ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ ನಮಸ್ಕಾರ| ಸರ್ಕಾರದ ಜನ ವಿರೋಧಿ ನಡೆ: ಪ್ರಾಧ್ಯಾಪಕ ರವಿಕುಮಾರ್‌

Last Updated 31 ಡಿಸೆಂಬರ್ 2021, 20:45 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿದೆ. ಇದನ್ನು, ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಜನವರಿ 1ರಿಂದ ಫೆಬ್ರವರಿ 7ರವರೆಗೆ ‘ಸೂರ್ಯ ನಮಸ್ಕಾರ’ ಮಾಡುವುದರ ಮೂಲಕ ಆಚರಿಸಲು ಮುಂದಾಗಿದೆ. ಇದು ಅಜ್ಞಾನದ ಪ್ರದರ್ಶನದಂತೆ ಗೋಚರಿಸುತ್ತಿದೆ. ಯಾಕೆಂದರೆ ಸೂರ್ಯ ನಮಸ್ಕಾರ, ಯೋಗ ಇತ್ಯಾದಿಗಳು ದೈಹಿಕ ಚಟುವಟಿಕೆಯ ಅಭ್ಯಾಸಗಳು. ಇವು ವೈಯಕ್ತಿಕವಾದವು. ಇವುಗಳನ್ನು ವ್ಯಕ್ತಿಗತ ಸಾಧನೆಗೆ ಯಾರು ಬೇಕಾದರೂ ಬಳಸಬಹುದಾಗಿದೆ. ಆದರೆ ಸರ್ಕಾರ ಇವುಗಳನ್ನು ಕಡ್ಡಾಯಗೊಳಿಸಿ ವಿದ್ಯಾರ್ಥಿಗಳ ಮೇಲೆ ಹೇರುತ್ತಿರುವುದು ಸರಿಯಾದುದಲ್ಲ. ಇವು ಒಂದು ನಿರ್ದಿಷ್ಟ ವರ್ಗದ ಆಚರಣೆಗಳು. ಇವುಗಳನ್ನು ಹಿಂದುತ್ವವಾದದ ವಿಸ್ತರಣೆಯ ಸಲಕರಣೆಗಳಾಗಿ ಬಳಸಲು ಇಂತಹ ಕೆಲಸಕ್ಕೆ ಮುಂದಾಗಿದೆ. ಇದು ವಿದ್ಯಾರ್ಥಿಗಳ ವೈಯಕ್ತಿಕ ಆಯ್ಕೆಯನ್ನು ನಿರಾಕರಿಸುತ್ತ ಪ್ರಜಾತಾಂತ್ರಿಕ ವಿರೋಧಿ ಕೆಲಸವನ್ನು ಮಾಡುತ್ತಿದೆ.

ರವಿಕುಮಾರ್‌ ಬಾಗಿ
ರವಿಕುಮಾರ್‌ ಬಾಗಿ

ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ಜಾತಿಯ, ಧರ್ಮಗಳ ಮಕ್ಕಳಿರುತ್ತಾರೆ. ಅವರಲ್ಲಿ ಕೆಲವರಿಗೆ ಸೂರ್ಯ ನಮಸ್ಕಾರದಲ್ಲಿ ನಂಬಿಕೆಯಿರುವುದಿಲ್ಲ. ಅವರು ಇದನ್ನು ಮಾಡಲು ಒಪ್ಪದಿದ್ದರೆ ಅವರ ಆಯ್ಕೆಯ ಸ್ವಾತಂತ್ರಕ್ಕೆ ಅವಕಾಶವಿದೆಯೆ? ಎಂಬ ಪ್ರಶ್ನೆ ಏಳುತ್ತದೆ. ಅಲ್ಲದೆ ಕಾಲೇಜುಗಳಲ್ಲಿ ಬೇರೆ ಧರ್ಮಗಳ ಆಚರಣೆಗಳನ್ನು ಸೂರ್ಯ ನಮಸ್ಕಾರದಂತೆ ಆಚರಿಸಲು ಅವಕಾಶ ನೀಡಲಾಗುವುದೇ? ಮುಸ್ಲಿಂ ಅಥವಾ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ತಮಗೆ ಇಷ್ಟವಾದ ಆಚರಣೆಗಳನ್ನು ಎಲ್ಲರೂ ಮಾಡಬೇಕು ಎಂದು ಒತ್ತಾಯಿಸಿದರೆ, ಅದಕ್ಕೆ ಸರ್ಕಾರ ಒಪ್ಪುತ್ತದೆಯೇ? ಸರ್ಕಾರ ಯಾವುದೇ ಯೋಜನೆಯನ್ನು ಜಾರಿಗೆ ತಂದರೂ ಅದು ಪ್ರಜಾಸತ್ತಾತ್ಮಕವಾಗಿರಬೇಕಲ್ಲವೇ? ಸರ್ಕಾರದ ಈ ನಡೆಯು, ದೇಶವು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿದ್ದ ‘ಧರ್ಮ ನಿರಪೇಕ್ಷತೆ’ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.

ಅಲ್ಲದೆ ಸರ್ಕಾರ ಈ ರೀತಿಯ ಆಚರಣೆಗಳನ್ನು ಮಕ್ಕಳ ಮೇಲೆ ಹೇರುವುದು ಅದರ ಬೌದ್ಧಿಕ ದಿವಾಳಿತನವನ್ನು ಎತ್ತಿತೋರಿಸುತ್ತದೆ. ಯಾವುದೇ ಸರ್ಕಾರವು ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕಲ್ಯಾಣ ರಾಷ್ಟ್ರದ ಕಲ್ಪನೆಯನ್ನು ಸಾಕಾರಗೊಳಿಸಲು ಕೆಲಸ ಮಾಡಬೇಕು. ಮುಖ್ಯವಾಗಿ ಅದು ಶಿಕ್ಷಣ, ಆರೋಗ್ಯ, ವಸತಿ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಪ್ರತಿಯೊಬ್ಬರೂ ಘನತೆಯಿಂದ ಬದುಕುವ ವಾತಾವರಣವನ್ನು ನಿರ್ಮಿಸಬೇಕು. ಆ ಮೂಲಕ ಕಲ್ಯಾಣ ರಾಜ್ಯವನ್ನು ನಿರ್ಮಾಣ ಮಾಡಬೇಕು. ಅದನ್ನು ಬಿಟ್ಟು ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಹೊತ್ತಿನಲ್ಲಿ ಈ ರೀತಿಯ ಆಚರಣೆಗಳನ್ನು ಬಲವಂತವಾಗಿ ಹೇರುವುದು ದುರಂತವೇ ಸರಿ. ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ನೆನಪುಗಳ ಬಗೆಗೆ, ಅದನ್ನು ಸಾಧಿಸಲು ಶ್ರಮಿಸಿದ ವರ ಬಗೆಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಅದನ್ನು ಮಾಡದೇ ಸೂರ್ಯ ನಮಸ್ಕಾರ ಮಾಡಿಸುವುದು ಈಗಿನ ಸರ್ಕಾರಕ್ಕೆ ಸ್ವಾತಂತ್ರ್ಯ ಚಳವಳಿ ಮತ್ತು ಅದಕ್ಕಾಗಿ ಹೋರಾಡಿದವರ ಬಗೆಗೆ ಗೌರವ ಇಲ್ಲದಿರುವುದು ಗೊತ್ತಾಗುತ್ತದೆ. ಶಿಕ್ಷಣ ವ್ಯವಸ್ಥೆ ನಾಶ ಮಾಡಲು ಅನುಸರಿಸುತ್ತಿರುವ ಕ್ರಮಗಳ ನಗ್ನ ಪರಿಚಯವೂ ಆಗುತ್ತದೆ.

ದೇಶವು ಸ್ವಾತಂತ್ರ್ಯಗೊಳ್ಳುವ ಸಂದರ್ಭದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಇಡೀ ದೇಶವೇ ಒಂದು ಸಮುದಾಯವಾಗಿ ಹೋರಾಡಿದ ಚಾರಿತ್ರಿಕ ವಿದ್ಯಮಾನವನ್ನು ಯಾರೂ ಅಲ್ಲಗಳೆಯಲಾಗದು. ಜಾತಿ-ಧರ್ಮಗಳ ಎಲ್ಲೆ ಮೀರಿ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಭಾರತವೆನ್ನುವುದು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಭಾವಿಸಿದ್ದರು. ಮತ್ತು ಅದನ್ನು ಹಾಳುಗೆಡವಲು ಬಿಡಬಾರದು ಎಂದು ನಂಬಿದ್ದರು. ಇಂದಿಗೂ ಸಾಮಾಜಿಕ ಪಿಡುಗುಗಳಾಗಿ ದೇಶವನ್ನು ಬಾಧಿಸುತ್ತಿರುವ ಜಾತಿಯತೆ, ಅಸ್ಪೃಶ್ಯತೆ, ಧಾರ್ಮಿಕ ಅಂಧಶ್ರದ್ಧೆ ಇವುಗಳಿಂದ ದೇಶವನ್ನು ಬಿಡುಗಡೆಗೊಳಿಸುವುದು ಅವರ ಕನಸಾಗಿತ್ತು. ಸಮಾನತೆ, ಸೋದರತೆ, ಸೌಹಾರ್ದತೆ, ಭ್ರಾತೃತ್ವಗಳ ಆಧಾರದ ಮೇಲೆ ದೇಶ ಕಟ್ಟಬೇಕೆಂದು ಬಯಸಿದ್ದರು. ಅವರ ಈ ಆಶಯಗಳನ್ನು, ಕನಸುಗಳನ್ನು ಮಕ್ಕಳ ಎದೆಗಳಲ್ಲಿ ಬೀಜವಾಗಿ ಬಿತ್ತುವ ಕೆಲಸ ಮಾಡಬೇಕಿತ್ತು. ಆ ಮೂಲಕ ಮತೀಯ ದ್ವೇಷ, ಹಿಂಸೆ, ದೌರ್ಜನ್ಯಗಳನ್ನು ಮೀರಿ ಸಹಬಾಳ್ವೆಯ ದೇಶ-ನಾಡನ್ನು ಕಟ್ಟುವ ಬಗೆಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕಿತ್ತು. ನಕಲಿ ಶಿಕ್ಷಣವನ್ನು ಕಲಿಯುತ್ತ ಬಾಳನ್ನು ನಾಶ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳನ್ನು ರಕ್ಷಿಸಲು ಸೂಕ್ತ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತರಬೇಕಿತ್ತು.

ಆದರೆ ಇದನ್ನು ಮಾಡದೆ ‘ಸೂರ್ಯ ನಮಸ್ಕಾರ’ ಮಾಡಿಸಲು ಹೊರಟಿರುವುದು ದೇಶದ ಸ್ವಾತಂತ್ರ್ಯ ಹೋರಾಟದ ಆಶಯಕ್ಕೆ ವಿರುದ್ದವಾದುದು. ಸ್ವಾತಂತ್ರ್ಯದ ಹೋರಾಟಕ್ಕೆ ಕಿಂಚಿತ್ತೂ ಸಂಬಂಧವಿಲ್ಲದ ಈ ಆಚರಣೆಯನ್ನು ಜಾರಿಗೆ ತರಲು ಹೊರಟಿರುವುದು ಖಂಡನಾರ್ಹ. ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಡದೇ ಇರುವ ಧಾರ್ಮಿಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ತನ್ನ ಮೂಲಭೂತವಾದಿ ಅಜೆಂಡಾವನ್ನು ಸರ್ಕಾರವೇ ಜಾರಿಗೆ ತರಲು ಮುಂದಾಗಿರುವುದು ಈ ದೇಶದ ಭವಿಷ್ಯದ ಮೇಲೆ ಕಾರ್ಮೋಡ ಕವಿದಿರುವುದನ್ನು ಸೂಚಿಸುತ್ತಿದೆ.

ಹಾಗಾಗಿ ಜನರಿಂದ ಚುನಾಯಿತಗೊಂಡ ಸರ್ಕಾರ ಯಾವುದೋ ಒಂದು ತತ್ವದ, ಒಂದು ವರ್ಗದ, ಜಾತಿಯ ಹಿತಾಸಕ್ತಿಗಳಿಗಾಗಿ ಶಿಕ್ಷಣ ವ್ಯವಸ್ಥೆಯನ್ನು ಬಲಿಕೊಡಬಾರದು. ಇಂದು ರಾಷ್ಟ್ರೀಯತೆ, ಧರ್ಮ, ದೇವರುಗಳನ್ನು ಭಾವನಾತ್ಮಕಗೊಳಿಸಿ ಮತೀಯವಾದಿ ವಿಚಾರಗಳನ್ನು ಬೆಳೆಸಲಾಗುತ್ತಿದೆ. ಅವುಗಳ ಸಾಲಿಗೆ ಈಗ ಸೂರ್ಯ ನಮಸ್ಕಾರ ಹೊಸದಾಗಿ ಸೇರಿಕೊಂಡಿದೆ. ಯೋಗ ಈ ಮೊದಲೇ ಸೇರಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಇದರ ಮೂಲಕ ಶೈಕ್ಷಣಿಕ ಪರಿಸರವನ್ನು ಕೋಮು ಧ್ರುವೀಕರಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಇಂತಹ ಮತೀಯವಾದಿ ಆಚರಣೆಗಳನ್ನು ಜಾರಿಗೆ ತರುವುದರ ಮೂಲಕ ದೇಶದ ಸಮಗ್ರತೆಗೆ ಕೇಡು ತರುವ ಕೆಲಸ ಮಾಡಲಾಗುತ್ತದೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಈ 75 ವರ್ಷಗಳ ಈ ಅಮೃತ ಮಹೋತ್ಸವದ ಸಂದರ್ಭ ಸರ್ಕಾರಗಳಿಗೆ ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಿದೆ. ಈ 75 ವರ್ಷಗಳಲ್ಲಿ ಏನನ್ನು ಸಾಧಿಸಲಾಗಿದೆ? ಮುಂದೆ ಸಾಧಿಸಬೇಕಾಗಿರುವುದೇನು? ಈ ನಿಟ್ಟಿನಲ್ಲಿಡಬೇಕಾದ ಹೆಜ್ಜೆಗಳು ಯಾವುವು? ಎಂಬುದರ ಬಗೆಗೆ ಒಂದು ನೀಲಿ ನಕಾಶೆ ಬಿಡುಗಡೆ ಮಾಡುವ ಅಗತ್ಯವಿದೆ. ರಚನಾತ್ಮಕ ಕಾರ್ಯಕ್ರಮಗಳ ಮೂಲಕ ದೇಶವನ್ನು ಮುಂದೆ ಕೊಂಡೊಯ್ಯಬೇಕಿದೆ. ಆದರೆ ಅದನ್ನು ಬಿಟ್ಟು ಹುಸಿ ಭಾವನಾತ್ಮಕತೆಯನ್ನು ಉದ್ದೀಪಿಸುವಂತಹ ಆಚರಣೆಗಳನ್ನು ಜಾರಿಗೆ ತರುವುದು ದೇಶದ ಜನರನ್ನು ಅಣಕಿಸುವುದೇ ಆಗಿದೆ. ಮತ್ತು ಬದಲಾವಣೆಯ ರಥಚಕ್ರವನ್ನು ಹಿಂದಕ್ಕೆ ಎಳೆದು ದೇಶವನ್ನು ಗತಕಾಲದ ಅಂಧಕಾರದಲ್ಲಿ ಹೂತು ಹಾಕಲು ಯೋಜಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿಕೊಟ್ಟ ಅವಕಾಶಗಳನ್ನು ಬಳಸಿಕೊಂಡು ಅದರ ವಿರುದ್ಧದ ಮೌಲ್ಯಗಳನ್ನು ಸಂಗೋಪಿಸಲಾಗುತ್ತಿದೆ.

ಇಡೀ ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಗಂಭೀರ ಅಧ್ಯಯನಗಳಲ್ಲಿ ತೊಡಗಿದೆ. ಆದರೆ ನಮ್ಮ ದೇಶದಲ್ಲಿ ಜಾತಿ, ಧರ್ಮ ದೇವರುಗಳಿಗೆ ಗಂಟುಬಿದ್ದು ಮೌಢ್ಯತೆಯ ಮಾರಿಗೆ ಜನರನ್ನು ಬಲಿ ಕೊಡಲಾಗುತ್ತಿದೆ. ಆದ್ದರಿಂದ ಜನವಿರೋಧಿಯಾದ ಇಂತಹ ಕೆಲಸಗಳನ್ನು ನಾಗರಿಕ ಸಮಾಜ ಖಂಡಿಸಬೇಕು. ಯಾಕೆಂದರೆ ಪ್ರಜಾಪ್ರಭುತ್ವ ಮತ್ತು ದೇಶದ ಅಖಂಡತೆ ಉಳಿದಿರುವುದು ಈ ದೇಶದ ಪ್ರತಿಯೊಬ್ಬರ ವ್ಯಕ್ತಿ ಸ್ವಾತಂತ್ರ್ಯ ಮತ್ತು ಅವರು ಘನತೆಯಿಂದ ಬದುಕುವುದರಲ್ಲಿ. ಅದಕ್ಕೆ ಊರುಗೋಲಾಗಿರುವುದು ಶಿಕ್ಷಣ ವ್ಯವಸ್ಥೆ. ಅದು ಕೋಮುವಾದೀಕರಣಗೊಂಡರೆ ಇಡೀ ಸಮಾಜವೇ ಕೇಡಿಗೆ ಬಲಿಯಾಗುತ್ತದೆ. ಈಗಾಗಲೇ ನಮ್ಮ ದೇಶವು ಅಸ್ಪೃಶ್ಯತೆ ಮತ್ತು ಮೂಲಭೂತವಾದಿ ಚಿಂತನೆಗಳಿಂದ ಕಲುಶಿತಗೊಂಡು ದೇಶದ ಐಕ್ಯತೆಗೆ ಗಂಡಾಂತರ ಎದುರಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಇವುಗಳಿಂದ ಬಿಡುಗಡೆಗೊಳಿಸಿ ಅವರನ್ನು ಜಾತ್ಯತೀತ, ಧರ್ಮನಿರಪೇಕ್ಷ ತತ್ವಗಳಿಂದ ಪೋಷಿಸಬೇಕಿದೆ. ಆ ಮೂಲಕ ಅವರನ್ನು ನಿಜವಾದ ಮನುಷ್ಯರನ್ನಾಗಿ ರೂಪಿಸಬೇಕಾಗಿದೆ. ಆ ದಿಕ್ಕಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅರ್ಥಪೂರ್ಣವಾಗುತ್ತದೆ.

ಲೇಖಕರು: ಕನ್ನಡ ಪ್ರಾಧ್ಯಾಪಕ, ನ್ಯಾಷನಲ್‌ ಕಾಲೇಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT