ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಭಾರತೀಯರಿಗೆ ಉದ್ಯೋಗ ಬೇಕು; ಜಗತ್ತಿಗೆ ಭಾರತೀಯರು ಬೇಕು

Published 1 ಜನವರಿ 2024, 0:30 IST
Last Updated 1 ಜನವರಿ 2024, 0:30 IST
ಅಕ್ಷರ ಗಾತ್ರ

ಅನ್ಯ ದೇಶಗಳಿಗೆ ಕಾರ್ಮಿಕರನ್ನು ಒದಗಿಸುವ ಸಂಬಂಧ ದಕ್ಷವಾದ ಹಾಗೂ ನ್ಯಾಯಸಮ್ಮತವಾದ ವ್ಯವಸ್ಥೆಯೊಂದನ್ನು ಭಾರತ ರೂಪಿಸಬೇಕು

ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಹಾಗೂ ಜನಸಂಖ್ಯೆಯ ಇಳಿಕೆಯನ್ನು ಕಾಣುತ್ತಿರುವ ದೇಶಗಳಿಗೆ ಕಾರ್ಮಿಕರನ್ನು ಒದಗಿಸಲು ಕೇಂದ್ರ ಸರ್ಕಾರವು ಆ ದೇಶಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಯೋಜನೆ ಹೊಂದಿರುವುದು ಸ್ವಾಗತಾರ್ಹ. ಈ ಯೋಜನೆಯು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಲ್ಲಿ, ದೇಶಕ್ಕೆ ಪ್ರಯೋಜನ ತಂದುಕೊಡಬಹುದು. ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಬಹುತೇಕ ದೇಶಗಳು ಅಭಿವೃದ್ಧಿ ಹೊಂದಿರುವ ದೇಶಗಳು. ಇವುಗಳ ಜೊತೆಯಲ್ಲೇ, ಇತರ ಕೆಲವು ದೇಶಗಳು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿವೆ.

ಕಾರ್ಖಾನೆಗಳಲ್ಲಿ, ಕೃಷಿ ಜಮೀನಿನಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಕೆಲಸಕ್ಕೆ ಒಂದು ಲಕ್ಷ ಮಂದಿ ಭಾರತೀಯರನ್ನು ನೇಮಕ ಮಾಡಿಕೊಳ್ಳಲು ತೈವಾನ್ ಆಸಕ್ತಿ ತೋರಿಸಿದೆ. ಕಾರ್ಮಿಕರ ಪೂರೈಕೆಗೆ ಭಾರತವು ಜಪಾನ್ ಮತ್ತು ಫ್ರಾನ್ಸ್ ಸೇರಿದಂತೆ ಕೆಲವು ದೇಶಗಳ ಜೊತೆ ಒಪ್ಪಂದಕ್ಕೆ ಸಹಿ ಮಾಡಿದೆ. ನೆದರ್ಲೆಂಡ್ಸ್, ಗ್ರೀಸ್‌, ಡೆನ್ಮಾರ್ಕ್ ಮತ್ತು ಸ್ವಿಟ್ಜರ್ಲೆಂಡ್‌ ದೇಶಗಳ ಜೊತೆ ಮಾತುಕತೆ ನಡೆಯುತ್ತಿದೆ. ಇಸ್ರೇಲ್ ಜೊತೆಗಿನ ಒಪ್ಪಂದದ ಅನ್ವಯ ಭಾರತವು ಆ ದೇಶಕ್ಕೆ 42 ಸಾವಿರ ಮಂದಿ ಕಾರ್ಮಿಕರನ್ನು ಕಳುಹಿಸಿಕೊಡಲಿದೆ. ಇಸ್ರೇಲ್‌ನಲ್ಲಿ ಭಾರತದ 18 ಸಾವಿರ ಕಾರ್ಮಿಕರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಈ ದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಇರುವುದು ತಯಾರಿಕೆ, ಕೃಷಿ, ನಿರ್ಮಾಣ ಮತ್ತು ಆರೋಗ್ಯಸೇವಾ ವಲಯಗಳಲ್ಲಿ.

ದೇಶದ ಕಾರ್ಮಿಕರು ಶತಮಾನಗಳ ಅವಧಿಯಲ್ಲಿ ಜಗತ್ತಿನ ಎಲ್ಲ ಭಾಗಗಳಿಗೂ ತೆರಳಿದ್ದಾರೆ, ಕೆಲಸ ಮಾಡಿದ್ದಾರೆ. ಆದರೆ ಈಗ ವಲಸೆಯ ಪ್ರಮಾಣ ಎಷ್ಟಿರಬೇಕು, ಅದನ್ನು ಕಾನೂನಿನ ಅಡಿಯಲ್ಲಿ ನಿಯಂತ್ರಿಸುವುದು ಹೇಗೆ ಎಂಬುದನ್ನು ಯೋಜಿಸಲು ಅವಕಾಶ ಇದೆ. ಇದರ ಜೊತೆಯಲ್ಲೇ, ದೇಶದ ನಿರುದ್ಯೋಗ ಸಮಸ್ಯೆಗೆ ಕೂಡ ಒಂದಿಷ್ಟು ಪರಿಹಾರ ಕಂಡುಕೊಳ್ಳಲು ಅವಕಾಶ ಇದೆ. ವಲಸೆಯ ವಿಚಾರದಲ್ಲಿ ಅಕ್ರಮವಾದ ಹಾಗೂ ಅನಧಿಕೃತವಾದ ಮಾರ್ಗಗಳು ಕೆಲವು ಇವೆ. ಇದನ್ನು ಈಚೆಗೆ ಫ್ರಾನ್ಸ್‌ನ ಪ್ರಕರಣವೊಂದು ಸ್ಪಷ್ಟವಾಗಿ ಹೇಳಿದೆ. ಕಾರ್ಮಿಕರಿಗೆ ಬೇಡಿಕೆಯು ಹೆಚ್ಚುತ್ತಲೇ ಇರಲಿದೆ. ಭವಿಷ್ಯದಲ್ಲಿ ಕೂಡ ಭಾರತವು ದೇಶಿ ಅಗತ್ಯಗಳಿಗೆ ತೊಂದರೆ ಆಗದ ರೀತಿಯಲ್ಲಿ, ವಿದೇಶಗಳಿಗೆ ಕಾರ್ಮಿಕರನ್ನು ಒದಗಿಸುವ ಕೆಲಸವನ್ನು ಸಮರ್ಥವಾಗಿಯೇ ನಿರ್ವಹಿಸುವ ನಿರೀಕ್ಷೆ ಇದೆ. ಕಾರ್ಮಿಕರನ್ನು ಕಳುಹಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ದೇಶಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ವಾಣಿಜ್ಯ ಒಪ್ಪಂದಗಳು ಸೇವೆಗಳನ್ನು ಮತ್ತು ಕಾರ್ಮಿಕರ ಸಂಚಾರವನ್ನು ಕೂಡ ಒಳಗೊಳ್ಳುವಂತೆ ಇರಬೇಕು ಎಂದು ಭಾರತ ಹೇಳುತ್ತಿದೆ.

ಎರಡು ದೇಶಗಳ ನಡುವೆ ಒಪ್ಪಂದಗಳು ಏರ್ಪಟ್ಟಾಗ, ಕಾರ್ಮಿಕರು ಶೋಷಣೆಗೆ ಗುರಿಯಾಗುವುದು ತಪ್ಪುತ್ತದೆ, ಸೇವಾ ನಿಯಮಗಳು ನ್ಯಾಯಸಮ್ಮತವಾಗಿ ಇರುತ್ತವೆ. ಬೇರೆ ದೇಶಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ದುಡಿದು, ಅಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಅವರು ತವರಿಗೆ ಕಳುಹಿಸುವ ಹಣದಿಂದ ಭಾರತಕ್ಕೆ ಲಾಭವಾಗುತ್ತದೆ. ಇಂತಹ ಬಹುತೇಕ ಒಪ್ಪಂದಗಳು ನಿರ್ದಿಷ್ಟ ಅವಧಿಗೆ ಸೀಮಿತವಾಗಿರುತ್ತವೆ. ಕೆಲಸ ಮಾಡಲು ತೆರಳಿದ ಕಾರ್ಮಿಕರು, ಒಂದಿಷ್ಟು ಹಣ ಉಳಿಸಿಕೊಂಡು ತವರಿಗೆ ಮರಳಲು ಸಾಧ್ಯವಾಗುತ್ತದೆ. ಕೆಲವು ಕಾರ್ಮಿಕರು ಅಲ್ಲಿಯೇ ಇರಲು ಕೂಡ ಸಾಧ್ಯವಾಗಬಹುದು. ಬೇರೆ ದೇಶಗಳಲ್ಲಿ ಭವಿಷ್ಯದಲ್ಲಿ ಕಾರ್ಮಿಕರ ಅಗತ್ಯ ಎಷ್ಟು ಪ್ರಮಾಣದಲ್ಲಿ ಎದುರಾಗಬಹುದು ಎಂಬ ಬಗ್ಗೆ ಕೇಂದ್ರವು ಒಂದಿಷ್ಟು ಲೆಕ್ಕಾಚಾರ ನಡೆಸಬೇಕಾಗಬಹುದು. ಅದಕ್ಕೆ ಅನುಗುಣವಾಗಿ ಭಾರತದಲ್ಲಿ ಕಾರ್ಮಿಕರಿಗೆ ತರಬೇತಿಯನ್ನು ನೀಡಬೇಕಾಗಬಹುದು.

ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ದಕ್ಷವಾದ, ನ್ಯಾಯಸಮ್ಮತವಾದ ವ್ಯವಸ್ಥೆಯೊಂದನ್ನು ರೂಪಿಸಬೇಕು. ಇಂತಹ ನೇಮಕಾತಿಗಳಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಹೆಚ್ಚಿರುತ್ತವೆ. ಬೇರೆ ದೇಶಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಅಲ್ಲಿ ಎದುರಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಒಂದು ವ್ಯವಸ್ಥೆಯನ್ನು ರೂಪಿಸಿದರೆ ಚೆನ್ನ. ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು, ಅಲ್ಲಿನ ಜನರ ಜೊತೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಬೇರೆ ದೇಶಗಳಲ್ಲಿ ಭಾರತೀಯರು ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಆದರೆ ಈಚಿನ ದಿನಗಳಲ್ಲಿ ಕೆಲವು ಕಡೆಗಳಲ್ಲಿ ಭಾರತೀಯ ಮೂಲದವರಿಗೆ ಕೆಟ್ಟ ಅನುಭವ ಆಗುತ್ತಿರುವುದೂ ಇದೆ.

ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾದಲ್ಲಿ ಇಂತಹ ಅನುಭವ ಆಗಿರುವುದು ಹೆಚ್ಚಾಗಿ ವರದಿಯಾಗಿದೆ. ಭಾರತದಲ್ಲಿನ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳು ಬೇರೆ ದೇಶಗಳಲ್ಲಿನ ಭಾರತೀಯರ ಮೇಲೆ ಪರಿಣಾಮ ಬೀರಿರುವುದೂ ಇದೆ. ಇವೇನೇ ಇದ್ದರೂ ಈಗ ದೇಶವು ತನ್ನ ಎದುರು ಇರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಲು ಮುಂದಡಿ ಇರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT