ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಗೆಹಲೋತ್ ನಡೆ ಅಭಿನಂದನೀಯ; ರಾಜ್ಯಪಾಲ ರವಿ ವರ್ತನೆ ಖಂಡನೀಯ

Published 15 ಫೆಬ್ರುವರಿ 2024, 0:30 IST
Last Updated 15 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ರಾಜ್ಯ‍ಪಾಲರು ರಾಷ್ಟ್ರಪತಿಯವರ ಪ್ರತಿನಿಧಿ ಆಗಿರುತ್ತಾರೆಯೇ ವಿನಾ ಕೇಂದ್ರ ಸರ್ಕಾರದ ರಾಜಕೀಯ

ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವವರನ್ನು ವಿರೋಧಿಸುವ ರಾಜಕೀಯ ಪಕ್ಷದ ಆಡಳಿತ ಇರುವ ರಾಜ್ಯಗಳ ರಾಜ್ಯಪಾಲರು ಅಲ್ಲಿನ ವಿಧಾನಮಂಡಲವನ್ನು ಉದ್ದೇಶಿಸಿ ಮಾಡುವ ಸಾಂಪ್ರದಾಯಿಕ ಭಾಷಣಗಳು ವಿವಾದಗಳಿಗೆ ಕಾರಣವಾಗುತ್ತಿರುವ ಸಂದರ್ಭ ಇದು. ಕೆಲವು ರಾಜ್ಯಪಾಲರು ನಡೆದುಕೊಂಡ ಬಗೆ ಇದಕ್ಕೆ ಕಾರಣ. ಇಂತಹ ಹೊತ್ತಿನಲ್ಲಿ ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಜ್ಯದ ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣವು ಹರ್ಷ ಮೂಡಿಸುವಂಥದ್ದು. ಗೆಹಲೋತ್ ಅವರು ಸಾಂವಿಧಾನಿಕ ನಿಯಮಗಳು ಹಾಗೂ ಸಭ್ಯತೆಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಇದು ಸ್ವಾಗತಾರ್ಹ.

ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರು ಅಲ್ಲಿನ ವಿಧಾನಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ಸಂದರ್ಭದಲ್ಲಿ ನಡೆದುಕೊಂಡ ಬಗೆಗೆ ಹೋಲಿಸಿದರೆ, ಗೆಹಲೋತ್ ಅವರ ನಡೆ ಗಮನ ಸೆಳೆಯುತ್ತದೆ. ಗೆಹಲೋತ್ ಅವರು ಸರ್ಕಾರ ಸಿದ್ಧ‍ಪಡಿಸಿಕೊಟ್ಟ ಭಾಷಣವನ್ನು ಪೂರ್ತಿಯಾಗಿ ಓದಿದ್ದಾರೆ. ಅದರಲ್ಲಿ ಯಾವ ಅಂಶವನ್ನೂ ಅವರು ಬಿಟ್ಟಿಲ್ಲ, ಆ ಭಾಷಣಕ್ಕೆ ಹೊಸದಾಗಿ ಅವರು ಏನನ್ನೂ ಸೇರಿಸುವ ಕೆಲಸ ಮಾಡಿಲ್ಲ. ಅಲ್ಲದೆ, ಭಾಷಣದಲ್ಲಿನ ವಸ್ತು–ವಿಷಯಗಳ ಬಗ್ಗೆ ಯಾವ ಹೇಳಿಕೆಯನ್ನೂ ಅವರು ನೀಡಿಲ್ಲ. ಗೆಹಲೋತ್ ಅವರ ನಡೆಯಲ್ಲಿ ಕಪಟ ಇರಲಿಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ, ಅದರ ಪರಿಣಾಮಗಳ ಬಗ್ಗೆ ಮೆಚ್ಚುಗೆಯು ಭಾಷಣದಲ್ಲಿ ಇತ್ತು. ಕೇಂದ್ರ ಸರ್ಕಾರದ ನೀತಿಗಳ ವಿಚಾರವಾಗಿ ಟೀಕೆ ಕೂಡ ಆ ಭಾಷಣದಲ್ಲಿ ಇತ್ತು. ಕೇಂದ್ರ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ, ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಎಸಗಿದೆ ಎಂಬ ಮಾತುಗಳನ್ನು ಕೂಡ ಭಾಷಣವು ಸೂಚ್ಯವಾಗಿ ಹೇಳಿದೆ.

ತಮ್ಮ ನೀತಿಗಳನ್ನು, ಸಾಮಾಜಿಕ ಮತ್ತು ರಾಜಕೀಯ ನಿಲುವುಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಹೇಳುವ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇದೆ. ಕೇಂದ್ರ ಸರ್ಕಾರದ ನೀತಿಗಳು ಹಾಗೂ ಕಾರ್ಯಗಳು ತನಗೆ ಒಪ್ಪಿಗೆ ಆಗದಿದ್ದರೆ ಅವುಗಳನ್ನು ಟೀಕಿಸುವ ಅಧಿಕಾರ ಕೂಡ ರಾಜ್ಯ ಸರ್ಕಾರಗಳಿಗೆ ಇದ್ದೇ ಇದೆ. ವಾಸ್ತವದಲ್ಲಿ ಆ ಭಾಷಣವು ರಾಜ್ಯ ಸರ್ಕಾರದ್ದು. ಆದರೆ, ಸರ್ಕಾರದ ಮುಖ್ಯಸ್ಥ ರಾಜ್ಯಪಾಲ ಆಗಿರುವ ಕಾರಣ, ಆ ಭಾಷಣವನ್ನು ರಾಜ್ಯಪಾಲರು ಮಾಡುತ್ತಾರೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಭಾಷಣದಲ್ಲಿ ಸ್ಥಾಪಿತ ನಿಯಮಗಳನ್ನು ತುಸುವೂ ತಪ್ಪದೆ ಇದ್ದುದರ ಕಾರಣಕ್ಕಾಗಿ, ಅವರಿಗೆ ಅಭಿನಂದನೆಗಳು ಸಲ್ಲಬೇಕು. ರಾಜ್ಯಗಳ ರಾಜ್ಯ‍ಪಾಲರು, ರಾಷ್ಟ್ರಪತಿಯವರ ಪ್ರತಿನಿಧಿ ಆಗಿರುತ್ತಾರೆಯೇ ವಿನಾ ಅವರು ಕೇಂದ್ರ ಸರ್ಕಾರದ ರಾಜಕೀಯ ಪ್ರತಿನಿಧಿ ಆಗಿರುವುದಿಲ್ಲ.

ರಾಜ್ಯ ಸರ್ಕಾರವು ರಾಜಕೀಯ ಸಂಗತಿಗಳನ್ನು ಮಾತನಾಡಬಹುದು, ರಾಜಕೀಯ ನೆಲೆಯಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ ರಾಜ್ಯಪಾಲರು ರಾಜಕೀಯದಲ್ಲಿ ಭಾಗಿಯಾಗಬಾರದು. ಇಂದು ಯಾವುದಾದರೂ ರಾಜ್ಯದ ರಾಜ್ಯಪಾಲರು ಸರಿಯಾಗಿ ನಡೆದುಕೊಂಡರೆ ಅದು ಉಲ್ಲೇಖಿಸಲು ಅಥವಾ ಶ್ಲಾಘಿಸಲು ಅರ್ಹವಾಗಿ ಪರಿಣಮಿಸಿರುವುದು ಕಾಲದ ವ್ಯಂಗ್ಯ. ತಮಿಳುನಾಡಿನ ರಾಜ್ಯಪಾಲರು ಹಾಗೂ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ತಮ್ಮ ಭಾಷಣದ ವಿಚಾರವಾಗಿ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡರು. ಹೀಗಾಗಿಯೇ, ಕರ್ನಾಟಕದ ರಾಜ್ಯಪಾಲರ ನಡೆಯು ಪ್ರತ್ಯೇಕವಾಗಿ ನಿಲ್ಲುತ್ತದೆ.

ಕೇರಳ ಹಾಗೂ ತಮಿಳುನಾಡಿನ ರಾಜ್ಯಪಾಲರು ತಮಗೆ ನೀಡಿದ್ದ ಭಾಷಣದಲ್ಲಿನ ಕೆಲವು ವಾಕ್ಯಗಳನ್ನು ಮಾತ್ರ ಓದಿದರು. ವಿಧಾನಸಭೆಯಲ್ಲಿ ತಮ್ಮ ಉಪಸ್ಥಿತಿಯನ್ನು ಒಂದು ಪ್ರಹಸನದ ಮಟ್ಟಕ್ಕೆ ಇಳಿಸಿದರು. ಭಾಷಣದಲ್ಲಿ ತಪ್ಪುದಾರಿಗೆ ಎಳೆಯುವ ಅಂಶಗಳು ಇದ್ದವು ಎಂದು ರವಿ ಹೇಳಿದ್ದಾರೆ. ಅವುಗಳನ್ನು ಓದುವುದು ಸಂವಿಧಾನವನ್ನು ನಗೆಪಾಟಲಿಗೆ ಈಡುಮಾಡಿದಂತೆ ಆಗುತ್ತಿತ್ತು ಎಂದು ಕೂಡ ಅವರು ಹೇಳಿದ್ದಾರೆ. ರವಿ ಅವರು ರಾಷ್ಟ್ರಗೀತೆ ನುಡಿಸುವ ಮೊದಲೇ ಸದನದಿಂದ ಹೊರನಡೆದರು ಎಂದು ವರದಿಯಾಗಿದೆ. ಕಳೆದ ವರ್ಷ ಕೂಡ ರವಿ ಅವರು ತಮ್ಮ ಭಾಷಣವನ್ನು ಸರಿಯಾದ ಕ್ರಮದಲ್ಲಿ ಮಾಡಿರಲಿಲ್ಲ. ಅಲ್ಲದೆ, ಭಾಷಣದಲ್ಲಿ ತಮ್ಮದೇ ಮಾತುಗಳನ್ನು ಸೇರಿಸಲು ಯತ್ನಿಸಿದ್ದರು.

ಕಳೆದ ವರ್ಷದಂತೆಯೇ, ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರವು ಕೇಂದ್ರದ ನೀತಿಗಳನ್ನು ಹಾಗೂ ಕ್ರಮಗಳನ್ನು ಈ ವರ್ಷವೂ ಟೀಕಿಸಿದೆ. ಟೀಕೆ ಇರುವ ಸಾಲುಗಳನ್ನು ರಾಜ್ಯಪಾಲರು ಓದಬೇಕಿತ್ತು. ಆದರೆ ಆ ಸಾಲುಗಳನ್ನು ಓದಲು ರಾಜ್ಯಪಾಲರು ನಿರಾಕರಿಸಿರುವುದು ಸಂವಿಧಾನವನ್ನು ನಗೆಪಾಟಲು ಮಾಡಿದ್ದಕ್ಕೆ ಸಮ. ರಾಜ್ಯಪಾಲರು ನಡೆದುಕೊಂಡ ಬಗೆಯು ಅಲ್ಲಿನ ವಿಧಾನಸಭೆಗೆ ಅಗೌರವ ತೋರಿಸಿದಂತೆ ಇದೆ. ಭಾಷಣದ ಬಗ್ಗೆ ಟೀಕೆಗಳನ್ನು ಮಾಡಲು ರಾಜ್ಯಪಾಲರಿಗೆ ಅಧಿಕಾರ ಇಲ್ಲ. ಆ ಅಧಿಕಾರ ಇರುವುದು ವಿರೋಧ ಪಕ್ಷಗಳಿಗೆ ಹಾಗೂ ಜನರಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT