ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ತೀರ್ಪು ನೀಡುವ ಮುನ್ನ

Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಅಪ್ಪ ಮಗಳು ಪಾರ್ಕಿನಲ್ಲಿ ತಿರುಗಾಡುತ್ತಿದ್ದರು. ಅಷ್ಟು ಹೊತ್ತಿಗೆ ಅಲ್ಲೊಬ್ಬ ಕಿತ್ತಳೆ ಮಾರುವವನು ಬಂದ. ಪುಟ್ಟ ಮಗಳು ‘ಅಪ್ಪಾ ಹಣ್ಣು ಕೊಡಿಸು’ ಎಂದು ದುಂಬಾಲು ಬಿದ್ದಳು. ಅಪ್ಪ ಎರಡು ಕಿತ್ತಳೆ ಹಣ್ಣುಗಳನ್ನು ಖರೀದಿಸಿ ಮಗಳಿಗೆ ಕೊಟ್ಟ. ಎರಡೂ ಕೈಗಳಲ್ಲೂ ಒಂದೊಂದು ಹಣ್ಣು ಹಿಡಿದುಕೊಂಡಳು ಮಗಳು. ಅಪ್ಪ ಕೇಳಿದ ‘ನನಗೆ?’ ತಕ್ಷಣ ಮಗಳು ಒಂದು ಕಿತ್ತಳೆಯ ಸಿಪ್ಪೆ ಸುಲಿದು ಒಂದು ಸೊಳೆ ತಿಂದಳು. ಅಪ್ಪ ಏನನ್ನಾದರೂ ಹೇಳುವ ಮೊದಲೇ ಮತ್ತೊಂದು ಕಿತ್ತಳೆಯನ್ನೂ ಸುಲಿದು ಅದರಲ್ಲೂ ಒಂದು ಸೊಳೆ ತೆಗೆದು ತಿಂದುಬಿಟ್ಟಳು. ಅಪ್ಪನಿಗೆ ಮಗಳು ಹೀಗೇಕೆ ಮಾಡಿದಳೆಂದು ಅಚ್ಚರಿಯಾಯಿತು. ಸಂಕಟವೂ ಆಯಿತು. ಮಗಳನ್ನು ಬೆಳೆಸುವಲ್ಲಿ ತಾನೇನು ತಪ್ಪು ಮಾಡಿದೆ, ಎಲ್ಲಿ ಎಡವಿದೆ ಎಂದು ಯೋಚಿಸತೊಡಗಿದ. ಇರಲಿ, ಇನ್ನೂ ಚಿಕ್ಕವಳು. ಮುಂದೆ ತಿದ್ದಿಕೊಳ್ಳುತ್ತಾಳೆ, ತಾನು ತುಂಬ ಯೋಚನೆ ಮಾಡುತ್ತಿದ್ದೇನೆ ಎಂದುಕೊಂಡ. ಆದರೂ ಮನಸ್ಸಿನೊಳಗೆ ಕಿರಿಕಿರಿ, ತಳಮಳ. ಅವನ ತುಟಿಯ ಮೇಲಿನ ಮುಗುಳ್ನಗು ನಿಧಾನವಾಗಿ ಮಾಯವಾಯಿತು. ಅಷ್ಟು ಹೊತ್ತಿಗೆ ಎರಡೂ ಹಣ್ಣುಗಳನ್ನು ರುಚಿ ನೋಡಿದ ಮಗಳು ತನ್ನ ಎಡಗೈ ಅನ್ನು ಮುಂದೆ ಮಾಡಿ, ‘ಅಪ್ಪಾ, ನೀನು ಈ ಹಣ್ಣು ತಿನ್ನು. ಇದು ಜಾಸ್ತಿ ಸಿಹಿಯಿದೆ, ತಗೋ’ ಎಂದಳು. ಅಪ್ಪನಿಗೆ ನಾಚಿಕೆಯಾಯಿತು. ಇಷ್ಟು ಪುಟ್ಟ ಮಗುವನ್ನು ಆಸೆಬುರುಕಿ ಎಂದು ಕ್ಷಣಾರ್ಧದಲ್ಲಿ ತೀರ್ಮಾನ ಮಾಡಿಬಿಟ್ಟೆನಲ್ಲ ಎಂದು ಪಶ್ಚಾತ್ತಾಪ ಪಟ್ಟ. ನಿಧಾನವಾಗಿ ಅವನ ಮುಖದ ಮುಗುಳ್ನಗುವೂ ವಾಪಾಸು ಬಂದಿತು. ಮಗಳನ್ನು ಎತ್ತಿ ಮುದ್ದಾಡಿದವನ ಕಣ್ಣಂಚಿನಲ್ಲಿ ತೆಳುವಾದ ನೀರಪರದೆಯಿತ್ತು.

‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಎಂಬ ಜನಪ್ರಿಯ ಗಾದೆ ನಮಗೆ ತಿಳಿದಿದೆ. ಮುಂಗುಸಿಯ ಬಾಯಲ್ಲಿನ ರಕ್ತ ನೋಡಿ ತನ್ನ ಮಗುವನ್ನು ಸಾಯಿಸಿಬಿಟ್ಟಿದೆ ಎಂದು ತಿಳಿದು ಅದನ್ನು ಜಜ್ಜಿದ ಗಂಗಮ್ಮನ ಕಥೆಯೂ ನಮಗೆ ಗೊತ್ತು. ಆದರೂ ಬೇರೆಯವರ ಬಗ್ಗೆ ತೀರ್ಪು ಕೊಡಲು ನಾವು ತುದಿಗಾಲಿನಲ್ಲಿ ನಿಂತಿರುತ್ತೇವೆ. ಅವರು ನಮಗೆ ಎಷ್ಟೇ ಆಪ್ತರಿರಬಹುದು, ಅವರ ಸ್ವಭಾವ ನಮಗೆ ಚಿರಪರಿಚಿತವಿರಬಹುದು. ಆದರೂ ಯೋಚಿಸದೇ ಇದು ಹೀಗೆಯೇ ಎಂದು ತೀರ್ಮಾನಕ್ಕೆ ಬಂದುಬಿಡುತ್ತೇವೆ. ಇನ್ನು ನಾವು ಒಡನಾಡದ, ನೋಡಿಯೇ ಇರದ ವ್ಯಕ್ತಿಗಳ ಬಗ್ಗೆ ತರಾತುರಿಯಲ್ಲಿ ತೀರ್ಪು ಕೊಡುವುದಂತೂ ಹಾಸ್ಯಾಸ್ಪದ! ಯಾರ ಬದುಕಿನ ಹಾದಿ ಹೇಗಿರುತ್ತದೆಯೋ ಎಂಬುದನ್ನು ಅರಿಯದೇ ಹೀಗೆ ಮಾಡುವುದು ಅತ್ಯಂತ ಸುಲಭವಾದರೂ ಅದು ನಮ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಹಾಗಾಗಿ ಇನ್ನಾದರೂ ಸ್ವಘೋಷಿತ ನ್ಯಾಯಾಧೀಶರ ಪಟ್ಟದಿಂದ ಕೆಳಗಿಳಿಯೋಣ. ಏಕೆಂದರೆ ಕ್ಷುಲ್ಲಕತೆಯಿಂದ ಹೊರಬರುವ ಮೊದಲ ಹೆಜ್ಜೆಯಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT