ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೃತಕ ಬುದ್ಧಿಮತ್ತೆಯ ಬಳಕೆಗೆ ನಿಯಂತ್ರಣ: ಆಶಾಭಾವ ಮೂಡಿಸುವ ಒಪ್ಪಂದ

Published 5 ಮಾರ್ಚ್ 2024, 1:22 IST
Last Updated 5 ಮಾರ್ಚ್ 2024, 1:22 IST
ಅಕ್ಷರ ಗಾತ್ರ

ಕೃತಕ ಬುದ್ಧಿಮತ್ತೆಯನ್ನು ಕೆಡುಕು ಉಂಟುಮಾಡಬಹುದಾದ ಬಗೆಯಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಿಸುವುದನ್ನು ತಡೆಯಲು ತಾವೆಲ್ಲ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳುವ ಒಪ್ಪಂದಕ್ಕೆ ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿಗಳು ಹಾಗೂ ಸಾಮಾಜಿಕ ಜಾಲತಾಣ ವೇದಿಕೆಗಳು ಈಚೆಗೆ ಮ್ಯೂನಿಕ್‌ನಲ್ಲಿ ಸಹಿ ಮಾಡಿವೆ. ಇದು ತಂತ್ರಜ್ಞಾನದ ಕಾರಣದಿಂದಾಗಿ ಎದುರಾಗಬಹುದಾದ ಒಂದು ಅಪಾಯವನ್ನು ನಿಯಂತ್ರಿಸುವತ್ತ ಇರಿಸಿರುವ ಸ್ವಾಗತಾರ್ಹ ಹೆಜ್ಜೆ. ಕೃತಕ ಬುದ್ಧಿಮತ್ತೆಯ ದುರ್ಬಳಕೆಯು ಚುನಾವಣೆಗಳ ಸಂದರ್ಭದಲ್ಲಿ ಆಗದಂತೆ ನಿಗಾ ವಹಿಸುವ ಉದ್ದೇಶವು ಈ ಒಪ್ಪಂದಕ್ಕೆ ಇದೆ. ಭಾರತ, ಅಮೆರಿಕ, ಬ್ರಿಟನ್ ಸೇರಿದಂತೆ ಜಗತ್ತಿನ ಹಲವು ಪ್ರಮುಖ ದೇಶಗಳಲ್ಲಿ ಈ ವರ್ಷ ಚುನಾವಣೆ ಇರುವ ಹಿನ್ನೆಲೆಯಲ್ಲಿ ಈ ಒಪ್ಪಂದವು ಬಹಳ ಮಹತ್ವ ಪಡೆಯುತ್ತದೆ. ‘ಈ ಒಪ್ಪಂದವು ಕೆಟ್ಟ ಪರಿಣಾಮ
ಉಂಟುಮಾಡಬಹುದಾದ ಕೃತಕ ಬುದ್ಧಿಮತ್ತೆಯ ವಸ್ತು–ವಿಷಯಗಳಿಂದ ಆನ್‌ಲೈನ್‌ ಬಳಕೆದಾರ ಸಮುದಾಯಗಳನ್ನು ರಕ್ಷಿಸಲು ಇರಿಸಿರುವ ಒಂದು ಪ್ರಮುಖ ಹೆಜ್ಜೆ, ಕಂಪನಿಗಳು ತಾವು ಈ ದಿಸೆಯಲ್ಲಿ ಈಗಾಗಲೇ ಮಾಡುತ್ತಿರುವ ಕೆಲಸಗಳ ಮುಂದುವರಿಕೆಯಾಗಿ ಇದು ಕೂಡ ಇರಲಿದೆ’ ಎಂಬ ಮಾತನ್ನು ಒಪ್ಪಂದಕ್ಕೆ ಸಹಿ ಮಾಡಿರುವವರು ಹೇಳಿದ್ದಾರೆ. ಮೆಟಾ, ಎಕ್ಸ್‌, ಗೂಗಲ್, ಲಿಂಕ್ಡ್‌ಇನ್‌, ಐಬಿಎಂ, ಅಡೋಬ್, ಓಪನ್‌ಎಐ, ಅಮೆಜಾನ್‌, ಟಿಕ್‌ಟಾಕ್‌, ಮೈಕ್ರೊಸಾಫ್ಟ್‌ನಂತಹ ಪ್ರಮುಖ ಕಂಪನಿಗಳು ಈ ಒಪ್ಪಂದಕ್ಕೆ ಸಹಿ ಮಾಡಿವೆ. ಕೃತಕ ಬುದ್ಧಿಮತ್ತೆಯ ದುರ್ಬಳಕೆಯನ್ನು ತಡೆಯಲು ತಂತ್ರಜ್ಞಾನ ವಲಯದ ದೈತ್ಯ ಕಂಪನಿಗಳು ವಾಣಿಜ್ಯ ಉದ್ದೇಶದಿಂದ ಅಥವಾ ರಾಜಕೀಯ ಕಾರಣಗಳಿಂದಾಗಿ ಸಕ್ರಿಯವಾದ ಕ್ರಮವನ್ನು ತೆಗೆದುಕೊಂಡಿಲ್ಲ ಎಂಬ ಟೀಕೆಗಳು ಇವೆ. ಇಂತಹ ಟೀಕೆಗಳನ್ನು ಎದುರಿಸುವ ಯತ್ನದ ಭಾಗವಾಗಿ ಕಂಪನಿಗಳು ಈ ಒಪ್ಪಂದಕ್ಕೆ ಬಂದಿರಬಹುದು.

ಕೃತಕ ಬುದ್ಧಿಮತ್ತೆಯ ಸಾಧನಗಳನ್ನು ಬಳಸಿ ಸೃಷ್ಟಿಸುವ ಸುಳ್ಳು ಹಾಗೂ ಕಿಡಿಗೇಡಿತನದ ವಸ್ತು–ವಿಷಯಗಳು ಮತದಾರರ ವರ್ತನೆಯ ಮೇಲೆ ಪ್ರಭಾವ ಬೀರಬಲ್ಲವು. ಆ ಮೂಲಕ ಅವು ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು ಬುಡಮೇಲು ಮಾಡಬಲ್ಲವು. ಕೃತಕ ಬುದ್ಧಿಮತ್ತೆಯ ನೆರವಿನಿಂದ ಸೃಷ್ಟಿಸಿದ ಸುಳ್ಳು ವಸ್ತು–ವಿಷಯಗಳನ್ನು ಗುರುತಿಸಲು, ಜನಜಾಗೃತಿಯ ಅಭಿಯಾನ ಕೈಗೊಳ್ಳಲು ಮತ್ತು ರಾಜಕೀಯಕ್ಕೆ ಸಂಬಂಧಿಸಿದ ವಸ್ತು–ವಿಷಯಗಳನ್ನು ಸೃಷ್ಟಿಸಲು ಕೃತಕ ಬುದ್ಧಿಮತ್ತೆಯ ಬಳಕೆಯಲ್ಲಿ ಪಾರದರ್ಶಕತೆ ತರಲು ಕೈಜೋಡಿಸುವುದಾಗಿ ಈ ಒಪ್ಪಂದಕ್ಕೆ ಸಹಿ ಮಾಡಿರುವ ಕಂಪನಿಗಳು ಹೇಳಿವೆ. ಜನರನ್ನು ವಂಚಿಸುವ ಉದ್ದೇಶದ, ರಾಜಕೀಯಕ್ಕೆ ಸಂಬಂಧಿಸಿದ ವಸ್ತು–ವಿಷಯಗಳ ಮೂಲವನ್ನು ಗುರುತಿಸುವುದು ಮಹತ್ವದ ಕೆಲಸ. ಆ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯ ಇದೆ ಎಂಬ ವಿಚಾರದಲ್ಲಿ ತಾವು ಸಹಮತ ಹೊಂದಿದ್ದೇವೆ ಎಂದು ಕೂಡ ಅವು ಹೇಳಿವೆ. ಕೃತಕ ಬುದ್ಧಿಮತ್ತೆಯ ಸಾಧನಗಳು ಸೃಷ್ಟಿಸುವ ರಾಜಕೀಯ ವಸ್ತು–ವಿಷಯಗಳಿಂದ ಆಗುವ ಅಪಾಯಗಳನ್ನು ಕಡಿಮೆ ಮಾಡಲು ಅಗತ್ಯವಿರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕಂಪನಿಗಳು ತೀರ್ಮಾನಿಸಿವೆ. ಇಂತಹ ವಸ್ತು–ವಿಷಯಗಳು ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಇಂಟರ್ನೆಟ್‌ ಶೋಧಿಸಲು ಬಳಸುವ ವೇದಿಕೆಗಳ ಮೂಲಕ ಪಸರಿಸುವುದನ್ನು ನಿಯಂತ್ರಿಸುವಲ್ಲಿ ಕಂಪನಿಗಳು ಒಂದಾಗಿ ನಡೆಸುವ ಯತ್ನಗಳು ನೆರವಿಗೆ ಬರಬಲ್ಲವು. ಕೃತಕ ಬುದ್ಧಿಮತ್ತೆಯ ಉಪಕರಣಗಳ ಬಳಕೆಯ ಮೇಲೆ ನಿಗಾ ಇರಿಸಲು ಅಥವಾ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳನ್ನು ಸೃಷ್ಟಿಸಲು ಈ ಉಪಕರಣಗಳ ಬಳಕೆಗೆ ಅವಕಾಶ ನಿರಾಕರಿಸಲು ಕಂಪನಿಗಳು ಯತ್ನಿಸಲಿವೆ. ಇಂತಹ ವಿಷಯಗಳು ಇಂಟ‌ರ್ನೆಟ್ ಮೂಲಕ ಹರಡುವುದು ಆರಂಭವಾದಾಗ ಕಂಪನಿಗಳು ತ್ವರಿತವಾಗಿ ಹಾಗೂ ಅಗತ್ಯ ಪ್ರಮಾಣದ ಕ್ರಮವನ್ನು ಕೈಗೊಳ್ಳಲಿವೆ.

ಕಂಪನಿಗಳು ತೋರಿರುವ ಬದ್ಧತೆಯು ಒಳ್ಳೆಯದೇ. ಆದರೆ, ಕೃತಕ ಬುದ್ಧಿಮತ್ತೆಯನ್ನು ಚುನಾವಣಾ ಅಭಿಯಾನಗಳಲ್ಲಿ ಮತ್ತು ಒಟ್ಟಾರೆಯಾಗಿ ರಾಜಕೀಯದಲ್ಲಿ ತಪ್ಪಾಗಿ ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ತಡೆಯುವುದು ಸುಲಭದ ಕೆಲಸ ಆಗಲಿಕ್ಕಿಲ್ಲ. ಏಕೆಂದರೆ ತಂತ್ರಜ್ಞಾನದ ಸರಿಯಾದ ಬಳಕೆ ಹಾಗೂ ತಪ್ಪಾದ ಬಳಕೆಯನ್ನು ಎಲ್ಲ ಸಂದರ್ಭಗಳಲ್ಲಿಯೂ ಸ್ಪಷ್ಟವಾಗಿ ಪ್ರತ್ಯೇಕಿಸುವುದು ಬಹಳ ಕಷ್ಟದ ಕೆಲಸ. ಕೃತಕ ಬುದ್ಧಿಮತ್ತೆಯನ್ನು ತಪ್ಪಾಗಿ ಬಳಸಿಕೊಳ್ಳುವುದನ್ನು ಪತ್ತೆ ಮಾಡಲು, ಸುಳ್ಳು ಮಾಹಿತಿ ಹಾಗೂ ಕಿಡಿಗೇಡಿತನದ ಮಾಹಿತಿ ಹರಡುವುದನ್ನು ತಡೆಯಲು ತಾಂತ್ರಿಕವಾಗಿ ಬಹಳ ಶ್ರಮದ ಪ್ರಯತ್ನವೊಂದರ ಅಗತ್ಯ ಇದೆ. ಇಂತಹ ವಸ್ತು–ವಿಷಯಗಳ ವ್ಯಾಖ್ಯೆಯ ವಿಚಾರದಲ್ಲಿ ಒಮ್ಮತವೊಂದು ಮೂಡುವುದು ಕೂಡ ಬಹಳ ಕಷ್ಟ. ಸುಳ್ಳು ಮಾಹಿತಿ ಹರಡುವುದನ್ನು ತಡೆಯುವ ಕೆಲಸಕ್ಕೆ ಅಡ್ಡಿ ಉಂಟುಮಾಡಲು ಸರ್ಕಾರ ಅಥವಾ ಇತರ ಸಂಸ್ಥೆಗಳ ಶಕ್ತಿ ಹಾಗೂ ಪ್ರಭಾವದ ಬಳಕೆ ಆಗಬಹುದು, ಕೆಲವು ಸಂದರ್ಭಗಳಲ್ಲಿ ಕಾನೂನನ್ನು ಕೂಡ ಬಳಕೆ ಮಾಡಿಕೊಳ್ಳಬಹುದು. ಈಗ ಮಾಡಿಕೊಂಡಿರುವ ಒಪ್ಪಂದವನ್ನು ಮೀರಲು ಕೂಡ ಅವಕಾಶಗಳು ಇವೆ ಎಂಬ ಮಾತುಗಳು ಇವೆ. ಆದರೆ ಒಪ್ಪಂದದ ಆಶಯಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನವೊಂದು ನಡೆದಲ್ಲಿ ಒಳ್ಳೆಯ ಪರಿಣಾಮವು ಕಂಡುಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT