ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: 60% ಕನ್ನಡ

Published 6 ಮಾರ್ಚ್ 2024, 1:24 IST
Last Updated 6 ಮಾರ್ಚ್ 2024, 1:24 IST
ಅಕ್ಷರ ಗಾತ್ರ

‘ರೀ, ನನಗೊಂದು ಡೌಟು, ಬೋರ್ಡ್‌ಗಳಲ್ಲಿ ಕನ್ನಡಕ್ಕೆ 60 ಪರ್ಸೆಂಟ್ ಆದ್ಯತೆ ನೀಡಬೇಕೆಂದು ಸರ್ಕಾರ ಹೇಳಿದೆ. ಪರ್ಸೆಂಟೇಜ್ ಪಾಲನೆಯ ‘ಬೋರ್ಡ್ ಪರೀಕ್ಷೆ’ಯಲ್ಲಿ ಎಲ್ಲಾ ಮಳಿಗೆಗಳು ಪಾಸಾಗ್ತವಾ?’ ಸುಮಿಗೆ ಅನುಮಾನ.

‘ಅಧಿಕಾರಿಗಳು ಟೇಪ್ ಹಿಡಿದು ಬೋರ್ಡಿನ ಕನ್ನಡದ ಉದ್ದ, ಅಗಲವನ್ನು ಅಳತೆ ಮಾಡಿ ಕ್ಯಾಲ್ಕ್ಯುಲೇಟ್ ಮಾಡ್ತಾರೆ. ಒಂದು ಪರ್ಸೆಂಟ್ ಕಮ್ಮಿಯಿದ್ದರೂ ಫೇಲ್ ಮಾಡಬಹುದು’ ಅಂದ ಶಂಕ್ರಿ.

‘ಇನ್ನೊಂದು ಡೌಟು, ಜ್ಯುವೆಲ್ಲರಿ ಮಾರ್ಟ್ ಅಂತ ಕನ್ನಡದಲ್ಲಿ ಬೋರ್ಡ್ ಬರೆಸಿದರೆ ಸಾಕೆ? ಆಭರಣ ಮಳಿಗೆ ಎಂದು ಕನ್ನಡಕ್ಕೆ ಅನುವಾದಿಸಿ ಬರೆಸಬೇಕೆ?’

‘ಸದ್ಯಕ್ಕೆ ಅನುವಾದ ಕಡ್ಡಾಯವಿಲ್ಲ. ನಾಮಫಲಕದಲ್ಲಿ ಕನ್ನಡ ಪದಗಳು ಲಕಲಕ ಅನ್ನಬೇಕಷ್ಟೇ’.

‘ಕನ್ನಡ ಅನುವಾದ, ಕಾಗುಣಿತ ತಪ್ಪಿಲ್ಲದ ಶುದ್ಧ ಕನ್ನಡವನ್ನು ಇನ್ನೊಂದು ಹಂತದಲ್ಲಿ ಸರ್ಕಾರ ಕಡ್ಡಾಯ ಮಾಡಬಹುದೇನೋ’.‌

‘ಕೆಲವು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಗೊತ್ತಿಲ್ಲದ ಸಿಬ್ಬಂದಿ ಇರುತ್ತಾರೆ, ಅವರೊಂದಿಗೆ ವ್ಯವಹರಿಸಲು ಕನ್ನಡಿಗರಿಗೆ ಕಷ್ಟವಾಗಬಹುದು. 60 ಪರ್ಸೆಂಟ್ ಕನ್ನಡಿಗರಿಗೆ ಉದ್ಯೋಗ ಕೊಡಿ ಇಲ್ಲವೇ ಸಿಬ್ಬಂದಿಗೆ ಕನ್ನಡ ಕಲಿಸಿ ಅಂತ ಸಲಹೆ ಕೊಡಬೇಕು’.

‘ಹಾಗೇ, ಗ್ರಾಹಕರು ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಕಡ್ಡಾಯ ಮಾಡಿಬಿಟ್ಟರೆ ಕನ್ನಡೇ
ತರರಿಗೆ ವ್ಯವಹಾರ ಕಷ್ಟವಾಗಬಹುದು ಕಣ್ರೀ’.

‘ಕನ್ನಡದಲ್ಲಿ ವ್ಯವಹರಿಸುವವರಿಗೆ ಡಿಸ್ಕೌಂಟ್ ಆಫರ್ ನೀಡಬಹುದು, ‘ಒಂದೇ ತಿಂಗಳಲ್ಲಿ ಕನ್ನಡ ಕಲಿಯಿರಿ’ ಪುಸ್ತಕ ಕೊಟ್ಟು ಗ್ರಾಹಕರನ್ನು ಮಳಿಗೆಗೆ ಆಕರ್ಷಿಸಬಹುದು’.

‘ಚಪ್ಪಲಿಗಳನ್ನು ಇಲ್ಲಿಯೇ ಬಿಡಿ ಎನ್ನುವ ರೀತಿಯಲ್ಲಿ, ‘ಬ್ಯಾಗ್‍ಗಳನ್ನು ಇಲ್ಲಿಯೇ ಇಡಿ’ ಎಂದು ಕೆಲವು ವಾಣಿಜ್ಯ ಮಳಿಗೆಗಳ ಹೊರಗೆ ಬೋರ್ಡ್ ಹಾಕಿದ್ದಾರಂತೆ’.

‘ಸ್ಫೋಟ ಪ್ರಕರಣ, ಸ್ಫೋಟಕ ಸುದ್ದಿಗಳಿಂದ ಎಚ್ಚೆತ್ತುಕೊಂಡು ಇಂತಹ ಬೋರ್ಡ್ ಹಾಕಿದ್ದಾರೆ, ಈ ಬೋರ್ಡ್‌ಗಳಲ್ಲಿ 60 ಪರ್ಸೆಂಟ್ ಕನ್ನಡವನ್ನು ಸರ್ಕಾರ ಕಡ್ಡಾಯ ಮಾಡಿಲ್ಲ...’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT