ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಪ್ರಪಂಚದ ಅತಿ ಕ್ರೂರ ಪ್ರಾಣಿ..

ನುಡಿ ಬೆಳಗು
Published 10 ಡಿಸೆಂಬರ್ 2023, 18:47 IST
Last Updated 10 ಡಿಸೆಂಬರ್ 2023, 18:47 IST
ಅಕ್ಷರ ಗಾತ್ರ

ಒಮ್ಮೆ ಶಾಲಾ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕಾಗಿ ಮೃಗಾಲಯಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಹುಲಿ, ಸಿಂಹ, ಕರಡಿ, ಕತ್ತೆ ಕಿರುಬ, ಚಿಂಪಾಂಜಿ, ಗೊರಿಲ್ಲ, ಮುಂತಾದ ಭಯಾನಕ ಕಾಡುಪ್ರಾಣಿಗಳನ್ನು ಪಂಜರದಲ್ಲಿ ಕೂಡಿಹಾಕಿಟ್ಟಿದ್ದನ್ನು ಚಿಕ್ಕ ಮಕ್ಕಳು, ಮೂಕವಿಸ್ಮಿತರಾಗಿ ನೋಡುತ್ತಿದ್ದರು. ಹೀಗೆ ಬೇರೆ ಬೇರೆ ಪಂಜರಗಳಲ್ಲಿದ್ದ ಪ್ರಾಣಿ ಪಕ್ಷಿಗಳನ್ನು ವೀಕ್ಷಿಸುತ್ತಾ ಬಂದ ಮಕ್ಕಳಿಗೆ, ಗುಹೆಯಾಕಾರದ ಒಂದು ಕೋಣೆಯ ಮುಂದೆ ‘ಈ ಪ್ರಪಂಚದ ಅತ್ಯಂತ ಕ್ರೂರ ಪ್ರಾಣಿ’ ಎಂಬ ಫಲಕ ಕಣ್ಣಿಗೆ ಬಿತ್ತು. ಅವರು ಭಯಭೀತರಾಗಿಯೇ ಅಲ್ಲಿರುವ ಅತ್ಯಂತ ಕ್ರೂರಪ್ರಾಣಿ ಯಾವುದಿರಬಹುದು ಎಂಬ ಕುತೂಹಲದಿಂದ ಒಳಹೊಕ್ಕು ನೋಡಿದರೆ, ಅಲ್ಲಿ ಪಂಜರದ ಹಿಂದೆ ದೊಡ್ಡದೊಂದು ಕನ್ನಡಿ ಇರಿಸಲಾಗಿತ್ತು. ಒಳಹೊಕ್ಕವರಿಗೆ ತಮ್ಮ  ಪ್ರತಿಬಿಂಬವೇ ಕಾಣಿಸುತ್ತಿತ್ತು. ಮಕ್ಕಳಿಗೆ ಏನೂ ಅರ್ಥವಾಗಲಿಲ್ಲ.

ಆಗ ಒಳ ಬಂದ ಶಿಕ್ಷಕರಿಗೆ ‘ಇಲ್ಲಿ ಯಾವ ಪ್ರಾಣಿಯೂ ಇಲ್ಲವಲ್ಲ ಸರ್’ ಎಂದು ಮಕ್ಕಳು ಹೇಳಿದರು. ಆಗ ಆ ಶಿಕ್ಷಕರು ನಸುನಗುತ್ತಾ ‘ಮಕ್ಕಳೇ ಅಲ್ಲಿರುವ ಕನ್ನಡಿಯಲ್ಲಿ ಯಾರ ಪ್ರತಿಬಿಂಬ ಕಾಣಿಸುತ್ತಿದೆ ಹೇಳಿ’ ಎಂದು ಕೇಳಿದರು. ಆಗ ಮಕ್ಕಳು ಒಕ್ಕೊರಲಿನಿಂದ ‘ನಮ್ಮದೇ ಪ್ರತಿಬಿಂಬ ಸರ್’ ಎಂದುತ್ತರಿಸಿದರು.

ಆಗ ಶಿಕ್ಷಕರು ‘ಅಂದರೆ ಈ ಪ್ರಪಂಚದಲ್ಲಿ ಮನುಷ್ಯನೇ ಅತ್ಯಂತ ಕ್ರೂರ ಪ್ರಾಣಿ. ಏಕೆಂದರೆ ಈ ಪ್ರಪಂಚದಲ್ಲಿ ತನಗೆ ಮಾತ್ರ ಬದುಕುವ ಹಕ್ಕಿರುವುದು ಎಂಬಂತೆ ಮನುಷ್ಯ ವರ್ತಿಸುತ್ತಾನೆ. ತನ್ನ ದುರಾಸೆಗಾಗಿ ಕಾಡುಗಳನ್ನು ಕಡಿದು ಪ್ರಾಣಿ ಪಕ್ಷಿಗಳಿಗೆ ವಾಸಕ್ಕೆ ಜಾಗವಿಲ್ಲದಂತೆ ಮಾಡುತ್ತಾನೆ. ಕಾಡುಪ್ರಾಣಿಗಳನ್ನು ಸಾಯಿಸಿ ಅವುಗಳ ಅಂಗಾಂಗಗಳನ್ನು ಮಾರಿ ಶ್ರೀಮಂತನಾಗುವಷ್ಟು ದುರಾಸೆ ಅವನದ್ದು. ಬುದ್ಧಿಶಕ್ತಿಯಲ್ಲಿ ಎಲ್ಲ ಪ್ರಾಣಿಗಳಿಗಿಂತಲೂ ಉನ್ನತ ಸ್ಥಾನದಲ್ಲಿರುವ ಮನುಷ್ಯ, ಇಡೀ ಜಗತ್ತನ್ನು ತನ್ನ ನಿಯಂತ್ರಣದಲ್ಲಿರಿಸಿಕೊಳ್ಳಲು ಬಯಸುತ್ತಾನೆ. ಆದರೆ ಪ್ರಕೃತಿಯ ಮುಂದೆ ಅವನು ತೀರಾ ಕುಬ್ಜ ಎಂಬ ವಾಸ್ತವದ ಅರಿವು ಅವನಿಗಿಲ್ಲ ಹೀಗಾಗಿ ಮನುಷ್ಯನೇ ಈ ಪ್ರಪಂಚದ ಅತ್ಯಂತ ಕ್ರೂರ ಪ್ರಾಣಿ’ ಎಂದು ನುಡಿದರು.

ಇತ್ತೀಚೆಗೆ ನಮ್ಮ ಮನೆಯ ಹತ್ತಿರವಿದ್ದ ರಸ್ತೆಯ ಅಗಲೀಕರಣಕ್ಕೆ ಅಲ್ಲಿದ್ದ ಹಲವಾರು ಮರಗಳನ್ನು ಕಡಿಯಲಾಯಿತು. ಆ ಮರಗಳಲ್ಲಿ ಗೂಡು ಕಟ್ಟಿದ್ದ, ಅವುಗಳ ಮೇಲೆ ಬಂದು ಕೂರುತ್ತಿದ್ದ, ಅವುಗಳ ಹಣ್ಣುಗಳನ್ನು ತಿಂದು ನಲಿಯುತ್ತಿದ್ದ ವಿವಿಧ ರೀತಿಯ ಪಕ್ಷಿಗಳು ನಾಪತ್ತೆಯಾದವು.  

ಇವೆಲ್ಲವೂ ದಿನೇ ದಿನೇ ಕಣ್ಮರೆಯಾದರೆ ಈ ಭುವಿಯ ಭವಿಷ್ಯ ಹಾಗೆಯೇ ಅದರ ಜೊತೆಗೇ ಬದುಕಬೇಕಾದ ಮುಂದಿನ ಪೀಳಿಗೆಯ ಭವಿಷ್ಯ ಏನಾದೀತು ಎಂದು ಯೋಚಿಸಿದಾಗ ನಿಜಕ್ಕೂ ಆತಂಕವಾಯಿತು. ಮನುಷ್ಯನ ಈ ಕ್ರೌರ್ಯವೇ, ದಿನ ದಿನಕ್ಕೂ ಹೆಚ್ಚುತ್ತಿರುವ ಪ್ರಾಣಿ- ಮಾನವ ಸಂಘರ್ಷಗಳಿಗೆ ಕಾರಣವಲ್ಲವೇ? ಈ ಕ್ರೌರ್ಯವನ್ನು ನಿಯಂತ್ರಿಸಿಕೊಂಡು ಭೂಮಿಯ ಮೇಲೆ ಬದುಕುವ ಕೋಟ್ಯಂತರ ಜೀವಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಸಹಿಷ್ಣುತೆಯಿಂದ ಬದುಕಬೇಕೆಂದು ಅವನ ವಿವೇಕಕ್ಕೆ ಹೊಳೆದರೆ ಲೋಕಕ್ಕೆ ಹಿತವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT