ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಹೊಸ ವರ್ಷದ ಕನಸು

Published 1 ಜನವರಿ 2024, 0:30 IST
Last Updated 1 ಜನವರಿ 2024, 0:30 IST
ಅಕ್ಷರ ಗಾತ್ರ

ವರ್ಷದ ಕೊನೆಯ ದಿನ ನಡುಮಧ್ಯಾಹ್ನ ಬೆಚ್ಚಗೆ ನಿದ್ರಿಸುತ್ತಿದ್ದ ಬೆಕ್ಕಣ್ಣ ಕಚಗುಳಿಯಿಟ್ಟಂತೆ ಕಿಲಕಿಲನೆ ನಗುತ್ತಿತ್ತು.

‘ಏಳಲೇ… ಹಗಲುಹೊತ್ತಿನಾಗೆ ಎಷ್ಟರ ಮಲಗತೀ?’ ಎಂದು ಕಿವಿ ಹಿಂಡಿದೆ.

ಕಣ್ಣುತೆರೆದ ಬೆಕ್ಕಣ್ಣ ನನ್ನ ನೋಡಿದ್ದೇ, ಮುಖ ಆ ಕಡಿಗೆ ತಿರುವಿ, ‘ಛೇ, ಎಷ್ಟ್‌ ಛಂದ ಕನಸು ಬೀಳಾಕೆ ಹತ್ತಿತ್ತು, ಎಲ್ಲ ಕೆಡಿಸಿದೆ’ ಎಂದು ಗುರುಗುಟ್ಟಿತು.

‘ಏನು ಕನಸು? ಚಂದ್ರನ ಮ್ಯಾಗೆ ಹೋಗಿ ಇಲಿ ಹಿಡಿದಂಗೆ ಕನಸು ಬಿತ್ತೇನಲೇ?’ ಎಂದು ಕಿಚಾಯಿಸಿದೆ.

‘ಅದಲ್ಲ… ಹೊಸ ವರ್ಷ ಎಷ್ಟ್‌ ಛಲೋ ಇರತೈತಂತ ಕನಸು ಬೀಳಾಕೆಹತ್ತಿತ್ತು. ಹೊಸ ವರ್ಷದಾಗೆ ನಮ್‌ ಯತ್ನಾಳಮಾಮನ ನಾಲಿಗಿ ಪೂರಾ ಹೊಸಾ ವರ್ಷನ್‌ ಆಗಿರತೈತಿ. ನುಡಿದರೆ ಮುತ್ತಿನ ಹಾರದಂತೆ ಮಾತಾಡಾಕೆ ಶುರುಮಾಡಿರತಾನೆ. ಕಮಲಕ್ಕನ ಮನಿಯವರು ಎಲ್ಲಾ ಥರದ ಭಿನ್ನಮತ ಮರೆತು, ನಮ್‌ ವಿಜಿಯಣ್ಣ, ಅಶೋಕಣ್ಣ ಹೇಳಿದಂಗೆ ಕೇಳಿಕೆಂಡು, ನುಡಿದರೆ ಹೈಕಮಾಂಡು ಮೆಚ್ಚಿ ಅಹುದೆನ್ನುವ ಹಂಗೆ ಇರತಾರೆ. ಕೈಪಕ್ಷದವರ ಮನೆವಳಗೂ ಸಿದ್ರಾಮ ಅಂಕಲ್ಲು, ಡೀಕೇಶಣ್ಣ ಕಮಲಕ್ಕನ ಮನಿಯವರಿಗೆ ಮೂರೂಹೊತ್ತು ಬೈಯೂದು ಬಿಟ್ಟು, ಕರುನಾಡಿನ ಸಮಸ್ತಜನದ ಅಭಿವೃದ್ಧಿ ಮಂತ್ರ ಹಾಡತಿರತಾರೆ…’

‘ಹಗಲುಗನಸು ಕಾಣೋದಕ್ಕೆ ರೊಕ್ಕ ಬೇಡ, ಅದಕ್ಕೆ ಜಿಎಸ್‌ಟಿ ತೆರಿಗೇನೂ ಇಲ್ಲ, ಎಷ್ಟ್‌ ಬೇಕಾದ್ರೂ ಕಾಣಬೌದು! ಮತ್ತೆ ನಿನ್ನ ಕನಸಿನಾಗೆ ಕುಮಾರಣ್ಣ ಏನ್‌ ಮಾಡತಿದ್ದ’.

‘ನನ್‌ ಕನಸಿನಾಗೆ ಕುಮಾರಣ್ಣ ರಾಗಿತೆನೆಗಳ ಹಾಸಿಗೆ ಮ್ಯಾಗೆ ಮಲಗಿ, ಕೈಯಾಗೆ ಕಮಲದ ಹೂವು ಹಿಡಿದು ಕಣ್ಣುಮುಚ್ಚಿದ್ದ. ಆವಾಗ ಎಲ್ಲಾ ಕಡೆಯಿಂದ ಕಮಲಪುಷ್ಪವೃಷ್ಟಿಯಾಗಿ, ಕರುನಾಡಿನ ಮುಖ್ಯಮಂತ್ರಿ ಕುರ್ಚಿ ಮ್ಯಾಗೆ ಸುಖಾಸೀನನಾಗಿ ಕುಳಿತಂಗೆ ಅವನಿಗೆ ಕನಸು ಬಿತ್ತು’.

‘ಆಹಾಹಾ… ಕನಸಿನೊಳಗೆ ಕನಸು…! ಎಲ್ಲವೂ ನನಸಾಗದ ಕನಸುಗಳು!’

‘ಮತ್ತ ನನ್‌ ಕನಸಿನಾಗೆ ಮೋದಿಮಾಮ 2024ರ ಆಗಸ್ಟ್‌ ಹದಿನೈದಕ್ಕೆ ಕೆಂಪುಕೋಟೆ ಮ್ಯಾಗೆ‌ ನಿಂತು ‘ಮಿತ್ರೋಂ...’ ಅಂತ ಭಾಷಣ ಮಾಡತಿದ್ದರು. ಇದೊಂದು ನಿಜ ಆಗಬೌದು!’ ಎಂದು ಬೆಕ್ಕಣ್ಣ ಕಣಿ ನುಡಿಯಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT