ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಸಾಧನೆ ಸಾಧಕರ ಸೊತ್ತು

Published 27 ಮಾರ್ಚ್ 2024, 21:04 IST
Last Updated 27 ಮಾರ್ಚ್ 2024, 21:04 IST
ಅಕ್ಷರ ಗಾತ್ರ

ಆ ಹುಡುಗ ಶಾಲೆಯಲ್ಲಿ ಒಬ್ಬ ಸಾಧಾರಣ ವಿದ್ಯಾರ್ಥಿ. ಹತ್ತನೇ ತರಗತಿಯಲ್ಲಿ ಆತ ಗಳಿಸಿದ್ದು ನಲವತ್ತೊಂದು ಶೇಕಡಾ ಅಂಕ ಮಾತ್ರ. ಹನ್ನೆರಡನೇ ತರಗತಿಯಲ್ಲಿ ಸರಿಯಾಗಿ ಅರವತ್ತು ಶೇಕಡಾ ಅಂಕ. ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್‌ಗೆ ಸೀಟು ಸಿಕ್ಕಿದ್ದೂ ಕಷ್ಟದಲ್ಲೇ. ಆದರೆ ಪದವಿ ಓದುತ್ತಿದ್ದಾಗ ಆತನಿಗೆ ತಾನೇಕೆ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬಾರದೆಂಬ ಯೋಚನೆ ಬಂತು. ಇಷ್ಟು ಕಡಿಮೆ ಅಂಕ ಗಳಿಸಿದ ಹುಡುಗ ಯುಪಿಎಸ್‌ಸಿಗೆ ತಯಾರಿ ಮಾಡುತ್ತೇನೆಂದಾಗ ನಕ್ಕವರೂ ಇದ್ದರು.

2014ರಲ್ಲಿ ಪದವಿ ಮುಗಿದ ಕೂಡಲೇ ಮುಂಬೈಗೆ ಬಂದು ಗಂಭೀರವಾಗಿ ಅಧ್ಯಯನ ನಡೆಸಿ ಪರೀಕ್ಷೆ ಬರೆದ. ಆದರೆ ವಿಫಲನಾದ. ಮತ್ತೆ ದೆಹಲಿಗೆ ಮರಳಿ ಕೋಚಿಂಗ್ ಸೆಂಟರ್‌ ಸೇರಿಕೊಂಡು ಅಧ್ಯಯನ ಮುಂದುವರಿಸಿದ. ಎರಡನೇ ಪ್ರಯತ್ನದಲ್ಲೂ ಸೋಲು. ಮರು ವರ್ಷ ಮತ್ತೆ ಪರೀಕ್ಷೆ ಬರೆದ. ಉಹೂಂ, ಸೋಲು ಅವನ ಬೆನ್ನು ಬಿಡಲಿಲ್ಲ. ಆದರೆ ಅದರಿಂದ ಏನೂ ಆಗಲಿಲ್ಲ. ಕಾರಣ ಆ ಹುಡುಗನೂ ಸೋಲಿನ ಕೈ ಬಿಡಿಸಿಕೊಳ್ಳುವವರೆಗೆ ವಿರಮಿಸುವುದಿಲ್ಲ ಎಂದು ತೀರ್ಮಾನಿಸಿಬಿಟ್ಟಿದ್ದನಲ್ಲ. 2017ರಲ್ಲಿ ಇಡೀ ಭಾರತಕ್ಕೆ 352ನೇ ಸ್ಥಾನ ಪಡೆದ. ಐಆರ್‌ಎಸ್‌ ಅಧಿಕಾರಿಯಾದ. ಎಲ್ಲರಿಗೂ ಸಂಭ್ರಮ. ಎಸ್‌ಎಸ್‌ಎಲ್‌ಸಿ ಬರಿದೇ ಪಾಸಾಗುವಷ್ಟು ಅಂಕ ಗಳಿಸಿದ ಹುಡುಗ ಐಆರ್‌ಎಸ್‌ ಅಧಿಕಾರಿಯಾಗುತ್ತಾನೆಂದರೆ ಅದೆಷ್ಟು ಹೆಮ್ಮೆಯ ಸಂಗತಿ.

ಆದರೆ ಆತ ಮಾತ್ರ ಬೇಸರದಲ್ಲಿದ್ದ. ಆತನಿಗೋ ಐಎಎಸ್‌ ಅಧಿಕಾರಿಯಾಗುವ ಕನಸು. ನಾಲ್ಕು ವರ್ಷ ಕಷ್ಟಪಟ್ಟಾಗಿದೆ, ಒಳ್ಳೆ ಹುದ್ದೆಯೂ ಸಿಕ್ಕಿದೆ. ಆರಾಮಾಗಿ ಇರೋಣ ಎಂದು ಯೋಚಿಸುವ ಬದಲು ಮತ್ತೆ ಅಧ್ಯಯನದಲ್ಲಿ ತೊಡಗಿದ. ಎರಡು ವರ್ಷ ಎಡೆಬಿಡದೇ ಓದಿದ. 2019ರಲ್ಲಿ ಐದನೇ ಬಾರಿ ಪರೀಕ್ಷೆ ಬರೆದ. ಫಲಿತಾಂಶ ಬಂದಾಗ ಜನರು ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಹತ್ತನೇ ತರಗತಿಯಲ್ಲಿ ನಲವತ್ತು ಶೇಕಡಾ ಅಂಕ ಪಡೆದ ಹುಡುಗ ಭಾರತದ ಅತ್ಯಂತ ಕಷ್ಟಕರ ಪರೀಕ್ಷೆಯಲ್ಲಿ ಇಡೀ ದೇಶಕ್ಕೇ ಮೂರನೇ ಸ್ಥಾನ ಪಡೆದಿದ್ದ.

ಈ ಜಗತ್ತಿನಲ್ಲಿ ಐನ್‌ಸ್ಟೀನ್‌ರಂತಹ ಹುಟ್ಟು ಬುದ್ಧಿವಂತರು ಬಹಳ ಕಡಿಮೆ. ಆದರೆ ಸಾಧನೆ ಜೀನಿಯಸ್‌ಗಳ ಸೊತ್ತು ಮಾತ್ರವಲ್ಲ. ಸಾಧಿಸುತ್ತೇನೆಂಬ ಛಲ, ಅದಕ್ಕಾಗಿ ಕಠಿಣ ಶ್ರಮ ಮತ್ತು ನಿರಂತರತೆ ಈ ಮೂರು ಅಂಶಗಳಿದ್ದರೆ ಯಾರು ಏನನ್ನು ಬೇಕಾದರೂ ಸಾಧಿಸಬಹುದು. ಅದಕ್ಕೆ ನಮ್ಮ ಈ ಕಥೆಯ ನಾಯಕ ಉತ್ತರ ಪ್ರದೇಶದ ಐಎಎಸ್‌ ಅಧಿಕಾರಿ ಜುನೈದ್‌ ಅಹ್ಮದ್‌ ಅತ್ಯುತ್ತಮ ಉದಾಹರಣೆ. ನೆನಪಿರಲಿ, ಜಗತ್ತು ನಮ್ಮ ಬಗ್ಗೆ ಹೇಳುವ ಮಾತುಗಳಿಗಿಂತ ಮುಖ್ಯವಾದವು ನಾವು ನಮ್ಮೊಂದಿಗೇ
ಆಡಿಕೊಳ್ಳುವ ಮಾತುಗಳು. ಆ ಮಾತುಗಳು ಎಂದಿಗೂ ಧನಾತ್ಮಕವಾಗೇ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT