ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಬೆಂಗಳೂರಿನ ಕೆಫೆಯೊಂದರಲ್ಲಿ ಸ್ಫೋಟ: ಜನರನ್ನು ಗುರಿಯಾಗಿಸಿದ್ದ ದಾಳಿ

ಜನರ ಜೀವಕ್ಕೆ ಹಾಗೂ ಆಸ್ತಿಪಾಸ್ತಿಗೆ ಯಾವ ಅಪಾಯವೂ ಎದುರಾಗದಂತೆ ಸರ್ಕಾರ ಕಾಳಜಿ ವಹಿಸಬೇಕು
Published 3 ಮಾರ್ಚ್ 2024, 23:00 IST
Last Updated 3 ಮಾರ್ಚ್ 2024, 23:00 IST
ಅಕ್ಷರ ಗಾತ್ರ

ಬೆಂಗಳೂರಿನ ಜನಪ್ರಿಯ ಹೋಟೆಲ್‌ಗಳಲ್ಲಿ ಒಂದಾಗಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿ ಮೂರು ದಿನಗಳು ಕಳೆದಿವೆ. ಈ ಸ್ಫೋಟದಲ್ಲಿ 10 ಜನರಿಗೆ ಗಾಯಗಳಾಗಿವೆ. ಆದರೆ, ಸ್ಫೋಟಕ್ಕೆ ಕಾರಣನಾದ ವ್ಯಕ್ತಿಯ ಬಗ್ಗೆ, ಕೆಫೆಯಲ್ಲಿ ಸ್ಫೋಟಕವನ್ನು ತಂದು ಇರಿಸಿದ್ದ ವ್ಯಕ್ತಿಯ ಬಗ್ಗೆ ಖಚಿತವಾದ ಸುಳಿವು ದೊರೆತಂತೆ ಕಾಣುತ್ತಿಲ್ಲ. ಸ್ಫೋಟದ ಹಿಂದಿನ ಉದ್ದೇಶ ಏನಿತ್ತು ಎಂಬ ವಿಚಾರವಾಗಿ ಕೂಡ ಸ್ಪಷ್ಟ ಸುಳಿವು ಲಭ್ಯವಾಗಿಲ್ಲ. ಅದೃಷ್ಟವಶಾತ್, ಈ ಸ್ಫೋಟವು ಕಡಿಮೆ ತೀವ್ರತೆಯನ್ನು ಹೊಂದಿತ್ತು. ಹೀಗಾಗಿ ಜನರ ಜೀವಹಾನಿ ಆಗಿಲ್ಲ. ಆದರೆ, 10 ಜನರಿಗೆ ಗಾಯಗಳಾಗಿವೆ. ಅವರ ಪೈಕಿ ಒಬ್ಬರಿಗೆ ಶೇಕಡ 40ರಷ್ಟು ಸುಟ್ಟ ಗಾಯಗಳಾಗಿವೆ. ಇನ್ನೊಬ್ಬರು ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುವ ಅಪಾಯ ಇದೆ. ಈ ಸ್ಫೋಟವು ರಾಜ್ಯ ಅದರಲ್ಲೂ ಬೆಂಗಳೂರಿನ ಶಾಂತಿಗೆ ಭಂಗ ತಂದಿದೆ. ಲಭ್ಯವಿರುವ ಮಾಹಿತಿ ಹಾಗೂ ಸ್ಫೋಟ ಸಂಭವಿಸಿದ ಸಂದರ್ಭವನ್ನು ಗಮನಿಸಿ ಹೇಳುವುದಾದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಜನರನ್ನು ಗುರಿಯಾಗಿಸಿಕೊಂಡ ದಾಳಿ ಇದಾಗಿತ್ತು. ಅಚಾನಕ್ ಆಗಿ ಇಂತಹ ಸ್ಫೋಟ ಸಂಭವಿಸಿರಬಹುದು, ಹೋಟೆಲ್ ಉದ್ಯಮದಲ್ಲಿನ ವೈಷಮ್ಯವು ಇದಕ್ಕೆ ಕಾರಣವಾಗಿರಬಹುದು ಎಂಬ ವಾದಗಳನ್ನು ‍ಪೊಲೀಸರು ಅಲ್ಲಗಳೆದಿದ್ದಾರೆ ಎಂದು ವರದಿಯಾಗಿದೆ. ಸ್ಫೋಟಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ‘ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ’ಯ ಅಡಿಯಲ್ಲಿ, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಮಂಗಳೂರಿನಲ್ಲಿ 2022ರಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟಕ್ಕೂ ನಂಟು ಇರಬಹುದು ಎಂದು ಪೊಲೀಸರು ಹೇಳಿದ್ದಾರೆ. ಏಕೆಂದರೆ ಎರಡೂ
ಪ್ರಕರಣಗಳಲ್ಲಿ ಬಳಕೆಯಾದ ಸಾಧನಗಳಲ್ಲಿ ಸಾಮ್ಯತೆ ಇದೆ ಎಂದು ಅವರು ಹೇಳಿದ್ದಾರೆ. 2022ರಲ್ಲಿ ಮಂಗಳೂರಿನಲ್ಲಿ ಆಟೊರಿಕ್ಷಾದಲ್ಲಿ ಕುಕ್ಕರ್ ಬಾಂಬ್‌ ಆಕಸ್ಮಿಕವಾಗಿ ಸ್ಫೋಟಿಸಿತ್ತು. ಆ ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಹಿಂದೆ ಕೊಯಮತ್ತೂರಿನಲ್ಲಿ ನಡೆದ ಸ್ಫೋಟಗಳಿಗೂ ಮಂಗಳೂರಿನ ಸ್ಫೋಟಕ್ಕೂ ನಂಟು ಇದೆ ಎಂದು ಹೇಳಿತ್ತು. ಆರೋಪಿಗಳು ಇಸ್ಲಾಮಿಕ್ ಸ್ಟೇಟ್ ಸಂಘಟನೆಯಿಂದ ಪ್ರೇರಣೆ ಪಡೆದಿರಬಹುದು ಎಂದು ದೋಷಾರೋಪ ಪಟ್ಟಿಯಲ್ಲಿ ಎನ್‌ಐಎ ಹೇಳಿತ್ತು. ಆದರೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಸ್ಫೋಟಕ್ಕೆ ಐಎಸ್‌ ಜೊತೆಗಿನ ನಂಟು ಇದೆಯೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ, ಅದು ತನಿಖೆಯ ಒಂದು ಆಯಾಮ ಮಾತ್ರ ಎಂದು ಪೊಲೀಸರು ಹೇಳಿದ್ದಾರೆ. ಇತರ ಹಲವು ಆಯಾಮಗಳಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬೆಂಗಳೂರಿನ ಪ್ರಕರಣದ ಶಂಕಿತನನ್ನು ಇನ್ನೂ ಗುರುತಿಸಲಾಗಿಲ್ಲ. ಕೆಲವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಅಪೂರ್ಣ ಮಾಹಿತಿ ಆಧರಿಸಿ ಈ ಹಂತದಲ್ಲಿ ಯಾವುದೇ ತೀರ್ಮಾನಕ್ಕೆ ಬರುವುದು ಸೂಕ್ತವಾಗುವು ದಿಲ್ಲ. ಆ ರೀತಿ ಮಾಡುವುದು ಸಮಸ್ಯೆಗಳನ್ನಷ್ಟೇ ಸೃಷ್ಟಿಸಬಲ್ಲದು, ಜನರ ಮನಸ್ಸಿನಲ್ಲಿ ಭೀತಿಯನ್ನು ಸೃಷ್ಟಿಸಬಲ್ಲದು. ಸಾರ್ವಜನಿಕ ಸ್ಥಳಗಳಲ್ಲಿನ ಭದ್ರತೆಯ ಬಗ್ಗೆ ಜನರು ಸಹಜವಾಗಿಯೇ ಕಳವಳ ಹೊಂದಿರುತ್ತಾರೆ. ಜನರ ಜೀವಕ್ಕೆ ಹಾಗೂ ಆಸ್ತಿಪಾಸ್ತಿಗೆ ಯಾವ ಅಪಾಯವೂ ಎದುರಾಗದಂತೆ ಸರ್ಕಾರ ಕಾಳಜಿ ವಹಿಸಬೇಕು. ಜನರ ಜೀವ ರಕ್ಷಿಸಲು ಪೊಲೀಸರು, ಸರ್ಕಾರದ ಇತರ ಭದ್ರತಾ ಸಂಸ್ಥೆಗಳು ಹೆಚ್ಚು ಜಾಗರೂಕತೆ ವಹಿಸಬೇಕು. ಲೋಕಸಭೆಗೆ ಇನ್ನೇನು ಚುನಾವಣೆ ಘೋಷಣೆ ಆಗಲಿದೆ. ಹೀಗಾಗಿ, ಮುಂಬರುವ ಕೆಲವು ವಾರಗಳು ಬಹಳ ಸೂಕ್ಷ್ಮ ಕೂಡ ಹೌದು. ಇಂತಹ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹವಣಿಕೆಯನ್ನು ಕೆಲವರು ಇಂತಹ ಸಂದರ್ಭಗಳಲ್ಲಿ ತೋರುತ್ತಾರೆ. ಈ ಬಗೆಯ ಪ್ರವೃತ್ತಿ ಹಾನಿಯನ್ನಲ್ಲದೆ ಬೇರೆ ಏನನ್ನೂ ಉಂಟುಮಾಡುವುದಿಲ್ಲ. ಸ್ಫೋಟ ಪ್ರಕರಣದ ತನಿಖೆಯನ್ನು ಸ್ವತಂತ್ರವಾಗಿ ನಡೆಸುವ ಹೊಣೆಯನ್ನು ಪೊಲೀಸರಿಗೆ ಹಾಗೂ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಬಿಡಬೇಕು, ಈ ಕೆಲಸದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT