ಗುರುವಾರ , ಮಾರ್ಚ್ 4, 2021
26 °C

‘ದಲಿತ’ ಪದ ಕೈಬಿಡಬೇಕೆಂಬ ಕೇಂದ್ರದ ಸೂಚನೆ ಅಸಂಗತ

ಎಡಿಟ್‌ Updated:

ಅಕ್ಷರ ಗಾತ್ರ : | |

Deccan Herald

ಪರಿಶಿಷ್ಟ ಜಾತಿಗಳಿಗೆ ದಲಿತ ಎಂಬ ಪದ ಬಳಸಬೇಡಿ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಇತ್ತೀಚೆಗೆ ಸಮೂಹ ಮಾಧ್ಯಮಗಳಿಗೆ ನೀಡಿರುವ ಸಲಹಾ ಸ್ವರೂಪದ ಸೂಚನೆ ವಿವಾದ ಎಬ್ಬಿಸಿದೆ. ಬೌದ್ಧಮತಕ್ಕೆ ಪರಿವರ್ತನೆಯಾದ ದಲಿತ ಪಂಕಜ್ ಮೇಶ್ರಾಮ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಇದೇ ವರ್ಷದ ಜೂನ್ ಆರರಂದು ನೀಡಿದ್ದ ಆದೇಶದ ಮೇರೆಗೆ ಈ ಸಲಹೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಲಾಗಿದೆ.

ಎಲ್ಲಾ  ಸರ್ಕಾರಿ ಆಡಳಿತ ವ್ಯವಹಾರಗಳು ಮತ್ತು ಜಾತಿ ಪ್ರಮಾಣಪತ್ರಗಳಲ್ಲಿ ಪರಿಶಿಷ್ಟ ಜಾತಿಗಳ ಜನರಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ಪದವಾದ ಪರಿಶಿಷ್ಟ ಜಾತಿ ಎಂದೇ ನಮೂದಿಸತಕ್ಕದ್ದು ಎಂಬುದಾಗಿ ಇದೇ ವರ್ಷದ ಮಾರ್ಚ್‌ 15ರಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ನಿರ್ದೇಶನ ನೀಡಿತ್ತು.

ದಲಿತ ಪದ ಬಳಕೆ ಕೂಡದೆಂದು ಸರ್ಕಾರ ಈಗಾಗಲೇ ತನ್ನ ಅಧಿಕಾರಿಗಳಿಗೆ ತಾಕೀತು ಮಾಡಿರುವಂತೆ ಸಮೂಹ ಮಾಧ್ಯಮಗಳಿಗೂ ನಿರ್ದೇಶನ ನೀಡುವ ವಿಷಯವನ್ನು ಪರಿಗಣಿಸಬೇಕೆಂದು ಬಾಂಬೆ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ದಲಿತ ಪದ ಬಳಕೆಗೆ ದಲಿತರಲ್ಲಿಯೇ ಪರ– ವಿರೋಧ ಇರುವುದೂ ಹೌದು. ಆದರೆ ವಿರೋಧಿಸುವವರ ಪ್ರಮಾಣ ಗೌಣ. ದಲಿತ ಪದವೇ ಇರಬೇಕೆಂಬುದು ಬಹುತೇಕ ದಲಿತ ಸಮುದಾಯದ ಆಗ್ರಹ. ರಾಜಕೀಯ ಮತ್ತು ಸಾಮುದಾಯಿಕ ಅಸ್ಮಿತೆಯ ಹೆಗ್ಗುರುತಿನ ಪಾತ್ರ ವಹಿಸಿರುವ ಈ ಪದ ಬಳಕೆಯನ್ನು ಕೈಬಿಡುವುದು ಸರಿಯಲ್ಲ ಎಂಬುದು ದಲಿತ ಚಿಂತಕರ ನಿಚ್ಚಳ ನಿಲುವು.

ಈಗ ಈ  ಸರ್ಕಾರಿ 'ಸಲಹೆ' ಸರ್ಕಾರಿ ನೀತಿನಿಲುವಿನ ರೂಪ ತಳೆಯಲಿದೆಯೇ ಎಂಬುದು ಇನ್ನೂ ಸ್ಪಷ್ಟವಿಲ್ಲ. ಸರ್ಕಾರಿ ಆಡಳಿತ ವ್ಯವಹಾರಗಳು ಮತ್ತು ಪರಿಶಿಷ್ಟರಿಗೆ ನೀಡಲಾಗುವ ಜಾತಿ ಪ್ರಮಾಣಪತ್ರಗಳ ಮಟ್ಟಿಗೆ ದಲಿತ ಪದ ಬಳಕೆ ಕೈಬಿಡಬೇಕೋ ಬೇಡವೋ ಎಂಬುದು ಸರ್ಕಾರಕ್ಕೆ ಸಂಬಂಧಿಸಿದ್ದು. ಆದರೆ ಸಮೂಹ ಮಾಧ್ಯಮಗಳ ಮೇಲೆ ಈ ರೀತಿಯ ನಿರ್ಬಂಧ ಹೇರಿಕೆ ಖಂಡನೀಯ. ಯಾವ ಪದ ಬಳಸಬೇಕು ಅಥವಾ ಬಳಸಬಾರದು ಎಂಬುದರ ಬಗ್ಗೆ ಮಾಧ್ಯಮಗಳಿಗೆ ಸಲಹೆ ನೀಡುವಂತಹದ್ದು ಹಾಸ್ಯಾಸ್ಪದ.

ಪರಿಶಿಷ್ಟ ಜಾತಿಗಳಿಗೆ ಗಾಂಧೀಜಿ ರೂಪಿಸಿದ್ದ ‘ಹರಿಜನ’ ಪದವನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ ಕಟುವಾಗಿ ವಿರೋಧಿಸಿದ್ದರು. ಸ್ವತಂತ್ರ ಭಾರತ ಈ ಪದವನ್ನು ಕ್ರಮೇಣ ಕೈಬಿಟ್ಟಿತು. ದಲಿತ ಎಂಬ ಪದದ ಅರ್ಥ ‘ಮುರಿದದ್ದು’, ‘ಚೆದುರಿ ಹೋದದ್ದು’ ಎಂದು. ಆದರೆ ಕಾಲಾನುಕ್ರಮದಲ್ಲಿ ಈ ಪದ ಮರುವ್ಯಾಖ್ಯೆಗೆ ಒಳಗಾಗಿದೆ. ಅರ್ಥವ್ಯಾಪ್ತಿ ವಿಸ್ತಾರಗೊಂಡಿದೆ. ಅಂಬೇಡ್ಕರ್ ಜೀವಿತಾವಧಿಯಲ್ಲಿ ‘ದಲಿತ’ ಪದ ಚಾಲ್ತಿಯಲ್ಲಿದ್ದರೂ ಅವರ ಆಯ್ಕೆ ಬಹುತೇಕ ‘ನಿಮ್ನ ವರ್ಗಗಳು’ (ಡಿಪ್ರೆಸ್ಡ್ ಕ್ಲಾಸಸ್) ಎಂಬುದೇ ಆಗಿತ್ತು. ‘ಮುರಿದ ಮನುಜ’ (ಬ್ರೋಕನ್ ಮ್ಯಾನ್) ಎಂಬ ಪದಗಳೂ ಅವರಿಂದ ಬಳಕೆ ಆಗಿರುವುದುಂಟು. ಶೂದ್ರ ಮತ್ತು ಅತಿಶೂದ್ರ ಎಂಬ ಪದ ಬಳಸಿರುವ ಸಮಾಜ ಸುಧಾರಕ ಜ್ಯೋತಿಬಾ ಫುಲೆ ಅವರು ‘ದಲಿತ’ ಪದ ಬಳಸಿದ ನಿದರ್ಶನಗಳುಂಟು.

ಅಂಬೇಡ್ಕರ್ ನಿಧನದ ನಂತರ ಜಾತಿ ಭೇದದ ದೌರ್ಜನ್ಯಗಳು ಮತ್ತು ಅಸ್ಪೃಶ್ಯತೆಯ ವಿರುದ್ಧ ಹುಟ್ಟಿದ ಮಹಾರಾಷ್ಟ್ರದ ‘ದಲಿತ್ ಪ್ಯಾಂಥರ್ಸ್’ ಆಂದೋಲನ ದಲಿತ ಪ್ರತಿರೋಧದ ಹೊಸ ಅಲೆಗಳನ್ನು ಎಬ್ಬಿಸಿತ್ತು. ಪ್ಯಾಂಥರ್ಸ್ ಚಳವಳಿಯು ‘ದಲಿತ’ ಪದವನ್ನು ಕ್ರಾಂತಿಕಾರಿ ಎಂಬ ಅರ್ಥದಲ್ಲಿ ಬಳಸಿತು. ದಲಿತ ಎಂದರೆ ಒಡೆದವರು, ಮುರಿದವರು, ಚೆದುರಿದವರು ಎಂಬ ಅರ್ಥವಿರುವ ಕಾರಣ ‘ದಲಿತ’ ಪದ ಬೇಡ ಎಂಬ ವಾದ, ಇತಿಹಾಸದ ಅನ್ಯಾಯಗಳ ತಿಪ್ಪೆಯನ್ನು ಸಾರಿಸಿ ರಂಗೋಲಿ ಇಡುವಷ್ಟೇ ಅವಿವೇಕದ ನಡೆ ಎಂದು ವಾದಿಸುವವರಿದ್ದಾರೆ. ಆದರೆ ದಲಿತ ಪದ ಬಳಕೆ ಬೇಡ ಎನ್ನುತ್ತಿರುವ ಈ ಕಾಲಘಟ್ಟವು ದಲಿತ ಸಮುದಾಯಗಳನ್ನು ಮತ್ತೆ ಚೆದುರಿಸುವ ಪ್ರಯತ್ನವಿದ್ದೀತು ಎಂಬ ಗುಮಾನಿಗೆ ದಾರಿ ಮಾಡಿದೆ.

‘ದಲಿತ’ ಎಂಬ ವಿಶೇಷಣ ಹೊಂದಿರುವ ಅಸಂಖ್ಯಾತ ಹೆಸರುಗಳು ದೇಶದ ಉದ್ದಗಲದಲ್ಲಿ ಹರಡಿವೆ.  ಅವುಗಳನ್ನು  ಮಾಧ್ಯಮಗಳು ಏನೆಂದು ಕರೆಯಬೇಕು?  ದಲಿತ ಸಾಹಿತ್ಯವನ್ನು ಪರಿಶಿಷ್ಟ ಸಾಹಿತ್ಯ ಎನ್ನಲು ಬಂದೀತೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು