ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಆಪತ್ತಿಗಾಗುವವರೇ ಗೆಳೆಯರು

Published 13 ಮಾರ್ಚ್ 2024, 23:57 IST
Last Updated 13 ಮಾರ್ಚ್ 2024, 23:57 IST
ಅಕ್ಷರ ಗಾತ್ರ

ಯುವಕನೊಬ್ಬನ ವಿವಾಹ ನಿಶ್ಚಯವಾಗಿತ್ತು. ಅದೇ ವೇಳೆಗೆ ಒಂದು ಬಹಳ ಮುಖ್ಯವಾದ ಕೆಲಸಕ್ಕಾಗಿ ಆತ ದೂರದೂರಿಗೆ ಹೋಗಬೇಕಾಯಿತು. ಅದಕ್ಕಾಗಿ ಆತ ತನ್ನ ತಂದೆಗೆ ‘ಅಪ್ಪಾ, ಮದುವೆಯನ್ನೇನು ಮುಂದೂಡುವ ಹಾಗಿಲ್ಲ. ನಾನು ಹದಿನೈದು ದಿನ ಒಬ್ಬರಿಗೆ ಒಂದು ಫೋನ್‌ ಕರೆಯನ್ನೂ ಮಾಡಲಾಗದು. ಹಾಗಾಗಿ ನನ್ನ ಈ ಐವತ್ತು ಸ್ನೇಹಿತರ ಪಟ್ಟಿ ಇಲ್ಲಿದೆ, ಪ್ರತಿಯೊಬ್ಬರಿಗೂ ನೀವೇ ಕರೆ ಮಾಡಿ ನನ್ನ ಪರವಾಗಿ ಖುದ್ದಾಗಿ ಆಹ್ವಾನಿಸಬೇಕು’ ಎನ್ನುತ್ತಾನೆ. ತಂದೆ ಒಪ್ಪುತ್ತಾರೆ.

ಮದುವೆಯ ದಿನ ಬೆಳಿಗ್ಗೆ ಯುವಕ ಮನೆ ತಲುಪುತ್ತಾನೆ. ಮನೆಯ ತುಂಬ ಸ್ನೇಹಿತರನ್ನು ನಿರೀಕ್ಷಿಸಿದ ಯುವಕನಿಗೆ ಆಘಾತ. ಐವತ್ತು ಗೆಳೆಯರ ಪಟ್ಟಿಯಲ್ಲಿ ಐವರು ಮಾತ್ರ ಕಾಣುತ್ತಾರೆ. ಕೋಪದಿಂದ ತಂದೆಯ ಬಳಿ ಬಂದವನೇ ‘ಅಪ್ಪಾ ನನ್ನ ಸ್ನೇಹಿತರನ್ನು ಕರೆಯಲೇಬೇಕೆಂದು ಹೇಳಿದ್ದೆನಲ್ಲ’ ಎನ್ನುತ್ತಾನೆ . ಅದಕ್ಕೆ ತಂದೆ ‘ಕರೆದಿದ್ದೇನಲ್ಲ’ ಎನ್ನುತ್ತಾರೆ. ಆಗ ಯುವಕ ‘ಐವತ್ತು ಮಂದಿಯಲ್ಲಿ ಐದೇ ಮಂದಿ ಬಂದಿದ್ದಾರಲ್ಲ’ ಎಂದು ಹೇಳಿದಾಗ ತಂದೆ, ‘ಮಗೂ ನಾನು ಪ್ರತಿಯೊಬ್ಬರಿಗೂ ನಿನ್ನ ಪರವಾಗಿ ಕರೆ ಮಾಡಿದ್ದೇನೆ, ನೀನು ಒಂದು ದೊಡ್ಡ ಸಮಸ್ಯೆಯಲ್ಲಿ ಇದ್ದೀಯೆಂದೂ ಅದು ಪರಿಹಾರವಾಗಬೇಕೆಂದರೆ ಗೆಳೆಯರೆಲ್ಲರ ಸಹಕಾರ ಬೇಕೆಂದೂ, ಇಂತಹ ದಿನ ಇಂತಹ ಜಾಗಕ್ಕೆ ಬರಬೇಕೆಂದೂ ಮನವಿ ಮಾಡಿಕೊಂಡೆ. ಹಾಗಾಗಿ ಚಿಂತಿಸಬೇಡ, ನಿನ್ನ ನಿಜವಾದ ಗೆಳೆಯರೆಲ್ಲ ಇಲ್ಲಿದ್ದಾರೆ’ ಎಂದರು.

ನಿಜ, ಬಹಳಷ್ಟು ಸಂದರ್ಭದಲ್ಲಿ ನಾವು ಯಾರು ನಮ್ಮವರೆಂದು ತಿಳಿದುಕೊಂಡಿರುತ್ತೇವೆಯೋ ಅವರು ಪರಕೀಯರೇ ಆಗಿರುತ್ತಾರೆ. ಇದು ಬದುಕಿನ ವ್ಯಂಗ್ಯಗಳಲ್ಲೊಂದು. ಭರವಸೆ, ನಂಬಿಕೆಗಳ ಅಡಿಪಾಯ ಹೊಂದಿರುವ ಸ್ನೇಹ ಎನ್ನುವುದು ಜಗತ್ತಿನ ಅತೀ ಮುಖ್ಯ ಸಂಬಂಧಗಳಲ್ಲೊಂದು. ರಕ್ತ ನೀರಿಗಿಂತ ಗಟ್ಟಿಯಾದರೂ ಕೆಲವು ಸ್ನೇಹ ಸಂಬಂಧಗಳು ರಕ್ತ ಸಂಬಂಧವನ್ನೂ ನಾಚಿಸುವಂತಿರುತ್ತವೆ. ಎಲ್ಲ ಭಾಷೆಯ ಸಾಹಿತ್ಯ ಕೃತಿಗಳಲ್ಲೂ ಎಲ್ಲ ದೇಶಗಳ ಇತಿಹಾಸದಲ್ಲಿಯೂ ಅತ್ಯುತ್ತಮ ಸ್ನೇಹಿತರು ಆಗಿ ಹೋಗಿದ್ದಾರೆ. ಅಂತೆಯೇ ಕರಡಿ ಬಂದಾಗ ಸ್ನೇಹಿತನನ್ನು ಬಿಟ್ಟು ಮರ ಹತ್ತಿದವನ ಕಥೆಯನ್ನು ಕೂಡ ಓದಿದ್ದೇವೆ.

ಸಂತಸದ ಸಂದರ್ಭದಲ್ಲೋ ಅಥವಾ ಲಾಭ ಪಡೆಯುವಾಗಲೋ ಜತೆಗಿದ್ದು ಕಷ್ಟದ ಗಳಿಗೆಯಲ್ಲಿ ಅಪರಿಚಿತರಾಗುವವರು ಹಾಗೂ ಅವಶ್ಯಕತೆಯಿದ್ದಾಗ ಮಾತ್ರ ನೆನಪು ಮಾಡಿಕೊಳ್ಳುವವರು ನಕಲಿ ಸ್ನೇಹಿತರು. ಗೆಳೆಯರ ತುರ್ತುಪರಿಸ್ಥಿತಿಯಲ್ಲಿ ಬೆನ್ನು ತಿರುಗಿಸಿ ಓಡದೇ, ವೈಯಕ್ತಿಕ ಸಮಸ್ಯೆಯನ್ನು ಲೆಕ್ಕಿಸದೇ ಸಹಾಯಕ್ಕೆ ಬರುವವರು ನಿಜವಾದ ಗೆಳೆಯರು. ಅವರು ಗೆಳೆಯರ ಸಂಕಟ, ನೋವನ್ನು ತಮ್ಮದು ಎಂದುಕೊಳ್ಳುತ್ತಾರೆ. ಇಂಥ ಗೆಳೆಯರೆಂದರೆ ಸಂಕಟದ ಸಂದರ್ಭದಲ್ಲಿ ಆತುಕೊಳ್ಳಲೊಂದು ಭರವಸೆಯ ಹೆಗಲಿದ್ದಂತೆ. ನೈಜ ಗೆಳೆಯರನ್ನು ಪಡೆದವರೇ ಅದೃಷ್ಟವಂತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT