ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಮಾದರಿ ನಾಯಕತ್ವ

Published 1 ಮೇ 2024, 23:22 IST
Last Updated 1 ಮೇ 2024, 23:22 IST
ಅಕ್ಷರ ಗಾತ್ರ

ಫುಟ್‌ಬಾಲ್‌ನಲ್ಲಿ ವಿಶ್ವಕಪ್‌ನಷ್ಟೇ ಮಹತ್ವದ ಮತ್ತೊಂದು ಪಂದ್ಯಾವಳಿಯೆಂದರೆ ಯೂರೋಪಿಯನ್‌ ಕಪ್‌. 2012ರ ಸೆಮಿಫೈನಲ್‌ನಲ್ಲಿ ಪೋರ್ಚುಗಲ್‌ ಮತ್ತು ಸ್ಪೇನ್‌ ಎದುರಾಳಿಗಳಾಗಿದ್ದವು. ಪೆನಾಲ್ಟಿ ಕಿಕ್‌ನಲ್ಲಿ ಪಂದ್ಯದ ಫಲಿತಾಂಶ ನಿರ್ಧಾರವಾಗಿ ಪಂದ್ಯಾವಳಿಯಿಂದ ಪೋರ್ಚುಗಲ್‌ ಹೊರಬಿದ್ದಿತ್ತು.

ನಾಲ್ಕು ವರ್ಷಗಳ ನಂತರ ಇದೇ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪಂದ್ಯ ಪೋಲೆಂಡ್‌ ಮತ್ತು ಪೋರ್ಚುಗಲ್‌ ನಡುವೆ ನಡೆಯಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಗೋಲ್‌ ಗಳಿಸಿದ ಕಾರಣ ಫಲಿತಾಂಶಕ್ಕಾಗಿ ಪೆನಾಲ್ಟಿ ಕಿಕ್‌ ಮೊರೆ ಹೋಗಬೇಕಾಯಿತು. ಬಹು ಒತ್ತಡದ ಸನ್ನಿವೇಶ. 2012ರಲ್ಲಿ ಸ್ಪೇನ್‌ ವಿರುದ್ಧ ಪೆನಾಲ್ಟಿ ಕಿಕ್‌ ಅನ್ನು ಗೋಲ್‌ ಆಗಿ ಪರಿವರ್ತಿಸಲು ವಿಫಲರಾದ ಪೋರ್ಚಗಲ್‌ ಆಟಗಾರರಲ್ಲಿ ಯುವಾ ಮಾಟಿನ್ಹೋ ಕೂಡ ಒಬ್ಬ. ಮಾಟಿನ್ಹೋಗೆ ನಾಲ್ಕು ವರ್ಷಗಳ ಹಿಂದಿನ ಕೆಟ್ಟ ಕನಸು ಕಾಡುತ್ತಿತ್ತು. ಮಹತ್ವದ ಕ್ಷಣದಲ್ಲಿ ವಿಫಲನಾಗಿದ್ದ ಪರಿಣಾಮ ತನ್ನ ದೇಶ ಯೂರೋಕಪ್‌ನಿಂದ ಹೊರಬಿದ್ದಿದ್ದನ್ನು ಆತ ಮರೆತಿರಲಿಲ್ಲ. ಹಾಗಾಗಿ ಆತ ತನ್ನ ನಾಯಕ ಕರೆದಾಗ ಪೆನಾಲ್ಟಿ ಕಿಕ್‌ಗೆ ನಿರಾಕರಿಸಿದ.

ಆದರೆ ಕ್ಯಾಪ್ಟನ್‌ ಬೇರೆ ಯಾರೂ ಅಲ್ಲ! ಅದು ರೊನಾಲ್ಡೋ! ‘ನಿನ್ನ ಮೇಲೆ ನನಗೆ ನಂಬಿಕೆ ಇದೆ ಮಾರಾಯ ನೀನೇ ಹೋಗಬೇಕು, ಸೋತರೆ ಏನು ಮಾಡುವುದೆಂದು ಚಿಂತಿಸಬೇಡ, ಸೋತರೆ ಸೋಲು ಅಷ್ಟೇ’ ಎಂದು ಮಾಟಿನ್ಹೋನನ್ನು ಕಳಿಸಿದ. ಮಾಟಿನ್ಹೋ ಒದ್ದ ಚೆಂಡು ಎದುರಾಳಿ ತಂಡದ ಗೋಲ್‌ಕೀಪರ್‌ಗೆ ಚಳ್ಳೆಹಣ್ಣು ತಿನ್ನಿಸಿ ಗೋಲುಪೆಟ್ಟಿಗೆಯೊಳಗೆ ಹೋಯಿತು! ಆ ಪಂದ್ಯ ಗೆದ್ದ ಪೋರ್ಚುಗಲ್‌ 2016ರ ಯೂರೋಪಿಯನ್‌ ಕಪ್‌ ಎತ್ತಿತು!

ಗೆದ್ದವರನ್ನು ಎಲ್ಲರೂ ಅಭಿನಂದಿಸುವುದು ಸರ್ವೇಸಾಮಾನ್ಯ. ಆದರೆ ಸೋತವರಿಗೆ ಧೈರ್ಯ ತುಂಬುವ ಕೆಲಸವೂ ಅಷ್ಟೇ ಮುಖ್ಯ. ಒಂದು ವೈಫಲ್ಯ ಕೆಲವರನ್ನು ಚಿಪ್ಪಿನೊಳಗೆ ಸೇರಿಕೊಳ್ಳುವಂತೆ ಮಾಡಬಹುದು. ಮರಳಿ ಪ್ರಯತ್ನಿಸುವ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುವಂತೆ ಮಾಡಬಹುದು. ಸೋತಾಗ ಅವರನ್ನು ಮೂಲೆಗೊತ್ತಿದರೆ ಮತ್ತೆಂದೂ ಅವರು ಸಾಮಾನ್ಯ ಬದುಕಿಗೆ ಮರಳುವುದು ಸಾಧ್ಯವಿಲ್ಲ.

ಹಾಗಾಗಿ ಬದುಕಿನ ಯಾವ ಸಂದರ್ಭದಲ್ಲಿಯಾದರೂ ಸೈ, ಸೋಲು ಸೋಲಲ್ಲ, ಸೋತರೆ ಪ್ರಯತ್ನವನ್ನು ನಿಲ್ಲಿಸುವುದೇ ನಿಜವಾದ ಸೋಲು ಎಂಬ ಮಾತನ್ನು ಮನದಟ್ಟು ಮಾಡಬೇಕು. ರೊನಾಲ್ಡೋ ಮಾಡಿದ್ದೂ ಅದನ್ನೇ. ಅತ್ಯಂತ ಸೂಕ್ಷ್ಮ ಸಂದರ್ಭದಲ್ಲಿ ರಿಸ್ಕ್‌ ತೆಗೆದುಕೊಂಡು ತನ್ನ ತಂಡದ ಸದಸ್ಯನಲ್ಲಿ ಆತ್ಮವಿಶ್ವಾಸವನ್ನು ತುಂಬಿ, ಆತನನ್ನು ಗೆಲ್ಲಿಸಿದ ರೋನಾಲ್ಡೋ, ತಂಡವನ್ನೂ ಗೆಲ್ಲಿಸುವುದರ ಜತೆಗೆ ನಾಯಕನಾಗಿ ತಾವೂ ಗೆದ್ದರು. ಮಾದರಿ ನಾಯಕತ್ವಕ್ಕೆ ಉದಾಹರಣೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT