ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಕಾರು, ಮನೆ, ಒಡವೆ, ವಸ್ತು ಇತ್ಯಾದಿ

Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ನನ್ನ ಸಹಪಾಠಿ ಗೆಳೆಯನೊಬ್ಬ ಈಗ ಭಾರಿ ಶ್ರೀಮಂತ. ಹೇಗೆ, ಏನು ಅಂತ ಕೇಳಬೇಡಿ, ನನಗೂ ಗೊತ್ತಿಲ್ಲ. ಅಂತೂ ಭಾರಿ ಶ್ರೀಮಂತ ಅವನು. ಒಮ್ಮೆ ಅವನು ನಮ್ಮ ಗುರುಗಳ ಹತ್ತಿರ ಮಾತಾಡುವಾಗ, ‘ನಾನು ಒಂದು ಲೇಟೆಸ್ಟ್ ಮಾಡೆಲ್ ಮರ್ಸಿಡಿಸ್ ಕಾರು ಕೊಂಡುಕೊಳ್ತಾ ಇದೀನಿ ಸರ್, ನಿಮಗೆ ಹೇಳೋಣ ಅಂತ ಬಂದೆ’ ಅಂದ.

ಆಗ ಗುರುಗಳು ಹೇಳಿದರು- ‘ತುಂಬಾ ಸಂತೋಷ. ಆದರೆ ಈಗ ಒಂದು ಮಾತು ಹೇಳಬೇಕು ನಾನು. ಏನೆಂದರೆ ನಾವೊಂದು ಹೊಸ ಕಾರು ಕೊಂಡುಕೊಳ್ಳುತ್ತೇವೆ ಅನ್ನಿ. ಅದೂ ಸಾಧಾರಣ ಕಾರಲ್ಲ, ಮರ್ಸಿಡಿಸ್ಸೋ, ಬಿ.ಎಂ.ಡಬ್ಲ್ಯುನೋ ಅಥವಾ ಅಂಥ ಇನ್ನೆಂಥದೋ ಅಂದುಕೊಳ್ಳಿ. ಅಷ್ಟು ದೊಡ್ಡ (ದುಡ್ಡಿನ) ಕಾರು ಕೊಂಡ ಖುಷಿ ನಮಗೆ ಆಗುವುದು ಯಾವಾಗ? ಅದರಲ್ಲಿ ಕುಳಿತು ಎಲ್ಲಿಗಾದರೂ ಹೋಗುವಾಗ, ಅನ್ನುತ್ತೀರಾ? ಬಹುಶಃ ಅಲ್ಲ. ಆ ಕಾರಿನಲ್ಲಿ ಕೂತು ನಾವು ಓಡಾಡುವಾಗ ನಮ್ಮ ನೆಂಟರೋ, ಇಷ್ಟರೋ, ಸ್ನೇಹಿತರೋ  (ಅಥವಾ ನಮಗೆ ಆಗದವರೋ) ಅದನ್ನು ನೋಡಿದಾಗ. ಅದಕ್ಕಿಂತಲೂ ಇನ್ನೂ ಹೆಚ್ಚು ಸಂತೋಷವಾಗುವುದು ಇಂಥದೊಂದು ಕಾರನ್ನು ಕೊಳ್ಳಲು ಚೈತನ್ಯವಿಲ್ಲದ ನಮ್ಮ ಸ್ನೇಹಿತರೋ, ಬಂಧುಗಳೋ ಬಂದು ‘ಅಹಾ, ಎಂಥಾ ಕಾರು ತೊಗೊಂಡಿದ್ದೀರಿ? ನೋಡೋಕೆ ಎರಡು ಕಣ್ಣು ಸಾಲದು, ನಮ್ಮಂಥವರು ಕನಸಿನಲ್ಲೂ ಆಸೆ ಪಡೋಕೆ ಸಾಧ್ಯ ಇಲ್ಲ ಬಿಡಿ’ ಅಂದಾಗ.

‘ಅಂದರೆ ಅರ್ಥ ಇಷ್ಟೆ, ನಮ್ಮ ಕಾರು, ಮನೆ, ಒಡವೆ, ವಸ್ತು ಇವು ನಮ್ಮ ಅಗತ್ಯವನ್ನು ಪೂರೈಸುವುದಕ್ಕಷ್ಟೇ ಅಲ್ಲ, ನಮ್ಮ ಅಹಂಕಾರ ತೃಪ್ತಿಗೂ ಬರುತ್ತವೆ. ಅಗತ್ಯಕ್ಕಾಗಿ ಬಂದರೆ ನಮಗೆ ಹೆಚ್ಚು ಸಂತೋಷವಾಗುವುದಿಲ್ಲ, ನಮ್ಮ ಅಹಂಕಾರ ತೃಪ್ತಿಗೆ ಬಂದಾಗ ನಮ್ಮ‌ಖುಷಿ ಹೆಚ್ಚಾಗುತ್ತದೆ. ಹೊಸ ಹೊಸದನ್ನು ಕೊಂಡು ಅಹಂಕಾರ ತೃಪ್ತಿ ಹೊಂದುವ ಮನಸ್ಸು ಅದಕ್ಕಿಂತಲೂ ಒಳ್ಳೆಯ ಕಾರು, ಮನೆ, ಬಂಗಲೆ ಬೇರೆಯವರ ಹತ್ತಿರ ಇರುವಾಗ ಅದನ್ನು ನೋಡಿ ಖಿನ್ನತೆಗೆ ಬೀಳುತ್ತದೆ...

‘ಎಳೆ ಮಕ್ಕಳನ್ನು ನೋಡಿ, ಅವು ಯಾವಾಗಲೂ ಯಾಕೆ ಸಂತೋಷವಾಗಿರುತ್ತವೆ ಗೊತ್ತಾ? ನೀವು ಹತ್ತು ಸಾವಿರ ರೂಪಾಯಿ ಕೊಟ್ಟು ಒಂದು ಆಟದ ಸಾಮಾನು ತಂದುಕೊಡುತ್ತೀರಿ ಅಂತಿಟ್ಟುಕೊಳ್ಳಿ. ಅದರ ಬೆಲೆ ಹತ್ತು ಸಾವಿರ ಅಂತ ನಿಮಗೆ ಗೊತ್ತು. ಆದರೆ ಆ ಮಗುವಿಗೆ ಗೊತ್ತಿಲ್ಲ. ಮಗುವಿಗೆ ಹತ್ತು ಸಾವಿರ ಬೆಲೆಯ ಆಟದ ಸಾಮಾನು ಕೊಡಿಸುವಷ್ಟು ನಿಮಗೆ ಶಕ್ತಿಯಿದೆ ಅನ್ನುವುದು ನಿಮ್ಮ ಹೆಮ್ಮೆ. ಆದರೆ ಮಗುವಿಗೆ ಅದು ಗೊತ್ತಿಲ್ಲ. ಆದ್ದರಿಂದ ಮಗು ನಿಮ್ಮ ಹತ್ತು ಸಾವಿರ ಬೆಲೆಯ ಆಟದ ಸಾಮಾನನ್ನು ಬಿಟ್ಟು ಯಾವುದೋ ಒಂದು ಹಳೆಯ ತಗಡಿನ ಡಬ್ಬ, ಖಾಲಿ ಬಾಟಲಿ, ಅದರ ಮುಚ್ಚಳ, ಒಡೆದ ಬುಗುರಿ, ಇಂಥದೇನನ್ನೋ ಹಿಡಿದುಕೊಂಡು ಆನಂದವಾಗಿ ಆಟ ಆಡುತ್ತಿರುತ್ತದೆ. ಬದುಕಿನಲ್ಲಿ ಬೆಲೆಚೀಟಿಯನ್ನು ನೋಡದೆ ಬದುಕಿದರಷ್ಟೇ ಆನಂದ ಸಿಗುವುದು. ಆ ಎಳೆಯ ಕಂದಮ್ಮಗಳ ಮನಸ್ಸನ್ನು ನಾವು ಒಂದಿಷ್ಟಾದರೂ ರೂಢಿಸಿಕೊಳ್ಳದಿದ್ದರೆ ಆನಂದ, ಸಂತೋಷ ನಮಗೆ ಸಾಧ್ಯವಾಗುವುದೇ ಇಲ್ಲ...’

ಮಾತು‌ ಮುಗಿಸಿ ನಾವು ಹೊರಗಡೆ ಬಂದಾಗ, ‘ನಮ್ಮ ಗುರುಗಳಿಗೆ ನಾನು ಮರ್ಸಿಡಿಸ್ ತೆಗೆದುಕೊಳ್ಳೋದನ್ನ ಕೇಳಿ ಒಳಗೊಳಗೇ ಉರಿ. ಅದಕ್ಕೇ ಇಷ್ಟೊಂದು ತತ್ತ್ವ ಹೊಡೀತಾರೆ’ ಅಂದ ಆ ನನ್ನ ಶ್ರೀಮಂತ ಗೆಳೆಯ.

ನಿಮಗೇನನ್ನಿಸುತ್ತದೆ? ಹೇಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT