ನ್ಯಾಯಾಲಯಗಳಲ್ಲಿ ‘ಜೈವಿಕ ವೈವಿಧ್ಯ’

7
ಜೈವಿಕ ವೈವಿಧ್ಯದ ಸಂರಕ್ಷಣೆಯ ದೃಷ್ಟಿಯಿಂದ ನ್ಯಾಯಾಲಯಗಳ ತೀರ್ಪು ಬೇಗ ಬಂದಷ್ಟೂ ಒಳ್ಳೆಯದು

ನ್ಯಾಯಾಲಯಗಳಲ್ಲಿ ‘ಜೈವಿಕ ವೈವಿಧ್ಯ’

Published:
Updated:
Deccan Herald

1993ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಏರ್ಪಟ್ಟ ಜೈವಿಕ ವೈವಿಧ್ಯ ಒಡಂಬಡಿಕೆ, ಪ್ರಪಂಚದ ಜೈವಿಕ ವೈವಿಧ್ಯವನ್ನು ಸಂರಕ್ಷಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ. ಈ ಒಡಂಬಡಿಕೆಗಿಂತ ಮುಂಚೆ ಭೂಗ್ರಹದ ಜೈವಿಕ ಸಂಪನ್ಮೂಲ ಇಡೀ ಮಾನವ ಜನಾಂಗದ ಸಾಮೂಹಿಕ ಆಸ್ತಿಯೆಂಬ ವಾದವಿತ್ತು. ಇದನ್ನು ಒಪ್ಪದ ಅನೇಕ ದೇಶಗಳು, ಜೈವಿಕ ಸಂಪನ್ಮೂಲ ಆಯಾ ದೇಶದ ಸಾರ್ವಭೌಮತ್ವಕ್ಕೆ ಒಳಪಟ್ಟ ಆಸ್ತಿಯೆಂಬ ನಿಲುವನ್ನು ಮಂಡಿಸಿ, ಅಂತಹ ಸಂಪನ್ಮೂಲದ ಬಳಕೆಗೆ ಸಂಬಂಧಪಟ್ಟ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ಆಯಾ ದೇಶಗಳಿಗಿದೆ ಎಂಬುದನ್ನು ಸ್ಪಷ್ಟಪಡಿಸಿದವು. ಆ ನಂತರ ಈ ಒಡಂಬಡಿಕೆಗೆ ಅಮೆರಿಕವನ್ನು ಬಿಟ್ಟು, 196 ದೇಶಗಳು ಒಪ್ಪಿಗೆ ನೀಡಿವೆ. ಈ ಒಡಂಬಡಿಕೆಗೆ ಸಹಿ ಮಾಡಿದ ನಂತರ ಭಾರತ ಸರ್ಕಾರ 2002ರಲ್ಲಿ ಜೈವಿಕ ವೈವಿಧ್ಯ ಅಧಿನಿಯಮ ಮತ್ತು 2004ರಲ್ಲಿ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಜಾರಿಗೆ ತಂದಿತು. ಈ ನಿಯಮಗಳಲ್ಲಿ ಅತಿ ಮುಖ್ಯವಾದ ಒಂದು ಅಂಶವೆಂದರೆ ‘ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಇರುವ ಅವಕಾಶ ಮತ್ತು ವಾಣಿಜ್ಯೋದ್ದೇಶದ ಬಳಕೆಯಿಂದ ದೊರೆಯುವ ಲಾಭವನ್ನು, ಸಂಪನ್ಮೂಲವನ್ನು ಸಂರಕ್ಷಿಸುವವರೊಡನೆ ಹಂಚಿಕೊಳ್ಳಬೇಕಾದ ಅಗತ್ಯ’(ಅಕ್ಸೆಸ್ ಅಂಡ್ ಬೆನಿಫಿಟ್ ಶೇರಿಂಗ್).

ಜೈವಿಕ ವೈವಿಧ್ಯ ಅಧಿನಿಯಮವು ಜೈವಿಕ ಸಂಪನ್ಮೂಲಗಳ ಬಳಕೆಗೆ ಸಂಬಂಧಪಟ್ಟಂತೆ ಸಹಜವಾಗಿಯೇ ಭಾರತ ಮತ್ತು ಬೇರೆ ದೇಶಗಳ ನಡುವೆ ವ್ಯತ್ಯಾಸ ಮಾಡಿದೆ. ಭಾರತದ ಎಲ್ಲ ಪ್ರಜೆಗಳಿಗೂ ನಮ್ಮ ದೇಶದಲ್ಲಿ ಸಂಶೋಧನೆಯ ಉದ್ದೇಶಕ್ಕೆ ಜೈವಿಕ ಸಂಪನ್ಮೂಲವನ್ನು ಬಳಸಿಕೊಳ್ಳುವ ಹಕ್ಕಿದೆ. ಸ್ಥಳೀಯ ಜನ, ವೈದ್ಯರು, ಸಾಂಪ್ರದಾಯಿಕ ವೈದ್ಯವೃತ್ತಿಯನ್ನು ನಡೆಸಿಕೊಂಡು ಬಂದಿರುವ ಕುಟುಂಬಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸಂಘಟನೆ, ಕಂಪನಿಗಳು, ಜೈವಿಕ ಸಂಪನ್ಮೂಲವನ್ನು ವಾಣಿಜ್ಯೋದ್ದೇಶಕ್ಕೆ ಬಳಸುವ ಮುಂಚೆ ರಾಜ್ಯ ಜೈವಿಕ ವೈವಿಧ್ಯ ಮಂಡಳಿಗೆ ‘ಪೂರ್ವಸೂಚನೆ’ ನೀಡಬೇಕು. ಭಾರತದ ಪ್ರಜೆಗಳಲ್ಲದವರು, ಭಾರತದಲ್ಲಿ ಸಂಪೂರ್ಣವಾಗಿ ನೆಲೆಗೊಂಡಿರದ ಕಂಪನಿಗಳು, ಭಾರತದಲ್ಲಿ ನೆಲೆಗೊಂಡಿದ್ದರೂ ಷೇರು ಬಂಡವಾಳ ಅಥವಾ ಆಡಳಿತಕ್ಕೆ ಸಂಬಂಧಪಟ್ಟಂತೆ ಭಾರತದ ಪ್ರಜೆಗಳಲ್ಲದವರು ಇರುವ ಕಂಪನಿಗಳು, ರಾಷ್ಟ್ರೀಯ ಜೈವಿಕ ವೈವಿಧ್ಯ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೇ ನಮ್ಮ ದೇಶದ ಜೈವಿಕ ಸಂಪನ್ಮೂಲವನ್ನಾಗಲೀ, ಅದಕ್ಕೆ ಸಂಬಂಧಿಸಿದ ಜ್ಞಾನವನ್ನಾಗಲೀ ಯಾವುದೇ ರೀತಿಯಲ್ಲೂ ಬಳಸುವಂತಿಲ್ಲ.

2002ರ ಜೈವಿಕ ವೈವಿಧ್ಯ ಅಧಿನಿಯಮ ಹಾಗೂ 2004ರಲ್ಲಿ ಅದರಡಿಯಲ್ಲಿ ಜಾರಿಗೆ ಬಂದ ನಿಯಮಗಳಲ್ಲಿ ಅನೇಕ ದೋಷಗಳು, ಅಸ್ಪಷ್ಟತೆಗಳು, ಕುಂದುಕೊರತೆಗಳು ಇವೆ ಎಂಬುದು ಪರಿಣತರ, ಸರ್ಕಾರೇತರ ಸಂಸ್ಥೆಗಳ ಅಭಿಪ್ರಾಯ. 10 ವರ್ಷಗಳ ದೀರ್ಘಾವಧಿಯ ನಂತರ, ಅವುಗಳನ್ನು ಸರಿಪಡಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ವಾಯುಗುಣ ಬದಲಾವಣೆ ಸಚಿವಾಲಯವು ಹೊಸ ಮಾರ್ಗದರ್ಶನ ಸೂತ್ರಗಳನ್ನು  2014ರಲ್ಲಿ ಜಾರಿಗೆ ತಂದಿತು. ಈ ಪ್ರಕಾರ, ವಾಣಿಜ್ಯೋದ್ದೇಶಕ್ಕೆ ಜೈವಿಕ ಸಂಪನ್ಮೂಲವನ್ನು ಬಳಸಿಕೊಂಡಾಗ, ಭಾರತ ಹಾಗೂ ವಿದೇಶಿ ಕಂಪನಿಗಳೆರಡೂ ತಮ್ಮ ಲಾಭದ ನಿಗದಿತ ಭಾಗವನ್ನು ಆ ಜೈವಿಕ ಸಂಪನ್ಮೂಲವನ್ನು ಸಂರಕ್ಷಿಸುತ್ತಿರುವವರ ಜೊತೆಗೆ ಹಂಚಿಕೊಳ್ಳಬೇಕು.

 ಜೈವಿಕ ಸಂಪನ್ಮೂಲವನ್ನು ಬಳಸಿಕೊಂಡು, ವಿವಿಧ ಉತ್ಪನ್ನಗಳನ್ನು ಉತ್ಪಾದಿಸಿ, ಮಾರಾಟ ಮಾಡಿ ಲಾಭ ಗಳಿಸುತ್ತಿರುವ ಸಂಸ್ಥೆಗಳಿಗೆ ನಿಗದಿಪಡಿಸಿರುವ ದರದಲ್ಲಿ ರಾಯ
ಧನ ನೀಡುವಂತೆ ನಮ್ಮ ದೇಶದ ಅನೇಕ ರಾಜ್ಯಗಳ ಜೈವಿಕ ವೈವಿಧ್ಯ ಮಂಡಳಿಗಳು ನೋಟಿಸ್‌ಗಳನ್ನು ನೀಡುತ್ತ ಬಂದಿವೆ.
ಹಾಗೆ ನೋಡಿದರೆ ಮಂಡಳಿಗಳು ವಿಧಿಸುತ್ತಿರುವ ಶುಲ್ಕ ಹೆಚ್ಚೇನಲ್ಲ. ಒಟ್ಟು ಉತ್ಪನ್ನದ ಮೌಲ್ಯದ ಮೇಲೆ ಶೇಕಡ 0.1ರಿಂದ 0.5ರಷ್ಟು ಮಾತ್ರ. ಆಹಾರ ಮತ್ತು ಔಷಧ ಸಾಮಗ್ರಿಗಳನ್ನು ಉತ್ಪಾದಿಸುತ್ತಿರುವ ಕಂಪನಿಗಳ ಮೇಲೆ ರಾಜ್ಯ ಮಂಡಳಿಗಳು ವಿಶೇಷವಾಗಿ ಗಮನಹರಿಸಿವೆ. ಇಂತಹ ಸಂಸ್ಥೆಗಳಲ್ಲಿ ಅಲ್ಪ ಸಮಯದಲ್ಲಿ ಬೃಹದಾಕಾರ
ವಾಗಿ ಬೆಳೆದು, ಅಧಿಕ ಲಾಭ ಮಾಡುತ್ತಿರುವ ಬಾಬ ರಾಮದೇವ್ ಅವರ ಪತಂಜಲಿ ಆಯುರ್ವೇದ ಟ್ರಸ್ಟ್ ಎದ್ದು ಕಾಣುತ್ತದೆ. ಈ ಸಂಸ್ಥೆ ಉತ್ಪಾದಿಸುತ್ತಿರುವ ಸಾಂಪ್ರದಾಯಿಕ ಆಯುರ್ವೇದ ಉತ್ಪನ್ನಗಳು, ಕಾಲ್ಗೇಟ್- ಪಾಮೋಲಿವ್ ಮತ್ತು ಯೂನಿಲಿವರ್‌ಗಳಂತಹ ಬಹುರಾಷ್ಟ್ರೀಯ ಕಂಪನಿಗಳ ಆದಾಯದ ತೀವ್ರ ಇಳಿತಕ್ಕೆ ಕಾರಣವಾಗಿದೆಯೆಂದು ಈ ವರ್ಷದ ಮೇ ತಿಂಗಳ ಬ್ಲೂಮ್‍ಬರ್ಗ್ ವರದಿ ತಿಳಿಸಿದೆ.

ಆಯುರ್ವೇದ ಉತ್ಪನ್ನಗಳ ಕ್ಷೇತ್ರದಲ್ಲಿದ್ದು, ದೇಶವ್ಯಾಪಿ ಮಾರಾಟ ಜಾಲ ಹೊಂದಿರುವ ಕೆಲವು ಬೃಹತ್ ಉದ್ಯಮಗಳು ಮತ್ತು ಇನ್ನಿತರ ಅನೇಕ ಸಣ್ಣ ಪುಟ್ಟ ಸಂಸ್ಥೆಗಳು, ನಿಯಮ, ನಿಬಂಧನೆಗಳಲ್ಲಿರುವ ಅಸ್ಪಷ್ಟತೆಗಳನ್ನು ಬಳಸಿಕೊಂಡು, ಲಾಭದ ಹಂಚಿಕೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಿವೆ ಎಂಬುದು ಅನೇಕ ಪರಿಣತರ ಅಭಿ
ಪ್ರಾಯ. 2002ರ ಜೈವಿಕ ವೈವಿಧ್ಯ ಅಧಿನಿಯಮದ 7ನೆಯ ಕಲಮಿನಂತೆ, ದೇಶೀಯ ಕಂಪನಿಗಳು ಜೈವಿಕ ಸಂಪನ್ಮೂಲವನ್ನು ವಾಣಿಜ್ಯೋದ್ದೇಶಕ್ಕೆ ಬಳಕೆ ಮಾಡಿಕೊಳ್ಳುವ ಮೊದಲು, ರಾಜ್ಯ ಮಂಡಳಿಗಳಿಗೆ ಪೂರ್ವಸೂಚನೆ ನೀಡಬೇಕು, ನಿಜ. ಆದರೆ ಈ ಪೂರ್ವಸೂಚನೆಯನ್ನು, ರಾಜ್ಯ ಜೈವಿಕ ವೈವಿಧ್ಯ ಮಂಡಳಿಗಳು ‘ಪೂರ್ವ ಅನುಮತಿ’  ಎಂದು ಅರ್ಥ ವಿವರಣೆ ನೀಡಿ, ಕಂಪನಿಗಳಿಗೆ ನೋಟಿಸ್‌ ನೀಡುತ್ತಿವೆ. ಇದು ಸರಿಯಲ್ಲ, ಭಾರತದ ಕಂಪನಿಗಳಿಗೆ ಬಳಕೆಗಿಂತ ಮುಂಚೆ ಅನುಮತಿ ಪಡೆಯುವುದು ಅನಗತ್ಯ ಎಂಬುದು ಈ ಎಲ್ಲ ಕಂಪನಿಗಳ ವಾದ.

ಜೈವಿಕ ಸಂಪನ್ಮೂಲದ ಬಳಕೆಯಿಂದ ಬಂದ ಲಾಭದಲ್ಲಿ, ಅದನ್ನು ಸಂರಕ್ಷಿಸಿಕೊಂಡು ಬಂದಿರುವ ಸ್ಥಳೀಯ ಸಮುದಾಯಗಳಿಗೆ ನ್ಯಾಯೋಚಿತವಾದ ಪಾಲಿರಬೇಕೆಂ
ಬುದು ಮೂಲಭೂತವಾಗಿ ಭಾರತದ ಪರಿಕಲ್ಪನೆ. ಜೈವಿಕ ವೈವಿಧ್ಯ ಒಡಂಬಡಿಕೆಯ ಸಂದರ್ಭದಲ್ಲಿ ಈ ತತ್ವ ಎಲ್ಲ ದೇಶಗಳ ಗಮನ ಸೆಳೆಯಿತು. ಈ ಒಪ್ಪಂದ ರೂಪುಗೊಳ್ಳುವ ಬಹು ಮುಂಚೆಯೇ ಅಂತಹ ಒಂದು ಲಾಭಾಂಶ ಹಂಚಿಕೆಯ ನಿದರ್ಶನ ನಮಗೆ ಕೇರಳದಲ್ಲಿ ದೊರೆಯುತ್ತದೆ.

ಕೇರಳದಲ್ಲಿರುವ ‘ಕನಿ’ ಎಂಬ ಬುಡಕಟ್ಟು ಜನ, ‘ಆರೋಗ್ಯಪಾಚ’ ಎಂಬ ಸಸ್ಯವನ್ನು, ಅದರ ಆರೋಗ್ಯವರ್ಧಕ, ರೋಗನಿರೋಧಕ ಗುಣಗಳಿಗಾಗಿ ಬಳಸುತ್ತಾರೆ. ಈ ಸಸ್ಯ ಹಾಗೂ ಅದರ ಬಳಕೆಯ ವಿಧಾನದ ಜ್ಞಾನವಿರುವುದು ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಚಿಕಿತ್ಸಕರಿಗೆ. ಈ ಜ್ಞಾನವನ್ನು ಪಡೆದ ಕೇರಳದ ಟ್ರಾಪಿಕಲ್ ಗಾರ್ಡನ್ ಅಂಡ್ ರಿಸರ್ಚ್ ಸಂಸ್ಥೆಯ ವಿಜ್ಞಾನಿಗಳು, ಅದರಿಂದ 12 ಕಾರ್ಯಶೀಲ ಘಟಕಗಳನ್ನು ಬೇರ್ಪಡಿಸಿ, ‘ಜೀವನಿ’ ಎಂಬ ಔಷಧವನ್ನು ತಯಾರಿಸಿದರು. ಔಷಧಕ್ಕೆ ಸಂಬಂಧಪಟ್ಟಂತೆ ಎರಡು ಪೇಟೆಂಟ್‍ಗಳಿಗೆ ಅರ್ಜಿಯನ್ನು ಸಲ್ಲಿಸಿದ ವಿಜ್ಞಾನಿಗಳು, ಔಷಧ ಉತ್ಪಾದನೆಯ ಹಕ್ಕನ್ನು ಖಾಸಗಿ ಕಂಪನಿಯೊಂದಕ್ಕೆ ನೀಡಿದರು. ಔಷಧದ ವಾಣಿಜ್ಯೋತ್ಪಾದನೆ ಮತ್ತು ಮಾರಾಟದಿಂದ ಬಂದ ಆದಾಯವನ್ನು ಬುಡಕಟ್ಟು ಜನಾಂಗದೊಡನೆ ಹಂಚಿಕೊಳ್ಳಲು ವಿಶ್ವಸ್ಥ ಮಂಡಳಿಯೊಂದನ್ನು ಸ್ಥಾಪಿಸಲಾಯಿತು. ವಿಜ್ಞಾನಿಗಳು, ಔಷಧ ತಯಾರಿಕಾ ಸಂಸ್ಥೆ ಹಾಗೂ ಬುಡಕಟ್ಟು ಜನಾಂಗ- ಹೀಗೆ ಎಲ್ಲ ಪಾಲುದಾರರೂ ಇದ್ದ ಈ ವಿಶಿಷ್ಟ ಪ್ರಯೋಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದು, ಮುಂದೆ ಜೈವಿಕ ವೈವಿಧ್ಯ ಒಡಂಬಡಿಕೆಯಲ್ಲಿನ ‘ಅಕ್ಸೆಸ್ ಅಂಡ್ ಬೆನಿಫಿಟ್ ಶೇರಿಂಗ್’ ತತ್ವಕ್ಕೆ ಆಧಾರವಾಯಿತು. ವಿಶ್ವಸ್ಥ ಮಂಡಳಿಯ ಕೆಲಸ ಕಾರ್ಯಗಳಲ್ಲಿ ಆನಂತರ ಹಲವಾರು ಸಮಸ್ಯೆಗಳು ಎದುರಾದರೂ, ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸುವಾಗಲೂ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು. ಆದರೆ ಸಂಪನ್ಮೂಲದ ಬಳಕೆ ಮತ್ತು ಲಾಭಾಂಶದ ಹಂಚಿಕೆಗೆ ಸಂಬಂಧಿಸಿದಂತೆ ಇಡೀ ವಿಶ್ವಕ್ಕೆ ವಿಶಿಷ್ಟ ಮಾದರಿಯನ್ನು ನೀಡಿದ ಆ ರಾಜ್ಯದಲ್ಲೇ ‘ಆಯುಷ್’ ಉತ್ಪನ್ನಗಳ ತಯಾರಕರು, ನಿಯಮಗಳಲ್ಲಿನ ಹಲವಾರು ಗೊಂದಲ, ಅಸ್ಪಷ್ಟತೆಗಳನ್ನು ಬಳಸಿಕೊಂಡು, ಕೇರಳ ರಾಜ್ಯ ಜೈವಿಕ ವೈವಿಧ್ಯ ಮಂಡಳಿಗೆ ಒಂದೇ ವರ್ಷದಲ್ಲಿ ₹ 10 ಸಾವಿರ ಕೋಟಿ ರಾಯಧನವನ್ನು ನೀಡದೇ ತಪ್ಪಿಸಿಕೊಂಡ ವರದಿಗಳಿವೆ.

2012ರ ಸೆಪ್ಟೆಂಬರ್ ಮತ್ತು 2013ರ ಮಾರ್ಚ್ ಅವಧಿಯಲ್ಲಿ ಮಧ್ಯಪ್ರದೇಶದ ಜೈವಿಕ ವೈವಿಧ್ಯ ಮಂಡಳಿ, ಆ ರಾಜ್ಯದಲ್ಲಿ ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವ ಔಷಧ, ಆಹಾರ, ಮದ್ಯ, ಸಕ್ಕರೆ, ತೈಲ ಮುಂತಾದ ಉತ್ಪಾದಕರಿಗೆ ನೋಟಿಸ್‌ಗಳನ್ನು ನೀಡಿ, ಆಯಾ ಸಂಸ್ಥೆಯವಾರ್ಷಿಕ ನಿವ್ವಳ ಲಾಭದ ಶೇ 0.5ರಷ್ಟು ಹಣವನ್ನು ಮಂಡಳಿಯೊಂದಿಗೆ ಹಂಚಿಕೊಳ್ಳಬೇಕೆಂದು ಸೂಚಿಸಿತು. ಆದರೆ ಈ ಕಂಪನಿಗಳು ಮಂಡಳಿಯ ಸೂಚನೆಯನ್ನು ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್‌ನಲ್ಲಿ ಪ್ರಶ್ನಿಸಿದವು. ಇದರಿಂದ ಎಚ್ಚೆತ್ತ ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ವಾಯುಗುಣ ಬದಲಾವಣೆ ಸಚಿವಾಲಯವು 2014ರಲ್ಲಿ ಹೊಸ ಮಾರ್ಗದರ್ಶನ ಸೂತ್ರಗಳನ್ನು ನೀಡಿ, ಭಾರತದ ಕಂಪನಿಗಳೂ ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಂಡ ಸಂದರ್ಭದಲ್ಲಿ ರಾಜ್ಯ ಮಂಡಳಿಗಳೊಡನೆ ಲಾಭವನ್ನು ಹಂಚಿಕೊಳ್ಳಬೇಕೆಂಬ ನಿರ್ದೇಶನವನ್ನು ನೀಡಿತು. ಈ ಸೂಚನೆಗೆ ಅನುಗುಣವಾಗಿ ಮಹಾರಾಷ್ಟ್ರ, ಕೇರಳ ಮತ್ತು ಉತ್ತರಾಖಂಡ ರಾಜ್ಯದ ಮಂಡಳಿಗಳು, ಆಯಾ ರಾಜ್ಯಗಳ, 1,500, 2,300 ಮತ್ತು 1,000 ಆಯುಷ್ ಉತ್ಪನ್ನಗಳ ಉತ್ಪಾದಕರಿಗೆ ನೋಟಿಸ್‌ಗಳನ್ನು ನೀಡಿ, ಅವರು ಬಳಸುತ್ತಿರುವ ಎಲ್ಲ ಜೈವಿಕ ಸಂಪನ್ಮೂಲಗಳ ಸಮಸ್ತ ವಿವರಗಳನ್ನೂ ನಿಗದಿತ ಅರ್ಜಿ ಶುಲ್ಕದೊಂದಿಗೆ ಒದಗಿಸಬೇಕೆಂದು ಸೂಚಿಸಿತು. ಆದರೆ ಭಾರತದ ಆಯುಷ್ ಔಷಧ ಉತ್ಪಾದಕರ ಕೇಂದ್ರ ಸಂಘಟನೆ, ‘ಕೇಂದ್ರ ಸರ್ಕಾರದ 2014ರ ಸೂಚನೆಗಳು, ವಿದೇಶಿ ಕಂಪನಿಗಳೊಡನೆ ವ್ಯಾಪಾರ ವ್ಯವಹಾರ ನಡೆಸದ ಭಾರತೀಯ ಕಂಪನಿಗಳಿಗೆ ಅನ್ವಯಿಸುವುದಿಲ್ಲ; ಭಾರತೀಯ ಕಂಪನಿಗಳು ಜೈವಿಕ ಸಂಪನ್ಮೂಲವನ್ನು ಬಳಸಿಕೊಂಡರೂ ಲಾಭವನ್ನು ಹಂಚಿಕೊಳ್ಳಬೇಕಾಗಿಲ್ಲ; ಜೈವಿಕ ವೈವಿಧ್ಯ ಅಧಿನಿಯಮದಲ್ಲಿ ಇಲ್ಲದ ಅಂಶವನ್ನು ಮಾರ್ಗದರ್ಶನ ಸೂತ್ರಗಳ ಮೂಲಕ ನಮ್ಮ ಮೇಲೆ ಹೇರುವ ಪ್ರಯತ್ನ ಅಸಾಂವಿಧಾನಿಕ’ ಎಂಬ ನಿಲುವು ತಳೆದು ನ್ಯಾಯಾಲಯದ ಕಟ್ಟೆಯೇರಿದೆ.

2014ರಲ್ಲಿ, ಕೇಂದ್ರದಲ್ಲಿ ನೂತನ ಸರ್ಕಾರ ಬಂದ ನಂತರ, ಆಯುಷ್ ಉದ್ಯಮಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿಸುವ ಪ್ರಯತ್ನಗಳು ಪ್ರಾರಂಭವಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಒಂದು ಇಲಾಖೆಯಾಗಿದ್ದ ಆಯುಷ್‍ಗೆ ಪ್ರತ್ಯೇಕ ಸಚಿವಾಲಯದ ಸ್ಥಾನ ದೊರಕಿದ್ದು 2014ರ ನವೆಂಬರ್ ತಿಂಗಳಲ್ಲಿ. ಆಯುಷ್‌ಗೆ ಸಂಬಂಧಿಸಿದಂತೆ ಹೊಸ ರಾಷ್ಟ್ರೀಯ ನೀತಿ ರೂಪುಗೊಳ್ಳುತ್ತಿದ್ದು, ಆಯುಷ್ ವ್ಯವಸ್ಥೆಯನ್ನು ಬಲಪಡಿಸಿ, ಅದನ್ನು ಆಧುನಿಕ ವೈದ್ಯಕೀಯ ಹಾಗೂ ಆರೋಗ್ಯ ರಕ್ಷಣೆಯ ಅವಿಭಾಜ್ಯ ಅಂಗವನ್ನಾಗಿ ಮಾಡುವ ಪ್ರಯತ್ನಗಳು ಸಾಗಿವೆ. ಈ ಬೆಳವಣಿಗೆಗಳಾಗುತ್ತಿರುವಾಗಲೇ ಆಯುಷ್ ಉದ್ಯಮಗಳು, ಪ್ರಬಲ ಸಂಘಟನೆಯ ಮೂಲಕವಾಗಿ ಜೈವಿಕ ಸಂಪನ್ಮೂಲಗಳ ಬಳಕೆ ಮತ್ತು ಲಾಭಾಂಶ ಹಂಚಿಕೆಯ ಷರತ್ತುಗಳನ್ನು ಪ್ರಶ್ನಿಸುತ್ತಿರುವುದು ಕಾಕತಾಳೀಯವಲ್ಲವೆಂಬ ಅಭಿಪ್ರಾಯವಿದೆ. ಆಯುಷ್ ಉದ್ಯಮದ ಸಂಘಟನೆಯಲ್ಲಿ ಸರ್ಕಾರದ ನೀತಿನಿಲುವುಗಳನ್ನು ಪ್ರಭಾವಿಸಬಲ್ಲ ವ್ಯಕ್ತಿಗಳು, ಸಂಸ್ಥೆಗಳಿರುವುದರಿಂದ ಮತ್ತು ನ್ಯಾಯಾಲಯದಲ್ಲಿ ತಮ್ಮ ಪರವಾಗಿ ವಾದವನ್ನು ಮಂಡಿಸಲು  ಸಮರ್ಥರಾದ, ಪ್ರಸಿದ್ಧ ವಕೀಲರ ತಂಡವನ್ನು ನಿಯೋಜಿಸಿರುವುದರಿಂದ, ಜೈವಿಕ ಸಂಪನ್ಮೂಲಗಳನ್ನು ರಕ್ಷಿಸುತ್ತಿರುವ ಜೈವಿಕ ವೈವಿಧ್ಯ ಮಂಡಳಿಗಳಿಗೆ, ಸ್ಥಳೀಯ ಗ್ರಾಮ ಮಟ್ಟದ ಜೈವಿಕ ವೈವಿಧ್ಯ ನಿರ್ವಹಣಾ ಸಮಿತಿಗಳಿಗೆ ಲಾಭಾಂಶದಲ್ಲಿ ಪಾಲು ಸಿಗುವುದು ಸದ್ಯಕ್ಕಂತೂ ದೂರದ ವಿಷಯವೆಂಬ ಅಭಿಪ್ರಾಯವಿದೆ.

ಹಲವಾರು ರಾಜ್ಯಗಳ ನ್ಯಾಯಾಲಯಗಳಲ್ಲಿರುವ ಜೈವಿಕ ವೈವಿಧ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೆಚ್ಚಿನವು ‘ಅಕ್ಸೆಸ್ ಮತ್ತು ಬೆನಿಫಿಟ್ ಶೇರಿಂಗ್’ ಬಗೆಗಿದ್ದರೂ, ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳೂ ಇವೆ. ಲಾಭಾಂಶ ಹಂಚಿಕೆಯ ಷರತ್ತು ಅನ್ವಯವಾಗುವುದು ಆಹಾರ ಸಾಮಗ್ರಿಗಳನ್ನು ಉತ್ಪಾದಿಸುವ ಘಟಕಗಳಿಗೇ ಹೊರತಾಗಿ ಆಹಾರ ಸಂಸ್ಕರಣೆಯ ಘಟಕಗಳಿಗಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ಬೇಕಾಗಿದೆ. ಪರಿಸರ, ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಪ್ರಕರಣಗಳಿಗೆ ಹೋಲಿಸಿದರೆ, ಜೈವಿಕ ವೈವಿಧ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ ಅವುಗಳ ಸಂಕೀರ್ಣತೆ ಬಹಳ ಹೆಚ್ಚಿದೆಯೆಂಬುದು ಪರಿಣತರ ಅಭಿಪ್ರಾಯ. ಈ ವಿಷಯದಲ್ಲಿ ಇದುವರೆವಿಗೂ ಬಂದಿರುವ ಹಲವಾರು ತೀರ್ಪುಗಳು, ನ್ಯಾಯಾಲಯಗಳ ಅಧಿಕಾರವ್ಯಾಪ್ತಿಗೆ ಸಂಬಂಧಪಟ್ಟಿವೆಯೇ ಹೊರತು ಸಂಪನ್ಮೂಲಗಳ ಬಳಕೆ ಮತ್ತು ಲಾಭಾಂಶ ಹಂಚಿಕೆಯ ಮೂಲಭೂತ ಪ್ರಶ್ನೆಗಳ ಬಗೆಗಲ್ಲ. ದೇಶದ ಜೈವಿಕ ವೈವಿಧ್ಯದ ಸಂರಕ್ಷಣೆಯ ದೃಷ್ಟಿಯಿಂದ ನ್ಯಾಯಾಲಯಗಳ ತೀರ್ಪುಗಳು ಬೇಗ ಬಂದಷ್ಟೂ ಒಳ್ಳೆಯದು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !