ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಅಂಕ ಸ್ಪರ್ಧೆ ಮತ್ತು ವಾಸ್ತವಿಕ ಜಗತ್ತು

ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಇರಲಿ ಆದ್ಯತೆ, ಬೇಕು ಒತ್ತಡಮುಕ್ತ ಕಲಿಕೆ
Published 2 ಜನವರಿ 2024, 23:30 IST
Last Updated 2 ಜನವರಿ 2024, 23:30 IST
ಅಕ್ಷರ ಗಾತ್ರ

ತನ್ನ ತೀವ್ರ ಪ್ರತಿಸ್ಪರ್ಧಿಯಾದ ಸಹಪಾಠಿಗೆ ಪರೀಕ್ಷೆಯ ದಿನ ಜ್ವರ ಬರಲಿ ಎಂದು ಮಗುವೊಂದು
ದೇವರನ್ನು ಕೇಳಿಕೊಳ್ಳುವ ಸನ್ನಿವೇಶವನ್ನು ಕಲ್ಪಿಸಿ ಕೊಳ್ಳಿ. ಮಗುವಿಗೆ ತಾನು ಪ್ರಥಮ ಸ್ಥಾನದಲ್ಲಿ ಇರಬೇಕು ಎನ್ನುವುದಷ್ಟೇ ಗೊತ್ತಿರುವುದು. ಅದನ್ನು ಸಾಧಿಸುವ ವಿಧಾನದಲ್ಲಿ ಅದಕ್ಕೆ ಸುಲಭ ಎನಿಸಿದ್ದನ್ನು ದೇವರಲ್ಲಿ ಪ್ರಾರ್ಥಿಸಿದೆ.‌ ಆದರೆ ತಾನು ಪ್ರಥಮ ಸ್ಥಾನ ಪಡೆಯುವ ಸಲುವಾಗಿ ಸಹಪಾಠಿ ಅನಾರೋಗ್ಯ
ಕ್ಕೀಡಾಗಲಿ ಎಂದು ಬಯಸುವ ಮನಃಸ್ಥಿತಿ ಎಷ್ಟೊಂದು ಕ್ರೂರ ಎಂದು ಮಗುವಿಗಂತೂ ಹೊಳೆಯಲು ಸಾಧ್ಯವಿಲ್ಲ. ಹಿರಿಯರಿಗಾದರೂ ಹೊಳೆಯಬೇಕು. ಏಕೆಂದರೆ ಮಕ್ಕಳು ಈ ರೀತಿಯ ಪ್ರಾರ್ಥನೆ ಸಲ್ಲಿಸಬೇಕಾದ ಸ್ಥಿತಿಯನ್ನು ನಿರ್ಮಿಸಿದವರು ಹಿರಿಯರೇ.

ನೂರಕ್ಕೆ ತೊಂಬತ್ತು ಅಂಕ ಪಡೆದಾಗಲೂ ಮಕ್ಕಳನ್ನು ಹಿಂಸಿಸುವ ಪಾಲಕರಿದ್ದಾರೆ, ‘ಇನ್ನುಳಿದ ಹತ್ತು ಅಂಕ ಯಾಕೆ ಬರಲಿಲ್ಲ’ ಎಂದು! ಅಂಕಗಳ ಈ ಜಿದ್ದಾಜಿದ್ದು ಶೈಕ್ಷಣಿಕ ಆಡಳಿತ ಮತ್ತು ಸಾಮಾಜಿಕ ವ್ಯವಸ್ಥೆಯನ್ನೂ ಆವರಿಸಿದ್ದು, ಡಿಸ್ಟಿಂಕ್ಷನ್ ಇಷ್ಟು, ಪ್ರಥಮ ದರ್ಜೆ ಇಷ್ಟು ಎನ್ನುವ ಲೆಕ್ಕಾಚಾರಗಳಿಗೆ ಮಾಧ್ಯಮಗಳಲ್ಲೂ ಸ್ಥಾನವಿದೆ.

ಅಂಕಗಳ ಜಿದ್ದಾಜಿದ್ದು ನೂರಕ್ಕೆ ನೂರರಷ್ಟು ಉತ್ತೀರ್ಣರಾಗಬೇಕು ಎನ್ನುವ ಅಪೇಕ್ಷೆಗಿಂತ ಭಿನ್ನವಾದದ್ದು. ಎಲ್ಲರೂ ಉತ್ತೀರ್ಣರಾಗಬೇಕು ಎಂಬ ಪರಿಕಲ್ಪನೆಗೆ ಅದರದೇ ಶೈಕ್ಷಣಿಕ ಮಿತಿಗಳು ಇದ್ದಾಗಲೂ ಅದರಲ್ಲೊಂದು ಶೈಕ್ಷಣಿಕ ಕಾಳಜಿ ಇದೆ. ಅನುತ್ತೀರ್ಣ ಆಗುವುದರಿಂದ ಮಗುವಿನ ಆತ್ಮವಿಶ್ವಾಸ ಕುಗ್ಗುವಂತಾ ಗುತ್ತದೆ, ಅದಾಗಬಾರದು. ಅಲ್ಲದೆ, ಅದರಿಂದ ಮಗುವಿನ ಒಂದು ವರ್ಷ ಪೋಲಾಗುತ್ತದೆ, ವಿಕಾಸಕ್ಕೆ ತಡೆಯಾಗುತ್ತದೆ ಎನ್ನುವ ವಿಚಾರಗಳಲ್ಲಿ ಪ್ರಾಮಾಣಿಕ ಕಾಳಜಿಗಳಿವೆ. ಆದರೆ ಅಂಕಗಳ ಜಿದ್ದಾಜಿದ್ದಿನಲ್ಲಿ ಈ ಬಗೆಯ ಕಾಳಜಿಗಳಿಲ್ಲ. ಅದರಲ್ಲಿ, ಪೊಳ್ಳು ಪ್ರತಿಷ್ಠೆಯ ಸಾಮೂಹಿಕ ಶೈಕ್ಷಣಿಕ ತಪ್ಪಿಗೆ ಸಮರ್ಥನೆ ಮಾತ್ರ ಇದೆ.

ಜಿದ್ದಾಜಿದ್ದಿನ ಅಂಕದ ಉದ್ದೇಶವೇನು? ಒಳ್ಳೆಯ ಅಂಕಗಳಿಂದ ಒಳ್ಳೆಯ ಉದ್ಯೋಗ ಸಿಗುತ್ತದೆ ಎನ್ನುವುದು ಸಾಮಾನ್ಯ ಗ್ರಹಿಕೆಯಾಗಿದೆ. ಆದರೆ ನಿಜಕ್ಕೂ ವಾಸ್ತವ ಜಗತ್ತು ಹಾಗಿದೆಯೇ? ಸರ್ಕಾರಿ ನೇಮಕಾತಿಗಳೆಲ್ಲವೂ ಸಾಮಾನ್ಯವಾಗಿ ಈಗ ಅವುಗಳದೇ ಆದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೊಂದಿದ್ದು, ಅದರಲ್ಲಿ ಪಡೆದ ಅಂಕಗಳು ನೇಮಕಾತಿಗೆ ಮಾನದಂಡಗಳಾಗಿವೆ‌. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಅಕಡೆಮಿಕ್ ಪರೀಕ್ಷೆಗಳಲ್ಲಿ ಪಡೆದ ಅಂಕಗಳು ಪರಿಗಣನೆಗೆ ಒಳಗಾಗುವುದೇ ಇಲ್ಲ. ಪದವಿ ಉತ್ತೀರ್ಣರಾಗಿರಬೇಕು ಎಂಬುದಷ್ಟೇ ಅಕಡೆಮಿಕ್ ಅರ್ಹತೆಯಾಗಿ ಅಲ್ಲಿದೆ. ಉತ್ತೀರ್ಣತಾ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮುಖ್ಯವಲ್ಲವೇ ಅಲ್ಲ. ಹಾಗಿದ್ದರೆ ಉತ್ತೀರ್ಣತಾ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಉಪಯೋಗವೇನು? ಏನೂ ಇಲ್ಲ. ಒಂದು ವೇಳೆ ಅಕಡೆಮಿಕ್ ಪರೀಕ್ಷೆಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿಯ ರೂಪದಲ್ಲಿ ಸಂಘಟಿಸಲ್ಪಟ್ಟಿದ್ದರೆ ಆಗ ಅಕಡೆಮಿಕ್ ಪರೀಕ್ಷೆಗಳಲ್ಲಿನ ಒಳ್ಳೆಯ ಅಂಕಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸಾಮರ್ಥ್ಯಗಳಾಗಿ ಒದಗಿಬರುತ್ತವೆ.‌

ಆದರೆ ಸದ್ಯದ ಅಕಡೆಮಿಕ್ ಪರೀಕ್ಷೆಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಪರೀಕ್ಷಾ ಕ್ರಮದಲ್ಲಾಗಲೀ ಅಧ್ಯಯನ ವಿಧಾನದಲ್ಲಾಗಲೀ ಹೊಂದಾಣಿಕೆಯೇ ಏರ್ಪಡುವುದಿಲ್ಲ. ಏಕೆಂದರೆ, ಅಕಡೆಮಿಕ್ ಪರೀಕ್ಷೆಗಳ ಸ್ವರೂಪವನ್ನು ಸ್ಪರ್ಧಾತ್ಮಕ ಪರೀಕ್ಷೆಯ ರೀತಿಯಲ್ಲಿ ಇರಿಸಿದರೆ ಶೇಕಡ 60-70ರಷ್ಟು ವಿದ್ಯಾರ್ಥಿಗಳೂ
ಉತ್ತೀರ್ಣರಾಗಲು ಸಾಧ್ಯವಿಲ್ಲ. ಆದ್ದರಿಂದ ಇವೆರಡೂ ಬೇರೆ ಬೇರೆ ಸ್ವರೂಪವನ್ನೇ ಹೊಂದಿದ್ದು, ಆ ಕಾರಣ ದಿಂದಲೇ ಅಕಡೆಮಿಕ್ ಪರೀಕ್ಷೆಯಲ್ಲಿ ಎಷ್ಟು ಉತ್ತಮ ಅಂಕಗಳನ್ನು ಪಡೆದಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತ್ಯೇಕ ತರಬೇತಿಯನ್ನು ಪಡೆಯಬೇಕಾಗುತ್ತದೆ, ಪ್ರತ್ಯೇಕ ಅಧ್ಯಯನವನ್ನು ಮಾಡಬೇಕಾಗುತ್ತದೆ.

ಎರಡನೆಯದು, ಖಾಸಗಿ ಉದ್ದಿಮೆಗಳ ನೇಮಕಾತಿಗಳು. ಅಲ್ಲಿ ಪ್ರತಿಯೊಂದು ಕಂಪನಿಯೂ ತನ್ನ ಅಗತ್ಯಕ್ಕೆ ತಕ್ಕ ಹಾಗೆ ಅಭ್ಯರ್ಥಿಯ ಸಾಮರ್ಥ್ಯವನ್ನು ತನ್ನದೇ ಆದ ಪ್ರತ್ಯೇಕ ಮಾನದಂಡದ ಆಧಾರದಲ್ಲಿ ಪರೀಕ್ಷಿಸಿ ನೇಮಕಾತಿಯನ್ನು ಮಾಡುತ್ತದೆ. ಕ್ಯಾಂಪಸ್ ಸೆಲೆಕ್ಷನ್‌ನಲ್ಲಿಯೂ ಆಯ್ಕೆಯನ್ನು ಕಂಪನಿ ತನಗೆ ಬೇಕಾದ ಮಾನದಂಡದ ಆಧಾರದಲ್ಲಿಯೇ ಮಾಡುತ್ತದೆ.‌ ಅಂದರೆ ಅಕಡೆಮಿಕ್ ಪರೀಕ್ಷೆಯಲ್ಲಿ ಪಡೆದ ಉತ್ತಮ ಅಂಕಗಳಿಗೆ ಇಲ್ಲಿಯೂ ಗಮನಾರ್ಹ ಮಹತ್ವವೇನಿಲ್ಲ.

ಕಾಲೇಜುಗಳಿಗೆ ಪ್ರವೇಶ ಕೊಡುವಾಗಲೂ ಬಹಳಷ್ಟು ಸಂಸ್ಥೆಗಳು ತಮ್ಮದೇ ಆದ ಪ್ರವೇಶ ಪರೀಕ್ಷೆಯನ್ನು ನಡೆಸುತ್ತವೆ. ಅಲ್ಲಿಯೂ ಹಿಂದಿನ ಅಕಡೆಮಿಕ್ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ ಮಹತ್ವ ಇರುವುದಿಲ್ಲ. ಆದರೆ ಇನ್ನೂ ಹಲವು ಕಾಲೇಜುಗಳು ಹಿಂದಿನ ಅಕಡೆಮಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದ ಅಂಕಗಳ ಆಧಾರದಲ್ಲಿ ಪ್ರವೇಶ ಕೊಡುವ ಹಳೆಯ ಪದ್ಧತಿಯನ್ನು ಉಳಿಸಿಕೊಂಡಿವೆ. ಈ ಸಂದರ್ಭದಲ್ಲಿ ಅಕಡೆಮಿಕ್ ಪರೀಕ್ಷೆಯಲ್ಲಿ ಪಡೆದ ಉತ್ತಮ ಅಂಕಗಳಿಗೆ ಮಹತ್ವ ಸಿಗುತ್ತದೆ. ಆದರೆ ಇಲ್ಲಿರುವ ಪ್ರಶ್ನೆ, ಈ ರೀತಿ ಪ್ರವೇಶ ಕೊಡುವ ಪದ್ಧತಿ ವೈಜ್ಞಾನಿಕವೋ ಸಂಸ್ಥೆಗಳು ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸುವುದು ವೈಜ್ಞಾನಿಕವೋ ಎನ್ನುವುದು. ನಿಜವಾಗಿ, ಪ್ರವೇಶ ಪರೀಕ್ಷೆ ನಡೆಸುವುದೇ ಹೆಚ್ಚು ವೈಜ್ಞಾನಿಕವಾದದ್ದು. ಏಕೆಂದರೆ ಇವತ್ತು ಭಾರತದ ಶಿಕ್ಷಣವನ್ನು ವಿಶ್ವ ದರ್ಜೆಗೆ ಏರಿಸುವ ಉದ್ದೇಶವನ್ನು ಶಿಕ್ಷಣ ನೀತಿಗಳು ಹೊಂದಿವೆ ಮತ್ತು ಅದಕ್ಕೆ ತಕ್ಕಂತೆ ಹೊಸ ಹೊಸ ನಿರ್ದಿಷ್ಟ ಕೋರ್ಸ್‌ಗಳನ್ನು ಸಂಸ್ಥೆಗಳು ಒದಗಿಸುತ್ತಲೂ ಇವೆ. ಆಗ ಅಂತಹ ಕೋರ್ಸ್‌ಗಳಿಗೆ ಬೇಕಾದ ಸಾಮರ್ಥ್ಯವನ್ನು ಹಿಂದಿನ ಅಕಡೆಮಿಕ್ ಪರೀಕ್ಷೆಯು ಹೊಂದಿರಲು ಸಾಧ್ಯವಿಲ್ಲ. ಆ ಸಾಂಪ್ರದಾಯಿಕ ಪದ್ಧತಿಯನ್ನು ಕೈಬಿಟ್ಟು ಸಂಸ್ಥೆಗಳು ಪ್ರವೇಶ ಪರೀಕ್ಷೆಯನ್ನು ನಡೆಸುವುದೇ
ವೈಜ್ಞಾನಿಕವಾಗಿದೆ.

ಸದ್ಯದ ಶೈಕ್ಷಣಿಕ ಸನ್ನಿವೇಶದಲ್ಲಿ ಅಕಡೆಮಿಕ್ ಪರೀಕ್ಷೆ ಗಳಲ್ಲಿ ಪಡೆಯುವ ಅಂಕಗಳು ಏನನ್ನು ಸೂಚಿಸುತ್ತಿವೆ? ಕಲಿಕಾ ದಕ್ಷತೆಗಿಂತ ಹೆಚ್ಚಾಗಿ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ನಿರ್ದಿಷ್ಟ ಪದಗಳಲ್ಲಿ ಬರೆದು ಉತ್ತರಿಸುವ ಕೌಶಲ ಎಷ್ಟಿದೆ ಎಂಬುದನ್ನು ಮಾತ್ರ ಸೂಚಿಸುತ್ತವೆ. ಅದೇ ಪ್ರಶ್ನೆಯನ್ನು ಮೌಖಿಕವಾಗಿ ಕೇಳಿದಾಗ ಸೂಕ್ತ ಮೌಖಿಕ ಸಂವಹನದಲ್ಲಿ ಅಭಿವ್ಯಕ್ತಪಡಿಸುವ ಕೌಶಲ ಇದೆಯೋ ಇಲ್ಲವೋ ಎಂಬುದನ್ನೂ ಸೂಚಿಸುವುದಿಲ್ಲ. ಹೀಗಿದ್ದಾಗ ಕಲಿಕಾ ದಕ್ಷತೆಯನ್ನು ಸೂಚಿಸುವುದಕ್ಕಂತೂ ಸಾಧ್ಯವಿಲ್ಲ. ಅಂದಮೇಲೆ ನೂರೋ ಇನ್ನೂರೋ ಪ್ರಶ್ನೆಗಳಿಗೆ ಬರೆಯುವ ಕೌಶಲ ಇದೆಯೇ ಎನ್ನುವುದೇ ಒಬ್ಬ ವ್ಯಕ್ತಿಯ ಜೀವನದ ಒಟ್ಟಾರೆ ದಿಕ್ಕುದೆಸೆಯನ್ನು ನಿರ್ಧರಿಸಲಾರದು. ಆದ್ದರಿಂದ ಅಕಡೆಮಿಕ್ ಪರೀಕ್ಷೆಯಲ್ಲಿ ಪಡೆಯುವ ಅಂಕಗಳಿಗೆ ತೋರಿಸುವ ಪ್ರಾಮುಖ್ಯವನ್ನು ಇಡೀ ಸಮಾಜ ಕೈಬಿಡಬೇಕಾದ ಅಗತ್ಯವಿದೆ. ಎಲ್ಲರೂ ಉತ್ತೀರ್ಣರಾಗಬೇಕು ಎನ್ನುವ ಮನಃಸ್ಥಿತಿ ಸಾಕಾದೀತು.

ಇದರರ್ಥ, ಅಂಕಗಳ ಜಿದ್ದಾಜಿದ್ದಿಯಿಂದ ಹೊರಗೆ ಬಂದು, ಉತ್ತೀರ್ಣರಾದರೆ ಸಾಕು ಎನ್ನುವಲ್ಲಿಗೆ ಅಕಡೆಮಿಕ್ ಕಲಿಕೆಯನ್ನು ಸೀಮಿತಗೊಳಿಸಿ, ಏನೂ ಮಾಡದೇ ಇರುವುದು ಎಂದಲ್ಲ‌.‌ ಅಂಕಗಳಿಗಾಗಿನ ಪೈಪೋಟಿಯು ಮಕ್ಕಳಲ್ಲಿ ಪರಸ್ಪರ ಅಸಂತೋಷವನ್ನು ಬೆಳೆಸುತ್ತದೆ. ಅಂಕಗಳಿಗಾಗಿನ ಒತ್ತಡಗಳು ಮಕ್ಕಳಿಗೆ ಕಲಿಕೆಯನ್ನು ಆನಂದದ ಅನುಭವವಾಗಿಸುವ ಬದಲು ಹಿಂಸೆಯ ಅನುಭವವಾಗಿಸುತ್ತವೆ. ಪೋಷಕರು ಮತ್ತು ಅಧ್ಯಾಪಕರನ್ನು ಅತಿಯಾದ ಒತ್ತಡದಲ್ಲಿ ಇರಿಸುತ್ತವೆ. ಇವೆಲ್ಲದರಿಂದಾಗಿ ಮಕ್ಕಳಲ್ಲಿ ಕಲಿಕಾ ಅನುಭವಗಳು, ಪ್ರಶ್ನೋತ್ತರಗಳ ಹೊರತಾದ ಪಠ್ಯ ಮತ್ತು ಬದುಕಿನ ಚಟುವಟಿಕೆಗಳ ಕಲಿಕೆಯು ಕುಂಠಿತವಾಗುತ್ತವೆ. ಪೋಷಕರು ಮತ್ತು ಅಧ್ಯಾಪಕರು ಮಕ್ಕಳ ಸರ್ವಾಂಗೀಣ ವಿಕಾಸದ ಕಡೆಗೆ ಗಮನಿಸಿಕೊಳ್ಳಲು ಸಾಧ್ಯವಾಗದಂತೆ ಮಾಡುತ್ತವೆ.

ಅತ್ಯಧಿಕ ಅಂಕಗಳಿಗಾಗಿನ ಒತ್ತಡವನ್ನು ಇಲ್ಲವಾಗಿಸುವ ಮೂಲಕ ಮಕ್ಕಳು ನಿರಾಳ ಭಾವವನ್ನು ಹೊಂದುವಂತೆ ಮಾಡಬೇಕು. ಕಲಿಕೆಯನ್ನು ಹೆಚ್ಚಿಸಬೇಕು. ಅಂಕಗಳ ಒತ್ತಡಮುಕ್ತ ಕಲಿಕೆಯು ಕಲಿಕೆಯನ್ನು ಸಂತಸದಾಯಕ ಆಗಿಸುತ್ತದೆ.‌ ಆಗ ಕಲಿಕೆಯ ಪರಿಣಾಮವಾದ ಸಾಮರ್ಥ್ಯ ಮಕ್ಕಳಲ್ಲಿ ಜಾಸ್ತಿಯಾ
ಗುತ್ತದೆ.‌ ಇದು ಭವಿಷ್ಯದ ಬದುಕಿಗೆ ಅಂಕಗಳಿಗಿಂತ ಹೆಚ್ಚು ಸಹಾಯಕ ಸಂಗತಿಯಾಗಿ ಬರುತ್ತದೆ. ಪೋಷಕರು ಮತ್ತು ಅಧ್ಯಾಪಕರು ಮಕ್ಕಳ ದೈಹಿಕ ಚಟುವಟಿಕೆಗಳನ್ನು ಗಮನಿಸಿ, ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿ ಬೆಳೆಯುವಂತೆ ಮಾಡಬೇಕು.‌ ಮಕ್ಕಳ ವರ್ತನೆಗಳು, ಜೀವನಕೌಶಲಗಳು, ಭಾವನಾತ್ಮಕ ನಿರ್ವಹಣೆ, ಉತ್ಪಾದಕ ಸಾಮರ್ಥ್ಯಗಳನ್ನೆಲ್ಲ ಹೆಚ್ಚಿಸಲು ಸಾಧ್ಯವಾಗುತ್ತದೆ. ಆಗ ಒಟ್ಟಾರೆ ಶಿಕ್ಷಣವು ಅಂಕ ನಿರ್ದೇಶಿತ ಏಕಮುಖಿ ಚಲನೆಯಿಂದ ಹೊರಕ್ಕೆ ಬಂದು ಬಹುಮುಖಿಯಾಗಿ ಮಕ್ಕಳನ್ನು ವಿಕಾಸಗೊಳಿಸಲು ಸಾಧ್ಯವಾಗುತ್ತದೆ; ಸಾಧ್ಯವಾಗಬೇಕು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT