ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಪುಕ್ಕಟೆ ಸಲಹೆಗಳು ಬೇಕಾಗಿಲ್ಲ

Published 7 ಮೇ 2024, 23:31 IST
Last Updated 7 ಮೇ 2024, 23:31 IST
ಅಕ್ಷರ ಗಾತ್ರ

‘ನಿಮಗೆ ಆಟದ ವಿಷಯದಲ್ಲಿ ಜನ ಏನಾದರೂ ಸಲಹೆಗಳನ್ನು ಕೊಡುತ್ತಾರಾ? ಹೀಗೆ ಆಡಿದರೆ
ಚೆನ್ನಾಗಿತ್ತು. ಮೊದಲು ಬ್ಯಾಟಿಂಗ್‌ ಆರಿಸಿಕೊಂಡರೆ ಗೆಲ್ಲುತ್ತಿದ್ದಿರಿ. ನೀವು ಬೌಂಡರಿಯನ್ನು ಈ ರೀತಿ ಹೊಡೆಯಬಹುದು ಎಂದೆಲ್ಲಾ ಪುಕ್ಕಟೆ ಸಲಹೆ ಕೊಡುತ್ತಾರಾ’ ಎಂದು ಕ್ರಿಕೆಟಿಗ ರೋಹಿತ್‌ ಶರ್ಮ ಅವರನ್ನು ಟಿ.ವಿಯ ಹಾಸ್ಯ ನಟ ಕಪಿಲ್‌ ಶರ್ಮ ಪ್ರಶ್ನಿಸಿದರು.

ಆಗ ರೋಹಿತ್‌ ‘ಹೌದು ಜನ ಸಿಕ್ಕಾಪಟ್ಟೆ ಮಾರ್ಗದರ್ಶನ ಕೊಡುತ್ತಾರೆ. ತಮಗೆ ತಿಳಿದದ್ದು, ತಿಳಿಯದ್ದು ಎಲ್ಲ ಹೇಳಲು ಹಾತೊರೆಯುತ್ತಾರೆ. ನಾವು ಮ್ಯಾಚ್‌ ನಡೆಯುವ ದಿನಗಳಲ್ಲಿ ಏರ್‌ಪೋರ್ಟ್‌ನಿಂದ ಇಳಿದು ನಮ್ಮ ಬಸ್ಸಿಗೆ ಹತ್ತಲು ಹೋಗುವಾಗ ಕಿವಿಗೆ ಇಯರ್‌ ಫೋನ್‌ ಹಾಕಿಕೊಂಡಿರುತ್ತೇವೆ ಏಕೆ ಗೊತ್ತಾ’ ಎಂದು ಕೇಳಿದರು. ‘ಇಲ್ಲವಲ್ಲ?’ ಎಂದಾಗ ‘ಜನರ ಯಾವ ಮಾತು ತಾಕಬಾರದೆಂದು ಕಿವಿ
ಮುಚ್ಚಿಕೊಂಡಿರುತ್ತೇವೆ. ಪ್ರಶಂಸೆ, ಟೀಕೆ, ಜಯಕಾರ, ನಿಂದನೆ ಯಾವುದೂ ಆ ಕ್ಷಣದಲ್ಲಿ ಮನಸ್ಸಿಗೆ ದಾಟಬಾರದೆಂದು ಸ್ವಯಂ ನಿರ್ಬಂಧ ಹೇರಿಕೊಳ್ಳುತ್ತೇವೆ. ಎಲ್ಲರೂ ಹೇಳುವುದನ್ನು ಕೇಳುತ್ತಿದ್ದರೆ ನೀವು ಸಂಪೂರ್ಣ ಗೊಂದಲಗಳಲ್ಲೇ ಮುಳುಗಿ ಬಿಡುತ್ತೀರಿ’ ಎಂದರು.

ತನ್ನ ಕಾರ್ಯವನ್ನು ಹೀಗೆ ಮಾಡಬೇಕು ಎಂದು ನಿಶ್ಚಯಿಸಿ ಹೊರಟವನು ಕೊನೇ ಗಳಿಗೆಯಲ್ಲಿ ಎಲ್ಲರ ಸಲಹೆ, ಸೂಚನೆ, ಹಿತವಚನ ಕೇಳುತ್ತಾ ನಿಲ್ಲುವುದಿಲ್ಲ. ಆಗ ಜನ ದುರಂಹಕಾರಿ ಎಂದರೂ ಅಡ್ಡಿಯಿಲ್ಲ. ಮನಸ್ಸನ್ನು ಚಂಚಲಗೊಳಿಸುವ ಇಲ್ಲವೇ ಗಾಸಿ ಮಾಡುವ ಎಲ್ಲಾ ಮಾತುಗಳಿಂದ ಆತ ತಪ್ಪಿಸಿಕೊಳ್ಳುತ್ತಾನೆ. ಪರ ನಿಂದೆ ಮತ್ತು ಸ್ತುತಿಗಳಿಂದ ದೂರವಿರಬೇಕೆಂದು ವಚನಕಾರರು ಹೇಳಿದ್ದು ಈ ಕಾರಣಕ್ಕೆ ಇರಬೇಕು.

ಇತ್ತೀಚಿಗೆ ಅಪಘಾತದಲ್ಲಿ ತನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಸಹೋದರಿ ಒಬ್ಬರನ್ನು ಕಂಡು ಸಾಂತ್ವನ ಹೇಳಿ ಬರಲು ಹೋಗಿದ್ದೆ. ಹೀಗೆ ಆಕಸ್ಮಿಕಗಳಲ್ಲಿ ರಕ್ತ ಸಂಬಂಧಿಗಳನ್ನು ಕಳೆದುಕೊಂಡವರ ಅನೇಕ ಘಟನೆಗಳನ್ನು ಹೇಳಿ ಸಂತೈಸಲು ಯತ್ನಿಸಿದೆ. ‘ಇವೆಲ್ಲಾ ಬದುಕಿನ ಅನಿರೀಕ್ಷಿತಗಳು. ಬೇಗ ಮರೆಯುವುದು ಕ್ಷೇಮ. ಮನಸ್ಸಿಗೆ ಹೆಚ್ಚು ಹಚ್ಚಿಕೊಂಡರೆ ಖಿನ್ನತೆ ಬಾಧಿಸಬಹುದು. ನಿಮ್ಮ ಮಕ್ಕಳ ಮೇಲೂ ಅದರ ಪರಿಣಾಮ ಬೀರಬಹುದು. ಒಂಟಿಯಾಗಿ ಕೂತು ಅವೇ ಘಟನೆಗಳ ಮೆಲಕು ಹಾಕಿ ದುಃಖಿಸುವ ಬದಲು ಬೇರೆ ಕೆಲಸಗಳಲ್ಲಿ ಮಗ್ನರಾಗಿ. ಮುಂದಿನ ಬದುಕಿನ ಬಗ್ಗೆ ಯೋಚಿಸಿ’ ಎಂದೆಲ್ಲಾ ಪ್ರವಚನ ನೀಡಿದೆ.

ಈ ಪುರಾಣ ಕೇಳುತ್ತಾ ಕೂತಿದ್ದ ಆಕೆಯ ಸೋದರ ಮಾವ ತಟ್ಟನೆದ್ದರು. ಅವರು ಪಕ್ಕಾ ರೈತಾಪಿ ಮನುಷ್ಯ. ದಿಟ್ಟವಾಗಿ ನಿಂತುಗಟ್ಟಿ ದನಿಯಲ್ಲಿ ‘ಈ ಜಗತ್ತಿನಲ್ಲಿ ಉಚಿತವಾಗಿ ಸಿಗುವುದು ಸಲಹೆಗಳು ಮಾತ್ರ. ಹೇಳುವುದು ಪಾಲಿಸುವಷ್ಟು ಸಲೀಸಲ್ಲ. ಆದವರಿಗಷ್ಟೇ ಅದರ ಮರ್ಮ, ಕರ್ಮ, ನೋವು ತಿಳಿಯುವುದು. ತಣ್ಣಗಿರುವವರಿಗೆ ಹೇಳಲು ನೂರು ಮಾತು, ಉದಾಹರಣೆ ಸಿಗುತ್ತವೆ. ತಿಳಿ ಹೇಳುವ ಜನರೂ ಇಂಥ ಸಮಸ್ಯೆಗಳು ಅವರಿಗೇ ಅಮರಿಕೊಂಡಾಗ ಈ ತರಹವೇ ಕುಗ್ಗಿ, ಕೂತು ಅಬ್ಬರಿಸುತ್ತಾರೆ. ಮನಸ್ಸಿನ ಭಯ,
ಆತಂಕ, ಒಗ್ಗರಣೆ ಮಾತುಗಳಿಂದ ಹೋಗುವುದಿಲ್ಲ. ಕಾಲ ಎಲ್ಲವನ್ನೂ ಬದಲಿಸಬೇಕೆ ಹೊರತು ಗಿಲೀಟು ಮಾತು, ಪುಕ್ಸಟ್ಟೆ ಉಪದೇಶದಿಂದ ಪ್ರಯೋಜನವಿಲ್ಲ’ ಎಂದು ಹೇಳಿದರು.

ಅವರು ಕೊಂಚ ಒರಟಾಗಿ ಹೇಳಿದರೂ ಅವರ ಮಾತಿನಲ್ಲಿ ಸತ್ಯವಿತ್ತು. ನಾವು ಆಚರಿಸದ ಅನೇಕ ಸಂಗತಿಗಳನ್ನು ಬೇರೆಯವರಿಗೆ ಉಣಿಸಲು ಹೋಗುತ್ತೇವೆ. ಮತ್ತೊಬ್ಬರ ಸಮಸ್ಯೆ ಬಗೆಹರಿಸಲು ಹೊರಡುವ ನಾವೇ ಅನೇಕ ಹಳವಂಡಗಳಲ್ಲಿ ಮುಳುಗಿರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT