ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಚುನಾವಣಾ ರಾಜಕಾರಣದಲ್ಲಿ ‘ಮಕ್ಕಳಾಟ’

ಎಂದಿನಂತೆ ಉತ್ತರವಿಲ್ಲದೇ ಉಳಿಯುವ ಪ್ರಶ್ನೆ: ಯಾರು, ಎಲ್ಲಿಂದ ಸರಿಪಡಿಸುವುದು?
Published 25 ಮಾರ್ಚ್ 2024, 22:33 IST
Last Updated 25 ಮಾರ್ಚ್ 2024, 22:33 IST
ಅಕ್ಷರ ಗಾತ್ರ

ನಾಗರಿಕ ಸಮಾಜ ವ್ಯವಸ್ಥೆಯ ವಿಕಸನದ ಭಾಗವಾಗಿ ಜಾರಿಯಲ್ಲಿರುವ ಪ್ರಜಾತಂತ್ರವನ್ನು ಜಗತ್ತಿನ ಬಹಳಷ್ಟು ರಾಷ್ಟ್ರಗಳು ಆಡಳಿತ ಪದ್ಧತಿಯಾಗಿ ಅಳವಡಿಸಿಕೊಂಡಿವೆ. ಆದರೆ ಈ ವ್ಯವಸ್ಥೆ ಎಲ್ಲೆಡೆ ಒಂದೇ ನಮೂನೆ ಆಗಿಲ್ಲ. ಕೆಲವೆಡೆ ಬೆಳೆದು ಪ್ರಬುದ್ಧತೆ ಗಳಿಸಿದ್ದರೆ, ಹಲವೆಡೆ ಇನ್ನೂ ಎಳಸು, ಉಳಿದೆಡೆ ಕಲಸುಮೇಲೋಗರ. ನಮ್ಮದೇ ಅತ್ಯಂತ ಹಳೆಯದು ಎಂದು ಹೆಮ್ಮೆಪಡುವವರು ಇರುವಂತೆ, ತಮ್ಮದು ಅತಿದೊಡ್ಡದು ಎಂದು ಬೆನ್ನು ತಟ್ಟಿಕೊಳ್ಳುವವರೂ ಇದ್ದಾರೆ. ಪ್ರಜಾಪ್ರಭುತ್ವ ಎಂಬುದು ಶೋಷಕ ಪರಂಪರೆಯ ಮತ್ತೊಂದು ರೂಪವಷ್ಟೇ ಎಂಬ ವಾದದ ಜೊತೆಗೆ, ಅದಕ್ಕಿಂತ ಉತ್ತಮ ವ್ಯವಸ್ಥೆ ಆವುದು ಎಂಬ ಪ್ರಶ್ನೆಯೂ ಇದೆ.

ಇವೆಲ್ಲದರ ನಡುವೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಬಲವಾದ ಕೂಗು ಕೂಡ ಎಲ್ಲೆಡೆ ಕೇಳಿಬರುತ್ತಿದೆ. ಹಾಗಾದರೆ ಪ್ರಜಾತಂತ್ರಕ್ಕೆ ಒದಗಿರುವ ಅಪಾಯ ಯಾವ ಬಗೆಯದು? ಯಾರು ಕಾರಣ?

ಸ್ವೀಡನ್ ದೇಶದ ಗೋಥೆನ್ ಬರ್ಗ್ ವಿಶ್ವವಿದ್ಯಾಲಯದ ವಿ-ಡೆಮ್ (ವೆರೈಟೀಸ್ ಆಫ್ ಡೆಮಾಕ್ರಸೀಸ್) ಸಂಸ್ಥೆ ಹಿಂದಿನ ಎಂಟು ವರ್ಷಗಳಿಂದ ತನ್ನದೇ ಆದ ಬಹು ಆಯಾಮದ ಅಳತೆಗೋಲು ಬಳಸಿ, ವಿಶ್ವದೆಲ್ಲೆಡೆ ಪ್ರಜಾಪ್ರಭುತ್ವ ವ್ಯವಸ್ಥೆಯ ಆಗುಹೋಗುಗಳನ್ನು ಅವಲೋಕಿಸುತ್ತಿದೆ. ಈ ಸಂಸ್ಥೆ ಬಿಡುಗಡೆ ಮಾಡಿರುವ 2024ನೇ ಸಾಲಿನ ಡೆಮಾಕ್ರಸಿ ರಿಪೋರ್ಟಿನಲ್ಲಿ, ‘ವಿಶ್ವದೆಲ್ಲೆಡೆ ಪ್ರಜಾಪ್ರಭುತ್ವವು ನಿರಂಕುಶಶಾಹಿ ಆಗುವ ಪ್ರವೃತ್ತಿ ಪ್ರಬಲವಾಗಿ ಮುಂದುವರಿಯುತ್ತಿದೆ’ ಎಂದು ಆಧಾರಸಹಿತ ಮಂಡಿಸಿದೆ. ಚಾಲ್ತಿಯಲ್ಲಿರುವ ಪ್ರಜಾತಂತ್ರದ ಗುಣಮಟ್ಟ ಕುರಿತ ವಿ-ಡೆಮ್ ಸಂಸ್ಥೆಯ ಶೋಧನೆ, ವಿಶ್ಲೇಷಣೆಯಲ್ಲಿ ಪ್ರಜಾಪ್ರಭುತ್ವವಾದಿಗಳು ಆತಂಕಪಡಲು ಬಹಳಷ್ಟು ಸಾಮಗ್ರಿ ಇದೆ.

ವರದಿಯಲ್ಲಿ ಉಲ್ಲೇಖಿಸಿದಂತೆ, 2.8 ಶತಕೋಟಿ ಪ್ರಜೆಗಳನ್ನು ಒಳಗೊಂಡ 47 ದೇಶಗಳಲ್ಲಿ ನಿರಂಕುಶೀಕರಣ ಪ್ರಕ್ರಿಯೆ ಜಾರಿಯಲ್ಲಿದೆ. ಜಗತ್ತಿನ ಜನಸಂಖ್ಯೆಯ ಪ್ರತಿಶತ 18ರಷ್ಟು ಭಾಗವನ್ನು ಹೊಂದಿರುವ ಭಾರತವು ನಿರಂಕುಶಮುಖೀ ದೇಶಗಳಲ್ಲಿ ನೆಲಸಿರುವ ಜನಸಂಖ್ಯೆಯ ಅರ್ಧ ಭಾಗವನ್ನು ಒಳಗೊಂಡಿದೆ! ಭಾರತ ಅಳವಡಿಸಿಕೊಂಡಿರುವ ಪ್ರಜಾಸತ್ತಾತ್ಮಕ ಆಡಳಿತದ ನಿಜರೂಪದಲ್ಲಿ ಸಾಮ್ರಾಜ್ಯಶಾಹಿ, ವಸಾಹತುಶಾಹಿ, ಊಳಿಗಮಾನ್ಯ ಪದ್ಧತಿ ಹಾಗೂ ಸರ್ವಾಧಿಕಾರದ ಛಾಯೆಗಳು ಅವಕಾಶವಿರುವೆಡೆ ಸಮಯಾನುಸಾರ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈಗ ಹೊಸದಾಗಿ ಕಾರ್ಪೊರೇಟ್ ವಲಯದ ಹಾವಳಿ ಬೇರೆ ಕಾಲಿರಿಸಿದೆ.

ಮತದಾರರು ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ‘ಇದೇ ಕೊನೆಯ ಚುನಾವಣೆ ಆಗಲಿದೆ’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದನಿಯಲ್ಲಿ, ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಒದಗಿರುವ ಅಪಾಯದ ಸೂಚನೆಯಿದೆ. ಅವರು ಪ್ರಜಾಪ್ರಭುತ್ವ ಉಳಿಸುವ ಕರ್ತವ್ಯವನ್ನು ಪ್ರಜೆಗಳಿಗೆ ನೆನಪು ಮಾಡಿರುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಪ್ರಜಾತಂತ್ರದ ಜೀವಾಳವಾದ ಚುನಾವಣೆಗಳನ್ನು ಅಡ್ಡದಾರಿ ಹಿಡಿಸುವಲ್ಲಿ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ವಹಿಸುತ್ತಿರುವ ಪಾತ್ರದ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಮಾತನಾಡದಷ್ಟು, ನಿಲುವು ತಾಳಲಾರದಷ್ಟು ಜಾಣತನ ತೋರಿದರೆ ಹೇಗೆ? ಇದೀಗ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ವಂಶಾಡಳಿತ ಗುಣಗಳು ಎಲ್ಲ ಪಕ್ಷಗಳಲ್ಲೂ ಬಹುಮುಖ್ಯ ಲಕ್ಷಣಗಳಾಗಿ ಹೊಳೆಯುತ್ತಿರುವುದು ಯಾವುದರ ದ್ಯೋತಕ?

ಕೊಡಗು ಜಿಲ್ಲೆಯಲ್ಲಿ ಕೊಡವ ಕುಟುಂಬಗಳ ನಡುವೆ ಪ್ರತಿವರ್ಷ ಅದ್ಧೂರಿಯಾಗಿ ಹಾಕಿ ಪಂದ್ಯಾವಳಿ ನಡೆಯುವುದನ್ನು ನೋಡಿದ್ದೇವೆ. ಇದೀಗ ಕರ್ನಾಟಕದಲ್ಲಿ ನಡೆಯುತ್ತಿರುವ ಚುನಾವಣಾ ರಾಜಕಾರಣವನ್ನು ನೋಡಿದರೆ, ನಮ್ಮ ರಾಜಕಾರಣಿಗಳು ಕೊಡವರ ಕುಟುಂಬದ ಹಾಕಿ ಮಾದರಿಯನ್ನು ಅನುಸರಿಸಿದಂತೆ ಕಾಣಿಸುತ್ತದೆ. ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಬಹುಪಾಲು ಕೆಲವೇ ಕುಟುಂಬಗಳ ನಡುವೆ ಸ್ಪರ್ಧೆ ಏರ್ಪಡುವ ಮೂಲಕ ವಂಶಾಡಳಿತದ ಹೊಸ ವ್ಯಾಕರಣವೆಂಬಂತೆ ‘ಮಕ್ಕಳಾಟ’ ಶುರುವಾಗಿದೆ.

2024ರ ಲೋಕಸಭಾ ಚುನಾವಣೆಯ ಮತ್ತೊಂದು ಅಪರೂಪದ ಬೆಳವಣಿಗೆಯೆಂದರೆ, ಬಹಳಷ್ಟು ಕ್ಷೇತ್ರಗಳಲ್ಲಿ ಯುವಕ-ಯುವತಿಯರಿಗೆ, ಮಹಿಳೆಯರಿಗೆ, ಹೊಸ ಮುಖಗಳಿಗೆ ಸ್ಪರ್ಧಿಸುವ ಅವಕಾಶ ದೊರಕಿದೆ. ಯುವಪೀಳಿಗೆ ಮತ್ತು ಮಹಿಳಾ ಪ್ರಾತಿನಿಧ್ಯ ಪ್ರತಿಪಾದಕರು ಬೆಚ್ಚಿಬೀಳುವಷ್ಟು ಪ್ರಮಾಣದ ಅವಕಾಶ ಈ ಸಮೂಹಗಳಿಗೆ ದೊರಕಿರುವುದು ಸಾಮಾನ್ಯ ಸಂಗತಿಯಲ್ಲ. ಆದರೆ ರಾಜಕೀಯ ಪಕ್ಷಗಳ ಟಿಕೆಟ್ ಪಡೆಯುವಲ್ಲಿ ಸಫಲರಾಗಿರುವ ಈ ಹುರಿಯಾಳುಗಳ ಕೌಟುಂಬಿಕ ವಿವರಗಳಿಗೆ ಹೋದಾಗ ಮಾತ್ರ ಅಸಲಿ ಹಕೀಕತ್ತು ಬಿಚ್ಚಿಕೊಳ್ಳುತ್ತದೆ.

ಕಾಂಗ್ರೆಸ್ ಟಿಕೆಟ್ ನೀಡಿರುವ ಯುವ ಮತ್ತು ಮಹಿಳಾ ಅಭ್ಯರ್ಥಿಗಳ ಯಾದಿ ಹೀಗಿದೆ: ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ (ಸತೀಶ್ ಜಾರಕಿಹೊಳಿ ಪುತ್ರಿ), ಬೆಳಗಾವಿಯಿಂದ ಮೃಣಾಲ್ ಹೆಬ್ಬಾಳ್ಕರ್ (ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ), ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ (ಶಿವಾನಂದ ಪಾಟೀಲ ಪುತ್ರಿ), ಬೀದರ್‌ನಿಂದ ಸಾಗರ್ ಖಂಡ್ರೆ (ಈಶ್ವರ್ ಖಂಡ್ರೆ ಪುತ್ರ), ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ್ (ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ), ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ (ರಾಮಲಿಂಗಾರೆಡ್ಡಿ ಪುತ್ರಿ), ಹಾಸನದಿಂದ ಶ್ರೇಯಸ್ ಪಟೇಲ್ (ದಿವಂಗತ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ), ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್ (ಮಧು ಬಂಗಾರಪ್ಪ ಸೋದರಿ), ಚಾಮರಾಜನಗರದಿಂದ ಸುನೀಲ್ ಬೋಸ್ (ಎಚ್.ಸಿ.ಮಹಾದೇವಪ್ಪ ಪುತ್ರ), ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ (ಎಂ.ಆರ್.ಸೀತಾರಾಮ್ ಮಗ).

ಕಾಂಗ್ರೆಸ್ ಪಕ್ಷಕ್ಕೆ ಯುವ ಪ್ರಾತಿನಿಧ್ಯ ಮುಖ್ಯ ಅನ್ನಿಸಿದ್ದರೆ, ದಾವಣಗೆರೆ ಕ್ಷೇತ್ರದಲ್ಲಿ ಬಹಳಷ್ಟು ಜನಸಂಪರ್ಕ ಸಾಧಿಸಿದ್ದ ಸಾಮಾನ್ಯ ಕುಟುಂಬದ ಯುವಕ ಜಿ.ಬಿ.ವಿನಯ್ ಕುಮಾರ್ ಅವರಿಗೆ ಟಿಕೆಟ್ ನೀಡುವ ಮೂಲಕ ಭರವಸೆಯ ಹೊಸ ಮುಖವನ್ನು ಬೆಳಕಿಗೆ ತರುವ ಅವಕಾಶವಿತ್ತು. ರಾಜಕಾರಣಕ್ಕೆ ಹೊಸ ವ್ಯಾಖ್ಯಾನ ಬರೆಯಬಲ್ಲ ಇಂತಹ ಎಷ್ಟೋ ಯುವ ಪ್ರತಿಭೆಗಳು ಪ್ರಾತಿನಿಧ್ಯದ ಅಸಾಧ್ಯತೆ ಮನಗಂಡು ರಾಜಕಾರಣಕ್ಕೆ ಬೆನ್ನು ತೋರಿಸುವುದನ್ನು ಗಂಭೀರವಾಗಿ ಗಮನಿಸಬೇಕಿದೆ. ಆದರೆ ಕುಟುಂಬ ರಾಜಕಾರಣದ ನಶೆ ಏರಿಸಿಕೊಂಡಿರುವ ನಾಯಕರಿಂದ ಇದನ್ನು ಅಪೇಕ್ಷಿಸಲು ಸಾಧ್ಯವೇ?

ಬಿಜೆಪಿಯು ದಾವಣಗೆರೆಯಿಂದ ಗಾಯತ್ರಿ ಸಿದ್ಧೇಶ್ವರ (ಜಿ.ಎಂ.ಸಿದ್ಧೇಶ್ವರ ಮಡದಿ), ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ (ಬಿ.ಎಸ್.ಯಡಿಯೂರಪ್ಪ ಪುತ್ರ), ಬೆಂಗಳೂರು ಗ್ರಾಮಾಂತರದಿಂದ ಡಾ. ಸಿ.ಎನ್.ಮಂಜುನಾಥ್ (ಎಚ್.ಡಿ.ದೇವೇಗೌಡರ ಅಳಿಯ) ಅವರಿಗೆ ಅವಕಾಶ ಒದಗಿಸಿದೆ. ಜೆಡಿಎಸ್ ಹಾಸನದಿಂದ ಪ್ರಜ್ವಲ್ ರೇವಣ್ಣ (ಎಚ್.ಡಿ.ರೇವಣ್ಣ ಮಗ) ಅವರನ್ನು ಕಣಕ್ಕಿಳಿಸಿದೆ. ಇನ್ನು, ಕೆ.ಎಸ್.ಈಶ್ವರಪ್ಪ ತಮ್ಮ ಮಗ ಕಾಂತೇಶ್‌ಗೆ ಹಾವೇರಿ ಟಿಕೆಟ್ ಕೈತಪ್ಪಿತೆಂದು ಪರಿತಪಿಸಿದರೆ, ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್ (ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ) ಕಣ್ಣೀರಿಟ್ಟಿದ್ದಾರೆ. ತಮ್ಮ ಮಗ ಅಲೋಕ್‌ಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ನೀಡದಿದ್ದರೆ ತಾವೇ ಅಭ್ಯರ್ಥಿ ಆಗುವುದಾಗಿ ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಪಟ್ಟು ಹಿಡಿದಿದ್ದೂ ಉಂಟು. ಜೊತೆಗೆ ಕಾಂಗ್ರೆಸ್ ಟಿಕೆಟ್ ಪಡೆದು ಕಲಬುರಗಿಯಿಂದ ರಾಧಾಕೃಷ್ಣ ದೊಡ್ಡಮನಿ (ಮಲ್ಲಿಕಾರ್ಜುನ ಖರ್ಗೆ ಅಳಿಯ), ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್ (ಡಿ.ಕೆ.ಶಿವಕುಮಾರ್ ಸೋದರ), ಮಂಡ್ಯದಿಂದ ಸ್ಟಾರ್ ಚಂದ್ರು (ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಸೋದರ) ಚುನಾವಣೆಯಲ್ಲಿ ಸೆಣಸಲಿದ್ದಾರೆ.

ವಂಶಾಡಳಿತವು ರಾಜ್ಯಕ್ಕಾಗಲೀ ದೇಶಕ್ಕಾಗಲೀ ಹೊಸದೇನಲ್ಲ. ಬಹುಶಃ ರಾಷ್ಟ್ರ ಮಟ್ಟದಲ್ಲಿ ಈ ಆರೋಪಕ್ಕೆ ತುತ್ತಾದ ಮೊದಲ ಕುಟುಂಬ ನೆಹರೂ ಅವರದು. ಐದಾರು ದಶಕಗಳ ಹಿಂದಿನಿಂದಲೂ ಕಾಂಗ್ರೆಸ್ ವಿರೋಧಿ ರಾಜಕಾರಣದ ಬಹುದೊಡ್ಡ ಅಸ್ತ್ರವೇ ಕುಟುಂಬ ರಾಜಕಾರಣದ ಆರೋಪ ಆಗಿತ್ತು. ಕರ್ನಾಟಕದ ಮಟ್ಟಿಗೆ ಎಚ್.ಡಿ.ದೇವೇಗೌಡರ ಕುಟುಂಬದವರು ಈ ಆರೋಪ ಹೊತ್ತವರಲ್ಲಿ ಪ್ರಮುಖರು. ಬದಲಾದ ಪರಿಸ್ಥಿತಿಯಲ್ಲಿ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಯಡಿಯೂರಪ್ಪ ಒಳಗೊಂಡಂತೆ ಬಹುಪಾಲು ನಾಯಕರು ಉಳಿಸಿಕೊಂಡಿಲ್ಲ.

ಎಂದಿನಂತೆ ಉತ್ತರವಿಲ್ಲದೇ ಉಳಿಯುವ ಪ್ರಶ್ನೆ: ಯಾರು, ಎಲ್ಲಿಂದ ಸರಿಪಡಿಸುವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT