ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಚುನಾವಣಾ ಬಾಂಡ್‌ ಯೋಜನೆ; ವಿಸ್ತೃತ ತನಿಖೆ ಅಗತ್ಯ

Published 25 ಮಾರ್ಚ್ 2024, 21:49 IST
Last Updated 25 ಮಾರ್ಚ್ 2024, 21:49 IST
ಅಕ್ಷರ ಗಾತ್ರ

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಬಹಳಷ್ಟು ಮಾಹಿತಿಯು ಈಚಿನ ದಿನಗಳಲ್ಲಿ ಬಹಿರಂಗ ಗೊಂಡಿದೆ. ಈ ಮಾಹಿತಿಯು ಸಾರ್ವಜನಿಕ ಚರ್ಚೆಗಳಿಗೆ, ರಾಜಕೀಯ ಪಕ್ಷಗಳ ನಡುವೆ ಆರೋಪ–
ಪ್ರತ್ಯಾರೋಪಕ್ಕೆ ಮಾತ್ರ ಸೀಮಿತ ಆಗಬಾರದು. ಬಾಂಡ್‌ ವಿಚಾರವು ರಾಜಕೀಯ ವಲಯದಲ್ಲಿ ಒಂದಿಷ್ಟು ಮಾತುಗಳಿಗೆ ಆಹಾರವಾಗಬಹುದು ಎಂಬುದು ನಿಜ. ಆದರೆ ಬಾಂಡ್‌ಗಳ ಕಾನೂನು ಪರಿಣಾಮಗಳು ಹಾಗೂ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರ ಬಗ್ಗೆ ಅಥವಾ ಬಾಂಡ್‌ಗಳು ಹೊಂದಿದ್ದ ಶಕ್ತಿಯ ಬಗ್ಗೆ ವಿಸ್ತೃತ ಪರಿಶೀಲನೆ ನಡೆಯಬೇಕು. ಯುಪಿಎ ಸರ್ಕಾರದ ಎರಡನೆಯ ಅವಧಿಯಲ್ಲಿ ದೇಶದಲ್ಲಿ ಭಾರಿ ಸದ್ದು ಮಾಡಿದ 2–ಜಿ ತರಂಗಾಂತರ ಹಂಚಿಕೆ ಹಗರಣಕ್ಕೂ ಚುನಾವಣಾ ಬಾಂಡ್ ಹಗರಣಕ್ಕೂ ಹೋಲಿಕೆ ಇರುವಂತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಚುನಾವಣಾ ಬಾಂಡ್ ಯೋಜನೆಯನ್ನು ರೂಪಿಸಿ, ಅದನ್ನು ಜಾರಿಗೆ ತಂದಿತು. ಈ ಬಾಂಡ್ ಯೋಜನೆಯ ಅತಿದೊಡ್ಡ ಫಲಾನುಭವಿ ಬಿಜೆಪಿ. ಹೀಗಾಗಿ, ಬಾಂಡ್ ಯೋಜನೆ ಕುರಿತ ಪ್ರಶ್ನೆಗಳಿಗೆ ಆ ಪಕ್ಷವೇ ಉತ್ತರ ನೀಡಬೇಕು. ಆದರೆ, ಬಾಂಡ್ ಮೂಲಕ ಹಣ ಪಡೆದ ಇತರ ಪಕ್ಷಗಳು ಕೂಡ ಉತ್ತರ ನೀಡಬೇಕಾದ ಅಗತ್ಯ ಇದೆ.

ಬಾಂಡ್ ಯೋಜನೆಯಲ್ಲಿ ನೋಡಲ್ ಏಜೆನ್ಸಿಯಂತೆ ಇದ್ದ ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ಬಾಂಡ್‌ಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಬಹಿರಂಗ ಪಡಿಸುವಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು, ಕಾಲಕಾಲಕ್ಕೆ ಅದು ನೀಡಿದ ಕಟು ನಿರ್ದೇಶನಗಳು ಬಹುದೊಡ್ಡ ಕೆಲಸ ನಿರ್ವಹಿಸಿವೆ. ಬಾಂಡ್ ಮೂಲಕ ಆಗಿರುವ ಹಲವು ಪಾವತಿಗಳ ಹಿಂದೆ ವೈಚಿತ್ರ್ಯಗಳಿವೆ, ಅಸಹಜ ಅನ್ನಿಸುವ ವಿದ್ಯಮಾನಗಳು ಆಗಿವೆ ಹಾಗೂ ಅನುಮಾನಾಸ್ಪದ ಸಂದರ್ಭಗಳು ಕೂಡ ಇವೆ. ಇವೆಲ್ಲವೂ ಭ್ರಷ್ಟಾಚಾರ, ಅಧಿಕಾರದ ದುರ್ಬಳಕೆ ಹಾಗೂ ಅಕ್ರಮ
ಗಳನ್ನು ಸೂಚಿಸುತ್ತಿರಬಹುದು. ಮೂರು ವರ್ಷಗಳ ಅವಧಿಯಲ್ಲಿ ಲಾಭವನ್ನೇ ಕಾಣದ 16 ಕಂಪನಿಗಳು ಒಟ್ಟು ₹ 710 ಕೋಟಿ ಹಣವನ್ನು ಬಾಂಡ್ ಮೂಲಕ ಪಾವತಿಸಿವೆ ಎಂದು ವರದಿಯಾಗಿದೆ. ಬಿಜೆಪಿಗೆ ಹಣ ಪಾವತಿ ಮಾಡಿದ ಕೆಲವು ಕಂಪನಿಗಳಿಗೆ ಸರ್ಕಾರದ ಕಡೆಯಿಂದ, ಅವು ಪಾವತಿಸಿದ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚಿನ ಮೊತ್ತದ ಕಾರ್ಯಾದೇಶಗಳು ಸಿಕ್ಕಿವೆ ಎನ್ನಲಾಗಿದೆ. ಕೇಂದ್ರದ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಆದಾಯ ತೆರಿಗೆ ಇಲಾಖೆಯಿಂದ ದಾಳಿಗೆ ಒಳಗಾದ ಕೆಲವು ಕಂಪನಿಗಳು, ದಾಳಿ ನಡೆದ ನಂತರದಲ್ಲಿ ಬಾಂಡ್ ಮೂಲಕ ಹಣ ಪಾವತಿ ಮಾಡಿವೆ. ದಾಳಿ ಹಾಗೂ ದೇಣಿಗೆಯ ನಡುವೆ ಸಂಬಂಧ ಇರಬಹುದು ಎಂಬ ಸೂಚನೆಯನ್ನು ಇದು ನೀಡುತ್ತಿದೆ. ಕೆಲವು ಕಂಪನಿಗಳು ಹಾಗೂ ವ್ಯಕ್ತಿಗಳಿಗೆ ವಿರೋಧ ಪಕ್ಷಗಳ ವಿರುದ್ಧ ಮಾತನಾಡುವಂತೆ ಒತ್ತಡ ಹೇರಲಾಗಿತ್ತು ಎಂಬ ಆರೋಪಗಳು ಕೂಡ ಇವೆ. ದಾಳಿಗಳು ಹಾಗೂ ದೇಣಿಗೆ ಗಳ ನಡುವೆ ಸಂಬಂಧ ಇತ್ತು ಎಂದಾದರೆ ಅದು ಭ್ರಷ್ಟಾಚಾರ ಹಾಗೂ ಅಧಿಕಾರದ ದುರ್ಬಳಕೆ ಆಗುತ್ತದೆ.

ಬಾಂಡ್‌ಗಳು ರಾಜಕೀಯ ದೇಣಿಗೆಯ ಮುಖ್ಯ ಮೂಲವಾಗಿದ್ದ ಕಾರಣಕ್ಕೆ ದೇಣಿಗೆ ನೀಡಿದ ಸಂದರ್ಭ ಹಾಗೂ ದೇಣಿಗೆಗಳ ಬಗ್ಗೆ ತನಿಖೆ ಆಗಬೇಕು. ಬಾಂಡ್‌ ವಿಚಾರದಲ್ಲಿ ಯಾವ ತಪ್ಪೂ ಆಗಿಲ್ಲ ಎಂದು ಸರ್ಕಾರ ಹೇಳಿದೆ. ಹೀಗಾಗಿ, ಅದು ಯಾವುದೇ ತನಿಖೆಗೆ ಮುಂದಾಗುವುದಕ್ಕೆ ಸಿದ್ಧವಿರುವುದಿಲ್ಲ. ಆದರೆ, ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯ ಬಗ್ಗೆ ಇರುವ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸಬಹುದು. ವ್ಯಕ್ತಿಗಳಿಗೆ ಅಥವಾ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಬಾಂಡ್‌ಗಳನ್ನು ಬಳಸಲಾಗುತ್ತಿತ್ತು ಎಂದಾದರೆ ಅದು ಅಪರಾಧವೇ ಆಗುತ್ತದೆ. ಹಣ ಸುಲಿಯುವುದಕ್ಕಾಗಿ ದಾಳಿಗಳನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದಾದರೆ ಅದು ಕೂಡ ಅಪರಾಧವೇ ಆಗುತ್ತದೆ. ಕಂಪನಿಗಳ ಮೇಲೆ ದಾಳಿ ನಡೆಸಿದ ತನಿಖಾ ಸಂಸ್ಥೆಗಳು, ಆ ಕಂಪನಿಗಳು ಬಾಂಡ್ ಖರೀದಿಸಿದ ನಂತರದಲ್ಲಿ ತನಿಖೆಯನ್ನು ಮುಂದುವರಿಸಲಿಲ್ಲ ಎಂದಾದರೆ, ನಿಷ್ಕ್ರಿಯತೆಗೆ ಆ ಸಂಸ್ಥೆಗಳನ್ನು ಹೊಣೆಗಾರರನ್ನಾಗಿಸಬೇಕು. ಬಾಂಡ್ ಯೋಜನೆಯು ಅಕ್ರಮ ಎಂದಾದಲ್ಲಿ, ಅದರ ಮೂಲಕ ಸಂಗ್ರಹಿಸಿದ ಹಣವನ್ನು ಮರಳಿಸುವ ಕೆಲಸ ಆಗಬೇಡವೇ? ಈ ಯೋಜನೆಯ ಕುರಿತಾದ ಸಮಗ್ರವಾದ ತನಿಖೆಯು ಎಲ್ಲ ಪಕ್ಷಗಳು ಹಾಗೂ ಅವು ಮುನ್ನಡೆಸಿದ್ದ ಸರ್ಕಾರವನ್ನು ಒಳಗೊಳ್ಳುತ್ತದೆ; ಬಿಜೆಪಿ ನೇತೃತ್ವದ ಸರ್ಕಾರವನ್ನು ಮಾತ್ರವೇ ಅಲ್ಲ. ದತ್ತಾಂಶವನ್ನು ಬಿಡುಗಡೆ ಮಾಡುವ ವಿಚಾರವಾಗಿ ಕೋರ್ಟ್‌ಗೆ ಎಸ್‌ಬಿಐ ತಪ್ಪು ಹೇಳಿಕೆ ನೀಡಿತ್ತು ಎಂಬುದು ಈಗ ಸ್ಪಷ್ಟವಾಗಿದೆ. ಹೀಗಾಗಿ, ನ್ಯಾಯಾಂಗ ನಿಂದನೆಯ ವಿಚಾರವು ಈಗಲೂ ಪ್ರಸ್ತುತವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT