ಮಂಗಳವಾರ, ಮೇ 18, 2021
24 °C
ಭೂಸ್ವಾಧೀನ ಕಾಯ್ದೆಗಳ ವಿರೋಧಾಭಾಸಗಳ ಬಗೆಗೊಂದು ಇಣುಕುನೋಟ

ಸರ್ಕಾರಕ್ಕೆ ಹಿನ್ನಡೆಯಾದರೆ ಜನರಿಗೆ ಒಳ್ಳೆಯದು!

ಕೆ.ವಿ. ಧನಂಜಯ್ Updated:

ಅಕ್ಷರ ಗಾತ್ರ : | |

ಅದು 1894ನೆಯ ಇಸವಿ. ಸಾರ್ವಜನಿಕ ಅಥವಾ ಸರ್ಕಾರಿ ಉದ್ದೇಶಗಳಿಗೆ ಖಾಸಗಿ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲು ಕಾನೂನೊಂದನ್ನು ತರಲು ಭಾರತದಲ್ಲಿನ ಬ್ರಿಟಿಷ್ ಸರ್ಕಾರ ಆಲೋಚಿಸಿತ್ತು. ಈ ಆಲೋಚನೆಯೊಂದಿಗೆ ಅದು ಭೂಸ್ವಾಧೀನ ಕಾಯ್ದೆ – 1894ನ್ನು ಜಾರಿಗೆ ತಂದಿತು. ಈ ಕಾಯ್ದೆ ಮುಂದಿನ 120 ವರ್ಷಗಳವರೆಗೆ ಜಾರಿಯಲ್ಲಿ ಇತ್ತು. ಈ 120 ವರ್ಷಗಳ ಪೈಕಿ 66 ವರ್ಷಗಳ ಅವಧಿಯಲ್ಲಿ ಭಾರತ ಪರಾಧೀನ ಆಗಿರಲಿಲ್ಲ. ಸರ್ಕಾರವು ಮತ್ತೆ ಮತ್ತೆ ಬಳಕೆ ಮಾಡುವ ಕಾನೂನುಗಳಿಗೆ ಹೋಲಿಸಿ ನೋಡಿದರೆ, ಈ ಕಾಯ್ದೆಯು ತೀರಾ ಕಡಿಮೆ ಬದಲಾವಣೆಗಳನ್ನು ಕಂಡಿತು. ಈ ಕಾಯ್ದೆಯು ಸರ್ಕಾರಕ್ಕೆ ದೇಶದ ಯಾವುದೇ ಭಾಗದಲ್ಲಿ, ಎಷ್ಟೇ ಪ್ರಮಾಣದ ಜಮೀನನ್ನು ಬೇಕಿದ್ದರೂ ಸ್ವಾಧೀನ ಮಾಡಿಕೊಳ್ಳಲು ಅವಕಾಶ ನೀಡಿತು. ಸರ್ಕಾರವು ಈ ಸ್ವಾಧೀನವನ್ನು ‘ಸಾರ್ವಜನಿಕ ಉದ್ದೇಶಕ್ಕಾಗಿ’ ಮಾಡಲಾಗುತ್ತಿದೆ ಎಂದು ಹೇಳಿದ್ದರೆ ಸಾಕಿತ್ತು.

ನಿರೀಕ್ಷೆಯಂತೆಯೇ, ಸರ್ಕಾರವು ಎಲ್ಲವನ್ನೂ ‘ಸಾರ್ವಜನಿಕ ಉದ್ದೇಶದ್ದು’ ಎನ್ನಲು ಆರಂಭಿಸಿತು. ಜಮೀನನ್ನು ಸ್ವಾಧೀನ ಮಾಡಿಕೊಂಡು, ಅದನ್ನು ರಾಜಕೀಯ ನಂಟುಹೊಂದಿರುವ ಖಾಸಗಿ ಕಂಪನಿಗಳಿಗೆ ಹಸ್ತಾಂತರ ಮಾಡುವುದಕ್ಕೂ ಈ ಕಾಯ್ದೆ ಅವಕಾಶ ಕೊಟ್ಟಿತು. ಚುಟುಕಾಗಿ ಹೇಳಬೇಕೆಂದರೆ ಇದು ಕರಾಳ ಕಾಯ್ದೆ ಆಗಿತ್ತು. ಈ ಕಾಯ್ದೆಯ ಅಡಿ ಹೇಳಿರುವ ಬಿಡಿಗಾಸನ್ನು ಪರಿಹಾರದ ರೂಪದಲ್ಲಿ ಪಡೆದುಕೊಳ್ಳುವ ಅವಕಾಶ ಜಮೀನು ಕಳೆದುಕೊಳ್ಳುವವರಿಗೆ ಇತ್ತು ಎಂಬುದು ನಿಜ. ಕಾಯ್ದೆಯು ಸರ್ಕಾರಕ್ಕೆ ಕೆಲವು ಪ್ರಕ್ರಿಯೆಗಳನ್ನು ಪಾಲಿಸುವಂತೆ ತಾಕೀತು ಮಾಡಿತ್ತು. ಸರ್ಕಾರ ಆ ಪ್ರಕ್ರಿಯೆಗಳ ಅನುಸಾರ ನಡೆದುಕೊಂಡರೆ ಕೋರ್ಟ್‌ಗಳೂ ಸಾಮಾನ್ಯವಾಗಿ ಮಧ್ಯಪ್ರವೇಶಿಸುತ್ತಿರಲಿಲ್ಲ. ಹಾಗಾಗಿ, ಕಾಯ್ದೆಯಲ್ಲಿ ಹೇಳಿರುವ ಪ್ರಕ್ರಿಯೆಗಳನ್ನು ಸರ್ಕಾರ ಪಾಲಿಸಿದ ಸಂದರ್ಭಗಳಲ್ಲಿ, ಕಾನೂನು ಹೋರಾಟದಲ್ಲಿ ಜಯ ಸಾಧಿಸುವ ಸಾಧ್ಯತೆ ಜಮೀನು ಮಾಲೀಕರ ಪಾಲಿಗೆ ಇರುತ್ತಿರಲಿಲ್ಲ.

1980ರ ದಶಕದಲ್ಲಿ ಸರ್ಕಾರ ಅಕ್ರಮ ಎಸಗಿದೆ ಎಂದು ಜಮೀನು ಮಾಲೀಕರು ಆರೋಪಿಸಿದ್ದ, ಕೆಲವು ಸಂದರ್ಭಗಳಲ್ಲಿ ಸಾಕ್ಷ್ಯಗಳನ್ನು ತೋರಿಸಿದ್ದ ಪ್ರಕರಣಗಳಲ್ಲಿ ಕೂಡ ಹಲವಾರು ಹೈಕೋರ್ಟ್‌ಗಳು ಜಮೀನು ಸ್ವಾಧೀನ ಪ್ರಕ್ರಿಯೆಯನ್ನು ಎತ್ತಿಹಿಡಿದವು. ಆದರೆ, 1980ರ ದಶಕದಲ್ಲಿ ಜಮೀನು ಸ್ವಾಧೀನ ಪ್ರಕ್ರಿಯೆಗಳನ್ನು ಮಾನ್ಯ ಮಾಡಿದ್ದು ತಪ್ಪಾಗಿತ್ತು ಎಂದು 1990 ಹಾಗೂ 2000ದ ಉತ್ತರಾರ್ಧದಲ್ಲಿ ಕೋರ್ಟ್‌ಗಳು ಹೇಳಲು ಆರಂಭಿಸಿದವು. 2010–11ರಲ್ಲಿ ಸುಪ್ರೀಂ ಕೋರ್ಟ್‌ ಈ ಕಾಯ್ದೆಯನ್ನು ‘ವಂಚನೆಯ ಎಂಜಿನ್‌’ ಎಂದು ಕರೆಯಲು ಆರಂಭಿಸಿತು. ಖಾಸಗಿ ಜಮೀನು ಮಾಲೀಕರ ಹಕ್ಕುಗಳನ್ನು ಗೌರವಿಸುವ ಕಾಯ್ದೆ ತರಲು ಅದು ಹೇಳಿತು. ಇದೇ ಸಂದರ್ಭದಲ್ಲಿ, ದೇಶದ ಶೇಕಡ 21ರಷ್ಟು ಭೂಭಾಗ ನಕ್ಸಲರು ಮತ್ತು ಮಾವೊವಾದಿಗಳ ಕೈವಶವಾಗಿದೆ ಎಂಬುದು ಸರ್ಕಾರದ ಅರಿವಿಗೆ ಬಂದಿತ್ತು. ನಕ್ಸಲರು ಮತ್ತು ಮಾವೊವಾದಿಗಳೂ ಈ ಕಾಯ್ದೆಯ ವಿರುದ್ಧ ಜನರಲ್ಲಿ ಮಡುಗಟ್ಟಿದ್ದ ಆಕ್ರೋಶವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಂತಿತ್ತು. ಅಂತಿಮವಾಗಿ ನಮ್ಮ ಸಂಸತ್ತು 2014ರ ಜನವರಿ 1ರಿಂದ ಜಾರಿಗೆ ಬರುವಂತೆ, ‘ಭೂಸ್ವಾಧೀನ, ಪುನರ್ವಸತಿಯಲ್ಲಿ ನ್ಯಾಯಸಮ್ಮತ ಹಕ್ಕು ಮತ್ತು ಪಾರದರ್ಶಕತೆ ಕಾಯ್ದೆ–2013’ನ್ನು ಜಾರಿಗೆ ತಂದಿತು. ಇದು ಹಳೆಯ ಭೂಸ್ವಾಧೀನ ಕಾಯ್ದೆಯನ್ನು ರದ್ದುಮಾಡಿತು. ಜಮೀನು ಸ್ವಾಧೀನ ವಿಚಾರದಲ್ಲಿ ಸರ್ಕಾರದ ಅಧಿಕಾರಕ್ಕೆ ಹಲವು ಅಂಕುಶಗಳನ್ನು ಹಾಕಿತು. ಜಮೀನು ಕಳೆದುಕೊಳ್ಳುವವರ ಪೈಕಿ ಶೇಕಡ 70ಕ್ಕೂ ಹೆಚ್ಚು ಜನ ಸ್ವಾಧೀನ ಪ್ರಕ್ರಿಯೆಗೆ ಒಪ್ಪಿಗೆ ನೀಡಬೇಕು ಎನ್ನುವ ಮೂಲಕ ಈ ಕಾಯ್ದೆಯು ಖಾಸಗಿ ಕಂಪನಿಗಳಿಗೆ ಜಮೀನು ಸ್ವಾಧೀನ ಮಾಡುವುದನ್ನು ಬಹುತೇಕ ಅಸಾಧ್ಯಗೊಳಿಸಿದೆ. ಕುತೂಹಲದ ವಿಷಯವೆಂದರೆ, ಸರ್ಕಾರ ನಡೆಸುವ ಭೂಸ್ವಾಧೀನ ಪ್ರಕ್ರಿಯೆಗಳು ಹೊಸ ಕಾಯ್ದೆಯ ಅಡಿಯಲ್ಲಿ ಗಣನೀಯವಾಗಿ ಕಡಿಮೆ ಆಗಿವೆ.

ಆದರೆ, ಈ ಕಾಯ್ದೆಯಲ್ಲಿನ ಒಂದು ಅಂಶವು ಸುಪ್ರೀಂ ಕೋರ್ಟ್‌ನಲ್ಲಿ ಬಿಕ್ಕಟ್ಟೊಂದನ್ನು ಸೃಷ್ಟಿಸಿದೆ. ಅದು ಕಾಯ್ದೆಯ ಸೆಕ್ಷನ್ 24. ಈ ಸೆಕ್ಷನ್ನಿನ ಮೊದಲ ಭಾಗವು ಈ ಹಿಂದಿನ ಭೂಸ್ವಾಧೀನ ಕಾಯ್ದೆಯ ಅಡಿ ಶುರು ಮಾಡಿದ ಪ್ರಕ್ರಿಯೆಗಳ ಬಗ್ಗೆ ಮಾತನಾಡುತ್ತದೆ. ಹಿಂದಿನ ಕಾಯ್ದೆಯ ಅನ್ವಯ ಜಮೀನು ಸ್ವಾಧೀನ ನಡೆದು, ಜಮೀನು ಕಳೆದುಕೊಳ್ಳುವ ಮಾಲೀಕರಿಗೆ 2014ರ ಜನವರಿ 1ರವರೆಗೆ ಪರಿಹಾರ ಘೋಷಣೆ ಆಗದಿದ್ದಲ್ಲಿ, ಅವರಿಗೆ ಪರಿಹಾರದ ಮೊತ್ತವನ್ನು ಹೊಸದಾಗಿ, ಹೊಸ ಕಾಯ್ದೆಯ ಅನ್ವಯ ಮಾಡಬೇಕು ಎಂದು ಈ ಭಾಗದಲ್ಲಿ ಹೇಳಲಾಗಿದೆ. ಇದು ನ್ಯಾಯಾಲಯಗಳಲ್ಲಿ ಸಮಸ್ಯೆಯನ್ನೇನೂ ಸೃಷ್ಟಿಸಿಲ್ಲ. ಆದರೆ, ಸೆಕ್ಷನ್‌ 24ರ ಎರಡನೆಯ ಭಾಗವನ್ನು ಗಂಭೀರವಾಗಿ ಪರಿಗಣಿಸಬೇಕು. ಹಿಂದಿನ ಕಾಯ್ದೆಯ ಅನುಸಾರ ಪರಿಹಾರದ ಮೊತ್ತವು 2009ರ ಜನವರಿ 1ಕ್ಕಿಂತ ಮೊದಲೇ ಘೋಷಣೆ ಆಗಿದ್ದರೂ, 2014ರ ಜನವರಿ 1ರವರೆಗೆ ಮೊತ್ತವನ್ನು ಭೂಮಾಲೀಕರಿಗೆ ಪಾವತಿಸದೆ ಇದ್ದರೆ, ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳದೆ ಇದ್ದರೆ, ಅಂತಹ ಸ್ವಾಧೀನ ಪ್ರಕ್ರಿಯೆಗಳು ರದ್ದಾಗುತ್ತವೆ. ಮೂಲ ಮಾಲೀಕರು ತಮ್ಮ ಜಮೀನು ಹಿಂದಿರುಗಿಸುವಂತೆ ಕೇಳಲು ಅವಕಾಶ ಮಾಡಿಕೊಡುತ್ತದೆ ಈ ಭಾಗ.

ಹೊಸ ಕಾಯ್ದೆ ಜಾರಿಗೆ ಬಂದ ಮೊದಲ ತಿಂಗಳಲ್ಲೇ ದೂರಗಾಮಿ ಪರಿಣಾಮವುಳ್ಳ ತೀರ್ಪೊಂದನ್ನು (ಪುಣೆ ಮಹಾನಗರ ಪಾಲಿಕೆ ಮತ್ತು ಹರಕ್‌ಚಂದ್‌ ಮಿಸಿರಿಮಲ್‌ ನಡುವಣ ಪ್ರಕರಣ) ಕಾಯ್ದೆಯ ಸೆಕ್ಷನ್‌ 24ರ ಬಗ್ಗೆ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಪೀಠ ನೀಡಿತು. ಈ ತೀರ್ಪಿನ ಬಗ್ಗೆ, ಇದು ಕೋರ್ಟ್‌ನಲ್ಲಿ ಸೃಷ್ಟಿಸಿರುವ ಬಿಕ್ಕಟ್ಟಿನ ಬಗ್ಗೆ ಬಹುತೇಕರಿಗೆ ಇಂದಿಗೂ ಗೊತ್ತಿಲ್ಲ. ಭೂಮಾಲೀಕರು ಪರಿಹಾರ ಮೊತ್ತ ಸ್ವೀಕರಿಸಲು ನಿರಾಕರಿಸಿದರೆ ಅದನ್ನು ಜಿಲ್ಲಾಧಿಕಾರಿಯು ಸರ್ಕಾರದ ಖಜಾನೆಯಲ್ಲಿ ಜಮಾ ಮಾಡುವಂತಿಲ್ಲ ಎಂದು ಲೋಧಾ ಪೀಠ ಹೇಳಿತು. ಹಳೆಯ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 31ರ ಅಡಿ, ಭೂಮಾಲೀಕ ಪರಿಹಾರ ಸ್ವೀಕರಿಸಲು ಒಪ್ಪಿ, ಆತನಿಗೆ ಮೊತ್ತವನ್ನು ಹಸ್ತಾಂತರಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಮಾತ್ರ ಜಿಲ್ಲಾಧಿಕಾರಿಯು ಹಣವನ್ನು ಸರ್ಕಾರದ ಖಜಾನೆಯಲ್ಲಿ ಇರಿಸಬಹುದು. ಇತರ ಎಲ್ಲ ಸಂದರ್ಭಗಳಲ್ಲಿ– ಅಂದರೆ, ಮೊತ್ತವನ್ನು ಸ್ವೀಕರಿಸಲು ಭೂಮಾಲೀಕ ನಿರಾಕರಿಸಿದರೆ, ಆಸ್ತಿಯ ಬಗ್ಗೆ ಹಲವರು ತಕರಾರು ಸಲ್ಲಿಸಿ ತಮಗೂ ಪರಿಹಾರ ಬೇಕು ಎಂದಿದ್ದರೆ, ಹಲವರ ನಡುವೆ ಪರಿಹಾರದ ಮೊತ್ತವನ್ನು ಹೇಗೆ ಹಂಚಿಕೆ ಮಾಡಬೇಕು ಎಂಬ ಪ್ರಶ್ನೆಯಿದ್ದರೆ– ಜಿಲ್ಲಾಧಿಕಾರಿಯು ಮೊತ್ತವನ್ನು ಸಿವಿಲ್‌ ನ್ಯಾಯಾಲಯದಲ್ಲಿ ಜಮಾ ಮಾಡಬೇಕು, ಆ ನ್ಯಾಯಾಲಯವು ವಿಚಾರಣೆ ನಡೆಸಿ ಪರಿಹಾರದ ಹಂಚಿಕೆ ಕುರಿತ ತಕರಾರನ್ನು ಪರಿಹರಿಸಬೇಕಿತ್ತು ಎಂದು ಲೋಧಾ ಪೀಠ ಹೇಳಿತು. ಈ ತರ್ಕದ ಆಧಾರದಲ್ಲಿಯೇ ಪೀಠವು, ಭೂಮಾಲೀಕರಿಗೆ ನ್ಯಾಯ ಕೊಡಿಸಿತು. ಮುಂದಿನ ಕೆಲವು ವರ್ಷಗಳಲ್ಲಿ ದೇಶದ ಹಲವು ಹೈಕೋರ್ಟ್‌ಗಳಲ್ಲಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ತೀರ್ಪು ಆಧರಿಸಿ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದ ಲೋಧಾ ಅವರು 2014ರ ಸೆಪ್ಟೆಂಬರ್‌ನಲ್ಲಿ ನಿವೃತ್ತರಾದರು. ಅವರಿದ್ದ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿಗಳಾದ ಮದನ್ ಲೋಕೂರ್ ಮತ್ತು ಕುರಿಯನ್‌ ಜೋಸೆಫ್‌ ಅವರು ಸೇವೆಯಲ್ಲಿ ಇದ್ದಾರೆ.

ಇದೇ ತೀರ್ಪನ್ನು ಆಧರಿಸಿ 2014ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ಇನ್ನೊಂದು ಪೀಠ ಮಹತ್ವದ ನಿಲುವು ತಾಳಿತು. ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಕಾರಣದಿಂದಾಗಿ ಸರ್ಕಾರವು ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳದಿದ್ದ ಪ್ರಕರಣವಾಗಿತ್ತು ಅದು. ಹೊಸ ಕಾಯ್ದೆಯ ಸೆಕ್ಷನ್‌ 24ನ್ನು ತಡೆಯಾಜ್ಞೆ ಚಾಲ್ತಿಯಲ್ಲಿದ್ದ ಅವಧಿಗೆ ಅನ್ವಯ ಮಾಡಬಾರದು ಎಂದು ಸರ್ಕಾರ ವಾದ ಮಾಡಿತು. ಆದರೆ ಇದನ್ನು ಕೋರ್ಟ್‌ ಒಪ್ಪಲಿಲ್ಲ (ಶ್ರೀ ಬಾಲಾಜಿ ನಗರ ನಿವಾಸಿಗಳ ಸಂಘ ಮತ್ತು ತಮಿಳುನಾಡು ಸರ್ಕಾರದ ನಡುವಣ ಪ್ರಕರಣ).

ಪುಣೆ ಪ್ರಕರಣದಲ್ಲಿ ನೀಡಿದ ತೀರ್ಪು ಎಷ್ಟು ಸರಿ ಎಂಬುದನ್ನು ಪರಿಶೀಲಿಸುವಂತೆ ಸರ್ಕಾರ ಮತ್ತೆ ಮತ್ತೆ ಕೋರಿಕೆ ಸಲ್ಲಿಸಿದ್ದರೂ, ನ್ಯಾಯಮೂರ್ತಿ ಕುರಿಯನ್ ಜೋಸೆಫ್ ನೇತೃತ್ವದ ದ್ವಿಸದಸ್ಯ ಪೀಠವು 2016ರ ಸೆಪ್ಟೆಂಬರ್‌ನಲ್ಲಿ ‘ಈ ತೀರ್ಪಿನಲ್ಲಿ ತಪ್ಪಿಲ್ಲ’ ಎಂದು ಪುನರುಚ್ಚರಿಸಿತು (ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಸುಖಬೀರ್‌ ಸಿಂಗ್ ನಡುವಣ ಪ್ರಕರಣ).

2017ರ ಮೇ ತಿಂಗಳಲ್ಲಿ ಇನ್ನೊಂದು ನಿಲುವನ್ನು ತಾಳಿತು ನ್ಯಾಯಮೂರ್ತಿ ಕುರಿಯನ್ ಇದ್ದ ಪೀಠ. ಈ ಪ್ರಕರಣದಲ್ಲಿ ಪುಣೆ ಪ್ರಕರಣವನ್ನು ಆಧಾರವಾಗಿ ಇಟ್ಟುಕೊಂಡು, ದುರಾಸೆಯ ವ್ಯಕ್ತಿಗಳು ನ್ಯಾಯಾಲಯದ ಬಾಗಿಲು ಬಡಿಯುತ್ತಿದ್ದಾರೆ, ತಮ್ಮ ಪರವಾಗಿ ಆದೇಶಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಸರ್ಕಾರ ವಾದಿಸಿತು. ಹೊಸ ಕಾಯ್ದೆಯ ಸೆಕ್ಷನ್‌ 24ರ ಅನ್ವಯ ಜಮೀನಿನ ಮೂಲ ಮಾಲೀಕ ಮಾತ್ರ ಕೋರ್ಟ್‌ ಮೆಟ್ಟಿಲೇರಬಹುದು, ಆ ಜಮೀನನ್ನು ನಂತರದ ದಿನಗಳಲ್ಲಿ ಖರೀದಿಸಿದವ ಕೋರ್ಟ್‌ ಮೊರೆ ಹೋಗುವಂತೆ ಇಲ್ಲ ಎಂದು ಸರ್ಕಾರ ಹೇಳಿತು. ಆದರೆ, ಸರ್ಕಾರದ ವಾದಕ್ಕೆ ಸೊಪ್ಪು ಹಾಕದ ಈ ಪೀಠ, ಮೂಲ ಮಾಲೀಕರು ಮಾತ್ರವಲ್ಲದೆ, ಆ ಜಮೀನನ್ನು ಖರೀದಿ ಮಾಡಿದವರು ಕೂಡ ಕೋರ್ಟ್‌ಗೆ ಬಂದು ನ್ಯಾಯ ಪಡೆದುಕೊಳ್ಳಬಹುದು ಎಂದು ಹೇಳಿತು.

ಆದರೆ, 2017ರ ನಂತರ ನಾಲ್ಕಕ್ಕೂ ಹೆಚ್ಚು ನ್ಯಾಯಪೀಠಗಳು ಪುಣೆ ಪ್ರಕರಣದ ತೀರ್ಪು ಸರಿಯೇ ಎಂಬ ಅನುಮಾನವನ್ನು, ಈ ತೀರ್ಪು ಆಧರಿಸಿ ಬಂದಿರುವ ಇತರ ತೀರ್ಪುಗಳು ಎಷ್ಟು ಸರಿ ಎಂಬ ಅನುಮಾನವನ್ನು ವ್ಯಕ್ತಪಡಿಸಿವೆ. ಅಂತಿಮವಾಗಿ, ಈ ವರ್ಷದ ಫೆಬ್ರುವರಿಯಲ್ಲಿ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ‍ಪೀಠವು, ಪುಣೆ ಪ್ರಕರಣದಲ್ಲಿನ ತೀರ್ಪು ಮತ್ತು ಅದನ್ನು ಆಧರಿಸಿದ ಇತರ ತೀರ್ಪುಗಳು ತಪ್ಪಾಗಿವೆ ಎಂದು ಹೇಳಿತು (ಇಂದೋರ್ ಅಭಿವೃದ್ಧಿ ಪ್ರಾಧಿಕಾರ ಮತ್ತು ಶ್ಯಾಮ್‌ ವರ್ಮಾ ನಡುವಣ ಪ್ರಕರಣ).

ಒಂದು ನ್ಯಾಯಪೀಠವು ತನ್ನಲ್ಲಿದ್ದಷ್ಟೇ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಹೊಂದಿದ್ದ ಇನ್ನೊಂದು ಪೀಠದ ತೀರ್ಪಿನ ಬಗ್ಗೆ ಭಿನ್ನ ನಿಲುವು ತಾಳುವ ಇಚ್ಛೆ ಹೊಂದಿದ್ದರೆ, ಯಾವ ನಿಲುವು ಸರಿ ಎಂಬುದನ್ನು ತೀರ್ಮಾನಿಸಲು ಹೊಸ ಪೀಠ ರಚಿಸುವಂತೆ ಮುಖ್ಯ ನ್ಯಾಯಮೂರ್ತಿಯವರಿಗೆ ಮನವಿ ಮಾಡುವುದು ಸುಪ್ರೀಂ ಕೋರ್ಟ್‌ನ ಸಂಪ್ರದಾಯ. ಹಾಗಾಗಿ, ತ್ರಿಸದಸ್ಯ ಪೀಠವೊಂದು ನೀಡಿದ್ದ ತೀರ್ಪನ್ನು ಇನ್ನೊಂದು ತ್ರಿಸದಸ್ಯ ಪೀಠ ತಪ್ಪು ಎಂದು ಹೇಳುವುದು ಸಾಮಾನ್ಯದ ಸಂಗತಿಯಂತೂ ಅಲ್ಲ. ಈಗ ಯಾವ ಪೀಠ ನೀಡಿದ ಆದೇಶವನ್ನು ಪಾಲಿಸಬೇಕು ಎಂಬ ಬಗ್ಗೆ ಬೇರೆ ಬೇರೆ ಹೈಕೋರ್ಟ್‌ಗಳಲ್ಲಿ ಮೂಡಿರುವ ಗೊಂದಲವು ದೇಶದೆಲ್ಲೆಡೆ ಬಿಕ್ಕಟ್ಟು ಸೃಷ್ಟಿಸಿದೆ.

ಹಾಗಾಗಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಐವರು ನ್ಯಾಯಮೂರ್ತಿಗಳ ಪೀಠವೊಂದನ್ನು ರಚಿಸಿ, ಅದು ‘ನಾವು ಹೊಸ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 24ರ ಬಗ್ಗೆ ತೀರ್ಮಾನ ಕೈಗೊಳ್ಳುವವರೆಗೆ ಅದಕ್ಕೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಡಿ’ ಎಂದು ಮಾರ್ಚ್‌ 6ರಂದು ಹೈಕೋರ್ಟ್‌ಗಳಿಗೆ ಸೂಚಿಸಿದೆ. ಬಿಕ್ಕಟ್ಟು ಈಗ ಈ ಹಂತದಲ್ಲಿ ನಿಂತಿದೆ. ಪುಣೆ ‍ಪ್ರಕರಣದಲ್ಲಿ ನೀಡಿದ ತೀರ್ಪನ್ನು ಐವರು ನ್ಯಾಯಮೂರ್ತಿಗಳ ಈ ಪೀಠ ಎತ್ತಿಹಿಡಿದರೆ, ಹಳೆಯ ಭೂಸ್ವಾಧೀನ ಕಾಯ್ದೆಗೆ ಸಂಬಂಧಿಸಿದ ಸಹಸ್ರಾರು ಪ್ರಕರಣಗಳ ವಿಚಾರಣೆ ಪುನಃ ಆರಂಭವಾಗಬಹುದು.

2009ರ ಜನವರಿ 1ಕ್ಕಿಂತ ಮೊದಲು ಪರಿಹಾರ ಘೋಷಣೆಯಾದ ಎಲ್ಲ ಪ್ರಕರಣಗಳಲ್ಲಿ, ಪರಿಹಾರ ಪಡೆದಿದ್ದರೂ ಜಮೀನನ್ನು ಸ್ವಾಧೀನದಲ್ಲೇ ಇಟ್ಟುಕೊಂಡವರು ಅಥವಾ ಜಮೀನು ಕಳೆದುಕೊಂಡರೂ ಪರಿಹಾರ ಸ್ವೀಕರಿಸದಿರುವವರು (ಪರಿಹಾರದ ಮೊತ್ತವನ್ನು ಜಿಲ್ಲಾಧಿಕಾರಿಯು ಸಿವಿಲ್‌ ನ್ಯಾಯಾಲಯದಲ್ಲಿ ಜಮಾ ಮಾಡದಿದ್ದರೆ), ಐವರು ನ್ಯಾಯಮೂರ್ತಿಗಳ ಪೀಠ ಏನು ಹೇಳುತ್ತದೆ ಎಂಬುದನ್ನು ಕುತೂಹಲದಿಂದ ಕಾದು ನೋಡಬೇಕು.

1894ರ ಜಮೀನು ಸ್ವಾಧೀನ ಕಾಯ್ದೆಯ ಅಡಿ ಕಳೆದ 120 ವರ್ಷಗಳಲ್ಲಿ ಭೂಮಾಲೀಕರು ತೀರಾ ಅನ್ಯಾಯ ಅನುಭವಿಸಿದ್ದಾರೆ. ಈಗಿನ ಪೀಠದ ಎದುರಿರುವ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಹಿನ್ನಡೆ ಅನುಭವಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದು, ಅದು ನ್ಯಾಯಸಮ್ಮತವೂ ಹೌದು. ದೂರಾಲೋಚನೆ ಇಲ್ಲದೆ, ದುರುದ್ದೇಶದ ಭೂಸ್ವಾಧೀನಗಳಿಗಾಗಿ ಸರ್ಕಾರವು ಹಿನ್ನಡೆ ಕಾಣಬೇಕಿರುವುದು ಯುಕ್ತವೂ ಹೌದು.

ಲೇಖಕ: ಸುಪ್ರೀಂ ಕೋರ್ಟ್‌ನಲ್ಲಿ ವಕೀಲ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು