ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಕ್ಷರಸ್ಥೆಯ ತಾಕಲಾಟದ ಕಥನ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

* ‘ಹೆಬ್ಬೆಟ್‌ ರಾಮಕ್ಕ’ ಚಿತ್ರದ ಮಹತ್ವವೇನು?
ಇದು ಮಹಿಳಾ ಪ್ರಧಾನ ಚಿತ್ರ. ಸಿನಿಮಾಕ್ಕೆ ರಾಷ್ಟ್ರ‍ ಪ್ರಶಸ್ತಿ ಬಂದಿರುವುದು ಖುಷಿ ಕೊಟ್ಟಿದೆ. ಸಂವಿಧಾನದತ್ತವಾಗಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಅಧಿಕಾರದಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ, ಅದರ ದುರ್ಬಳಕೆಯೇ ಹೆಚ್ಚು. ಇದನ್ನೇ ಚಿತ್ರ ಕಟ್ಟಿಕೊಡುತ್ತದೆ. ಸ್ತ್ರೀಯರ ಸಬಲೀಕರಣ ಕುರಿತು ಸಾಕಷ್ಟು ಸಿನಿಮಾಗಳು ಬಂದಿವೆ. ಪುರುಷರ ಆಸೆಬುರುಕತನದಿಂದ ಅಧಿಕಾರಕ್ಕೇರಿದ ಮಹಿಳೆಯರು ಅನುಭವಿಸುತ್ತಿರುವ ಸಂಕಷ್ಟ ಕುರಿತಾದ ಚಿತ್ರಗಳು ವಿರಳ. ಪುರುಷರು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲವೂ ಹೌದು.

* ಈ ಚಿತ್ರಕ್ಕೆ ಪ್ರೇರಣೆ ಏನು?
ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ರಾಮಕ್ಕನನ್ನು ಪ್ರತಿನಿಧಿಸುವ ಮಹಿಳೆಯರು ಸಾಕಷ್ಟಿದ್ದಾರೆ. ಇದೇ ಚಿತ್ರಕ್ಕೆ ಪ್ರೇರಣೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಕೇವಲ ಪ್ರಾತಿನಿಧಿಕ ಅಷ್ಟೆ. ಅವರ ಗಂಡ, ಕುಟುಂಬದ ಸದಸ್ಯರು ಮಹಿಳೆಯರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಮಹಿಳೆಯರು ಅಧಿಕಾರದ ಗದ್ದುಗೆ ಹಿಡಿದಿದ್ದರಿಂದ ಬದಲಾವಣೆಯೂ ಆಗಿದೆ. ಇದರ ಪ್ರಮಾಣ ಕಡಿಮೆ. ಪುರುಷರ ಅಧಿಕಾರಲಾಲಸೆಯಿಂದ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಪಾರ್ಶ್ವವಾಯು ಬಡಿದಿದೆ.

* ಕಥೆ ಹುಟ್ಟಿದ ಬಗೆ ಹೇಗೆ?
‘ನಾನು ಗಾಂಧಿ’ ಮಕ್ಕಳ ಚಿತ್ರದ ಬಳಿಕ ಈ ಸಿನಿಮಾದ ನಿರ್ದೇಶನಕ್ಕೆ ಆಲೋಚಿಸಿದೆ. ಏಳೆಂಟು ವರ್ಷಕಾಲ ಇದಕ್ಕಾಗಿ ಕೆಲಸ ಮಾಡಿದೆ. ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಆಡಳಿತದಲ್ಲಿ ನಡೆಯುತ್ತಿರುವ ಅಧಿಕಾರದ ದುರುಪಯೋಗವನ್ನು ಕಣ್ಣಾರೆ ಕಂಡಿದ್ದೇನೆ. ಇದೇ ಚಿತ್ರ ನಿರ್ದೇಶನಕ್ಕೆ ಸ್ಫೂರ್ತಿ.

* ಇಂತಹ ಚಿತ್ರಗಳಿಂದ ಅಧಿಕಾರದ ದುರುಪಯೋಗ ತಡೆಯಲು ಸಾಧ್ಯ ಎಂದು ನಿಮಗೆ ಅನಿಸುತ್ತದೆಯೇ?
ಸಿನಿಮಾದಿಂದ ಜಗತ್ತಿನಲ್ಲಿ ಬದಲಾವಣೆ ಸಾಧ್ಯ. ನಾವೆಲ್ಲ ಡಾ.ರಾಜ್‌ಕುಮಾರ್‌ ಅವರ ಚಿತ್ರಗಳಿಂದ ಪ್ರೇರಣೆ ಪಡೆದವರು. ಅವರ ಚಿತ್ರಗಳ ಮೌಲ್ಯದ ಮೂಲಕ ಬದುಕು ಕಟ್ಟಿಕೊಂಡವರು. ಹಳ್ಳಿಗಳಲ್ಲಿ ಅಣ್ಣಾವ್ರ ಚಿತ್ರಗಳನ್ನು ನೋಡಿ ಆದರ್ಶ ಬದುಕು ರೂಪಿಸಿಕೊಂಡ ಸಾಕಷ್ಟು ಜನರಿದ್ದಾರೆ. ಸಿನಿಮಾ ನೋಡಿ ಅಪರಾಧ ಕೃತ್ಯ ಎಸಗಿದವರ ಅಂಕಿ–ಅಂಶ ಬಹುಬೇಗ ಸಿಗುತ್ತದೆ. ಆದರೆ, ಮಾದರಿ ಬದುಕು ಕಟ್ಟಿಕೊಂಡವರ ಸಂಖ್ಯೆ ಸಿಗುವುದಿಲ್ಲ. ಸಿನಿಮಾಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯ. ಹೆಬ್ಬೆಟ್‌ ರಾಮಕ್ಕ ಇಲ್ಲಿ ಸಾಂಕೇತಿಕ ಅಷ್ಟೆ. ಮನರಂಜನೆ ನೀಡುವುದಷ್ಟೆ ನಮ್ಮ ಉದ್ದೇಶವಲ್ಲ. ಚಿತ್ರ ನೋಡಿದ ಜನರು ತಿಳಿವಳಿಕೆ ಹೊಂದಿದಾಗಲಷ್ಟೆ ನಮ್ಮ ಶ್ರಮಕ್ಕೂ ಬೆಲೆ ಸಿಗುತ್ತದೆ.

* ಸಿನಿಮಾದಲ್ಲಿ ಬಳಸಿರುವ ಭಾಷೆ ಬಗ್ಗೆ ಹೇಳಿ.
ಚಿತ್ರಕ್ಕೆ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಸಂಭಾಷಣೆ ಬರೆದಿದ್ದಾರೆ. ಬಳಸಿರುವ ಭಾಷೆ ತುಸು ಕಠಿಣ ಎನಿಸಬಹುದು. ಆದರೆ, ಚಿತ್ರಕ್ಕೆ ಇದರ ಅಗತ್ಯವಿತ್ತು. ಪ್ರಸ್ತುತ ಜನಮಾನಸದಿಂದ ಗಾದೆಗಳು ಮಾಯವಾಗುತ್ತಿವೆ. ಸಿನಿಮಾದಲ್ಲಿ ಸಾಕಷ್ಟು ಗಾದೆಗಳನ್ನು ಬಳಸಲಾಗಿದೆ.

* ನಿಮ್ಮ ಮುಂದಿನ ಚಿತ್ರಗಳು?
ಈಗ ಅನ್ನದಾತರ ಬದುಕು ಸಂಕಷ್ಟದ ಸುಳಿಗೆ ಸಿಲುಕಿದೆ. ಇದಕ್ಕೆ ಕಾರಣಗಳು ಹಲವು. ಅವರ ಬದುಕಿಗೆ ಭದ್ರತೆ ಇಲ್ಲ. ರೈತರು ಮತ್ತು ಜಾಗತೀಕರಣದ ಹಿನ್ನೆಲೆಯಲ್ಲಿ ಸಿನಿಮಾ ಮಾಡಲು ನಿರ್ಧರಿಸಿದ್ದೇನೆ. ಈ ನಿಟ್ಟಿನಲ್ಲಿ ಸ್ಕ್ರಿಪ್ಟ್‌ ಕೂಡ ಸಿದ್ಧವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT