ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಾರ್ಯಕ್ರಮವೆಂದರೆ ಏಕೆ ಹೇವರಿಕೆ?

ನಮ್ಮ ಯುವಜನಾಂಗಕ್ಕೆ ಸಭೆಗಳು ಅಪಥ್ಯವಾಗಿರುವುದಕ್ಕೆ ಹತ್ತಾರು ಕಾರಣಗಳಿವೆ
Published 27 ಮಾರ್ಚ್ 2024, 23:28 IST
Last Updated 27 ಮಾರ್ಚ್ 2024, 23:28 IST
ಅಕ್ಷರ ಗಾತ್ರ

ಅದು, ವರ್ಚಸ್ವಿ ಸಮಾಜವಾದಿ ನೇತಾರ, ಶ್ರೇಷ್ಠ ಸಂಸದೀಯ ಪಟು, ಕನ್ನಡ ನಾಡು– ನುಡಿಯ ಬಗ್ಗೆ ಅಪ್ಪಟ ಅಕ್ಕರೆ ಹೊಂದಿದ್ದ ಶಾಂತವೇರಿ ಗೋಪಾಲಗೌಡರ ಜನ್ಮಶತಾಬ್ದಿ ಕಾರ್ಯಕ್ರಮ. ಸಭಿಕರಲ್ಲಿ ಹೆಚ್ಚಿನವರೆಲ್ಲಾ ಹಿರಿಯ ನಾಗರಿಕರು. ಯುವಜನರ ಸಂಖ್ಯೆ ಬೆರಳೆಣಿಕೆಯಷ್ಟೂ ಇರಲಿಲ್ಲ. ಹಾಗಾದರೆ ಇಂತಹ ಕಾರ್ಯಕ್ರಮ ಯಾರಿಗಾಗಿ ಎಂಬ ಪ್ರಶ್ನೆ ಅಲ್ಲಿ ಎದ್ದಿತ್ತು!

ಒಬ್ಬ ನಾಯಕನ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನಾಂಗದ ಪಾತ್ರವೇ ದೊಡ್ಡದು. ಉತ್ತಮ ನಡವಳಿಕೆ ಮೂಲಕ ಗಟ್ಟಿ ನಾಡು ಕಟ್ಟುವ ಕಾಯಕದಲ್ಲಿ ಮುಂಚೂಣಿಯಲ್ಲಿ ಇರಬೇಕಾದ ಇವರ ಬೌದ್ಧಿಕ ವಿಕಾಸ ಆಗುತ್ತಿದೆಯೇ? ಯಾವುದೇ ವೈಚಾರಿಕ, ಸಾಹಿತ್ಯಕ ಕಾರ್ಯಕ್ರಮಗ
ಳಲ್ಲಿ ಭಾಗವಹಿಸುವವರ ವಯೋಮಾನ ನೋಡಿದರೆ ಹೀಗೊಂದು ಪ್ರಶ್ನೆ ಧುತ್ತೆಂದು ಎದುರಾಗುವುದು ಸತ್ಯ. ಇದು ನಿಜಕ್ಕೂ ಆತಂಕಕಾರಿ ವಿದ್ಯಮಾನ.

ಪಾಶ್ಚಿಮಾತ್ಯ ನೃತ್ಯ, ಅಬ್ಬರದ ಸಂಗೀತ, ನಟ-ನಟಿಯರ ಸಭೆ, ಐಪಿಎಲ್‌ನಂತಹ ಕೂಟಗಳಲ್ಲಿ ಕಿಕ್ಕಿರಿದು ಸೇರಿ ಸಂಭ್ರಮಿಸುವ ಯುವಕ, ಯುವತಿಯರು, ಜ್ಞಾನ ನೀಡುವ, ಬದುಕಲು ಕಲಿಸುವ, ವ್ಯಕ್ತಿತ್ವ ವಿಕಾಸದಂತಹ ಕಾರ್ಯಕ್ರಮಗಳಿಂದ ಯಾಕೆ ದೂರ ಉಳಿಯುತ್ತಿದ್ದಾರೆ? ಒತ್ತಾಯದಿಂದ ಆಹ್ವಾನಿಸಿದರೆ ‘ಅಲ್ಲೇನಿರುತ್ತೆ ಮಣ್ಣು? ಬರೇ ಕೊರೆತ, ಉಪದೇಶ’ ಎಂಬ ಉತ್ತರ ಅವರ ಬಾಯಿಯಿಂದ ಸಿಡಿದಾಗ ದಿಗಿಲಾಗುತ್ತದೆ. ಏನು ಬೇಕಾದರೂ ಸೋಷಿಯಲ್‌ ಮೀಡಿಯಾದಲ್ಲಿ ಸಿಗುತ್ತದೆ, ಬೆರಳ ತುದಿಯಲ್ಲೇ ಸಿಗುವುದಕ್ಕೆ ಎಲ್ಲೆಲ್ಲೋ ಏಕೆ ಹೋಗಬೇಕು ಎಂಬ ಧೋರಣೆ.

ಯುವಪೀಳಿಗೆಯ ಇಂತಹ ಅಭಿಪ್ರಾಯ, ಪ್ರತಿಕ್ರಿಯೆಯನ್ನು ಸಂಪೂರ್ಣವಾಗಿ ತಪ್ಪು ಎನ್ನಲಾಗದು. ಒಂದೆಡೆ ಅಭಿರುಚಿಯ ಕೊರತೆ, ಮತ್ತೊಂದೆಡೆ ಕಾರ್ಯಕ್ರಮ ಆಯೋಜನೆಯಲ್ಲಿನ ಲೋಪಗಳು ಅವರನ್ನು ದೂರವುಳಿಯುವಂತೆ ಮಾಡುತ್ತಿರುವುದೂ ಅಷ್ಟೇ ಸತ್ಯ. ಕಾಟಾಚಾರದ ಆಯೋಜನೆ, ವಿಷಯ, ಸಭೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಉಪನ್ಯಾಸಕರು, ಪಾಂಡಿತ್ಯವಿಲ್ಲದ, ವಿಷಯಜ್ಞಾನ ಚೆನ್ನಾಗಿದ್ದರೂ ಪ್ರಸ್ತುತಿಯಲ್ಲಿ ಸೋಲುವ, ಸಂವಹನ ಕೌಶಲಗಳಿಲ್ಲದ ಭಾಷಣಕಾರರು, ಸಭಾ ಪ್ರಜ್ಞೆ, ಸಮಯ ಪ್ರಜ್ಞೆ, ಸಂದರ್ಭ ಪ್ರಜ್ಞೆಯ ಅಭಾವ, ರಾಜಕೀಯ ನೇತಾರರಿಗೆ ಕೊಡುವ ಅಸಹ್ಯವೆನಿಸುವಷ್ಟು ಪ್ರಾಶಸ್ತ್ಯ, ಸಮಯ
ಪಾಲನೆಯಿಲ್ಲದೆ ವಿಳಂಬವಾಗಿ ಆರಂಭ… ಹೀಗೆ ಸಭಿಕರು ಅದರಲ್ಲೂ ನಮ್ಮ ಯುವಜನಾಂಗ ಸಭೆಗಳೆಂದರೆ ಒಲ್ಲೆನೆನ್ನಲು ಕಾರಣಗಳು ಹತ್ತಾರು. ಹಾಗಾಗಿಯೇ ನಮ್ಮ ಬಹುತೇಕ ಕಾರ್ಯಕ್ರಮಗಳು, ಒಮ್ಮೊಮ್ಮೆ ಎಷ್ಟೇ ಗುಣಮಟ್ಟದವಾದರೂ ಸಭಿಕರ ಕೊರತೆಯಿಂದ ಸೊರಗುವುದು ಸಾಮಾನ್ಯವಾಗಿದೆ.

ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿ, ಉಪನ್ಯಾಸ, ವಿಚಾರ ಸಂಕಿರಣ, ನಾಟಕದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ದೂರ ಓಡುವ ಮನಃಸ್ಥಿತಿಗೆ ಪ್ರಮುಖ ಕಾರಣ ಮಕ್ಕಳಲ್ಲಿ ಅಭಿರುಚಿ ಬೆಳೆಸುವಲ್ಲಿ ನಾವು ಎಡವಿರುವುದು. ವಿದ್ಯಾಲಯಗಳಲ್ಲಿ ಉತ್ತಮ ಅಂಕ, ಗ್ರೇಡ್‌ಗಳನ್ನು ಪಡೆಯುವುದೇ ಮಕ್ಕಳ ಸರ್ವಾಂಗೀಣ ಪ್ರಗತಿ ಎಂಬಂತಾಗಿದೆ. ಇದಕ್ಕಾಗಿಯೇ ಎಲ್ಲೆಡೆ ತುರುಸಿನ ಪೈಪೋಟಿ. ಮಕ್ಕಳಲ್ಲಿ ವೈವಿಧ್ಯಮಯ ಅಭಿರುಚಿ ಬೆಳೆಸುತ್ತಾ ಅವರ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುವುದು ಶಾಲಾ, ಕಾಲೇಜುಗಳ ಪಠ್ಯೇತರ ಚಟುವಟಿಕೆಗಳು.

ಪಠ್ಯದ ಸಮಸಮಕ್ಕೆ ಇರಬೇಕಾದ ಈ ಪಠ್ಯೇತರ ಚಟುವಟಿಕೆಗಳು ಅಂಕ ಆಧಾರಿತ ಫಲಿತಾಂಶವನ್ನು ದಾಖಲಿಸುವ ಧಾವಂತದಲ್ಲಿ ಮೂಲೆಗುಂಪಾಗಿವೆ. ಹಿಂದೆಲ್ಲಾ ವಿದ್ಯಾಲಯಗಳಲ್ಲಿ
ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸುವ, ಸಾಹಿತ್ಯದ ಮೂಲಕ ಬೌದ್ಧಿಕ ವಿಕಾಸಕ್ಕೆ ಪೂರಕವಾಗು
ವಂತಹ ಕಾರ್ಯಕ್ರಮಗಳಿಗೆ ಅಗ್ರ ಮಣೆಯಿತ್ತು. ಕಲಾ ಸಂಘ, ವಿಜ್ಞಾನ ಸಂಘ, ಇಕೋ ಕ್ಲಬ್‌, ಗ್ರಾಹಕ ಸಂಘ, ಸಾಹಿತ್ಯ ಸಂಘ, ಕ್ರೀಡಾ ಸಂಘಗಳು, ಮಂತ್ರಿಮಂಡಲ, ಅಣಕು ಸಂಸತ್ತು ಪ್ರತಿ ವಿದ್ಯಾಸಂಸ್ಥೆಯಲ್ಲಿ ಇರಬೇಕಿರುವುದು ಕಡ್ಡಾಯ. ಈ ವೇದಿಕೆಗಳ ಮೂಲಕ ವಿವಿಧ ಚಟುವಟಿಕೆಗಳು ನಡೆದು ಮಕ್ಕಳ ಬೌದ್ಧಿಕ ವಿಕಸನಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿತ್ತು. ಹಾಗಂತ ಈ ಸಂಘಗಳು ಈಗ ಇಲ್ಲವೆಂದಲ್ಲ. ಪ್ರತಿವರ್ಷ ನಿಯಮದಂತೆ ರಚನೆಯಾದರೂ ಬರೀ ಸಾಮೂಹಿಕ ಉದ್ಘಾಟನೆ, ಸಮಾರೋಪಕ್ಕಷ್ಟೇ ಸೀಮಿತ
ವಾಗಿರುವುದು ದೊಡ್ಡ ದುರಂತ.

ಸ್ಮಾರ್ಟ್‌ಫೋನುಗಳಲ್ಲಿ ತಮ್ಮದೇ ಲೋಕ ಕಟ್ಟಿಕೊಂಡು ಅಲ್ಲಿಯೇ ವಿಹರಿಸುವ ಯುವಜನಾಂಗದ ಮೊಬೈಲ್‌ ವ್ಯಸನವೂ ಅವರನ್ನು ಸಾಮಾಜಿಕ ಕಾರ್ಯಕ್ರಮಗಳಿಂದ ವಿಮುಖಗೊಳಿಸುತ್ತಿರುವುದು ಸತ್ಯ.

ಬಾಲ್ಯದ ಹಂತದಲ್ಲೇ ಉತ್ತಮ ಅಭಿರುಚಿ, ಮೌಲ್ಯ
ಗಳನ್ನು ಬಿತ್ತದೆ ಎಲ್ಲ ಕೆಡುಕುಗಳಿಗೂ ಯುವಪೀಳಿಗೆಯತ್ತ ಬೆರಳು ತೋರಿ ಹಳಿಯುವ ಚಾಳಿ ತಪ್ಪಬೇಕು. ಇಲ್ಲಿ ನಿಜಕ್ಕೂ ಅಪರಾಧಿಗಳು ಮನೆ, ಶಾಲೆ, ಸಮಾಜ ಎಲ್ಲವೂ. ಭಾವನೆಗಳು, ಸೂಕ್ಷ್ಮ ಸಂವೇದನೆಗಳು, ಸಾಮಾಜಿಕ ಸಂಪರ್ಕಗಳನ್ನು ಕಳೆದುಕೊಂಡು ಡಿಜಿಟಲ್‌ ವ್ಯಸನಿಗಳಾಗುತ್ತಿರುವ ನಮ್ಮ ಯುವ
ಜನರನ್ನು ಮರಳಿ ಮಾನವೀಯತೆಯ ದಾರಿಗೆ ತರುವ ಅನಿವಾರ್ಯ ಇದೆ. ಶಾಲಾ, ಕಾಲೇಜುಗಳಲ್ಲಿ ಪಠ್ಯದ ಹೊರೆಯನ್ನು ಇಳಿಸಿ, ವಿವಿಧ ಸಂಘಗಳಿಗೆ ಜೀವ ತುಂಬಿ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು, ಜೀವನಪ್ರೀತಿಯ ಸೆಲೆ ಚಿಮ್ಮುವಂತೆ ಮಾಡುವುದು ಸದ್ಯದ ಜರೂರು. ಇದಕ್ಕೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಸರ್ಕಾರದ ಹೊಣೆಗಾರಿಕೆ ದೊಡ್ಡದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT