ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಕನ್ನಡವೇ ಸತ್ಯ?

Published 25 ಜನವರಿ 2024, 20:45 IST
Last Updated 25 ಜನವರಿ 2024, 20:45 IST
ಅಕ್ಷರ ಗಾತ್ರ

‘ನೈರೋಬಿಗೆ ಹೋಗ್ತಾ ಇದೀನಿ ಕಣೋ’ ಅಂದೆ. ಅವನು ಎರಡನೇ ತರಗತಿ...ಅಲ್ಲಲ್ಲ, ಕ್ಷಮಿಸಿ, ಸೆಕೆಂಡ್ ಸ್ಟಾಂಡರ್ಡ್. ‘ವಾವ್, ಆಫ್ರಿಕಾಕ್ಕೆ ಹೋಗ್ತಾ ಇದೀರ? ಕೀನ್ಯಾಕ್ಕೆ?’ ಅಂದ. ಬೆರಗಾಗಿ ಹೋದೆ. ನನಗೆ ಎರಡನೇ ಕ್ಲಾಸಿನಲ್ಲಿದ್ದಾಗ ಡೆಲ್ಲಿ ಎಲ್ಲಿದೆ? ಅನ್ನೋದಲ್ಲ, ಬೆಂಗಳೂರು ಎತ್ಲಾ ಕಡೆಗಿದೆ ಅನ್ನುವ ಅಂದಾಜು ಕೂಡಾ ಇರಲಿಲ್ಲ.

‘ನೈರೋಬಿ ಆಫ್ರಿಕಾದಲ್ಲಿದೆ ಅಂತ ನಿನಗೆ ಹೇಗೆ ಗೊತ್ತಾಯ್ತೋ’ ಅಂತ‌ ಕೇಳಿದೆ.

‘ನಮ್ ಲಂಚ್ ಬ್ರೇಕಲ್ಲಿ, ಸ್ಕೂಲ್ ಬಸ್ಸಲ್ಲಿ ನಮ್ ಫ್ರೆಂಡ್ಸ್ ಎಲ್ಲಾ ಚಾಟ್ ಮಾಡ್ತಾ ಇರ್ತೀವಲ್ಲ, ಆಗ ವಿ ಡಿಸ್ಕಸ್ ಆಲ್ ದಿಸ್’ ಅಂದ. ‘ಬರೋವಾಗ ನನಗೊಂದು ಬ್ಲ್ಯಾಕ್ ರೈನಾಸಿರಸ್ ತಂದುಕೊಡ್ತೀರಾ?’ ಅಂದ. ಅವನಿಗೆ ಅಲ್ಲಿ ಬ್ಲ್ಯಾಕ್ ರೈನಾಸಿರಸ್ ಇರುವ ವಿಷಯ ಕೂಡಾ ಗೊತ್ತು. ಆತ ನಮ್ಮ ಸಮೀಪ ಸಂಬಂಧಿಕರ ಹುಡುಗ.

ಸ್ವಲ್ಪ ಹೊತ್ತಾದ ಮೇಲೆ ಆ ಮಾತು ಈ ಮಾತು ಆಡುತ್ತ ‘ನಾನು ನಿನಗೆ ಏನಾಗಬೇಕೋ?’ ಅಂದೆ. ‘ಅಂಕಲ್’ ಅಂದ.

‘ನಿಮ್ಮಪ್ಪ ನನಗೆ ಏನಾಗಬೇಕು?’ ಅಂದೆ. ‘ಯು ಮೀನ್ ಡ್ಯಾಡ್?’ ಅಂದ. ‘ಹ್ಞೂ’ ಅಂದೆ. ‘ಕಸಿನ್’ ಅಂದ. ‘ಕಸಿನ್ ಅಂದ್ರೆ ಹೇಗೆ ಕಸಿನ್?’ ಅಂದೆ. ‘ಸಾರಿ ಅಂಕಲ್, ಅದೆಲ್ಲಾ ನನ್ಗೆ ಗೊತ್ತಾಗಲ್ಲ’ ಅಂದ. ಸುಮ್ನೆ ತಲೆ ತಿನ್ಬೇಡಿ ಅನ್ನುವ ಭಾವವಿತ್ತು ಆ ಮಾತಿನಲ್ಲಿ. ನಾನು ಸುಮ್ಮನಾದೆ.

ಸ್ವಲ್ಪ ಹೊತ್ತು ಕಳೆದ ಮೇಲೆ ಅವನು‌ ಮತ್ತು ನಾನು ಡೈನಿಂಗ್ ಟೇಬಲ್ ಮೇಲೆ ತಿಂಡಿ ತಿನ್ನುತ್ತಿದ್ದೊ. ಅವರ ಮನೆಯಲ್ಲಿ ಅಕ್ಕಿ ರೊಟ್ಟಿಗೆ ಬೆಂಡೇಕಾಯಿ ಗೊಜ್ಜು ಮಾಡಿದ್ದರು. ನಾನು ಅವನಿಗೆ ಗೊಜ್ಜಿನ ಕಡೆ ಕೈಮಾಡಿ ಕೇಳಿದೆ– ‘ಇದೇನು?‘ ‘ಕರಿ’ ಅಂದ. ‘ಎಂಥಾ ಕರಿ?’ ಅಂದೆ. ‘ಲೇಡೀಸ್ ಫಿಂಗರ್’ ಅಂದ. ‘ನಿನಗೆ ಇನ್ನ್ಯಾವ್ಯಾವ ತರಕಾರಿಗಳು ಗೊತ್ತು?’ ಅಂದೆ. ಅವನು, ‘ಬ್ರಿಂಜಾಲ್...’ ಅಂತ ಶುರು ಮಾಡಿದ. ‘ಕನ್ನಡದಲ್ಲಿ ಹೇಳು ಪುಟ್ಟೂ’ ಅಂದೆ. ‘ಬ್ರಿಂಜಾಲ್ ಅಂದ್ರೆ ಕನ್ನಡಾನೆ ಅಲ್ವ?’ ಅಂದ. ‘ಸರಿ, ಹೇಳು, ಇನ್ನ್ಯಾವ್ಯಾವ ತರಕಾರಿ ಗೊತ್ತು? ಕನ್ನಡದಲ್ಲಿ ಹೇಳು’ ಅಂದೆ. ಅವನು ಹೇಳುತ್ತಾ ಹೋದ- ‘ಪೊಟ್ಯಾಟೋ, ಟೊಮ್ಯಾಟೊ, ಆನಿಯನ್, ಬೀನ್ಸ್, ಕ್ಯಾರೆಟ್...ಅ್ಯಂಡ್....’ ಅಷ್ಟಕ್ಕೆ ಗಾಡಿ ನಿಂತಿತು.

‘ಸೋಪ್ ಅನ್ನೋದಕ್ಕೆ ಕನ್ನಡದಲ್ಲಿ ಏನಂತಾರೆ ಗೊತ್ತಾ?’ ಅಂದೆ. ಸೋಪ್‌ಗೆ ಸೋಪ್ ಅಂತಾರೆ, ಇನ್ನೇನಂತಾರೆ?’ ಅಂದ.

‘ನೀನು ಸ್ಕೂಲ್ ಊಟದ ಡಬ್ಬಿಗೆ ಏನ್ ತೊಗೊಂಡ್ ಹೋಗ್ತೀಯ?’ ಅಂದೆ.

‘ಆಮ್ಲೆಟ್, ಎಗ್, ಬ್ರೆಡ್, ಬಟರ್, ಸ್ಯಾಂಡ್ ವಿಚ್, ನೂಡಲ್ಸ್, ಪಾಸ್ತಾ, ಪ್ರಿಂಗಲ್ಸ್...’ ಹೇಳುತ್ತಾ ಹೋದ. ನಮ್ಮ ಮಕ್ಕಳು ಗ್ಲೋಬಲ್ ಆಗ್ತಾ ಇದ್ದಾರೆ. ನಾವು ಲೋಕಲ್‌ಗಳೇ ಈ ಗ್ಲೋಬಲ್‌ಗಳನ್ನು ಹೆತ್ತವರು. ಬೆಳೆಸುತ್ತಿರುವವರು.

ಅಂತೂ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು... ಅಲ್ವ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT