ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬಿಬಿಎಂಪಿ ಚುನಾವಣೆ– ಮತ್ತಷ್ಟು ವಿಳಂಬ ಸಲ್ಲದು

Published 20 ಜೂನ್ 2023, 22:05 IST
Last Updated 20 ಜೂನ್ 2023, 22:05 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾಯಿತ ಕೌನ್ಸಿಲ್‌ ಆಡಳಿತವು 2020ರ ಸೆಪ್ಟೆಂಬರ್‌ನಲ್ಲೇ ಕೊನೆಗೊಂಡಿದೆ. ಚುನಾವಣೆ ನಡೆಸಿ ಹೊಸ ಕೌನ್ಸಿಲ್‌ ರಚಿಸುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಬಿಬಿಎಂಪಿಯ ವಾರ್ಡ್‌ಗಳನ್ನು ಪುನರ್‌ ವಿಂಗಡಣೆ ಮಾಡಿ ಸರ್ಕಾರವು 2022ರ ಜುಲೈ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ವಾರ್ಡ್‌ಗಳ ಮರುವಿಂಗಡಣೆಯಲ್ಲಿ ಕೆಲವು ಲೋಪಗಳಿದ್ದು, ಅವುಗಳನ್ನು ಸರಿಪಡಿಸುವ ಅಗತ್ಯ ಇದೆ ಎಂದು ಸರ್ಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ಅವರು ಹೈಕೋರ್ಟ್‌ ಗಮನಕ್ಕೆ ತಂದಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ 12 ವಾರಗಳ ಕಾಲಾವಕಾಶವನ್ನು ನೀಡಿದೆ. ಇನ್ನೂ ಕನಿಷ್ಠ ನಾಲ್ಕು ತಿಂಗಳು ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ ಎಂಬುದು ಇದರಿಂದ ಸ್ಪಷ್ಟ. ಈ ನಡುವೆ ಬಿಬಿಎಂಪಿಯ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ, ಸಂಸ್ಥೆಯನ್ನು ವಿಭಜನೆ ಮಾಡುವ ಹಳೆಯ ಪ್ರಸ್ತಾವಕ್ಕೆ ಪುನಃ ಜೀವ ತುಂಬಲು ಸರ್ಕಾರ ಹೊರಟಿದೆ. 

ಬಿಬಿಎಂಪಿ ಆಡಳಿತ ಸುಧಾರಣೆಗಾಗಿ ವರದಿ ಸಿದ್ಧಪಡಿಸಲು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ ನೇತೃತ್ವದಲ್ಲಿ ಸಮಿತಿಯನ್ನು ಈ ಹಿಂದೆ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಚಿಸಲಾಗಿತ್ತು. ಬಿಬಿಎಂಪಿಯನ್ನು ಮೂರು ಅಥವಾ ಐದು ಪಾಲಿಕೆಗಳನ್ನಾಗಿ ವಿಂಗಡಿಸಿ, ಪ್ರತಿಯೊಂದಕ್ಕೂ ಪ್ರತ್ಯೇಕ ಮೇಯರ್‌ ಮತ್ತು ಉಪಮೇಯರ್‌ ಅವರನ್ನು ಆಯ್ಕೆ ಮಾಡಬೇಕು ಎಂದು ಆ ಸಮಿತಿಯು ಶಿಫಾರಸು ಮಾಡಿತ್ತು. ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಬಿಬಿಎಂಪಿಯನ್ನು ವಿಭಜಿಸಲು ಮುಂದಾಗಿದ್ದ ಆಗಿನ ಸರ್ಕಾರ ಈ ಕುರಿತ ಮಸೂದೆಯನ್ನೂ ವಿಧಾನ ಮಂಡಲದಲ್ಲಿ ಮಂಡಿಸಿತ್ತು. ಆ ಮಸೂದೆಯನ್ನು ಬಿಜೆಪಿ ಬಲವಾಗಿ ವಿರೋಧಿಸಿತ್ತು. ಬಳಿಕ ರಾಜ್ಯದ ಚುಕ್ಕಾಣಿ ಹಿಡಿದ ಬಿಜೆಪಿ ನೇತೃತ್ವದ ಸರ್ಕಾರವು 2020ರಲ್ಲಿ ಬಿಬಿಎಂಪಿಗಾಗಿ ಪ್ರತ್ಯೇಕ ಮಸೂದೆಯನ್ನು ಅಂಗೀಕರಿಸಿತು. 2021ರ ಜನವರಿಯಲ್ಲಿ ಅದು ಕಾಯ್ದೆಯಾಗಿ ಜಾರಿಗೊಂಡಿತು. ಅದರ ಪ್ರಕಾರ, ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ನಿಗದಿಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಕಾಂಗ್ರೆಸ್‌ ನೇತೃತ್ವದ ಈಗಿನ ಸರ್ಕಾರವು ಬಿ.ಎಸ್‌.ಪಾಟೀಲ ನೇತೃತ್ವದ ಸಮಿತಿಯನ್ನು ಇತ್ತೀಚೆಗೆ ಪುನ‍ರ್‌ರಚಿಸಿದೆ. ವಾರ್ಡ್‌ಗಳ ಮರುವಿಂಗಡಣೆಯ ಲೋಪ ಸರಿಪಡಿಸಲು ಹೈಕೋರ್ಟ್‌ನಿಂದ ಕಾಲಾವಕಾಶ ಪಡೆದಿರುವ ಸರ್ಕಾರ, 2022ರಲ್ಲಿ ರೂಪಿಸಲಾದ ವಾರ್ಡ್‌ಗಳ ಲೋಪದೋಷಗಳನ್ನಷ್ಟೇ ಸರಿಪಡಿಸಿ ಬಿಬಿಎಂಪಿಗೆ ಚುನಾವಣೆ ನಡೆಸಲು ಅನುವು ಮಾಡಿಕೊಡುತ್ತದೆಯೋ ಅಥವಾ ಬಿಬಿಎಂಪಿಯನ್ನೇ ವಿಭಜನೆ ಮಾಡಿ ನಂತರ ಚುನಾವಣೆ ನಡೆಸುತ್ತದೆಯೋ ಎಂಬುದು ಸಾರ್ವಜನಿಕರ ಮುಂದಿರುವ ಪ್ರಶ್ನೆ. ‘ಬಿಬಿಎಂಪಿಯನ್ನು ವಿಭಜನೆ ಮಾಡುವುದು ಸರಿಯಲ್ಲ. ನವದೆಹಲಿಯಲ್ಲಿ ಇಂತಹ ಪ್ರಯೋಗ ವಿಫಲವಾಗಿರುವ ಉದಾಹರಣೆ ನಮ್ಮ ಮುಂದಿದೆ. ಬಿಬಿಎಂಪಿ ಕಾಯ್ದೆಯಡಿ ವಲಯ ಸಮಿತಿಗಳನ್ನು ಬಲಪಡಿಸಿ ಆಡಳಿತದ ವಿಕೇಂದ್ರೀಕರಣಕ್ಕೆ ಈಗಾಗಲೇ ಅವಕಾಶ ಕಲ್ಪಿಸಲಾಗಿದ್ದು, ವಿಭಜನೆಯ ಅಗತ್ಯವಿಲ್ಲ’ ಎಂಬುದು ಬಿಜೆಪಿಯ ವಾದ. ಸರ್ಕಾರವು ಬಿಬಿಎಂಪಿಯನ್ನು ವಿಭಜನೆ ಮಾಡುವ ನಿಲುವಿಗೆ ಅಂಟಿಕೊಂಡಿದ್ದೇ ಆದರೆ, ಚುನಾವಣೆ ಮತ್ತಷ್ಟು ಕಾಲ ಮುಂದಕ್ಕೆ ಹೋಗುವುದು ನಿಶ್ಚಿತ. ಬೆಂಗಳೂರಿಗೆ ಮೆಟ್ರೊಪಾಲಿಟನ್‌ ದರ್ಜೆಯ ಆಡಳಿತ ವ್ಯವಸ್ಥೆ ರೂಪಿಸುವ ಆಶಯವು ಬಿಬಿಎಂಪಿ ಕಾಯ್ದೆ ಜಾರಿಯಾದ ಬಳಿಕವೂ ಈಡೇರಿಲ್ಲ. ಪ್ರಸ್ತುತ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಿಬಿಎಂಪಿ, ಜಲಮಂಡಳಿ, ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂತಾದ ಸರ್ಕಾರಿ ಸಂಸ್ಥೆಗಳು ನಗರದ ಆಡಳಿತಕ್ಕೆ ಸಂಬಂಧಿಸಿದ ಬೇರೆ ಬೇರೆ ಜವಾಬ್ದಾರಿಗಳನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತಿವೆ. ಬಿಡಿಎ, ಬಿಎಂಟಿಸಿ, ಜಲಮಂಡಳಿಯನ್ನು ಉದ್ದೇಶಿತ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ತರಬೇಕು ಎಂಬ ಸಲಹೆ ಬಿ.ಎಸ್‌.ಪಾಟೀಲ ನೇತೃತ್ವದ ಸಮಿತಿಯ ಮುಂದಿದೆ. ಅಭಿವೃದ್ಧಿ ಯೋಜನೆಗಳ ರೂಪುರೇಷೆ ಸಿದ್ಧಪಡಿಸುವುದು ಮತ್ತು ಅವುಗಳ ನಿರ್ವಹಣೆಗಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನು ರಚಿಸುವ ಮೂಲಕ ಆಡಳಿತದಲ್ಲಿ ಸಮನ್ವಯ ಸಾಧಿಸುವ ಅಗತ್ಯ ಇದೆ ಎಂಬುದು ಕೆಲವು ತಜ್ಞರ ಅಭಿಮತ. ರಾಜಧಾನಿಯ ಆಡಳಿತಕ್ಕೆ ಹೊಸ ದಿಕ್ಕು ನೀಡಬಲ್ಲ ಇಂತಹ ಮಹತ್ವದ ನಿರ್ಣಯವನ್ನು ಸಾರ್ವಜನಿಕರ ಸಲಹೆ ಪಡೆದು, ಸಮಾಲೋಚನೆ ನಡೆಸಿದ ಬಳಿಕವೇ ಜಾರಿಗೊಳಿಸಬೇಕಾದ ಅಗತ್ಯ ಇದೆ. ಆದರೆ, ಇದು ಬಿಬಿಎಂಪಿ ಚುನಾವಣೆಯನ್ನು ಮತ್ತಷ್ಟು ಕಾಲ ಮುಂದೂಡುವುದಕ್ಕೆ ಒಂದು ನೆಪ ಆಗಬಾರದು. ಕಾಲಮಿತಿಯನ್ನು ನಿಗದಿಪಡಿಸಿ ಇಂತಹ ಸುಧಾರಣಾ ಕ್ರಮಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕು. ಆದಷ್ಟು ಶೀಘ್ರ ಚುನಾವಣೆ ನಡೆಸುವ ಮೂಲಕ ಸಂವಿಧಾನದ ಆಶಯಕ್ಕೆ ಬದ್ಧವಾಗಿಯೂ ಸರ್ಕಾರ ನಡೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT