ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಹುತ್ತವಲ್ಲ, ಇದು ಜೈವಿಕ ಕಾರ್ಖಾನೆ!

ಹುತ್ತದ ಬಗೆಗಿನ ತಪ್ಪುಕಲ್ಪನೆಗಳಿಂದ ಆಚೆ ಬಂದರೆ, ಪ್ರಕೃತಿಯ ಈ ಜೈವಿಕ ಕಾರ್ಖಾನೆಯಲ್ಲಿ ನಡೆಯುತ್ತಿರುವ ಪರಿಸರಸ್ನೇಹಿ ಚಟುವಟಿಕೆಗಳ ಅರಿವಾಗುತ್ತದೆ
Published 7 ಜೂನ್ 2024, 0:19 IST
Last Updated 7 ಜೂನ್ 2024, 0:19 IST
ಅಕ್ಷರ ಗಾತ್ರ

ಜ್ವರದಿಂದ ಬಳಲುತ್ತಿದ್ದ ಹಸುವಿಗೆ ಚಿಕಿತ್ಸೆ ನೀಡಿ ಸ್ವಲ್ಪ ಹಸಿ ಹುಲ್ಲು ಹಾಕುವಂತೆ ಆ ರೈತ ಮಹಿಳೆಗೆ ಹೇಳಿದೆ. ‘ತೋಟದಿಂದಲೇ ಕುಯ್ದು ತರ್ಬೇಕು ಸಾ. ಮನೆ ಹತ್ರ ಏನೂ ಬೆಳೆಯಂಗಿಲ್ಲ’ ಎಂದಳು ಸಣ್ಣಗೆ. ಮನೆಯ ಆ ಚಿಕ್ಕ ಅಂಗಳದತ್ತ ದೃಷ್ಟಿ ಹರಿಸಿದಾಗ ದಿಗ್ಭ್ರಮೆಯಾಗಿತ್ತು! ಅಲ್ಲೆಲ್ಲಾ ದೊಡ್ಡ ದೊಡ್ಡ ಹುತ್ತಗಳು, ಅವುಗಳನ್ನು ಬಳಸಿ ಹುಲುಸಾಗಿ ಬೆಳೆದ ಕಾಡುಗಿಡಗಳು ಇದ್ದವು.

‘ಇದನ್ನೆಲ್ಲಾ ತೆಗೆದು ಕ್ಲೀನ್‌ ಮಾಡಿ. ಹಾಗೆ ಎಂತಕ್ಕೆ ಬಿಟ್ಟಿದ್ದೀರಿ?’ ಅಸಹನೆಯಿಂದ ಕೇಳಿದೆ. ‘ಅಯ್ಯೋ! ಅದನ್ನು ಮುಟ್ಟಂಗೆ ಇಲ್ಲ ಸಾ. ಅಲ್ಲಿ ದೇವರ ಹಾವು ಇದೆ. ಈ ಗಿಡಗಳ ದರಗೂ ಪಕ್ಕದ ಬಾವಿಗೆ ಬೀಳ್ತಿದೆ. ಅದನ್ನೂ ಕಡಿಯಂಗಿಲ್ಲ’ ಆಕೆಯ ಧ್ವನಿಯಲ್ಲಿ ಬೇಸರ, ಭಯ, ಭಕ್ತಿ ಎಲ್ಲವೂ ತುಂಬಿತ್ತು. ‘ಇದು ಗೆದ್ದಲು ಹುತ್ತ. ಹಾವು ವಾಸ ಮಾಡಲ್ಲ. ಒಡೆದು ಹಾಕಿ, ಏನೂ ಆಗಲ್ಲ. ಹಾಗೇ ಬಿಟ್ರೆ ಅಪಾಯ’ ಎನ್ನುತ್ತಾ ಧೈರ್ಯ ತುಂಬಲು ಪ್ರಯತ್ನಿಸಿದೆ.

‘ಒಂದೆರಡು ಕಡೆ ಕೇಳ್ಸಿದ್ವು ಸಾ. ಮುಟ್ಲೇಬೇಡಿ ಅಂದಿದ್ದಾರೆ’ ಆಕೆ ವಿವರಣೆ ಕೊಡುತ್ತಿರುವಾಗಲೇ
ಮಗ ತೋಟದಿಂದ ಬಂದ. ವಿದ್ಯಾವಂತನಂತೆ ಕಾಣುತ್ತಿದ್ದ ಅವನ ನಿಲುವು ಇನ್ನೂ ಬಿಗಿಯಾಗಿತ್ತು. ‘ಇಲ್ಲಿ ಯಾವಾಗ್ಲೂ ಹಾವು ಓಡಾಡ್ತನೇ ಇರುತ್ತೆ. ನಾವು ಏನೂ ಮೈಲಿಗೆ ಮಾಡಂಗೇ ಇಲ್ಲ’ ಎಂದು ಆತ ದೃಢವಾಗಿ ಹೇಳಿದಾಗ ವಿಚಾರ ಮುಂದುವರಿಸುವುದು ವ್ಯರ್ಥವೆಂದು ಸುಮ್ಮನಾದೆ.

ಈ ರೀತಿಯಲ್ಲಿ ಹುತ್ತ, ಸುತ್ತಲೂ ಗಿಡಗಂಟಿಗಳು ಬೆಳೆದಿರುವಾಗ ಹಾವುಗಳು ತಮ್ಮ ಆಹಾರವಾದ ಇಲಿ, ಹೆಗ್ಗಣ, ಹರಣೆ, ಓತಿಗಳನ್ನು ಅರಸಿ ಬರುವುದು ಸ್ವಾಭಾವಿಕ. ಇದು ದೇವರ ಜಾಗ, ಮುಟ್ಟಬಾರದು, ಹಾಗೆಯೇ ಬಿಡಬೇಕೆಂಬ ನಂಬಿಕೆ ತಾಯಿ- ಮಗನ ತಲೆಯಲ್ಲಿ ಗಟ್ಟಿಯಾಗಿ ಕೂತಿರುವಾಗ, ಅವರ ಈ ವರ್ತನೆ ಅದೆಷ್ಟು ಅಪಾಯಕಾರಿ ಎಂದು ಮನದಟ್ಟು ಮಾಡಿಸುವುದು ಸುಲಭಸಾಧ್ಯವಲ್ಲ!

ಹಲವು ಬಗೆಯ ಮೌಢ್ಯ ಮತ್ತು ಕಂದಾಚರಣೆಗಳು ಹುತ್ತವನ್ನು ಗಾಢವಾಗಿ ಸುತ್ತುವರಿದಿವೆ. ವಾಸ್ತವವಾಗಿ ಹುತ್ತಗಳು ಗೆದ್ದಲು ಅಥವಾ ಒರಲೆಗಳಿಂದ ನಿರ್ಮಿತವಾದ ಗೋಪುರದಂತಹ ಆಕೃತಿಗಳು. ಕೀಟ ಜಗತ್ತಿಗೆ ಸೇರಿದ ಗೆದ್ದಲು ಹುಳುಗಳು ಮಣ್ಣು, ನೆಲದಲ್ಲಿನ ಸಾವಯವ ಅಂಶಗಳನ್ನು ತಮ್ಮ ಜೊಲ್ಲು ರಸದೊಂದಿಗೆ ಬೆರೆಸಿ ಗಟ್ಟಿಮುಟ್ಟಾದ, ಗಾಳಿ-ಮಳೆಗೆ ಜಗ್ಗದ ವಿವಿಧ ವಿನ್ಯಾಸದ ಮನೆ ನಿರ್ಮಿಸಿಕೊಳ್ಳುತ್ತವೆ. ವೈವಿಧ್ಯಮಯ ಕೋಣೆಗಳು, ಸುರಂಗಗಳು, ಕಿಂಡಿಗಳು, ಕಿರುದಾರಿಗಳನ್ನುಳ್ಳ ಸಂಕೀರ್ಣ ರಚನೆಯಿದು.

ಗೆದ್ದಲುಗಳನ್ನು ತಿನ್ನಲು ಬರುವ ಇಲಿ, ಹೆಗ್ಗಣ, ಹಾವುರಾಣಿ, ಅಳಿಲುಗಳು ಹುತ್ತದೊಳಗೆ ಹೊಕ್ಕುತ್ತವೆ. ಅವುಗಳನ್ನು ಬೇಟೆಯಾಡಲು ಬರುವ ಹಾವುಗಳು ಹುತ್ತದೊಳಗೆ ಹೋಗಿ ಬರುವುದು ನೈಸರ್ಗಿಕ ವಿದ್ಯಮಾನವೇ ವಿನಾ ಬಹುತೇಕರು ನಂಬುವಂತೆ ಇವು ನಾಗರಹಾವುಗಳ ಆವಾಸಸ್ಥಾನಗಳಲ್ಲ ಅಥವಾ ನಾಗರ ಹುತ್ತವನ್ನೂ ನಿರ್ಮಿಸುವುದಿಲ್ಲ. ಸಂತಾನೋತ್ಪತ್ತಿಯ ಸಮಯದಲ್ಲಿ ಹಾವುಗಳು ಖಾಲಿ ಹುತ್ತಗಳಲ್ಲಿ ಮೊಟ್ಟೆ ಇಡುತ್ತವೆ. ಹುತ್ತಗಳು ವಾತಾನುಕೂಲಿ ವ್ಯವಸ್ಥೆ ಹೊಂದಿರುವುದರಿಂದ ಹಾವುಗಳಂತಹ ಶೀತರಕ್ತದ ಪ್ರಾಣಿಗಳು ಇದರೊಳಗೆ ಸೇರಿಕೊಳ್ಳುವುದು ಸಹಜ.

ಹುತ್ತಗಳಿರುವ ಜಾಗ ನಾಗನೆಡೆಯೆಂಬ ಮೌಢ್ಯ ನಮ್ಮ ಗ್ರಾಮೀಣರಲ್ಲಷ್ಟೇ ಅಲ್ಲ ನಗರವಾಸಿಗಳಲ್ಲೂ
ದಟ್ಟವಾಗಿ ಬೇರೂರಿದೆ. ಪಟ್ಟಣಗಳಲ್ಲಿ ಜಾಗದ ಕೊರತೆ ಇರುವುದರಿಂದ ಇಂತಹ ರಚನೆಗಳು ಇದ್ದಲ್ಲಿ ಅನಿವಾರ್ಯವಾಗಿ ನೆಲಸಮ ಮಾಡಿ ಪ್ರಾಯಶ್ಚಿತ್ತವಾಗಿ ಪೂಜೆ, ಪುನಸ್ಕಾರ ಮಾಡಿಸಿ ಸಮಾಧಾನ ಮಾಡಿಕೊಳ್ಳುವುದುಂಟು. ಮನೆಯಲ್ಲಿ ಸ್ವಾಭಾವಿಕವಾಗಿ ಬರುವ ತೊಂದರೆ, ತಾಪತ್ರಯಗಳಿಗೆ ಹುತ್ತವನ್ನು ನೆಲಸಮ ಮಾಡಿದ್ದೇ ಕಾರಣ ಎಂಬ ಚಿಂತೆ ಹತ್ತಿಸಿಕೊಂಡು ನೆಮ್ಮದಿ ಕಳೆದುಕೊಳ್ಳುವವರ ಸಂಖ್ಯೆಯೂ ಬಹಳಷ್ಟಿದೆ.

ಇನ್ನು ಹಳ್ಳಿಯಲ್ಲಂತೂ ಕೇಳುವುದೇ ಬೇಡ. ಹುತ್ತವನ್ನು ತೆಗೆಯುವುದು ಹೋಗಲಿ ಅದರ ಹತ್ತಿರಕ್ಕೂ ಹೋಗರು. ಮುಟ್ಟಿದರೆ ತೊಂದರೆ ಆಗುವುದೆಂಬ ಭಯ. ಮನೆಯ ಮಣ್ಣಿನ ಗೋಡೆಯಲ್ಲಿ ಬೆಳೆದ ಹುತ್ತಗಳನ್ನು ಹಾಗೆಯೇ ಬಿಟ್ಟು ತಮ್ಮ ವಾಸಕ್ಕೆ ಬೇರೆ ವ್ಯವಸ್ಥೆ ಮಾಡಿಕೊಂಡಿರುವ ನಿದರ್ಶನಗಳೂ ಧಾರಾಳವಾಗಿ ಕಾಣಸಿಗುತ್ತವೆ.

ನಾಗರಪಂಚಮಿಯಂತಹ ಹಬ್ಬಗಳ ಸಂದರ್ಭಗಳಲ್ಲಿ ಹುತ್ತವನ್ನು ಪೂಜಿಸುವುದು, ಹಾಲೆರೆಯುವುದು, ಹಾವುಗಳು ಹಾಲು ಕುಡಿಯುತ್ತವೆಯೆಂಬ ಮೌಢ್ಯವಂತೂ ವ್ಯಾಪಕವಾಗಿದೆ. ಜನರ ಈ ನಂಬಿಕೆಗೆ ನೀರೆರೆದು ಪೋಷಿಸುವ ವಂಚಕರಿಗೆ ಇದೊಂದು ಹಣ ಸುಲಿಯುವ ಹಾದಿ.

ಗೆದ್ದಲುಗಳಲ್ಲಿ 2,600ಕ್ಕೂ ಹೆಚ್ಚು ಪ್ರಮುಖ ಪ್ರಭೇದಗಳಿವೆ. ಗೆದ್ದಲುಗಳು ಒಂದೆಡೆ, ಮನೆಯ ಮರಮಟ್ಟು, ದವಸ ಧಾನ್ಯ ತಿಂದು ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿದರೆ, ಮತ್ತೊಂದೆಡೆ, ಮಣ್ಣಿನ ಫಲವತ್ತತೆ ಹೆಚ್ಚಿಸುವ ರೈತ ಮಿತ್ರರೂ ಹೌದು. ಹುತ್ತಗಳು ಮಣ್ಣೊಳಗೆ ಗಾಳಿಯ ಸಂಚಾರ ಏರ್ಪಡಿಸಿ ಮಣ್ಣಿನ ಆರೋಗ್ಯ ಹೆಚ್ಚಿಸುತ್ತವೆ. ನೆಲದೊಳಗೆ ಪೋಷಕಾಂಶಗಳನ್ನು ಹರಡಿಸುತ್ತವೆ. ಬೀಜಗಳನ್ನು ಭೂಮಿಯೊಳಗೆ ಪ್ರಸಾರ ಮಾಡುತ್ತವೆ. ಅಂತರ್ಜಲಕ್ಕೆ ನೇರ ಸಂಪರ್ಕ ಇರುವುದರಿಂದ ಖಾಲಿ ಹುತ್ತಗಳಿಗೆ ನೀರು ಹರಿಸುವುದರ ಮೂಲಕ ಮಳೆಸಂಗ್ರಹ ಪ್ರಕ್ರಿಯೆಯನ್ನು ಸರಾಗವಾಗಿ ಮಾಡಬಹುದು.

ಹೌದು, ಹುತ್ತವನ್ನು ಸುತ್ತಿಕೊಂಡಿರುವ ಮೌಢ್ಯಗಳು, ತಪ್ಪುಕಲ್ಪನೆಗಳಿಂದ ಆಚೆ ಬಂದಾಗಷ್ಟೇ ಪ್ರಕೃತಿಯ ಈ ಜೈವಿಕ ಕಾರ್ಖಾನೆಯಲ್ಲಿ ನಡೆಯುತ್ತಿರುವ ಪರಿಸರಸ್ನೇಹಿ ಚಟುವಟಿಕೆಗಳ ಅರಿವಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT