ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳಿಗೆ ಚುನಾವಣೆ ಗೈಡ್

Last Updated 15 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಲೋಕಸಭೆ ಚುನಾವಣೆಗೆ ಮುಹೂರ್ತದ ದಿನಘೋಷಣೆಯಾಗುತಿದ್ದಂತೆ ರಾಜಕೀಯ ಪಕ್ಷವೊಂದು ತಮ್ಮ ಅಭ್ಯರ್ಥಿಗಳ ಅನುಕೂಲಕ್ಕಾಗಿ ‘ಚುನಾವಣೆ ಗೈಡ್’ ಹೊರ ತಂದಿದೆ. ಅದರಲ್ಲಿರುವ ಕುತೂಹಲಕಾರಿ ಅಂಶಗಳನ್ನು ಇಲ್ಲಿ ಕೊಡಲಾಗಿದೆ. ಆಘಾತಕ್ಕೊಳಗಾಗದೆ ಓದಿ.

ನಾಲಗೆ ಹರಿಯಬಿಡುವುದು: ಚುನಾವಣೆ ಯುದ್ಧದಲ್ಲಿ ಅತೀ ಮುಖ್ಯ ಅಸ್ತ್ರ ನಾಲಗೆ. ಜನರ ಸಮಸ್ಯೆಗಳನ್ನು ಬಿಟ್ಟು, ಬೇರೆ ಎಲ್ಲಾ ವಿಷಯಗಳ ಬಗ್ಗೆ ಭಾಷಣ ಮಾಡಬೇಕಾಗುವುದರಿಂದ ನಾಲಗೆ ಹರಿತಗೊಳಿಸುವ ಬದಲು ಹರಿಯಬಿಡಲು ಕಲಿಯಬೇಕು. ಅದಕ್ಕಾಗಿ ಕೆಲವು ಸೂತ್ರಗಳನ್ನು ಇಲ್ಲಿ ನೀಡಿದ್ದೇವೆ;

* ದಿನಾ ಬೆಳಿಗ್ಗೆ ಹಾಗಲಕಾಯಿ ಜ್ಯೂಸ್ ಕುಡಿಯಿರಿ. ಇದರಿಂದ ನಿಮ್ಮ ಪ್ರತಿಸ್ಪರ್ಧಿಯನ್ನು ಅಥವಾ ಪ್ರತಿಪಕ್ಷದವರನ್ನು ಅತ್ಯಂತ ಕಹಿ ಮಾತುಗಳಿಂದ ಛೇಡಿಸಬಹುದು.

* ನಿಮ್ಮ ವಾಗ್ದಾಳಿ ಕೇಳುಗರಿಗೆ ವಾಕರಿಕೆ ತರಿಸುವಂತಿರಬೇಕು ಅಂದ್ಕೊಂಡಿದ್ದರೆ, ಭಾಷಣ ಕೊರೆಯುವ ದಿನ ಮುಂಜಾನೆ ಹತ್ತಿರವಿರುವ ಚರಂಡಿಯಲ್ಲಿ ಸ್ನಾನ ಮಾಡಿ.

* ಇನ್ನು ಪ್ರತಿಪಕ್ಷದವರಿಗೆ ನಿಮ್ಮನ್ನು ‘ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು’ ಅನ್ನುವಷ್ಟು ಕೋಪ ಬರಬೇಕೆಂದಿದ್ದರೆ, ಕ್ವಾರ್ಟರ್‌ ರಮ್ ಕುಡ್ಕೊಂಡು ಭಾಷಣ ಬಿಗಿಯಿರಿ. ಇದರಿಂದ, ನೀವು ಏನು ಮಾತನಾಡಿದ್ದೀರಿ ಎಂಬುದು ನಿಮಗೇ ಗೊತ್ತಿರುವುದಿಲ್ಲ (ಮಾರನೇ ದಿವಸ ಪತ್ರಿಕೆಗಳಲ್ಲಿ ಓದಿ ತಿಳಿದುಕೊಳ್ಳಬಹುದು). ಹರಿಯ ಬಿಡುವುದರಲ್ಲಿ ನಿಮ್ಮದು ‘ಎತ್ತಿದ ನಾಲಗೆ’ ಎಂದು ಜನಕೋಟಿಗೆ ಮನವರಿಕೆಯಾಗುವ ಹೊತ್ತಿಗೆ, ನಿಮ್ಮ ಅಮೂಲ್ಯ ನಾಲಗೆಯನ್ನು ಇನ್ಶೂರ್‌ ಮಾಡಿಸಿಕೊಳ್ಳಿ. ಇಂತಹ ನಾಲಗೆಗಳನ್ನು ಕತ್ತರಿಸಿ ಹಾಕುವ ಬೆದರಿಕೆಗಳು ಬರುವುದು ಸಾಮಾನ್ಯ.

ಗಾಳ ಹಾಕುವುದು: ನೀವು ಹಾಲಿ ಸಂಸದರಾಗಿದ್ದು ಐದು ವರ್ಷ ನಿಮ್ಮ ಕ್ಷೇತ್ರವನ್ನೇ ಮರೆತಿದ್ದರೆ ಮತದಾರರಿಗೆ ನಾನಾ ಬಗೆಯಲ್ಲಿ ಗಾಳ ಹಾಕಬೇಕಾಗುತ್ತದೆ. ಅಂತಹ ಅಭ್ಯರ್ಥಿಗಳು ಮೊದಲು ಕ್ಷೇತ್ರ ದರ್ಶನ ಮಾಡಬೇಕು. ಕ್ಷೇತ್ರ ಅಂದರೆ ನೀವು ಸ್ಪರ್ಧಿಸುವ ಕ್ಷೇತ್ರವಲ್ಲ, ಧಾರ್ಮಿಕ ಕ್ಷೇತ್ರಗಳು! ಇಲ್ಲಿ ದೇವರಾಶೀರ್ವಾದದ ಜತೆಗೆ ಜನಾಶೀರ್ವಾದವೂ ಉಚಿತವಾಗಿ ಸಿಗುತ್ತದೆ ಎಂಬ ದೃಢ ನಂಬಿಕೆ ಇಟ್ಟುಕೊಳ್ಳಬೇಕಾಗುತ್ತದೆ.

ಮತದಾರರಿಗೆ ಅಷ್ಟೇ ಅಲ್ಲ, ಅಭ್ಯರ್ಥಿಗಳಿಗೂ ಗಾಳ ಹಾಕಬೇಕಾಗುತ್ತದೆ. ಇದು ಪಕ್ಷದ ಮಟ್ಟದಲ್ಲಿ ನಡೆಯುತ್ತದೆ. ನಿಮ್ಮ ಪಕ್ಷದಲ್ಲಿ ಗೆಲ್ಲುವ ಅಭ್ಯರ್ಥಿಗಳು ಇಲ್ಲವೆಂದಾದರೆ, ಅಂತಹವರನ್ನು ಬೇರೆ ಪಕ್ಷಗಳಿಂದ ಖರೀದಿಸಬೇಕು. ಅವರನ್ನು ಪಕ್ಷಕ್ಕೆ ಸೇರಿಸಲು ಆಗದಿದ್ದರೆ ಸ್ಪರ್ಧೆಯಿಂದ ಅವರು ಹಿಂದೆ ಸರಿಯುವವರೆಗೂ ‘ಆಪರೇಷನ್’ ಅಸ್ತ್ರ ಪ್ರಯೋಗಿಸುತ್ತಲೇ ಇರಬೇಕು.

ಈ ಬಾರಿ ರೈತರಿಗೆ ಮತ್ತು ನಿರುದ್ಯೋಗಿಗಳಿಗೆ ನೋಟುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ವಿತರಿಸುವುದರಿಂದ ಉಳಿದ ಮತದಾನಿಗಳಿಗೆ ಹೆಂಡ, ಸೀರೆ, ಕುಕ್ಕರ್, ಮಿಕ್ಸಿ ಇತ್ಯಾದಿಗಳನ್ನು ಪಕ್ಷವೇ ಹಂಚಬೇಕಾಗಿ ಬರುತ್ತದೆ. ಎಳ್ಳಷ್ಟೂ ಜನಸೇವೆ ಮಾಡದ ನಾಲಾಯಕ್ಕು ಅಭ್ಯರ್ಥಿಗಳು ಇಂತಹ ನೀತಿಗೆಟ್ಟ ಕೆಲಸ ಮಾಡದೆ ಬೇರೆ ವಿಧಿಯಿಲ್ಲ.

ವೆಚ್ಚರಹಿತ ಪ್ರಚಾರ: ಚುನಾವಣಾ ವೆಚ್ಚಕ್ಕೆ ಕಡಿವಾಣ ಹಾಕಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ನಯಾಪೈಸಾ ಖರ್ಚಿಲ್ಲದೆ ಟಿ.ವಿ. ಮೂಲಕ ಪ್ರಚಾರ ಪಡೆಯಬಹುದು. ಹೇಗೆಂದರೆ, ಯಾವುದಾದರೂ ಒಂದು ಟಿ.ವಿ. ಚಾನೆಲ್ಲನ್ನು ಎರಡು ತಿಂಗಳ ಮಟ್ಟಿಗೆ ‘ಲೀಸ್’ಗೆ ಪಡೆದು ನಡೆಸುವುದು. ‘ಉಚಿತ ಜಾಹೀರಾತು’ ಎಂಬ ಉಲ್ಲೇಖದೊಂದಿಗೆ ಸಾರಾಸಗಟಾಗಿ ಪ್ರಚಾರ ಮಾಡಬಹುದು.

ಭಾಷೆ ಬಳಕೆ: ನೀವು ಎಷ್ಟೇ ಗಲೀಜು ಭಾಷೆ ಬಳಸಿ ಭಾಷಣ ಕೊರೆದರೂ ಪರವಾಗಿಲ್ಲ. ಆದರೆ ಕೆಲವು ಪದ ಪ್ರಯೋಗಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಉದಾಹರಣೆಗೆ, ಕಳ್ಳ, ಮೂರ್ಖ, ಲೋಫರ್ ಇತ್ಯಾದಿ. ಯಾಕೆಂದರೆ ಇಂದಿನ ರಾಜಕೀಯ ಎಷ್ಟು ಕೆಳಮಟ್ಟದಲ್ಲಿದೆ ಎಂದರೆ, ಕಳ್ಳರ ಸಂಘ, ಮೂರ್ಖರ ಒಕ್ಕೂಟ ಮತ್ತು ಲೋಫರ್ ಗ್ರೂಪ್‌ಗಳು ಮಾನನಷ್ಟ ಮೊಕದ್ದಮೆ ಹೂಡಬಹುದು!

ನಾಟಕವಾಡುವುದು: ಇದಕ್ಕೆ ಅಭ್ಯರ್ಥಿಗಳು ನಿಮ್ಮೂರಿನ ನಾಟಕಕಾರರನ್ನೊಮ್ಮೆ ಭೇಟಿಯಾಗಿ, ಸಲಹೆಗಳನ್ನು ಪಡೆಯಬೇಕು. ಅವರು ನಿಮಗೆ ಹೇಗೆ ಅಳಬೇಕು ಮತ್ತು ಎಷ್ಟು ಲೀಟರ್ ಕಣ್ಣೀರು ಸುರಿಸಬೇಕು ಎಂದು ಹೇಳಿಕೊಡುತ್ತಾರೆ. ನೆನಪಿಡಿ, ಪ್ರಚಾರ ಭಾಷಣಕ್ಕೆ ಹೋಗುವಾಗ ಕಿಸೆಯಲ್ಲಿ ಗ್ಲಿಸರಿನ್ ಮತ್ತು ಹೆಗಲ ಮೇಲೆ ದೊಡ್ಡ ಟವೆಲ್ ಇರತಕ್ಕದ್ದು. ಚಿಕ್ಕ ಪುಟ್ಟ ಹಳ್ಳಿಗಳಲ್ಲಿ ನಿಮ್ಮ ‘ಕಣ್ಣೀರಾವರಿ ಯೋಜನೆ’ ಖಂಡಿತಾ ಫಲಪ್ರದವಾಗುತ್ತದೆ.

ಅದಲ್ಲದೆ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸವನ್ನು ಸ್ವತಃ ಮಾಡಬೇಕು. ಬಸ್ಸಿನಲ್ಲಿ ಪ್ರಯಾಣಿಸಬೇಕು. ಮಾರ್ಕೆಟ್ಟಿಗೆ ಹೋಗಿ ಮುನ್ನೂರು ರೂಪಾಯಿ ತರಕಾರಿಗೆ ಎರಡು ಸಾವಿರದ ನೋಟು ಕೊಟ್ಟು, ‘ಕೀಪ್ ದ ಚೇಂಜ್’ ಅನ್ನಬೇಕು. ರೈತನ ಬಳಿ ಹೋಗಿ ಅವನೊಂದಿಗೆ ಬೆವರು ಸುರಿಸಬೇಕು (ಸೆಲ್ಫಿ ಮರೆಯಕೂಡದು).

ದೂರವಿಡಿ: ಈ ಬಾರಿ ನೋಟು, ಸೀರೆ, ಹೆಂಡ ಹಂಚಿಕೆಯನ್ನು ಗುಟ್ಟಾಗಿಡುವಷ್ಟು ಸುಲಭವಾಗಿ, ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆಯನ್ನು ರಹಸ್ಯವಾಗಿಡುವ ಹಾಗಿಲ್ಲ. ಯಾಕೆಂದರೆ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿ ತನ್ನ ಜಾತಕವನ್ನು ದಿನಪತ್ರಿಕೆಯಲ್ಲಿ ಜಗಜ್ಜಾಹೀರುಗೊಳಿಸಲೇಬೇಕೆಂಬುದು ಚುನಾವಣಾ ಆಯೋಗದ ಅಪ್ಪಣೆಯಾಗಿದೆ.

ಆದ್ದರಿಂದ ಒಂದೋ ಅಂತಹವರಿಗೆ ಟಿಕೆಟ್ ಕೊಡಬೇಡಿ. ಅದು ಅಸಾಧ್ಯವೆಂದಾದರೆ, ಜಾಹೀರಾತು ಪ್ರಕಟವಾದ ದಿನಪತ್ರಿಕೆಯ ಎಲ್ಲಾ ಪ್ರತಿಗಳನ್ನು ಅಭ್ಯರ್ಥಿಯೇ ಖರೀದಿಸಿ ಪಕ್ಷದ ಮಾನವನ್ನು ಕಾಪಾಡತಕ್ಕದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT