನ್ನು ಮಾಡಿಕೊಡಲಾಗಿದೆ.

ಕೇಂದ್ರವು ಸಂಗ್ರಹಿಸಿದ ಒಟ್ಟು ತೆರಿಗೆಯಲ್ಲಿ ರಾಜ್ಯಗಳಿಗೆ ಹಂಚುವುದಕ್ಕಾಗಿಯೇ ನಿರ್ದಿಷ್ಟ ಮೊತ್ತವನ್ನು ಮೀಸಲಿಡಲಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಜವಾಬ್ದಾರಿ ಹೆಚ್ಚುತ್ತಿರುವುದರಿಂದ ವಿವಿಧ ಹಣಕಾಸು ಆಯೋಗಗಳು ರಾಜ್ಯಗಳ ಪಾಲನ್ನು ಕ್ರಮೇಣ ಹೆಚ್ಚಿಸುತ್ತಾ ಬಂದಿವೆ.

ವೈ.ವಿ.ರೆಡ್ಡಿ ಅವರು ಅಧ್ಯಕ್ಷರಾಗಿದ್ದ 14ನೇ ಹಣಕಾಸು ಆಯೋಗವು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ ದೊಡ್ಡ ಹೆಜ್ಜೆ ಇಟ್ಟಿತ್ತು. ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳು ಒಂದು ಮತ್ತೊಂದರ ಸ್ವಾಯತ್ತತೆಯನ್ನು ಅತಿಕ್ರಮಿಸದಂತೆ ಎಚ್ಚರ ವಹಿಸಿತ್ತು. ರಾಜ್ಯಗಳನ್ನು ಬಲಗೊಳಿಸುವ ದೃಷ್ಟಿಯಿಂದ ರಾಜ್ಯಗಳ ತೆರಿಗೆ ಪಾಲನ್ನು ಶೇಕಡ 32ರಿಂದ ಶೇ 42ಕ್ಕೆ ಏರಿಸಿತು. ರಾಜ್ಯಗಳಿಗೆ ಯಾವುದೇ ಷರತ್ತುಗಳಿಲ್ಲದೆ ಅನುದಾನವನ್ನು ನೀಡಿ ತಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅವಕಾಶ ತಗ್ಗಿಸಿ, ರಾಜ್ಯಗಳ ವ್ಯವಹಾರಗಳಲ್ಲಿ ಕೇಂದ್ರದ ಹಸ್ತಕ್ಷೇಪವನ್ನು ಮಿತಿಗೊಳಿಸಲು ಪ್ರಯತ್ನಿಸಿತ್ತು.

ಆಯೋಗವು ವರದಿಯನ್ನು ಸಲ್ಲಿಸಿತು. ಆದರೆ ಆಯೋಗದ ಶಿಫಾರಸುಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಥ್ಯವಾಗಲಿಲ್ಲ. ಕೇಂದ್ರೀಕರಣವು ಅವರ ಯೋಜನೆಯಾಗಿತ್ತು. ರಾಜ್ಯಗಳ ತೆರಿಗೆ ಪಾಲನ್ನು ಇಳಿಸಲು ಪ್ರಯತ್ನಿಸಿದರು. ಆದರೆ ರೆಡ್ಡಿಯವರು ಒಪ್ಪಲಿಲ್ಲ. ಆಯೋಗದ ಶಿಫಾರಸನ್ನು ಒಪ್ಪಿಕೊಳ್ಳುವುದು ಮೋದಿಯವರಿಗೆ ಅನಿವಾರ್ಯವಾಯಿತು.

ತಮ್ಮ ಉದ್ದೇಶವನ್ನು ಸಾಧಿಸುವುದಕ್ಕೆ ಬೇರೆ ದಾರಿ ಹಿಡಿದರು. ತೆರಿಗೆಯನ್ನು ಏರಿಸುವ ಬದಲು ಸೆಸ್ ಮತ್ತು ಸರ್‌ಚಾರ್ಜ್‌ ಅನ್ನು ಏರಿಸತೊಡಗಿದರು. ಸೆಸ್ ಹಾಗೂ ಸರ್‌ಚಾರ್ಜ್‌ ಅನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾಗಿಲ್ಲ. 2017- 18ರಿಂದ 2023– 24ರವರೆಗೆ ಸಂಗ್ರಹವಾದ ₹ 27,66,588 ಕೋಟಿಯಷ್ಟು ಸೆಸ್ ಹಾಗೂ ಸರ್‌ಚಾರ್ಜ್ ಅನ್ನು ರಾಜ್ಯಗಳೊಂದಿಗೆ ಹಂಚಿಕೊಂಡಿದ್ದರೆ ಕರ್ನಾಟಕವೊಂದಕ್ಕೇ ₹ 55,000 ಕೋಟಿ ಬರುತ್ತಿತ್ತು. ಕೊನೆಗೂ ರಾಜ್ಯಗಳ ಪಾಲನ್ನು ಶೇ 34ಕ್ಕೆ ಸೀಮಿತಗೊಳಿಸುವಲ್ಲಿ ಕೇಂದ್ರ ಯಶಸ್ವಿಯಾಯಿತು. ಸಾಲದು ಎಂಬಂತೆ ಬಜೆಟ್ಟಿನಲ್ಲೂ ರಾಜ್ಯಗಳಿಗೆ ನೀಡಬೇಕಾಗಿದ್ದ ಹಣದಲ್ಲಿ ಕಡಿತ ಮಾಡಲಾಯಿತು. ಹಣಕಾಸು ಆಯೋಗದ ಉದ್ದೇಶ ವಿಫಲವಾಯಿತು.

15ನೇ ಹಣಕಾಸು ಆಯೋಗವನ್ನು ನೇಮಿಸುವಾಗ ಕೇಂದ್ರ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಯಿತು. ಆಯೋಗಕ್ಕೆ ನೀಡುವ ಉಲ್ಲೇಖದಲ್ಲೇ (ಟರ್ಮ್ಸ್ ಆಫ್ ರೆಫರೆನ್ಸ್) ಕೇಂದ್ರೀಕರಣದ ಪ್ರಕ್ರಿಯೆ ಪ್ರಾರಂಭವಾಗಿಬಿಟ್ಟಿತು. 14ನೇ ಆಯೋಗವು ತೆರಿಗೆಯಲ್ಲಿ ರಾಜ್ಯಗಳಿಗೆ ನೀಡಿದ್ದ ಶೇ 42ರಷ್ಟು ಪಾಲಿನ ಶಿಫಾರಸನ್ನು ಮರುಪರಿಶೀಲಿಸಲು ಸೂಚಿಸಲಾಗಿತ್ತು. ರಾಜ್ಯಗಳು ಜಾರಿಗೊಳಿಸುವ ಜನಪ್ರಿಯ ಕಾರ್ಯಕ್ರಮಗಳನ್ನು ನಿಯಂತ್ರಿಸುವ ದಿಸೆಯಲ್ಲಿ ಯೋಚಿಸಲು ಕೇಳಲಾಗಿತ್ತು. ರಾಜ್ಯಗಳಿಗೆ ತೆರಿಗೆ ವರಮಾನದ ಹಂಚಿಕೆ ಮಾಡುವಾಗ ಕೇಂದ್ರದ ಯೋಜನೆಗಳನ್ನು ರಾಜ್ಯಗಳು ಹೇಗೆ ಜಾರಿಗೊಳಿಸಿವೆ ಎಂಬುದನ್ನೂ ಗಮನಿಸಬೇಕೆಂದು ಸೂಚಿಸಲಾಯಿತು. ಲೆಕ್ಕಾಚಾರಕ್ಕೆ 2011ರ ಜನಗಣತಿಯ ಜನಸಂಖ್ಯೆಯನ್ನು ಪರಿಗಣಿಸುವಂತೆ ಸೂಚಿಸಲಾಯಿತು. ರಕ್ಷಣಾ ವೆಚ್ಚದ ಕೊರತೆಯನ್ನು ಭರಿಸಲು ರಾಜ್ಯಗಳ ನಿಧಿಯಿಂದ ಹಣ ನೀಡಲು ಕೇಳಲಾಯಿತು. ಇದೊಂದು ರೀತಿಯಲ್ಲಿ ಕೇಂದ್ರದ ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಯಿಸುವ ಪ್ರಯತ್ನ. ಈ ಕ್ರಮಗಳಿಂದ ರಾಜ್ಯಗಳು, ಅಂತಿಮವಾಗಿ ಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳುತ್ತದೆ.

ರಾಜ್ಯಗಳ ನಡುವೆ ಸಂಪನ್ಮೂಲವನ್ನು ಹಂಚಲು ಸೂತ್ರವನ್ನು ರೂಪಿಸುವುದಕ್ಕೆ ವರಮಾನದ ಅಂತರ, ಜನಸಂಖ್ಯೆ, ಪೌಷ್ಟಿಕತೆ, ಆರೋಗ್ಯ ಹಾಗೂ ವಿತ್ತೀಯ ಸಾಧನೆ ಇವೆಲ್ಲವನ್ನೂ ಪರಿಗಣಿಸಲಾಗುತ್ತದೆ. ಜನಸಂಖ್ಯೆಗೆ 1971ರ ಜನಗಣತಿಯ ಅಂಕಿಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಯಾಕೆಂದರೆ, ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ 1971ರ ನಂತರ ಜನಸಂಖ್ಯಾ ನಿಯಂತ್ರಣದ ಕ್ರಮಗಳಿಂದಾಗಿ ಜನಸಂಖ್ಯೆಯ ಹೆಚ್ಚಳ ಪ್ರಮಾಣ ಕಡಿಮೆಯಾಗಿತ್ತು. 2011ರ ಜನಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಂಡರೆ ಅಂತಹ ರಾಜ್ಯಗಳಿಗೆ ಅನ್ಯಾಯವಾಗುತ್ತಿತ್ತು. ಜನಸಂಖ್ಯೆಯನ್ನು ನಿಯಂತ್ರಿಸಿರುವ ರಾಜ್ಯಗಳಿಗೆ ಅನ್ಯಾಯವಾಗಬಾರದೆಂದು ‘ಜನಸಂಖ್ಯೆಯ ನಿರ್ವಹಣೆ’ ಎಂಬ ಹೊಸ ಸೂಚಿಯನ್ನು ಆಯೋಗವು ಸೇರಿಸಿಕೊಂಡಿತು. ಆದರೂ ಕರ್ನಾಟಕ, ಮಿಜೋರಾಂ ಹಾಗೂ ತೆಲಂಗಾಣಕ್ಕೆ ನಷ್ಟವಾಯಿತು.

ಕರ್ನಾಟಕದ ಪಾಲು ಶೇ 4.71ರಿಂದ ಶೇ 3.64ಕ್ಕೆ ಇಳಿಯಿತು. ತನ್ನ ಶಿಫಾರಸಿನಿಂದ ಕರ್ನಾಟಕಕ್ಕೆ ಆಗಿರುವ ನಷ್ಟವನ್ನು ಸರಿದೂಗಿಸುವುದಕ್ಕೆ ಅಯೋಗವು ₹ 5,495 ಕೋಟಿಯ ವಿಶೇಷ ಅನುದಾನವನ್ನು ಮಂಜೂರು ಮಾಡಿತ್ತು. ಇದು ಅಂತಿಮ ವರದಿಯಲ್ಲಿ ಇಲ್ಲ ಎಂದು ಕೇಂದ್ರ ತಿರಸ್ಕರಿಸಿತು. ಆದರೆ ಮಧ್ಯಂತರ ಹಾಗೂ ಅಂತಿಮ ವರದಿ ಎಂದು ಯಾವುದೂ ಇಲ್ಲ. ಆಗಿನ ಆರ್ಥಿಕ ಹಿಂಜರಿತ ಹಾಗೂ ಹೊಸದಾಗಿ ಜಾರಿಗೆ ತಂದ ಜಿಎಸ್‌ಟಿಯಿಂದ ಆರ್ಥಿಕ ಬೆಳವಣಿಗೆಯನ್ನು ಅಂದಾಜು ಮಾಡುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಆಯೋಗಕ್ಕೆ ಎರಡು ವರದಿಗಳನ್ನು ಮಂಡಿಸಲು ಕೇಳಿಕೊಳ್ಳಲಾಗಿತ್ತು. ಅದರಂತೆ ಆಯೋಗವು 2020– 21ರ ಹಣಕಾಸು ವರ್ಷಕ್ಕೆ ಮೊದಲ ವರದಿಯನ್ನು ಹಾಗೂ 2021– 22ರಿಂದ 2025– 26ರ ಅವಧಿಗೆ ಅಂತಿಮ ವರದಿಯನ್ನು ಮಂಡಿಸಿತು. ಎರಡೂ ಅಂತಿಮ ವರದಿಗಳೆ. ವಾಸ್ತವವೆಂದರೆ, ಕೇಂದ್ರವು ಈ ಶಿಫಾರಸನ್ನು ಮರುಪರಿಶೀಲಿಸಲು ಆಯೋಗವನ್ನು ಕೇಳಿಕೊಂಡಿತ್ತು.

ಅಷ್ಟೇಅಲ್ಲ, ಹಣಕಾಸು ಆಯೋಗ ನೀಡಿರುವ ಅಥವಾ ರಾಜ್ಯಗಳಿಗೆ ಬರಬೇಕಾದ ಇತರ ಅನುದಾನಗಳನ್ನೂ ಕೇಂದ್ರವು ನೀಡುತ್ತಿಲ್ಲ. ಉದಾಹರಣೆಗೆ, ಆಯೋಗವು ರಾಜ್ಯಗಳಿಗೆ ನೀಡುವ ನಿರ್ದಿಷ್ಟ ಅನುದಾನದಡಿ ಕರ್ನಾಟಕಕ್ಕೆ ನೀಡಿದ್ದ ₹ 6,000 ಕೋಟಿ ಅನುದಾನ ಬಿಡುಗಡೆಯಾಗಿಲ್ಲ. ಬಜೆಟ್ಟಿನಲ್ಲಿ ಘೋಷಿಸಿದ ಯೋಜನೆಗಳ ಹಣವೂ ಬಿಡುಗಡೆಯಾಗಿಲ್ಲ. ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಬಿಡುಗಡೆಯಾಗಬೇಕಿತ್ತು. ಬರದಂತಹ ಸಂಕಷ್ಟಕ್ಕೂ ನೆರವನ್ನು ಪಡೆಯಲು ಸುಪ್ರೀಂ ಕೋರ್ಟಿಗೆ ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಕೇಂದ್ರದ ಎಷ್ಟೋ ನಿರ್ಧಾರಗಳಿಂದ ರಾಜ್ಯಗಳಿಗೆ ತೊಂದರೆಯಾಗುತ್ತಿದೆ. ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತ ಮಾಡಿದ್ದರಿಂದ 2020– 21ರಲ್ಲಿ ತೆರಿಗೆ ಸಂಗ್ರಹ ₹ 1.55 ಲಕ್ಷ ಕೋಟಿ ಕಡಿಮೆಯಾಯಿತು. ಪರಿಣಾಮವಾಗಿ, ರಾಜ್ಯಗಳು ₹ 65,000 ಕೋಟಿಯನ್ನು ಕಳೆದುಕೊಂಡವು. ಆರ್‌ಬಿಐಯ ಲಾಭದಿಂದ ಕೇಂದ್ರ ತನ್ನ ನಷ್ಟವನ್ನು ಸರಿದೂಗಿಸಿಕೊಂಡಿತು. ಆದರೆ ರಾಜ್ಯಗಳಿಗೆ ಅಂತಹ ಅವಕಾಶವಿಲ್ಲ. ತಮ್ಮ ವೆಚ್ಚದಲ್ಲೇ ಕಡಿತ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಜಿಎಸ್‌ಟಿ ವ್ಯವಸ್ಥೆಯಿಂದ ಕರ್ನಾಟಕವೊಂದಕ್ಕೇ ಸುಮಾರು ₹ 59,294 ಕೋಟಿ ನಷ್ಟವಾಗಿದೆ. ಜಿಎಸ್‌ಟಿ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಿಎಸ್‌ಟಿ ಮಂಡಳಿಯಲ್ಲಿ ಕೇಂದ್ರದ್ದೇ ಮೇಲುಗೈ. ನೀತಿ ಆಯೋಗವೂ ಹಣಕಾಸು ಸಚಿವಾಲಯದ ಭಾಗವೇ ಆಗಿರುವುದರಿಂದ ರಾಜ್ಯಗಳು ಎಲ್ಲದಕ್ಕೂ ಈ ಸಚಿವಾಲಯವನ್ನೇ ಆಶ್ರಯಿಸಬೇಕಾಗಿದೆ. ಆರ್ಥಿಕ ವ್ಯವಸ್ಥೆ ಹೆಚ್ಚೆಚ್ಚು ಕೇಂದ್ರೀಕರಣವಾದಷ್ಟೂ ರಾಜ್ಯಗಳು ದುರ್ಬಲವಾದಷ್ಟೂ ಒಕ್ಕೂಟ ವ್ಯವಸ್ಥೆ ಶಿಥಿಲಗೊಳ್ಳುತ್ತಾ ಹೋಗುತ್ತದೆ.

ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಬಿಟ್ಟರೆ ಅಥವಾ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅವುಗಳಿಗೆ ರಾಜಕೀಯ ಮಾನ್ಯತೆ ಸಿಕ್ಕಿಬಿಡುತ್ತದೆ ಅನ್ನುವ ಆತಂಕ ಕೇಂದ್ರಕ್ಕೆ. ಹಾಗಾಗಿ, ರಾಜ್ಯಗಳಿಗೆ ವಿತ್ತೀಯ ಸಾಮರ್ಥ್ಯ ಸಿಗದಂತೆ ನೋಡಿಕೊಳ್ಳುವುದೇ ಕೇಂದ್ರದ ರಾಜಕೀಯವಾಗಿದೆ. ಹಣದ ಕೊರತೆಯಿಂದ ರಾಜ್ಯಗಳು ಹೆಚ್ಚೆಚ್ಚು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಅಂತಹ ಯೋಜನೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ವೆಚ್ಚ ಭರಿಸುವುದು ರಾಜ್ಯಗಳು, ಆದರೆ ಕೀರ್ತಿ ಕೇಂದ್ರಕ್ಕೆ.

16ನೇ ಹಣಕಾಸು ಆಯೋಗವು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ ಯೋಚಿಸಬೇಕು. ರಾಜ್ಯಗಳಿಗೆ ಚಾರಿತ್ರಿಕವಾಗಿ ಆಗಿರುವ ಅನ್ಯಾಯವನ್ನು ಸರಿದೂಗಿಸಿಕೊಡಬೇಕು. ಸೆಸ್ ಹಾಗೂ ಸರ್‌ಚಾರ್ಜ್‌ಗೆ ಒಂದು ಮಿತಿಯನ್ನು ಹಾಕಬೇಕು. ತಮ್ಮ ಶಿಫಾರಸುಗಳು ಜಾರಿಯಾಗುವ ದಿಸೆಯಲ್ಲೂ ಯೋಚಿಸಬೇಕು. ಇಲ್ಲದೇ ಹೋದರೆ ಶಿಫಾರಸುಗಳಿಗೆ ಅರ್ಥವೇ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT