ಶುಕ್ರವಾರ, ಅಕ್ಟೋಬರ್ 30, 2020
27 °C

ಗೇಯೋ ಎತ್ತುಗಳು

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

ತುರೇಮಣೆ ತ್ವಾಟಕ್ಕೋಗಿದ್ದಾಗ ಒಬ್ಬ ಟೀವಿ ಕ್ಯಾಮೆರಾ ಹೊತಗಂಡೋನು, ಇನ್ನೊಬ್ಬ ಮೈಕ್ ಹಿಡಕಂಡೋನು ನಮ್ಮ ಹಿಂದುಗಡೆಲೆ ಮೆಲ್ಲಗೆ ಬಂದು ‘ಸಾ, ನೀವು ರೈತರಾ?’ ಅಂತ ಕೇಳಿದ್ದಕ್ಕೆ ತುರೇಮಣೆ ‘ಹ್ಞೂಂ ಕನ್ಲಾ’ ಅಂದರು.

‘ಸಾ, ನಾವು ಬಳಂಗ್ ಚಾನಲ್ ವದರಿಗಾರರು. ರೈತರ ಆತ್ಮಹತ್ಯೆಯ ಲೈವ್ ತಕ್ಕಬರಬೇಕು ಅಂತ ಆಪೀಸಲ್ಲಿ ಯೇಳ್ಯವುರೆ. ನೀವಿಬ್ರೂ ಎಲ್ಲಿಗೋಯ್ತಾ ಇದೀರ?’ ಅಂತಂದ. ತುರೇಮಣೆಗೆ ಸಿಟ್ಟು ಬಂದು ‘ನಿನ್ನಯ್ಯನ್! ಸುಡುಗಾಡಿಗೆ ಹೋಯ್ತಾ ಇದೀವಿ ಬತ್ತೀಲಾ?’ ಅಂದ್ರು.

ಬಳಂಗಿಗೆ ಇದು ಜೋಡಿ ಆತ್ಮಹತ್ಯೆ ಕೇಸು ಅಂತ ಕನ್ಫರ್ಮ್ ಆಯ್ತು. ‘ರೈತರು ಆತ್ಮಹತ್ಯೆ ಯಾಕೆ ಮಾಡಿಕ್ಯತರೆ ಸಾ’ ಅಂತು ಬಳಂಗು.

‘ರೈತರಿಗೆ ದನ-ಕರ, ಒಳ್ಳೆ ಬೀಜ, ಗೊಬ್ಬರ, ಬೆಳೆಗೆ ಒಳ್ಳೆ ಬೆಲೆ, ಕೋಲ್ಡ್ ಸ್ಟೋರೇಜು ಮಾಡಿಕೊಡಿರ‍್ಲಾ! ರೈತರ ಜಮೀನು ಅವರ ತಾವೇ ಇರಲಿ’ ಅಂದ್ರು ತುರೇಮಣೆ.

‘ನೆನ್ನೆ ಅಸೆಂಬ್ಲಿಯಗೆ ದನ ವಿನಿಯೋಗ ಮಸೂದೆ ಪಾಸು ಮಾಡ್ಯವುರಂತೆ. ನೀವೂ ಒಂದು ದನ ಈಸ್ಕಳಿ ಸಾ?’

‘ನಮಗೆ ಸರ್ಕಾರಿ ದನ ಬ್ಯಾಡ ಕಲಾ. ಅವೆಲ್ಲಾ ಕಳ್ಳೆತ್ತುಗಳು’

‘ಇನ್ನೆಂತಾ ಹೋರಿ ಇದ್ದವು ಸಾ?’

‘ನೋಡ್ಲಾ, ರೈತರು ಗೆಯ್ಯ ಎತ್ತು ಮಡಿಕಂಡು ಗೆಯ್ಯಕ್ಕೆ ಲಾಯಕ್ಕಿಲ್ಲದ ಹೀನಸುಳಿ, ಪಾತಾಳಸುಳಿ, ದಾವಣಿಸುಳಿ, ಪರಕಲಸುಳಿ, ನಮೂನಿಸುಳಿ, ಸಿಡಗಾಲು, ಕೋರಬಗ್ರಿ, ಕೋವೆಹಲ್ಲು ಇರೋ ಅವಲಕ್ಷಣದ ದನಗಳನ್ನ ಬಸವನಬುಡ್ತರೆ’.

‘ಇವೆಲ್ಲಾ ಎಲ್ಲವೆ ಸಾ, ನಮ್ಮ ವೀಕ್ಷಕರಿಗೆ ತೋರಿಸಬಕು’.

‘ಲೇ ಪಾಪರಾ, ಅವು ಕೋಡಿಗೆ ಕೊಂಬಕಣಸು ಅಲಂಕಾರ ಮಾಡಿಕ್ಯಂಡು ಕಚೇರಿಲಿ ಅಡಬಿಟ್ಟಿ ಮೇವು ತಲಾಶ್ ಮಾಡತಿರತವೆ. ಖಜಾನೆ ಕೊರೆದು ನಮ್ಮ ದುಡ್ಡು ಎಪ್ಪೆಸ್ ಮಾಡ್ತವೆ! ಸರ್ಕಾರಿ ಜಮೀನು ಗುಳುಂ ಮಾಡ್ತವೆ! ಎಕರೆಗೆ ಟನ್ನುಗಟ್ಟಲೇ ಭತ್ತ ಬೆಳೀತವೆ! ಕರೀದು ಬಿಳಿಯಾಯ್ತದೆ? ರೈತರ ಬಾಯಿಗೆ ಮಣ್ಣು ಬೀಳ್ತದೆ’ ಅಂದ್ರು. ಈ ಸೂತ್ರ ಬಳಂಗಿಗೆ ಅರ್ಥವಾಗದೇ ಕೆಕರುಮಕರಾದದ್ದು ಕಂಡು ನನಗೆ ನಗ ತಡೆಯಕಾನಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.