ಪ್ರತ್ಯೇಕ ರಾಜ್ಯ: ಭಾವನಾತ್ಮಕತೆ ಬೇಡ, ಆಡಳಿತ ಸುಧಾರಣೆ ಆದ್ಯತೆಯಾಗಲಿ

6

ಪ್ರತ್ಯೇಕ ರಾಜ್ಯ: ಭಾವನಾತ್ಮಕತೆ ಬೇಡ, ಆಡಳಿತ ಸುಧಾರಣೆ ಆದ್ಯತೆಯಾಗಲಿ

Published:
Updated:

ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತದ ಅಂಬೆಗಾಲು ಇಡುತ್ತಿರುವಾಗಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಬಲವಾಗಿ ಕೇಳಿಬಂದಿದೆ. ಇದೊಂದು ರಾಜಕೀಯಪ್ರೇರಿತ ಬೇಡಿಕೆ ಎನ್ನುವುದರಲ್ಲಿ ಅನುಮಾನವಿಲ್ಲ. ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಂತಹ ಕೋಲಾಹಲ ಎಬ್ಬಿಸಲಾಗಿದೆ ಎನ್ನುವುದೂ ನಿಜ. ಜನರ ಭಾವನೆಯನ್ನು ಕೆರಳಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರ ಇದರಲ್ಲಿ ಅಡಗಿದೆ. ಕೆಲವು ರಾಜಕಾರಣಿಗಳು ‘ಮಗುವನ್ನು ಚಿವುಟುವ ಮತ್ತು ತೊಟ್ಟಿಲು ತೂಗುವ’ ಕೆಲಸ ಮಾಡುತ್ತಿರುವುದೂ ಢಾಳಾಗಿ ಕಾಣುತ್ತಿದೆ.

ಆದರೆ ಉತ್ತರ ಕರ್ನಾಟಕದಲ್ಲಿ ಬಹುತೇಕ ಜನರು ಅಖಂಡ ಕರ್ನಾಟಕವನ್ನು ಬೆಂಬಲಿಸುತ್ತಾರೆಯೇ ವಿನಾ ಪ್ರತ್ಯೇಕ ರಾಜ್ಯವನ್ನು ಅಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಅಂದಮಾತ್ರಕ್ಕೆ ರಾಜ್ಯ ಸರ್ಕಾರ ‘ಇದು ರಾಜಕೀಯಪ್ರೇರಿತ’ ಎಂದು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಅವರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಾಸ್ತವ್ಯ ಮಾಡಿದಾಕ್ಷಣ ಅಲ್ಲಿನ ಸಮಸ್ಯೆಗಳು ಬಗೆಹರಿಯುವುದಿಲ್ಲ. ವಾಸ್ತವ್ಯ ಮಾಡುವುದಕ್ಕಿಂತಲೂ ಆಡಳಿತ ಸುಧಾರಣೆ ಮಾಡುವುದು ಮುಖ್ಯ. ಆಡಳಿತ ವೈಖರಿ ಬದಲಾಗಬೇಕು. ವ್ಯವಸ್ಥೆ ಸುಧಾರಿಸಬೇಕು. ಆಡಳಿತ ವಿಕೇಂದ್ರೀಕರಣ ನಿಜವಾದ ಅರ್ಥದಲ್ಲಿ ಆಗಬೇಕು. ಉತ್ತರ ಕರ್ನಾಟಕದ ಜನರು ಪ್ರತಿಯೊಂದು ವಿಷಯಕ್ಕೂ ಬೆಂಗಳೂರಿಗೆ ಬಂದು ಹೋಗುವುದನ್ನು ತಪ್ಪಿಸಬೇಕು. ಈಗಾಗಲೇ ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಿದೆ.

ಅದೇ ರೀತಿ ಬೆಳಗಾವಿಯಲ್ಲಿ ಇರುವ ಸುವರ್ಣಸೌಧ ಕೂಡ ಬೆಂಗಳೂರಿನಲ್ಲಿರುವ ವಿಧಾನಸೌಧದ ರೀತಿಯಲ್ಲಿಯೇ ಕೆಲಸ ಮಾಡುವ ಹಾಗೆ ಆಗಬೇಕು. ಉತ್ತರ ಕರ್ನಾಟಕದ ಜನರ ಅಲೆದಾಟವನ್ನು ತಪ್ಪಿಸಲು ಕೆಲವು ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಒಬ್ಬ ಉಪ ಲೋಕಾಯುಕ್ತರ ಕಚೇರಿ, ಇಬ್ಬರು ಮಾಹಿತಿ ಆಯಕ್ತರ ಕಚೇರಿ, ಕರ್ನಾಟಕ ನೀರಾವರಿ ನಿಗಮ, ಕೃಷ್ಣಾ ಜಲ ಭಾಗ್ಯ ನಿಗಮದ ಕಚೇರಿಗಳನ್ನು ಸ್ಥಳಾಂತರಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಬರೀ ಭರವಸೆಗಳಲ್ಲಿ ಆಡಳಿತ ಕಳೆದುಹೋಗಬಾರದು.

ಪ್ರತ್ಯೇಕ ರಾಜ್ಯದ ಬೇಡಿಕೆ ಮತ್ತು ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂಬ ಆರೋಪ ಕೇಳಿಬರುವುದು ಹೊಸದೇನೂ ಅಲ್ಲ. ಈ ವಿಷಯವನ್ನು ಯಾರೂ ಭಾವನಾತ್ಮಕವಾಗಿ ನೋಡಬಾರದು. ಜನರನ್ನು ಕೆರಳಿಸುವ ಕೆಲಸವನ್ನೂ  ಮಾಡಬಾರದು. ಉತ್ತರ ಕರ್ನಾಟಕದ ಜನರು ವ್ಯಕ್ತಪಡಿಸುತ್ತಿರುವ ಭಾವನೆಗಳನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಬೇಕು. ಎಲ್ಲ ಯೋಜನೆಗಳೂ, ಎಲ್ಲ ಕಚೇರಿಗಳೂ ಬೆಂಗಳೂರು ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಇರಬೇಕು ಎಂಬ ಭಾವನೆಯನ್ನು ಬಿಟ್ಟು ರಾಜ್ಯದ ಇತರ ಭಾಗಗಳೂ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳಬೇಕು.

ಕೈಗಾರಿಕೆಗಳು, ಉದ್ದಿಮೆಗಳು ರಾಜ್ಯದ ಇತರ ಭಾಗಗಳಿಗೂ ಹಂಚಿಹೋಗುವಂತೆ ಮಾಡಬೇಕು. ಸಂಪನ್ಮೂಲ ವಿತರಣೆಯಲ್ಲಿಯೂ ತಾರತಮ್ಯ ಮಾಡಬಾರದು. ಉತ್ತರ ಕರ್ನಾಟಕಕ್ಕೆ ನೀಡಲಾದ ಸಂಪನ್ಮೂಲ ಸೂಕ್ತ ರೀತಿಯಲ್ಲಿ ವಿನಿಯೋಗವಾಗುವಂತೆ ನೋಡಿಕೊಳ್ಳುವುದೂ ರಾಜ್ಯ ಸರ್ಕಾರದ ಜವಾಬ್ದಾರಿ. ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 371 (ಜೆ ) ಅಡಿ ಈಗಾಗಲೇ ವಿಶೇಷ ಸ್ಥಾನಮಾನ ನೀಡಲಾಗಿದೆ. 371ಜೆ ಅಡಿ ಸಿಗಬೇಕಾದ ಸೌಲಭ್ಯಗಳ ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡುವುದು ಮುಖ್ಯ. ‘ನಾವು ಎರಡನೇ ದರ್ಜೆಯ ಪ್ರಜೆಗಳು’ ಎಂಬ ಭಾವನೆ ರಾಜ್ಯದ ಯಾವುದೇ ಭಾಗದ ನಾಗರಿಕರಿಗೆ ಬರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ. ಆದರೆ ರಾಜಕೀಯ ಲಾಭಕ್ಕೆ ಇಂತಹ ವಿಷಯಗಳನ್ನು ಯಾರಾದರೂ ಬಳಸಿಕೊಳ್ಳುವ ಯತ್ನ ಮಾಡಿದರೆ ಅವರಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನು ಜನರು ಮಾಡಬೇಕು.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !