ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಆಯಸ್ಸಿಗೆ ವರ್ಷವಲ್ಲ, ವರ್ಷಕ್ಕೆ ಆಯಸ್ಸು

ಪ್ರತಿ ಹೊಸ ವರ್ಷ ಬದುಕಿನ ಹೊಸ ಅಧ್ಯಾಯ. ನಾವು ಸಮರ್ಥರಾಗಿದ್ದರೆ, ‘ಹೊಸ ವರ್ಷ ಏನೇನು ತರುವುದೋ’ ಎನ್ನುವ ತಲ್ಲಣವೇ ಉದ್ಭವಿಸದು
Published 29 ಡಿಸೆಂಬರ್ 2023, 23:30 IST
Last Updated 29 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

‘ಹೊಸ ವರ್ಷ, ಹೊಸ ನಾವು’ ಉತ್ಸಾಹದ ಭರದಲ್ಲಿ ಹೊಸ ವರ್ಷಕ್ಕೆ ಹೊಸ ನಿರ್ಣಯಗಳ ಪಟ್ಟಿ ಸಿದ್ಧ
ವಾಗಿರುತ್ತದೆ. ಹಿಂದಿನ ವರ್ಷಗಳಲ್ಲಿ ನಾವು ಸುಧಾರಣೆ ಬಯಸಿದಂತಹವು ಹೊಸ ಪಟ್ಟಿಯಲ್ಲಿ ಇರುವುದು ಸಹಜ. ನಮಗೆ ಬದುಕಿನ ಮೇಲೆ ನಿಯಂತ್ರಣ ಇರುವುದಕ್ಕೆ ನಮ್ಮ ಧ್ಯೇಯಗಳೇ ಸಾಕ್ಷಿ. ಪ್ರತಿ ಹೊಸ ವರ್ಷ ಬದುಕಿನ ಹೊಸ ಅಧ್ಯಾಯ.

ನಾವು ಸಮರ್ಥರಾಗಿದ್ದರೆ, ‘ಹೊಸ ವರ್ಷ ಏನೇನು ತರುವುದೋ’ ಎನ್ನುವ ತಲ್ಲಣವೇ ಉದ್ಭವಿಸದು. ನಾಳೆಯೆಂಬ ಮೊಹರು ಹಾಕಿದ ಲಕೋಟೆಯಲ್ಲಿ ಏನುಂಟು, ಏನಿಲ್ಲ ಎಂಬುದು ಭೇದಿಸಲಾಗದ ರಹಸ್ಯ. ಭವಿಷ್ಯದ ಸ್ವಾರಸ್ಯ ಇರುವುದು ಅದರ ನಿಗೂಢದಲ್ಲೇ. ಎಂದಮೇಲೆ, ಭವಿಷ್ಯವನ್ನು ಮುಂಗಾಣುವ ಸೂಕ್ತ ಉಪಾಯವೆಂದರೆ ಅದನ್ನು ಸೃಷ್ಟಿಸುವುದು. ನಮ್ಮನ್ನು ನಾವು ಆವಿಷ್ಕರಿಸಿಕೊಳ್ಳಲಾಗ
ದಷ್ಟು ನಾವೆಂದಿಗೂ ವೃದ್ಧರಲ್ಲ. ಗತದಲ್ಲಿ ಸತತ ಪ್ರಯತ್ನಗಳಿಗೂ ಕೈಗೂಡದ ಗುರಿಗಳು ಅವೆಷ್ಟೋ? ಪುನಃ ಅವನ್ನು ಈಗ ಪ್ರಾರಂಭಿಸಬಹುದಲ್ಲ!

ಭವಿತವ್ಯ ಭೂತಕ್ಕಿಂತ ದೊಡ್ಡದು. ಸಾಧಕರು, ಮೇಧಾವಿಗಳು, ಪ್ರತಿಭಾವಂತರು, ಸಂತರಂತೆ ಆಗೋಣವೆಂದು ನವವರ್ಷ ಬಂದಾಗಲೆಲ್ಲಾ ನಿಶ್ಚಯಿಸಿ ಕೊಳ್ಳುತ್ತೇವೆ. ಈ ಬಾರಿ ಸಂಪನ್ನ, ಸದ್ಗುಣಗಳಿಂದ ನಮ್ಮಂತೆ ನಾವಾಗೋಣ ಎಂದು ನಿರ್ಣಯಿಸಿಕೊಂಡರೆ ಹೇಗೆ? ರೂಢಿಸಿಕೊಂಡ ಅಭ್ಯಾಸಗಳಿಂದ ಒಳಿತಾಗುತ್ತಿಲ್ಲ ಎಂದಾದರೆ ಅವನ್ನು ತ್ಯಜಿಸಿದರಾಯಿತು. ಬದಲಿಗೆ ಅವಕ್ಕೂ ಲೇಸಾದವನ್ನು ಬೆಳೆಸಿಕೊಳ್ಳಬಹುದು. 

ಮಹಾನ್ ನಾಟಕಕಾರ ಷೇಕ್ಸ್‌ಪಿಯರ್‌ನ ನುಡಿಯಿದು: ‘ನಮ್ಮ ತಲಪುದಾಣ ನಕ್ಷತ್ರ
ಗಳಲ್ಲಿಲ್ಲ, ನಮ್ಮೊಳಗೇ ಇದೆ’. ಹೇಗೂ ಕೈಗೂಡವು ಎಂಬ ಹತಾಶೆಯಿಂದ ನವವರ್ಷಕ್ಕೆ ಸಂಕಲ್ಪಗಳಿಂದ ದೂರ ಸರಿಯುವುದೂ ಉಂಟು. ವಾಸ್ತವವೆಂದರೆ, ವಿಫಲರಾಗುವವರು ಪ್ರಯತ್ನಿಸದವರು. ಗೋಡೆಗಳು ಸುಣ್ಣ ಬಣ್ಣ ಬಳಿಸಿಕೊಳ್ಳಲು ಅಥವಾ ಗೂಡುಗಳಲ್ಲಿ ಇರುವ ಪುಸ್ತಕಗಳು ಓರಣವಾಗಲು ಹೊಸ ವರ್ಷವೇ ಬರಬೇಕಿಲ್ಲ. ಪೊರಕೆಯಂತೂ ಸರ್ವದಾ ಕಸ ಗುಡಿಸಲು ಸನ್ನದ್ಧವಾಗಿರುತ್ತದೆ. ವಾಹನವು ಸ್ವಚ್ಛತೆಗೆ ಒಲ್ಲೆಯೆನ್ನದು. ತೀರಕ್ಕೆ ಅಪ್ಪಳಿಸಲು ಕಡಲ ಅಲೆಗಳಿಗೆ ಮುಹೂರ್ತವೇ? ಬದ್ಧತೆಯಿದ್ದರೆ ಯಾವುದೇ ನಿರ್ಣಯ ಬೇಕಿಲ್ಲ. ತೀರ್ಮಾನ, ನಿಶ್ಚಯಗಳಿಂದಲೇ ಬದುಕು ಬದಲಾಗದು.

ನಮ್ಮನ್ನು ಹಿಗ್ಗು, ಹುಮ್ಮಸ್ಸಿನ ಮಂದಿ ಸುತ್ತುವರಿದರೂ ನಾವು ವಿಚಲಿತರಾಗಬೇಕಿಲ್ಲ. ನಮ್ಮ ಕ್ರಿಯಾಶೀಲ ಒಂಟಿತನದಲ್ಲಿ ಅಸ್ಮಿತೆಯಿದೆ, ಸ್ವಂತಿಕೆಯಿದೆ. ಐನ್‍ಸ್ಟೀನ್ ಸಿದ್ಧಾಂತದಂತೆ, ಕಾಲ ಹೇಗೂ ಸಾಪೇಕ್ಷವಾದುದು. ಹಾಗೆ ನೋಡಿದರೆ, ಜಾಗತಿಕವಾದ ಹೊಸ ವರ್ಷ ಎನ್ನುವುದೇ ಇಲ್ಲ. ನಮಗೆ ಹೋಲಿಸಿದರೆ ಆಸ್ಟ್ರೇಲಿಯಾ ಮೊದಲು, ನಂತರ ಸಿಂಗಪುರ ನಡುರಾತ್ರಿ 12 ಕಂಡು ನವವರ್ಷವನ್ನು ಸ್ವಾಗತಿಸಿಬಿಟ್ಟಿರುತ್ತವೆ. ತದನಂತರ ಭಾರತಕ್ಕೆ.

ಆತ್ಮವಿಶ್ವಾಸವೇ ನಾವು ನಮ್ಮ ಇತಿಮಿತಿಗಳಿಂದ ಹೊರಬರಲು ಕೀಲಿಕೈ. ನಮ್ಮ ಬದುಕಿನ ಸಂದರ್ಭಗಳು ಮಾಂತ್ರಿಕವಾಗಿ ಬದಲಾಗುವುದು ಅಸಾಧ್ಯ. ಹೊಸ ಗಾಳಿ ನಿರೀಕ್ಷಿಸದೆ, ಇದ್ದುದರಲ್ಲೇ ಜಾಣ್ಮೆಯಿಂದ ದೋಣಿ ಹಾಯಿಸುವುದೇ ಸರಿ. ಅಂದಹಾಗೆ ಯಾವ ದಿಕ್ಕು, ಎತ್ತ ಯಾನ ಎನ್ನುವ ಸ್ಪಷ್ಟತೆಯಿಲ್ಲದಿದ್ದರೆ ಎಂತಹ ಗಾಳಿ ಬೀಸಿದರೆ ತಾನೆ ಏನು ಪ್ರಯೋಜನ? ಹಾಗಾಗಿ, ಪ್ರಾರಂಭದತ್ತ ಪ್ರಯಾಣ ಅತಿ ಮುಖ್ಯ ಹಂತ. ನಿಜವಾಗಿ ಸುಧಾರಿಸುವುದೆಂದರೆ ಫಲವನ್ನು ಅಲಕ್ಷಿಸುವುದು. ನಮ್ಮ ಹೊಸ ಭವಿಷ್ಯ ನಮ್ಮಿಂದಲೇ. ನಮ್ಮ ಅಪೇಕ್ಷೆ, ನಿರೀಕ್ಷೆಗಳನ್ನು ಈಡೇರಿಸುವ ಯಾವುದೇ ಕ್ಯಾಲೆಂಡರ್ ಇಲ್ಲ! ಏಕೆಂದು ತಿಳಿಯದೆ ಇಂಥದ್ದು ಬೇಕೆನ್ನುವುದು ದೌರ್ಬಲ್ಯ. ಇಟಲಿ ದೇಶದಲ್ಲಿ ಈ ಗಾದೆ ಮನೆ ಮಾತು: ‘ನಮ್ಮ ಕನಸನ್ನು ಅಸಾಧ್ಯವಾಗಿಸುವ ಒಂದೇ ಒಂದು ಅಂಶವೆಂದರೆ, ಸೋಲುತ್ತೇವೆಂಬ ಭಯ’. ಪೂರ್ವಸಿದ್ಧತೆ ಯಶಸ್ಸಿಗೆ ದಾರಿ. ನಿನ್ನೆಯಿಂದ ಕಲಿತು, ಇಂದು ಬಾಳಿ, ನಾಳಿನ ಬಗ್ಗೆ ಭರವಸೆ ಹೊಂದುವುದೇ ಮಾದರಿ. ಹೊಸ ವರ್ಷದಲ್ಲಿ ತಾರತಮ್ಯವಿಲ್ಲದೆ ನಮಗೆಲ್ಲರಿಗೂ ಸಿಗುವುದು ತಲಾ 365 ದಿನಗಳು. ವ್ಯತ್ಯಾಸವಿರುವುದು ಅವನ್ನು ನಾವು ಹೇಗೆ ಬಳಸಿ
ಕೊಳ್ಳುತ್ತೇವೆ ಎನ್ನುವುದರಲ್ಲಿ.

ಗ್ರೀಕ್ ದಾರ್ಶನಿಕ ಸಾಕ್ರೆಟಿಸ್ ‘ನಮ್ಮ ಬದುಕನ್ನು ಪರಿಷ್ಕರಿಸಿಕೊಳ್ಳುತ್ತಿರಬೇಕು, ಪರೀಕ್ಷಿಸಲ್ಪಡದ ಬದುಕು ಬದುಕಲ್ಲ’ ಎಂದ. ನಮ್ಮ ಅಂತಃಪ್ರಜ್ಞೆಗಿಂತ ಶ್ರೇಷ್ಠ ಗುರುವಿಲ್ಲ. ಅಂತಃಪ್ರಜ್ಞೆಯನ್ನು ಅತಿಕ್ರಮಿಸಬಾರದು.

ಮಾನವ ಇತಿಹಾಸದಲ್ಲೇ ಮೊದಲಿಗೆ ಮೆಸಪಟೋಮಿಯಾ ದೇಶದ ಬ್ಯಾಬಿಲೋನಿಯಾ ಪ್ರಾಂತ್ಯದಲ್ಲಿ ಕ್ರಿ.ಪೂ. ಸುಮಾರು 2000ದಲ್ಲಿ ಹೊಸ ವರ್ಷದ ಆಗಮನವು ಸಡಗರವಾದ
ದ್ದಕ್ಕೆ ದಾಖಲೆಯಿದೆ. ವಸಂತ ಋತುವಿನ ನಂತರದ ಅಮಾವಾಸ್ಯೆ ಅಂದು, ಮಾರ್ಚ್‌ ತಿಂಗಳ ಮಧ್ಯಭಾಗ. ಬ್ಯಾಬಿಲೋನಿಯನ್ನರು ಹನ್ನೊಂದು ದಿನಗಳವರೆಗೆ ಸಂಭ್ರಮದಲ್ಲಿ ಮುಳುಗಿದ್ದರು. ಆಗ ಅವರ ಗಣನೆಯಲ್ಲಿ 12 ಚಾಂದ್ರಮಾಸಗಳು ಒಂದು ವರ್ಷ. ಒಂದುಚಾಂದ್ರಮಾಸವೆಂದರೆ ಎರಡು ಕ್ರಮಾಗತ ಅಮಾವಾಸ್ಯೆ ಅಥವಾ ಹುಣ್ಣಿಮೆಗಳ ನಡುವಿನ ಅವಧಿ.

ಹೊಸ ವರ್ಷದ ಸಂದರ್ಭದಲ್ಲಿ ಬರುವ ಹಾರೈಕೆಗಳಲ್ಲಿ ಬಹುತೇಕವು ಸಿದ್ಧಮಾದರಿಗಳೇ. ‘ನವ ವರ್ಷದಲ್ಲಿ ನಿಮ್ಮ ಸಾಲಗಳು ತೀರಲಿ’, ‘ನಿಮ್ಮ ಅರ್ಜಿ, ಅಹವಾಲುಗಳೆಲ್ಲವೂ ಇತ್ಯರ್ಥಗೊಳ್ಳಲಿ’... ಎಂಬಂತಹ ಹಾರೈಕೆಗಳು ಉತ್ಪ್ರೇಕ್ಷಿತವೆಂಬುದು ನಮ್ಮಷ್ಟೇ ಹಿತೈಷಿಗಳಿಗೂ ತಿಳಿದಿರುತ್ತದೆ. ಹೊಸ ವರ್ಷದಲ್ಲಿ ಹಾಲು ಜೇನಿನ ಮಳೆಯಿರಲಿ, ಕಾಲೋಚಿತ ಮಳೆ ಸುರಿದರೆ ಅದೇ ವರ. ಆದರೆ ಮುಂಬರುವ ದಿನಗಳಲ್ಲಿ ವಿಶ್ವಾಸವಿರಲೆಂಬ ಅವರ ಶುಭಕಾಮನೆಯಿಂದ ಅಷ್ಟು ತಳಮಳೋಪಶಮನ ತಾನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT