ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಡಿಸಿಎಂ ಡಿಶುಂ!

ಚುರುಮುರಿ: ಡಿಸಿಎಂ ಡಿಶುಂ!
Published 28 ಜೂನ್ 2024, 19:28 IST
Last Updated 28 ಜೂನ್ 2024, 19:28 IST
ಅಕ್ಷರ ಗಾತ್ರ

‘ಮತ್ತೆ ಹೆಚ್ಚುವರಿ ಎರಡು– ಮೂರು ಡಿಸಿಎಂ ಸ್ಥಾನಕ್ಕೆ ಡಿಶುಂ ಡಿಶುಂ ಶುರುವಾಗೈತೆಲ್ಲ’ ಮಾತು ತೆಗೆದ ಗುದ್ಲಿಂಗ. ‘ಅದಕ್ಯಾಕ್ ವರಿ? ಒಂದು ಎಂಟು ಹತ್ತು ಜನನ್ನ ಡಿಸಿಎಂ ಮಾಡುದ್ರಾಯ್ತದೆ ಅಂದವ್ರಲ್ಲ ಒಬ್ರು ಸಾಸಕರು’ ಎಂದ ಮಾಲಿಂಗ.

‘ಲೇಯ್, ಅವರು ಮಾತಲ್ಲೆ ಗುನ್ನ ಮಡಗವ್ರೆ, ಅಂಗೆಲ್ಲಾ ಮಾಡಕ್ಕಾಗಲ್ಲ ಕಣ್ಲಾ?’

‘ಯಾಕಾಗಲ್ಲ ಅಂತಿವ್ನಿ? ಅಂಗ್ ಮಾಡ್ಬುಟ್ರೆ ಭಿನ್ನಮತ ತಣ್ಣಗಾಗ್ತೈತಲ್ಲ’.

‘ನಿನ್ ತಲೆ, ಲೇಯ್ ಇಬ್ರು ಡಿಸಿಎಂ ಅವ್ರೆ ಅಂದ್ಕ. ಮೂರು ಚಕ್ರದ ಆಟೊ ಎಲ್ಲೆಲ್ಲಿ ಓಯ್ತದೆ?’

‘ಎಲ್ ಬೇಕಾದ್ರೂ ಓಯ್ತದೆ. ಫ್ಲೈ ಓವರ‍್ರು, ಅಂಡರ್‌ಪಾಸು, ಮೈನ್‍ರೋಡು, ಕ್ರಾಸ್ ರೋಡು ಎಲ್ಲಂದ್ರಲ್ಲಿ ನುಕ್ಕಂಡ್ ಓಯ್ತದೆ’.

‘ನಾಕು ಚಕ್ರದ ಕಾರು ಇಷ್ಟು ಸಲೀಸಾಗಿ ಓಗಕ್ಕಾಯ್ತದಾ? ಅಂಡರ್‌ಪಾಸ್ ಚರಂಡಿ ನೀರಲ್ಲಿ ದೋಣಿ ಆಗ್ಬುಡುತ್ವೆ. ಪಕ್ಕದಲ್ಲಿ ಉಜ್ಜದಂತೆ, ಟಾಪ್ ಸವರದಂತೆ, ಕೆಳಗಡೆ ಆಕ್ಸಿಲ್ ಹಂಪ್ಗೆ ಹೊಡೀದಂತೆ ಓಗ್ಬೇಕಲ್ವಾ? ಇಂಗಿರ್ಬೇಕಾದ್ರೆ 8-10 ಚಕ್ರ ಅಂದ್ರೆ ಟಿಪ್ಪರ್ ಇದ್ದಂಗೆ! ಚಕ್ರ ಎಚ್ಚಾದಷ್ಟೂ ವಜೈನು ಎಚ್ಚಾಗ್ತದೆ. ಮೇಲೆ ತಕ್ಕನಾಗಿ ಲೋಡೂ ಇರ್ಬೇಕು’.

‘ಈಗ ಅರ್ಥ ಆತು ನೀನು ಏನು ಯೋಳ್ತಿದೀಯ ಅಂತ. ಹಿಂದಿನ ಚಕ್ರ ಹೆಚ್ಚಾದಷ್ಟೂ ತರಲೆ ತಾಪತ್ರಯ ಜಾಸ್ತಿ. ಎಲ್ಲ ತರ ಟ್ಯಾಕ್ಸು, ಕೈ ಹಾಕೋರು, ಕೈ ಒಡ್ಡೋರು ಎಲ್ಲಾ ಜಾಸ್ತಿನೇ! ಎಂಗಂದ್ರಂಗೆ ನುಕ್ಕಂಡು ಓಗಕ್ಕೂ ಆಗಲ್ಲ’.

‘ಅಷ್ಟೇ ಅಲ್ಲ, ಈ ಹಿಂದಿನ ಚಕ್ರಗಳಿಗೆ ರೂಟು, ಅದ್ರಲ್ಲಿರೋ ಲೂಪ್‍ಹೋಲು, ಮ್ಯಾನ್‌ಹೋಲು ಗೊತ್ತಾಗ್ಬಿಡುತ್ತೆ. ಒಂದು ಪಂಕ್ಚರ್ ಆದ್ರೆ ಮಿಕ್ಕೋವ ಕಾಲೂ ಎಳಿಯುತ್ತೆ...’

‘ಅದ್ಕೇ ಬರೀ ಟೂ ವೀಲರ್ ಆದ್ರೆ ಎಲ್ಲಂದ್ರಲ್ಲಿ ಹಂಪು, ಟೋಲು ಎಲ್ಲಾ ಹಾರುಸ್ಕಂಡು, ಓಣಿ ಗಲ್ಲೀಲೆಲ್ಲಾ ನುಗ್ಗುಸ್ಕಂಡು, ವ್ಹೀಲಿಂಗ್ ಮಾಡ್ಕಂಡು ಓಗ್ಬಹುದಲ್ಲ! ಎಂಗೋ ಮೆತ್ತಗೆ ಮುಂದಿನದ್ ತೆಗೆದು ಹಿಂದಿನ ಚಕ್ರ ಮುಂದಕ್ಕೆ ಜರುಗಿಸ್‌ಬಿಟ್ರೆ ಆಯ್ತು. ಹಿಂದೆ ಮೂರು ನಾಕು ಇದ್ರೆ, ಮುಂದಕ್ಕೆ ಬರೋ ಲಕ್ಕು ಯಾವ್ದಕ್ ಬರುತ್ತೋ ಏನೋ?’

‘ಅದೇನೋ ನಿಜವೆ! ಆದ್ರೂ ಹೈಕಮಾಂಡು ಏಕಾಏಕಿ ಮುಂದಕ್ಕೆ ಓಡದೇ ಇರೋ ಸ್ಟೆಪ್ನಿ ಹಾಕಿ ಎಲ್ರಿಗೂ ಕೈ ಎತ್ಬಿಡುತ್ತೆ’ ಎಂದು ನಕ್ಕ ಪರ್ಮೇಶಿ. ಮಿಕ್ಕವರೂ ಗಹಗಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT