ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಕಟ್ಟು ಅಭಿವೃದ್ಧಿ: ದಾರಿ ತಪ್ಪಿದ್ದೆಲ್ಲಿ?

ವಿವಿಧ ಬುಡಕಟ್ಟು ಜನಾಂಗಗಳಿಗೆ ಒಂದೇ ಬಗೆ ಅಭಿವೃದ್ಧಿ ಯೋಜನೆ ಜಾರಿ ಸಲ್ಲದು
Last Updated 11 ಆಗಸ್ಟ್ 2015, 19:31 IST
ಅಕ್ಷರ ಗಾತ್ರ

ಭಾರತ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 573 ವಿವಿಧ ರೀತಿಯ ಬುಡಕಟ್ಟು ಜನಾಂಗಗಳಿದ್ದು, ಇದು ದೇಶದ ಒಟ್ಟು ಜನಸಂಖ್ಯೆಯ ಶೇಕಡ 8ರಷ್ಟು. ಸಂವಿಧಾನದ ಪ್ರಕಾರ ಇವರನ್ನು ಪರಿಶಿಷ್ಟ ವರ್ಗವೆಂದು ಪರಿಗಣಿಸಲಾಗಿದೆ.

ಬ್ರಿಟಿಷರ ಆಳ್ವಿಕೆಯಿಂದ ಹಿಡಿದು ಇಂದಿನವರೆಗೆ ಬುಡಕಟ್ಟು ಜನಾಂಗಗಳ ಅಭಿವೃದ್ಧಿಗೆ ಸರ್ಕಾರಗಳು ನೂರಾರು ಯೋಜನೆಗಳನ್ನು ಜಾರಿಗೆ ತಂದು ಕೋಟ್ಯಂತರ ಹಣ ಖರ್ಚು ಮಾಡಿವೆ. ಆದರೂ ಕಳೆದ ಐದು ದಶಕಗಳಿಂದ ಈ ಜನಾಂಗಗಳ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸುವುದಿರಲಿ, ಅರ್ಥ ಮಾಡಿಕೊಳ್ಳಲೂ  ಸಾಧ್ಯವಾಗಿಲ್ಲ. ಸಮಸ್ಯೆಗಳು ಸ್ಪಷ್ಟವಾಗುವ ಬದಲು, ಮೊದಲಿಗಿಂತಲೂ ಕ್ಲಿಷ್ಟವಾಗುತ್ತಿವೆ. ಹಾಗಾದರೆ ನಾವು ಎಡವಿದ್ದು ಎಲ್ಲಿ? ಅಭಿವೃದ್ಧಿ ಎಂಬ ನಮ್ಮ ಕಲ್ಪನೆ ತಪ್ಪಾಗಿದ್ದು ಎಲ್ಲಿ? ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಸಮಗ್ರವಾಗಿ ನೆಲಕಚ್ಚಲು ಕಾರಣವೇನು? ಈ ಯಾವ ಪ್ರಶ್ನೆಗಳಿಗೂ ಮಾನವಶಾಸ್ತ್ರಜ್ಞರ ಬಳಿ ಸಹ ಉತ್ತರವಿಲ್ಲ.

ಕರ್ನಾಟಕದಲ್ಲಿ ಒಟ್ಟು 53 ಬುಡಕಟ್ಟು ಜನಾಂಗಗಳಿದ್ದು, ಪ್ರತಿ ಜನಾಂಗವೂ ಭಾಷೆ ಮತ್ತು ಸಂಸ್ಕೃತಿಯಲ್ಲಿ ಹೆಚ್ಚಿನ ವೈವಿಧ್ಯವನ್ನು ಹೊಂದಿದೆ. ಇದರಲ್ಲಿ ಕೊರಗ ಮತ್ತು ಜೇನುಕುರುಬರನ್ನು ಅತಿ ಹಿಂದುಳಿದ ಬುಡಕಟ್ಟು ಜನಾಂಗಗಳೆಂದು ಗುರುತಿಸಲಾಗಿದೆ. ಇತ್ತೀಚಿನ ವರದಿ ಪ್ರಕಾರ, ರಾಜ್ಯದ ಬುಡಕಟ್ಟು ಜನಾಂಗಗಳ ಜನಸಂಖ್ಯೆ ಸುಮಾರು 36 ಲಕ್ಷವಿದ್ದು, ಸಾಕ್ಷರತೆಯ ಪ್ರಮಾಣ ಶೇ 27ರಷ್ಟನ್ನು ತಲುಪಿದೆ.

ಬಹುತೇಕ ಎಲ್ಲ ಆದಿವಾಸಿಗಳು ಕೂಲಿಕಾರರಾಗಿದ್ದು ಕೆಲವರು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದೆಡೆ ವಿಶ್ವದಾದ್ಯಂತ ವಿಶ್ವ ಬುಡಕಟ್ಟು ಜನಾಂಗಗಳ ದಿನ ಆಚರಿಸಿದ್ದರೆ (ಆ. 9) ಭಾರತದಲ್ಲಿ ಬಹುಸಂಖ್ಯಾತ ಬುಡಕಟ್ಟು ಜನಾಂಗಗಳು ಅರ್ಧ ಹೊಟ್ಟೆಯಲ್ಲಿ ಬದುಕು ಕಟ್ಟಿಕೊಳ್ಳಲು ದೊಡ್ಡ ಅರಣ್ಯ ಪ್ರದೇಶಗಳಲ್ಲಿ ಹೋರಾಡುತ್ತಿರುವುದು ದುರಂತವೇ ಸರಿ.

ಸ್ವಾತಂತ್ರ್ಯಾನಂತರ ಅಂದಿನ ಸರ್ಕಾರಕ್ಕೆ ಎದುರಾಗಿದ್ದು ಎರಡು ಪ್ರಮುಖ ಪ್ರಶ್ನೆಗಳು. ಒಂದು, ಬುಡಕಟ್ಟು ಜನಾಂಗಗಳನ್ನು ಪ್ರತ್ಯೇಕವಾಗಿ ಅಭಿವೃದ್ಧಿ ಮಾಡಬೇಕೆ ಅಥವಾ ಇತರ ಮುಂದುವರಿದ ಜನಾಂಗಗಳೊಂದಿಗೆ ವಿಲೀನಗೊಳಿಸಬೇಕೆ ಎಂಬುದು. ಈ ಪ್ರಶ್ನೆಗಳಿಗೆ ಉತ್ತರ ಇಂದಿಗೂ ಸಿಕ್ಕಿಲ್ಲ. ಬುಡಕಟ್ಟು ಅಭಿವೃದ್ಧಿಯ ಗುರಿ ಮತ್ತು ಉದ್ದೇಶಗಳು ಏನು? ನಿರ್ದಿಷ್ಟವಾಗಿ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ? ಇದರ ಕೊನೆ ಯಾವಾಗ? ಯಾವ ಫಲಿತಾಂಶದ ಆಧಾರದ ಮೇಲೆ ಬುಡಕಟ್ಟು ಜನಾಂಗಗಳ ಅಭಿವೃದ್ಧಿಯಾಗಿದೆ ಎಂದು ತಾಂತ್ರಿಕವಾಗಿ ಮತ್ತು ತಾರ್ಕಿಕ ವಾಗಿ ಹೇಳಬಹುದು ಎಂಬ ಪ್ರಶ್ನೆಗಳು ಇಂದಿನವರೆಗೂ ಉತ್ತರ ಸಿಗದೆ ಹಾಗೇ ಉಳಿದಿವೆ.

ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ವಿಭಿನ್ನವಾಗಿರುವ ದೇಶದ ವಿವಿಧ ಬುಡಕಟ್ಟು ಜನಾಂಗಗಳಿಗೆ ಒಂದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ನಾವು ಮಾಡುತ್ತಿರುವ ಅತಿ ದೊಡ್ಡ ತಪ್ಪು. ದೇಶದ  ಪ್ರತಿ ಬುಡಕಟ್ಟು ಜನಾಂಗವೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ವಿಭಿನ್ನ ಸ್ತರಗಳಲ್ಲಿ ಸಾವಿರಾರು ವರ್ಷಗಳಿಂದ ನೆಲೆ ನಿಂತಿರುವುದರಿಂದ, ನಮ್ಮ ಸರ್ಕಾರದ ಯೋಜನೆಗಳು ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ನಿರ್ದಿಷ್ಟವಾಗಿರುವುದು ತುಂಬಾ ಅವಶ್ಯಕ.

ಉದಾಹರಣೆಗೆ, ಉತ್ತರ ಭಾರತದ ಬುಡಕಟ್ಟು ಜನಾಂಗಗಳ ಸಮಸ್ಯೆಯು ದಕ್ಷಿಣ ಭಾರತದ ಬುಡಕಟ್ಟು ಜನಾಂಗಗಳ ಸಮಸ್ಯೆಗಿಂತ ಸಂಪೂರ್ಣವಾಗಿ ವಿಭಿನ್ನವಾಗಿದೆ. ಸಂತಾಲ, ಮುಂಡ, ನಾಗದಂಥ ಪ್ರಮುಖ ಬುಡಕಟ್ಟು ಜನಾಂಗಗಳಿಗೆ ಒಂದು ಕಾರ್ಯಕ್ರಮ ರೂಪಿಸಿದರೆ ಅದರಿಂದ ಆ ರಾಜ್ಯದ ಬುಡಕಟ್ಟು ಜನಾಂಗಗಳಿಗೆ ಮಾತ್ರ ಅನುಕೂಲವಾದೀತು. ಆಗ ಕರ್ನಾಟಕದ ಕೊರಗ, ಎರವ ಇತ್ಯಾದಿ ಬುಡಕಟ್ಟು ಜನಾಂಗಗಳಿಗೆ ಆಗುವ ಲಾಭವಾದರೂ ಏನು? ಒಂದು ನಿರ್ದಿಷ್ಟ ಅಭಿವೃದ್ಧಿ ಯೋಜನೆ ದೇಶದ ಎಲ್ಲ ಬುಡಕಟ್ಟು ಜನಾಂಗಗಳಿಗೂ ಸಮಗ್ರವಾಗಿ ಏಕಕಾಲಕ್ಕೆ ಉಪಯುಕ್ತವಾಗುತ್ತದೆ ಎಂಬ ಕಲ್ಪನೆಯೇ ಅರ್ಥಹೀನ. ಇತ್ತೀಚಿನ ಹೆಚ್ಚಿನ ಜನಕಲ್ಯಾಣ ಯೋಜನೆಗಳ ಲಾಭವನ್ನು ಬಲಾಢ್ಯ ಬುಡಕಟ್ಟು ಜನಾಂಗದ ಗುಂಪುಗಳೇ ಪಡೆದುಕೊಳ್ಳುತ್ತಿದ್ದು, ಇತರ ಬುಡಕಟ್ಟು ಜನರು  ಸಾಮಾಜಿಕ ಮತ್ತು ಆರ್ಥಿಕವಾಗಿ ಹೊರಗುಳಿಯುತ್ತಿದ್ದಾರೆ.

ಇಂದು ದೇಶದಲ್ಲಿ ಹಲವಾರು ಗುಂಪುಗಳು ಬುಡಕಟ್ಟು ಜನಾಂಗಗಳ ಪಟ್ಟಿಗೆ ಸೇರುವ ಎಲ್ಲ ಅರ್ಹತೆ ಹೊಂದಿದ್ದರೂ  ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಇವರು ಬುಡಕಟ್ಟು ಜನಾಂಗಗಳಿಗಿಂತ ಹೆಚ್ಚಾಗಿ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದ್ದಾರೆ. ಸರ್ಕಾರದ ಯೋಜನೆಗಳು ಬುಡಕಟ್ಟು ಜನಾಂಗವನ್ನು ತಲುಪುತ್ತಿವೆ ಎಂಬ ಭ್ರಮೆಯಲ್ಲಿ ಇನ್ನೂ ಹೊಸ ಹೊಸ ಅಭಿವೃದ್ಧಿ ಯೋಜನೆಗಳನ್ನು ಹುಟ್ಟುಹಾಕಲಾಗುತ್ತಿದೆ. ಸರ್ಕಾರದ ಯಾವುದೇ ಹೊಸ ಯೋಜನೆ ಬಂದರೂ ಮೊದಲು ನಿರ್ವಸಿತರಾಗುತ್ತಿರುವುದು ಬುಡಕಟ್ಟು ಜನಾಂಗಗಳೇ. ದೇಶದ ಮಧ್ಯಮ ವರ್ಗದ ಜನ ಅನುಭವಿಸುತ್ತಿರುವುದಕ್ಕಿಂತ ಹೆಚ್ಚಾಗಿ ನಿರುದ್ಯೋಗ, ಸಾಮಾಜಿಕವಾಗಿ ಹೊರಗುಳಿಯುವಿಕೆ, ಆರ್ಥಿಕ ಅಸಾಮರ್ಥ್ಯವನ್ನು  ಬುಡಕಟ್ಟು ಜನಾಂಗಗಳು ಅನುಭವಿಸುತ್ತಿವೆ.

ಬುಡಕಟ್ಟು ಜನರ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಅನುಗುಣವಾದ ಪರಿಣಾಮಕಾರಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುವುದಕ್ಕೆ ಇನ್ನೂ ನಮಗೆ ಸಾಧ್ಯವಾಗಿಲ್ಲ. ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಮರೆಯಲು ಆಗದೆ ಅಥವಾ ಅಭಿವೃದ್ಧಿಯ ಪಥದಲ್ಲಿ ಮುಂದುವರಿಯಲೂ ಆಗದೆ ಅವರು ಕವಲು ದಾರಿಯಲ್ಲಿ ನಿಂತಿದ್ದಾರೆ. ಇದರಿಂದ  ಬುಡಕಟ್ಟು ಅಭಿವೃದ್ಧಿ ಎಂಬ ಪರಿಕಲ್ಪನೆಯೇ ದುರಂತಮಯ ಅಂತ್ಯದತ್ತ ಸಾಗುತ್ತಿದೆ ಎಂದರೆ ತಪ್ಪಿಲ್ಲ.

ಬ್ರಿಟಿಷ್ ಆಡಳಿತದಲ್ಲಿ ಬುಡಕಟ್ಟು ಜನಾಂಗಗಳನ್ನು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೊರಗುಳಿದ ಪ್ರದೇಶ ಮತ್ತು ಅರೆ ಹೊರಗುಳಿದ ಪ್ರದೇಶದಲ್ಲಿ ನೆಲೆಸಿದವರೆಂದು   ವಿಂಗಡಿಸಲಾಗಿತ್ತು. ವಿಚಿತ್ರವೆಂದರೆ ಸ್ವಾತಂತ್ರ್ಯಾ ನಂತರ ಭಾರತ ಸರ್ಕಾರವು ಹಿಂದಿನ ಬ್ರಿಟಿಷ್ ಆಲೋಚನೆಯನ್ನೇ ಅಲ್ಪ ಮಾರ್ಪಾಡಿನೊಂದಿಗೆ ಜಾರಿಗೆ ತರಲು ನಿರ್ಧರಿಸಿತು. ಬುಡಕಟ್ಟು ಜನಾಂಗಗಳಿಗೆ ಪ್ರತ್ಯೇಕ ರಾಜಕೀಯ ಮೀಸ ಲಾತಿಗೆ ಸಂಬಂಧಿಸಿದ ಮಸೂದೆಯನ್ನು ಅಂದಿನ ಸರ್ಕಾರ ಯಾವುದೇ ಟೀಕೆ-ಟಿಪ್ಪಣಿಗಳಿಲ್ಲದೆ ಲೋಕಸಭೆಯಲ್ಲಿ ಮಂಡಿಸಿ ಗೆದ್ದಿತ್ತು.

ಆದರೆ ಈ ನಿರ್ಧಾರದಿಂದ ದೇಶದ ಎಲ್ಲ ಬುಡಕಟ್ಟು ಜನಾಂಗಗಳನ್ನೂ ಒಗ್ಗೂಡಿಸಲು ಸಹಾಯವಾಗಲಿಲ್ಲ. ವಿವಿಧ ಬುಡಕಟ್ಟು ಜನಾಂಗಗಳ ನಡುವೆ ಇದ್ದ ಅಸಮಾಧಾನದ ಹೊಗೆ ಕಡಿಮೆಯಾಗಲಿಲ್ಲ. ಬಲಿಷ್ಠ ಬುಡಕಟ್ಟು ಜನಾಂಗಗಳು ಸಣ್ಣ ಬುಡಕಟ್ಟು ಜನಾಂಗಗಳನ್ನು ತುಳಿಯುವುದು/ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಲಾಗಲಿಲ್ಲ. ಬಹುಸಂಖ್ಯಾತ ಬುಡಕಟ್ಟು ಜನಾಂಗಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಪ್ರತ್ಯೇಕಿಸುವುದು ಒಂದು ರೀತಿಯಲ್ಲಿ ಬುಡಕಟ್ಟು ಜನಗಳ ಮೇಲೆ ನಕಾರಾತ್ಮಕ  ಪರಿಣಾಮವನ್ನು ಬೀರುತ್ತದೆ ಮತ್ತು ರಾಷ್ಟ್ರದ ಮುಖ್ಯವಾಹಿನಿಗೆ ಇವರನ್ನು ಕರೆತರುವುದಕ್ಕೆ ಅಡೆತಡೆಯಾಗುತ್ತದೆ.

ದೇಶದಾದ್ಯಂತ ನಡೆದ ವಿವಿಧ ಬುಡಕಟ್ಟು ಜನಾಂಗಗಳ ಸಮ್ಮೇಳನಗಳಲ್ಲಿ ಸರ್ಕಾರದ  ಈ ನಿರ್ಧಾರದ ಬಗ್ಗೆ ಅಸಮಾಧಾನ ಕಾಣಿಸಿಕೊಂಡಿತು. ಇತ್ತೀಚಿನ ವರ್ಷಗಳಲ್ಲಿ ವಿವಿಧ ಸರ್ಕಾರಗಳು ಸ್ವಾಯತ್ತತೆಯ ಹೆಸರಿನಲ್ಲಿ ಬಲಿಷ್ಠ ಬುಡಕಟ್ಟು ಜನಾಂಗಗಳನ್ನು ಮತ ಬ್ಯಾಂಕ್‌ಗಳಾಗಿ ಪರಿವರ್ತಿಸುವುದು ಸಾಮಾನ್ಯವಾಗಿದೆ. ಪ್ರತ್ಯೇಕ ನಾಗ ಮತ್ತು ಗೂರ್ಖಾ ಲ್ಯಾಂಡ್ ಸ್ಥಾಪನೆಗೆ ನಡೆಸುತ್ತಿರುವ ಹೋರಾಟವನ್ನು ನಾವು ಗಮನಿಸಬಹುದು.

ಆದರೆ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಸರ್ಕಾರಗಳು ಒಪ್ಪಿದರೆ ಇದರಿಂದ ದೇಶದಲ್ಲಿ ಸಮಗ್ರತೆ ಮತ್ತು ಏಕತೆ ಮೇಲೆ ಉಂಟಾಗುವ ಪರಿಣಾಮ ಊಹಿಸಲಸಾಧ್ಯ. ಪ್ರತ್ಯೇಕ ರಾಜ್ಯಗಳಿಗೆ ಹೋರಾಡುತ್ತಿರುವ ವಿವಿಧ ಬುಡಕಟ್ಟು ಜನಾಂಗಗಳನ್ನು ಸಂಧಾನಕ್ಕೆ ಆಹ್ವಾನಿಸಿ ಹೋರಾಟವನ್ನು ಕೈಬಿಡುವುದರ ಬಗ್ಗೆ ಮನವೊಲಿಸಬೇಕಾಗಿದೆ. ಬುಡಕಟ್ಟು ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಬುಡಕಟ್ಟು ಜನಾಂಗಗಳಲ್ಲಿ ಮನೆಮಾಡಿರುವ ಆತಂಕ, ಉದ್ವಿಗ್ನತೆ  ಸಂಶಯ ಪ್ರವೃತ್ತಿ ದೂರ ಮಾಡಲು ಕ್ರಮ ಕೈಗೊಳ್ಳಬೇಕಿದೆ.

ಕೆಲವು ಬುಡಕಟ್ಟು ರಾಜಕಾರಣಿಗಳು ಸಂದರ್ಭವನ್ನು ತಮ್ಮ ಉಪಯೋಗಕ್ಕೆ ಬಳಸಿಕೊಂಡು ಸಮಸ್ಯೆಯನ್ನು ಇನ್ನೂ ಸಂಕೀರ್ಣಗೊಳಿಸುತ್ತಿದ್ದಾರೆ. ಅಲ್ಲದೆ ಬುಡಕಟ್ಟು ಜನಾಂಗ­ಗಳ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರವಿರುವುದಿಲ್ಲ. ಅವು ಕೇಂದ್ರವು ಜಾರಿಗೆ ತರುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದೆ. ಇತ್ತೀಚೆಗೆ ಜಾರಿಗೆ ತಂದಿರುವ ಅರಣ್ಯ ಹಕ್ಕು ಕಾಯ್ದೆಯೂ ಬುಡಕಟ್ಟು ಜನಾಂಗಗಳನ್ನು ಇನ್ನೂ ಸರಿಯಾಗಿ ತಲುಪಿಲ್ಲ.

ಐ.ಟಿ.ಡಿ.ಪಿ. ಯೋಜನೆ ವಿವಿಧ ಹಿತಾಸಕ್ತಿಗಳಿಂದಾಗಿ ಪೂರ್ಣ ಯಶಸ್ಸು ಕಾಣಲಿಲ್ಲ. ರಾಷ್ಟ್ರೀಯ ಅರಣ್ಯ ನೀತಿ ಸಾಕಷ್ಟು ಗೊಂದಲಗಳಿಂದ ಕೂಡಿದೆ. ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟು ಜನಾಂಗಗಳು ತ್ರಿಶಂಕು ಸ್ಥಿತಿಯಲ್ಲಿವೆ. ಬುಡಕಟ್ಟು ಜನಾಂಗಗಳಿಗೆ ನೀಡಿರುವ ಕೃಷಿ ಭೂಮಿಯ ಒತ್ತುವರಿ, ಸ್ಥಳೀಯ ಲೇವಾದೇವಿದಾರರ ಹಿಡಿತ, ಅಧಿಕಾರಿಗಳ ಕಿರುಕುಳದ ಬಗ್ಗೆ ಸ್ಥಳೀಯ ಸರ್ಕಾರಗಳು ಗಮನಹರಿಸುತ್ತಿಲ್ಲ.

ರಾಜಕೀಯ ಪ್ರಜ್ಞೆಯ ಕೊರತೆ ಹೆಚ್ಚಾಗಿ ಇವರನ್ನು ಕಾಡುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಸರಿಯಾದ ಹೊಂದಾಣಿಕೆ ಕಂಡುಬರದೆ ಎಷ್ಟೋ ಬುಡಕಟ್ಟು ಯೋಜನೆಗಳು ನನೆಗುದಿಗೆ ಬಿದ್ದಿವೆ. ಬುಡಕಟ್ಟು ಪಂಚಾಯಿತಿಗಳ ಸ್ಥಾಪನೆ ಕೆಲವು ಕಡೆ ಮಾತ್ರ ನಡೆದಿದೆ. ಬುಡಕಟ್ಟು ಜನರನ್ನು ರಾಜಕೀಯ ಪ್ರಜಾಪ್ರಭುತ್ವಕ್ಕೆ ತರಬೇತುಗೊಳಿಸುವುದು ತುರ್ತು  ಅಗತ್ಯಗಳಲ್ಲಿ ಒಂದು. ಯಾವುದೇ ಆಧುನಿಕ ತಂತ್ರಜ್ಞಾನವನ್ನು ಬುಡಕಟ್ಟು ಸಮಾಜಕ್ಕೆ ಪರಿಚಯಿಸಿ ಜೀವನ ಮಟ್ಟ ಸುಧಾರಿಸಲು ಕ್ರಮ ಕೈಗೊಂಡಾಗ ಅವರ ವಿಶಿಷ್ಟ ಸಂಸ್ಕೃತಿ ಅಡ್ಡ ಬರುತ್ತದೆ.

ಇದರಿಂದ ಹೊಸ ಕಾರ್ಯಕ್ರಮವನ್ನು ಸಮಗ್ರವಾಗಿ ವಿಶ್ಲೇಷಿಸಿ ನಂತರ ಜಾರಿಗೆ ತರುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಸಂವಹನ ಮತ್ತು ಅರಿವಿನ ಕೊರತೆಯಿಂದಾಗಿ ಸರ್ಕಾರದ ಕಾರ್ಯಕ್ರಮಗಳು ಇಂದು ಬುಡಕಟ್ಟು ಜನಾಂಗವನ್ನು ಸಮರ್ಪಕವಾಗಿ ತಲುಪುತ್ತಿಲ್ಲ. ಇದಕ್ಕೆ ಮಖ್ಯ ಕಾರಣ ಇವರು ಹೆಚ್ಚು ವಾಸಿಸುತ್ತಿರುವುದು ಬೆಟ್ಟಗುಡ್ಡ, ದುರ್ಗಮ ಪ್ರದೇಶಗಳಲ್ಲಿ. ಇಲ್ಲಿಗೆ ಸಂಚಾರ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಇದರಿಂದ ಯಾವ ಸರ್ಕಾರಿ ಅಧಿಕಾರಿಯೂ ಇತ್ತ ತಲೆ ಹಾಕುವುದಿಲ್ಲ. ಹೆಚ್ಚಿನ ಅಧಿಕಾರಿಗಳನ್ನು ಶಿಕ್ಷೆಯ ರೂಪದಲ್ಲಿ ಬುಡಕಟ್ಟು ಜನ ಹೆಚ್ಚಾಗಿರುವ ಪ್ರದೇಶಗಳಿಗೆ ಮತ್ತು ಸರ್ಕಾರದ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಕೆಲವೊಮ್ಮೆ ಅಧಿಕಾರಿಗಳ ಮಧ್ಯೆ ಹೊಂದಾಣಿಕೆಯೇ ಮುಖ್ಯ ಸಮಸ್ಯೆಯಾಗಿರುತ್ತದೆ.

ಯಾವುದೇ ಸಮುದಾಯದ ಅಭಿವೃದ್ಧಿಯಲ್ಲಿ ಅವರುಗಳ ಬದಲಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಅಂಶಗಳು ಹೆಚ್ಚು ಪರಿಣಾಮಕಾರಿ ಪಾತ್ರ ವಹಿಸುತ್ತವೆ. ಈ ದಿಸೆಯಲ್ಲಿ ಆದಿವಾಸಿಗಳಿಗೆ ಅಗತ್ಯವಿರುವ ವಿವಿಧ ಯೋಜನೆಗಳು ಸಕಾಲದಲ್ಲಿ ತಲುಪುವಂತೆ ನೋಡಿಕೊಳ್ಳಬೇಕಾಗಿದೆ. ಬುಡಕಟ್ಟು ಜನಾಂಗಗಳನ್ನು ಅರಣ್ಯ ಆಧಾರಿತ ಆರ್ಥಿಕ ಸ್ವಾವಲಂಬನೆ ಮತ್ತು ನೆಲೆ ನಿಂತ ವ್ಯವಸಾಯಗಾರರನ್ನಾಗಿ ರೂಪಿಸುವುದು ಅವಶ್ಯ ಎಂಬುದು ತಜ್ಞರ ಅಭಿಪ್ರಾಯ.

ದೇಶದ ಬುಡಕಟ್ಟು ಜನಾಂಗಗಳನ್ನು ಸಂಪೂರ್ಣವಾಗಿ ಮಾನವಶಾಸ್ತ್ರೀಯವಾಗಿ ಪುನರ್ವಿಂಗಡಿಸುವುದು ಅಗತ್ಯಎನಿಸುತ್ತದೆ. ಈ ಪುನರ್ವಿಂಗಡಣೆ ತಾಂತ್ರಿಕ ಮತ್ತು ಆರ್ಥಿಕ ಅಂಶಗಳ ಆಧಾರದಲ್ಲಿ ಇರಬೇಕು. ಬುಡಕಟ್ಟು ಜನಾಂಗಗಳನ್ನು ಫಲಾನುಭವಿಗಳೆಂದು ಕರೆಯದೆ ಯೋಜನಾ ತಯಾರಿಕೆಯಲ್ಲಿ ಪಾಲುದಾರರನ್ನಾಗಿ ಸರ್ಕಾರ ಮಾಡಿಕೊಳ್ಳಬೇಕು. ಬುಡಕಟ್ಟು ಆರ್ಥಿಕತೆಯನ್ನು ಸಮಗ್ರ ಆರ್ಥಿಕತೆಗೆ ಒಳಪಡಿಸುವ ಬದಲು ತಾಂತ್ರಿಕ- ಪರಿಸರ ಆಧಾರಿತ ಕೌಶಲಗಳನ್ನು ಜನರಲ್ಲಿ ಬೆಳೆಸುವುದು ಉತ್ತಮ.

ಸಾಮಾಜಿಕ, ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು. ರಾಷ್ಟ್ರದ ಮುಖ್ಯವಾಹಿನಿಗೆ ಬರುವಂತೆ ಮಾಡಲು ಅವರನ್ನು ಮಾನಸಿಕವಾಗಿ ಸಿದ್ಧ ಮಾಡಬೇಕಾಗಿದೆ. ಬದಲಾವಣೆಗೆ ಹೊಂದಿಕೊಳ್ಳಲು ಬುಡಕಟ್ಟು ಜನರಿಗೆ ಸಾಕಷ್ಟು ಅವಕಾಶ ನೀಡುವುದು ಮೊದಲ ಆದ್ಯತೆ ಆಗಬೇಕು. ಸ್ಥಳೀಯ ಸರ್ಕಾರಗಳು ಸಹ ಕಾರ್ಯಕ್ರಮ ಅನುಷ್ಠಾನಗೊಳಿಸುವುದರಲ್ಲಿ ಹೆಚ್ಚಿನ ನಿಗಾ ವಹಿಸಬೇಕು.

ಲೇಖಕ ಸಹ ಪ್ರಾಧ್ಯಾಪಕ,
ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ, ಮೈಸೂರು ವಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT