ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಸಲಹಾ ಸಂಪುಟ!

Published 4 ಜನವರಿ 2024, 0:18 IST
Last Updated 4 ಜನವರಿ 2024, 0:18 IST
ಅಕ್ಷರ ಗಾತ್ರ

‘ಅಮ್ಮ... ಅಪ್ಪನಿಗೆ ವ್ಯವಹಾರ ಜ್ಞಾನವೇ ಇಲ್ಲ. ಮನೆಕೆಲಸದ ಶಿವಮ್ಮನಿಗೆ ಸುಖಾಸುಮ್ಮನೆ 500 ರೂಪಾಯಿ ಜಾಸ್ತಿ ಮಾಡ್ಯಾರ...’ ತಿಂಗಳೇಶನ ಬಗ್ಗೆ ಮಗನ ಆಕ್ಷೇಪ.

‘ಅವರದು ಬರೀ ಇದೇ ಕಥೆ. ಮೊನ್ನೆ ಅವರ ಅಣ್ಣನ ಮಗನ ಕಾಲೇಜು ಫೀಜಿಗೆ ಅಂತ ಹತ್ತು ಸಾವಿರ ಕಳಿಸಿದ್ದಾರೆ’ ಅಮ್ಮನ ವರಾತ.

‘ಪಕ್ಕದ ಮನೆ ಅಂಕಲ್‌ಗೆ ಕರೆಂಟ್ ಬಿಲ್ ಕಟ್ಟಾಕ ಅಂತ ಎರಡು ಸಾವಿರ ಕೊಟ್ಟಿದ್ದಾರೆ’.

‘ಅಯ್ಯೋ... ಬರಗಾಲ ಐತಿ, ಹಳ್ಳಿಯಲ್ಲಿ ನಮ್ಮ ಹೊಲ ಮಾಡುವ ರೈತನಿಗೆ ಈ ವರ್ಷ ಹಣ ಕೇಳೋದು ಬೇಡ ಅಂತ ಶುರು ಮಾಡಿದ್ದರು. ನಾನೇ ನಿಲ್ಲಿಸೇನಿ’.

‘ಅಪ್ಪನಿಗೆ ದಾನಶೂರ ಕರ್ಣ ಅನ್ನಿಸಿ
ಕೊಳ್ಳುವ ಚಟ. ಗೃಹಸಾಲ ಬೇಗ ತೀರಿಸುವ ಬಗ್ಗೆ ಒಂದಿಷ್ಟೂ ಕಾಳಜಿಯಿಲ್ಲ. ನಮ್ಮ ಮೇಲೆ ಸಾಲದ ಹೊರೆ ಹಾಕುತ್ತಾರಷ್ಟೇ’.

‘ಅಷ್ಟೇ ಅಲ್ಲ, ಸಂಬಂಧಿಕರೆಲ್ಲಾ ಸೇರಿದ ಸಮಾರಂಭಗಳಲ್ಲಿ ಏನೇನೋ ಮಾತಾಡಿ,
ಆಡಿಕೊಳ್ಳುವವರ ಬಾಯಿಗೆ ಆಹಾರ ಆಗ್ತಾರೆ’.

‘ಅಂಗಡಿಯಲ್ಲಿ ಸರಿಯಾಗಿ ಚೌಕಾಸಿ ಮಾಡಲೂ ಬರುವುದಿಲ್ಲ’ ಮಗಳೂ ದನಿ ಸೇರಿಸಿದಳು.

‘ಅಪ್ಪನಿಗೆ ಒಳ್ಳೆಯ ಸಲಹೆಗಾರರ ಅವಶ್ಯಕತೆ ಇದೆ. ಹಾಗೇ ಬಿಟ್ಟರೆ ನಮ್ಮ ಕುಟುಂಬ ದಿವಾಳಿ ಆಗೋದು ಗ್ಯಾರಂಟಿ’ ಮಗ ಎಚ್ಚರಿಕೆಯ ಗಂಟೆ ಮೊಳಗಿಸಿದ. ಸರ್ವಾನುಮತದ ತೀರ್ಮಾನದಂತೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂದಿನಂತೆ ಅಮ್ಮ ಮುಂದಾದಳು.

‘ರೀ… ಮಕ್ಕಳು ದೊಡ್ಡವರಾಗಿದ್ದಾರೆ, ನಿಮ್ಮ ಮನಸ್ಸಿಗೆ ಬಂದಂತೆ ತೀರ್ಮಾನ ತೆಗೆದು
ಕೊಳ್ಳಬೇಡಿ. ಇನ್ನುಮೇಲೆ ಹಣಕಾಸು ವಿಷಯದಲ್ಲಿ ಮಗಳು, ಬಿಸಿನೆಸ್ ಬಗ್ಗೆ ಮಗ ಮತ್ತು ಸಂಬಂಧಿಕರಿಗೆ ನೆರವು ಕುರಿತು ನನ್ನ ಮಾತು ಕೇಳಿ ಮುಂದುವರಿಯಿರಿ’.

‘ನಿಮ್ಮನ್ನೆಲ್ಲಾ ಸಲಹೆಗಾರರನ್ನಾಗಿ ನೇಮಿಸಿಕೊಂಡು ಸಂಸಾರ ನಡೆಸಲು ನಾನೇನು ಮುಖ್ಯಮಂತ್ರಿ ಸಿದ್ರಾಮಣ್ಣ ಅಲ್ಲ. ನೀವು ‘ಸಲಹಾ ಸಂಪುಟ’ ಸೇರುವ ಕನಸು ಬಿಟ್ಟುಬಿಡಿ!’ ದುರುಗುಟ್ಟಿ ಎದ್ದುಹೋದ ತಿಂಗಳೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT