ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಅರಿತವರು ಯಾರು ಮತದಾರನ ಮನವ?

ನಮ್ಮ ಜ್ಯೋತಿಷಿಗಳು ಹಾಗೂ ಚುನಾವಣಾ ತಜ್ಞರ ವಿಶ್ವಾಸಾರ್ಹತೆಯು ಈಗ ಒಂದೇ ಮಟ್ಟದಲ್ಲಿ ಇದೆ.
Published 14 ಡಿಸೆಂಬರ್ 2023, 19:12 IST
Last Updated 14 ಡಿಸೆಂಬರ್ 2023, 19:12 IST
ಅಕ್ಷರ ಗಾತ್ರ

ಭಾರತದ ಚುನಾವಣೆಗಳು ಹಾಗೂ ವೃದ್ಧಿಯಾಗುತ್ತಿರುವ ಚುನಾವಣಾ ತಜ್ಞರ ಸಂಖ್ಯೆಯು ಭಾರತದ ಜ್ಯೋತಿಷಿಗಳನ್ನು ನೆನಪಿಸುತ್ತದೆ. ಚುನಾವಣಾ ತಜ್ಞರ ಪೈಕಿ ಹೆಚ್ಚಿನವರು ಮಾಡುವುದು ಭವಿಷ್ಯ ಹೇಳುವ ಕೆಲಸವನ್ನೇ. ಭಾರತದ ಜ್ಯೋತಿಷಿಗಳ ಚಿತ್ರಣವನ್ನು ಮಾಂತ್ರಿಕ ಬರಹಗಾರ ಆರ್.ಕೆ. ನಾರಾಯಣ್ ಅವರು ‘ಆ್ಯನ್ ಅಸ್ಟ್ರಾಲಜರ್ಸ್ ಡೇ’ (An astrologer's day) ಕಥೆಯಲ್ಲಿ ಸುಂದರವಾಗಿ ನೀಡಿದ್ದಾರೆ. ಠಕ್ಕನೊಬ್ಬ
ಜ್ಯೋತಿಷಿಯಾಗಿದ್ದು ಹೇಗೆ ಎಂಬುದನ್ನು ವಿವರಿಸುತ್ತಾರೆ. 

ರಾಜಸ್ಥಾನ, ಛತ್ತೀಸಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆಗಳಿಗೆ ಚುನಾವಣೆ ಪೂರ್ಣಗೊಂಡಿದೆ. ಇಲ್ಲಿ ಒಂದು ಸಂಗತಿ ಸ್ಪಷ್ಟವಾಗಿದೆ. ರಾಜಕಾರಣಿಗಳ ಭವಿಷ್ಯವನ್ನು ಹೇಳುವ, ಚುನಾವಣೆಗಳನ್ನು ಗೆಲ್ಲಬೇಕು ಎಂದಾದರೆ ಯಾವ ದೇವರಿಗೆ ಇಷ್ಟವಾಗುವಂತೆ ನಡೆದುಕೊಳ್ಳಬೇಕು ಎಂದು ಹೇಳುವ ನಮ್ಮ ಜ್ಯೋತಿಷಿಗಳು ಎಷ್ಟರಮಟ್ಟಿಗೆ ವಿಶ್ವಾಸಾರ್ಹರೋ, ನಮ್ಮ ಚುನಾವಣಾ ತಜ್ಞರು ಕೂಡ ಅಷ್ಟೇ ವಿಶ್ವಾಸಾರ್ಹರು. ನಾರಾಯಣ್ ಅವರ ಕಥೆಯಲ್ಲಿನ ಜ್ಯೋತಿಷಿಯಂತೆಯೇ, ಈ ತಜ್ಞರು ಕೂಡ ಚುನಾವಣೆಯ ಫಲಿತಾಂಶ ಯಾವ ರೀತಿ ಇರುತ್ತದೆ ಎಂಬುದನ್ನು ಊಹಿಸುವಲ್ಲಿ ಯಾವ ಸುಳಿವನ್ನೂ ಹೊಂದಿರುವುದಿಲ್ಲ. ಅಥವಾ ಯಾವುದೇ ರಾಜಕಾರಣಿಯ ಭವಿಷ್ಯ ಏನಾಗುತ್ತದೆ ಎಂಬುದನ್ನು ಹೇಳುವ ವಿಚಾರದಲ್ಲಿಯೂ ಅವರಿಗೆ ಯಾವುದೇ ಸುಳಿವು ಇರುವುದಿಲ್ಲ. ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರದಲ್ಲಿ ಈ ತಜ್ಞರು, ತಾವು ಮೂರ್ಖರಾದೆವು ಅಂದುಕೊಂಡಿರಬಹುದು. 

ಆದರೆ, ಊಹೆಯನ್ನು ಆಧರಿಸಿ ಕೆಲವು ತಜ್ಞರು ಮಾಡಿದ ಲೆಕ್ಕಾಚಾರ ಸರಿಯಾಗಿದ್ದರಿಂದ ಅವರು ಮಾತ್ರ ಜಯ ಗಳಿಸಿದೆವು ಎಂದು ವಿಜೃಂಭಿಸಿರಬಹುದು. ದತ್ತಾಂಶ ಮತ್ತು ಜಾತಿ ಲೆಕ್ಕಾಚಾರ ಆಧರಿಸಿ ವಿಶ್ಲೇಷಣೆ ಹಾಗೂ ಉಚಿತ ಕೊಡುಗೆಗಳ ಪರಿಣಾಮವು ಮತದಾರರ ಮೇಲೆ ಯಾವ ರೀತಿಯಲ್ಲಿ ಇರಬಹುದು ಎಂಬುದನ್ನು ತಾವು ಸರಿಯಾಗಿ ಅಂದಾಜಿಸಿದ್ದೆವು ಅಂದುಕೊಂಡಿರಬಹುದು. ಚುನಾವಣಾ ರಾಜಕಾರಣಕ್ಕೆ ಧುಮುಕಿದ್ದ ಕೆಲವು ಚುನಾವಣಾ ತಜ್ಞರು, ತಮಗೆ ಸೋಲು ಎದುರಾದಾಗ ತಮ್ಮ ಲೆಕ್ಕಾಚಾರಗಳು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಏನನ್ನೋ ಅರಸುವ ಆಟದಂತೆ ಇದ್ದವು ಎಂಬುದನ್ನು ಅರ್ಥ ಮಾಡಿಕೊಂಡಿರಬಹುದು. ಒಂದು ಕೈಯಲ್ಲಿ ಬಿಸಿಯಾದ ಕಬ್ಬಿಣದ ಕಂಬಿ ಹಾಗೂ ಇನ್ನೊಂದು ಕೈಯಲ್ಲಿ ಮಂಜುಗಡ್ಡೆಯನ್ನು ಹಿಡಿದರೆ ಸಂಖ್ಯಾಶಾಸ್ತ್ರಜ್ಞರು, ಅವುಗಳನ್ನು ಹಿಡಿದಿರುವ ವ್ಯಕ್ತಿಯ ದೇಹದ ಸರಾಸರಿ ಉಷ್ಣಾಂಶ ಸಹಜವಾಗಿಯೇ ಇದೆ ಎಂದು ಹೇಳಬಹುದು. ಆದರೆ, ಒಂದು ಕೈ ಸುಟ್ಟುಹೋಗಿರುತ್ತದೆ, ಇನ್ನೊಂದು ಕೈ ಹೆಪ್ಪುಗಟ್ಟಿರುತ್ತದೆ.

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಲೆಯು ಗೆಲುವು ತಂದುಕೊಡಲಿದೆ ಎಂದು ತಜ್ಞರು ಆರು ತಿಂಗಳ ಹಿಂದೆ ಅಂದಾಜು ಮಾಡಿದ್ದರು. ಅವರು ನರೇಂದ್ರ ಮೋದಿ ಹೆಸರು, ಮೋದಿ ಅವರಿಗೆ ಇರುವ ಒಳನೋಟಗಳು, ಮತಯಂತ್ರದ ಗುಂಡಿ ಒತ್ತುವ ಸಂದರ್ಭದಲ್ಲಿ ಹನುಮಂತನನ್ನು ನೆನಪಿಸಿಕೊಳ್ಳಿ ಎಂದು ಅವರು ಹೇಳಿದ್ದು ಹಾಗೂ ಅಮಿತ್ ಶಾ ಅವರ ಅದ್ಭುತ ಕಾರ್ಯತಂತ್ರವನ್ನು ನೆಚ್ಚಿಕೊಂಡಿದ್ದರು. ರಾಹುಲ್ ಗಾಂಧಿ ಅವರ ಬಗ್ಗೆ ಈ ತಜ್ಞರು ಹಾಸ್ಯ ಮಾಡಿದ್ದರು. ಹೀಗಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಭಾರಿ ಜಯ ಸಾಧಿಸಿತು. ಜನಸಾಮಾನ್ಯರ ಹೃದಯದಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಲ್ಲರೂ ಸೋತಿದ್ದರು.

ಕರ್ನಾಟಕದಲ್ಲಿ ಬಿಜೆಪಿ ಆರು ತಿಂಗಳ ಹಿಂದೆ ಸೋಲು ಕಂಡಾಗ, ಎಡಪಂಥೀಯ ಒಲವುಳ್ಳ ಹಲವು ಬುದ್ಧಿಜೀವಿಗಳು ‘ಮೋದಿ ಅವರ ಹೆಸರು ಆಕರ್ಷಣೆಯನ್ನು ಕಳೆದುಕೊಂಡಿದೆ’ ಎಂದು ಪುಟಗಟ್ಟಲೆ ಬರೆದಿದ್ದರು. ಶೇಕಡ 70ರಷ್ಟು ರಾಜ್ಯಗಳು ಬಿಜೆಪಿ ಜೊತೆ ಇಲ್ಲ, ಭಾರತ್ ಜೋಡೊ ಯಾತ್ರೆಗೆ ಸಿಕ್ಕ ಯಶಸ್ಸಿನ ನಂತರದಲ್ಲಿ, ರಾಹುಲ್ ಗಾಂಧಿ ಅವರು ಪುಟಿದೆದ್ದು ಬಂದ ನಂತರದಲ್ಲಿ ಹಾಗೂ ‘ಇಂಡಿಯಾ’ ಮೈತ್ರಿಕೂಟದ ರಚನೆಯ ನಂತರದಲ್ಲಿ ಬಿಜೆಪಿಯ ಮುನ್ನಡೆಗೆ ವಿರುದ್ಧವಾಗಿ ರಾಜಕೀಯ ಅಲೆಗಳು ಏಳುತ್ತಿವೆ ಎಂದು ಅವರು ಹೇಳಿದ್ದರು. ಆದರೆ ಮೋದಿ ಅವರು ಅನಿರೀಕ್ಷಿತವಾದುದನ್ನು ತೋರಿಸಿಕೊಟ್ಟರು. ಐದು ರಾಜ್ಯಗಳ ಪೈಕಿ ಹಿಂದಿ ಭಾಷಿಕ ಮೂರು ರಾಜ್ಯಗಳಲ್ಲಿ ಹಿಂದಿನ ಬಾರಿಗಿಂತ ಹೆಚ್ಚು ದೊಡ್ಡದಾದ ಜಯ ಸಾಧಿಸಿದರು. ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ, ಒಂದು ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಹೇಳಿದ್ದವು. ಅಲ್ಲದೆ, ತೆಲಂಗಾಣದಲ್ಲಿ ಬಿಆರ್‌ಎಸ್‌ ಪಕ್ಷವು ಗೆಲ್ಲುವ ಕುದುರೆ ಎಂದಿದ್ದವು. ಅಲ್ಲಿ ಕಾಂಗ್ರೆಸ್ ಪಕ್ಷವು ಎರಡನೆಯ ಸ್ಥಾನಕ್ಕೆ ಬರಬಹುದು ಎಂದಿದ್ದವು.

2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರು ಗೆಲುವು ಸಾಧಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಬಲಪಂಥದ ಕಡೆ ಒಲವು ಇರುವವರು ಹೇಳುತ್ತಿದ್ದಾರೆ. ಆದರೆ, 2018ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಮತದಾರರು ಕಾಂಗ್ರೆಸ್ಸನ್ನು ಗೆಲ್ಲಿಸಿದ್ದರು. ಹೀಗಿದ್ದರೂ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಗೆ ಮತ ಚಲಾಯಿಸಿದರು ಎಂಬುದನ್ನು ಅವರು ಮರೆಯುತ್ತಿದ್ದಾರೆ. ಮೋದಿ ಮತ್ತು ಶಾ ಅವರಿಗೆ ಸರಿಸಾಟಿಯಾಗುವ ಸಾಮರ್ಥ್ಯವು ರಾಹುಲ್ ಅವರಿಗೆ ಇಲ್ಲ, ಹಿಂದಿ ಭಾಷಿಕ ನಾಡಿನಲ್ಲಿ ಗೆಲುವು ಸಾಧಿಸಲು ಅವರಿಂದ ಆಗುವುದಿಲ್ಲ ಎಂದು ಈಗ ಕೆಲವರು ಹೇಳುತ್ತಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಕಾಂಗ್ರೆಸ್ಸಿನ ಜೊತೆ ಇವೆಯಾದ ಕಾರಣ ಅವು ಭ್ರಮನಿರಸನಗೊಳ್ಳಲಿವೆ, ಈ ಪಕ್ಷಗಳು ಕೂಡ ಕುಸಿಯುತ್ತವೆ ಎಂದು ಕೆಲವರು ಈಗ ಹೇಳುತ್ತಿದ್ದಾರೆ. ಆದರೆ ರಾಹುಲ್ ಅವರ ನಾಯಕತ್ವವು ಇದೇ ಮೂರು ರಾಜ್ಯಗಳನ್ನು 2018ರಲ್ಲಿ ಗೆದ್ದುಕೊಂಡಿತ್ತು, ಮಹಾರಾಷ್ಟ್ರದಲ್ಲಿ ಅವರ ಪಕ್ಷವು ಒಳ್ಳೆಯ ಸಾಧನೆ ತೋರಿತ್ತು, ಹಿಮಾಚಲ ಪ್ರದೇಶದಲ್ಲಿ ಗೆಲುವು ಕಂಡಿತು. ಈಗ ಪಕ್ಷವು ತೆಲಂಗಾಣದಲ್ಲಿ ಬಿಆರ್‌ಎಸ್‌ ಪಕ್ಷವನ್ನು ಸೋಲಿಸಿದೆ. ಹೀಗಿರುವಾಗ ರಾಹುಲ್ ಇದ್ದಕ್ಕಿದ್ದಂತೆ ಅಸಮರ್ಥ ಹೇಗಾಗುತ್ತಾರೆ?

ಉದಾರವಾದಿ ನಿಲುವಿನ ಕೆಲವು ರಾಜಕೀಯ ವಿಶ್ಲೇಷಕರು ವಿಚಿತ್ರವಾದ ವಾದವೊಂದನ್ನು ಜನರ ಮುಂದಿರಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಈಚೆಗೆ ಸೋಲು ಕಂಡಿರುವ ಮೂರು ರಾಜ್ಯಗಳಲ್ಲಿ, ಆ ಪಕ್ಷದ ಮತಗಳಿಕೆ ಪ್ರಮಾಣದಲ್ಲಿ ಆಗಿರುವುದು ಬಹಳ ಸಣ್ಣ ಪ್ರಮಾಣದ ಇಳಿಕೆ; ಇದನ್ನು ಸಂಸತ್ತಿನ ಕ್ಷೇತ್ರಗಳಿಗೆ ಅನ್ವಯಿಸಿ ನೋಡುವುದಾದರೆ, ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ಹೇಳುತ್ತಿದ್ದಾರೆ. ಜಟ್ಟಿ ನೆಲದ ಮೇಲೆ ಬಿದ್ದ ನಂತರವೂ ತನ್ನ ಮೀಸೆ ಮಣ್ಣಾಗಲಿಲ್ಲ ಎಂದು ಹೇಳಿದಂತೆ ಇದೆ ಇದು. 

ಎರಡು ದಶಕಗಳ ಹಿಂದೆ ನಾನು ಹಾಸನದ ಗ್ರಾಮಾಂತರ ಪ್ರದೇಶದ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ನಾನು ಬಹಳ ಶಕ್ತಿಶಾಲಿಯಾದ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಬೇಕು, ಕುರಿಯನ್ನು ಬಲಿ ಕೊಡಬೇಕು, ಆಗ ಗೆಲುವು ಖಚಿತ ಎಂದು ನನ್ನ ಪಕ್ಷದ ಸಹವರ್ತಿಗಳು ನನ್ನನ್ನು ನಂಬಿಸಿದ್ದರು. ಚುನಾವಣಾ ಪ್ರಚಾರ ಅಭಿಯಾನ ಆರಂಭಿಸುವ ಮೊದಲು ಇವೆಲ್ಲ ಆಗಿರಬೇಕು ಎಂದು ಹೇಳಿದ್ದರು. 

ದೇವರನ್ನು ನಂಬುವ ವಿಚಾರದಲ್ಲಿ ಆಸ್ತಿಕನೂ ಅಲ್ಲದ, ನಾಸ್ತಿಕನೂ ಅಲ್ಲದ ನಾನು ದೇವರ ಆಶೀರ್ವಾದ ಪಡೆಯುವ ಯಾವುದೇ ಸಂದರ್ಭವನ್ನು ಬಿಟ್ಟುಕೊಡಲಿಲ್ಲ. ದೇವರಿಂದ ಸಿಗುತ್ತಿದ್ದ ಶಕುನ, ದೇವಮಾನವರು ಹಾಗೂ ಸ್ಥಳೀಯ ಸ್ವಯಂಘೋಷಿತ ಚುನಾವಣಾ ತಜ್ಞರಿಂದ ಸಿಗುತ್ತಿದ್ದ ಸಂದೇಶದ ಆಧಾರದಲ್ಲಿ ನನಗೆ ಗೆಲುವು ಖಚಿತ ಎಂದು ಭಾವಿಸಿದ್ದೆ. ನಾನು ಶಾಸಕನಾಗಿ ಕುಳಿತ ಕ್ಷಣಗಳು ಕನಸಿನಂತೆ ಮನಸ್ಸಿಗೆ ಬರುತ್ತಿದ್ದವು. ಆದರೆ ದಯನೀಯ ರೀತಿಯಲ್ಲಿ ನಾನು ಸೋಲು ಕಂಡೆ. ಕಾಂಗ್ರೆಸ್ ಹಾಗೂ ಜನತಾದಳದಿಂದ ನನ್ನ ಎದುರಾಳಿಗಳಾಗಿ ಕಣದಲ್ಲಿ ಇದ್ದವರು ಕೂಡ ಅದೇ ದೇವತೆಯಿಂದ ಆಶೀರ್ವಾದ ಬೇಡಿದ್ದರು ಎಂಬುದು ನಂತರ ಗೊತ್ತಾಯಿತು. 

ಇಲ್ಲಿ ಒಂದು ವಿಚಾರ ಮಾತ್ರ ಸ್ಪಷ್ಟ. ದೇಶದ ಸಾಮಾನ್ಯ ಮತದಾರನ ಮನಸ್ಸನ್ನು ಭೇದಿಸುವುದು ನಮ್ಮಿಂದ ಆಗದ ಕೆಲಸ. ದೇವಮಾನವರು ಹಾಗೂ ಜ್ಯೋತಿಷಿಗಳು ಮೋಸ ಮಾಡುವುದನ್ನು ಮುಂದುವರಿಸುತ್ತಾರೆ. ಆದರೆ ಚುನಾವಣಾ ತಜ್ಞರು ತಮ್ಮ ಅಂಕಿ–ಅಂಶಗಳನ್ನು ಮಾತ್ರ ಜನರ ಮುಂದೆ ಇರಿಸಿ, ಭವಿಷ್ಯ ಏನಿರಬೇಕು ಎಂಬುದರ ತೀರ್ಮಾನವನ್ನು ಜನರಿಗೇ ಬಿಟ್ಟುಬಿಡಬೇಕು. ಜನರ ತೀರ್ಮಾನ ಆದ ನಂತರ ತಮ್ಮ ವಿಶ್ಲೇಷಣೆಯನ್ನು ಅವರು ಪ್ರಾಮಾಣಿಕವಾಗಿ ನಡೆಸಬೇಕು. ಸ್ಯಾಮ್ಯುಯೆಲ್ ಗೋಲ್ಡ್‌ವಿನ್ ಅವರು ಹೇಳಿರುವಂತೆ, ‘ಭವಿಷ್ಯದ ಬಗ್ಗೆ ಅಂದಾಜು ಮಾಡುವ ಕೆಲಸ ಬೇಡ’.

ಗೋಪಿನಾಥ್

ಗೋಪಿನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT